ಮಂಗಳೂರು: ಕುಸಿದ ಮರವೂರು ಸೇತುವೆ ಹೈಡ್ರಾಲಿಕ್ ತಂತ್ರಜ್ಞಾನ ಬಳಸಿ ದುರಸ್ತಿಗೆ ಚಿಂತನೆ

Source: VB | By JD Bhatkali | Published on 17th June 2021, 6:50 PM | Coastal News |

ಮಂಗಳೂರು: ಕುಸಿದಿರುವ ಮಂಗಳೂರು ಅತ್ರಾಡಿ ರಾಜ್ಯ ಹೆದ್ದಾರಿಯ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ ಮರವೂರು ಸೇತುವೆ ಕುಸಿದ ಹಿನ್ನೆಲೆಯಲ್ಲಿ ಇದನ್ನು ಹೈಡ್ರಾಲಿಕ್ ತಂತ್ರಜ್ಞಾನದ ಮೂಲಕ ಸರಿಪಡಿಸುವ ಯೋಜನೆ ರೂಪಿಸಲಾಗುತ್ತಿದೆ.

ಸೇತುವೆ ಬಿರುಕು ಬಿಟ್ಟದ್ದನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಪಿಡಬ್ಲ್ಯೂಡಿಯ ಉನ್ನತ ಎಂಜಿನಿಯರ್‌ಗಳನ್ನೊಳಗೊಂಡ ತಂಡ ಇನ್ನೆರಡು ದಿನದೊಳಗೆ ಆಗಮಿಸುವ ನಿರೀಕ್ಷೆಯಿದೆ.

ಬುಧವಾರ ಬಿರುಕು ಬಿಟ್ಟಿರುವ ಸೇತುವೆಯ ಜಾಗದಲ್ಲಿರುವ ಪಿಲ್ಲರ್‌ ಸುತ್ತ ದೊಡ್ಡ ಗಾತ್ರದ ಕಲ್ಲುಗಳನ್ನು ಅಳವಡಿಸಿ ಹೆಚ್ಚಿನ ಅಪಾಯ ಉಂಟಾಗದಂತೆ ಕ್ರಮ ವಹಿಸಲಾಗಿದೆ. ನೀರಿನ ಹರಿವನ್ನು ಕಡಿಮೆಗೊಳಿಸಿ ಇನ್ನಷ್ಟು ಅನಾಹುತ ತಪ್ಪಿಸಲು ಹಾಗೂ ದುರಸ್ತಿ ಕಾಮಗಾರಿ ನಡೆಸಲು ಪೂರಕವಾಗುವಂತೆ ನದಿ ದಡದಿಂದ ಪಿಲ್ಲರ್ ವರೆಗೆ ಕಲ್ಲು-ಮಣ್ಣನ್ನು ಹೇರಿ ತಡೆಗೋಡೆಯಂಥ ರಚನೆ ನಿರ್ಮಾಣ ಮಾಡಲಾಗುತ್ತಿದೆ. ಈ ಪಿಲ್ಲರ್ 3 ಅಡಿಗಳಷ್ಟು ಕುಸಿದಿರುವುದರಿಂದ ಅದನ್ನು ಎತ್ತರಿಸಿ ಸರಿಪಡಿಸುವ ಅಭಿಪ್ರಾಯವನ್ನು ಸದ್ಯಕ್ಕೆ ಎಂಜಿನಿಯರ್ ಗಳು ವ್ಯಕ್ತಪಡಿಸಿದ್ದು, ತಜ್ಞರ ತಂಡ ಬಂದ ಬಳಿಕವಷ್ಟೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.

ಸೇತುವೆಗೆ ಹೆಚ್ಚಿನ ಹಾನಿ ಆಗದಂತೆ ತಡೆಯುವ ನಿಟ್ಟಿನಲ್ಲಿ ತಜ್ಞರು ನೀಡಿದ ಸಲಹೆಯನ್ನು ಕಾರ್ಯಗತ ಗೊಳಿಸಲಾಗಿದೆ. ಮುಂದೆ ತಂಡ ಸೇತುವೆ ವೀಕ್ಷಣೆ ಮಾಡಿದ ಬಳಿಕ ನೀಡುವ ಸಲಹೆಯನ್ನು ತಕ್ಷಣಕ್ಕೆ ಕೈಗೊಳ್ಳಲಿದ್ದೇವೆ. ಇದು ತಜ್ಞರು ನೀಡುವ ವರದಿಯನ್ನು ಆಧರಿಸಿ ಅಪಾಯ ಇಲ್ಲದೇ ಇದ್ದರೆ ಮಾತ್ರ ಲಘು ವಾಹನಗಳಿಗೆ ಸಂಚರಿಸಲು ಅನುಮತಿ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಮಂಗಳೂರಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಯಶವಂತ್ ತಿಳಿಸಿದ್ದಾರೆ.

ಸೇತುವೆ ಕುಸಿದ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆಯಿಂದ ಈ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ವಿಮಾನ ನಿಲ್ದಾಣ ಸೇರಿದಂತೆ ಬಜ್ಜೆ- ಕಟೀಲು ಭಾಗಕ್ಕೆ ತೆರಳುವವರಿಗೆ ಗುರುಪುರ-ಕೈಕಂಬ-ಬಜ್ಪೆ ಮೂಲಕ ಅಥವಾ ಕೂಳೂರು- ಜೋಕಟ್ಟೆ- ಪೊರ್ಕೋಡಿ ಬಜ್ಜೆ ಮಾರ್ಗವಾಗಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ.

Read These Next

ಕಾರವಾರ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಬೀಳ್ಕೊಡುಗೆ

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿ ಬೀಳ್ಕೊಡುಗೆ ...