ಹೊಸದಿಲ್ಲಿ: ಮರಣ ಹೇಳಿಕೆಯ ಸ್ವೀಕೃತಿ ಅಥವಾ ತಿರಸ್ಕಾರಕ್ಕೆ ಯಾವುದೇ ಕಠಿಣ ಮಾನದಂಡವಿಲ್ಲ: ಸುಪ್ರೀಂಕೋರ್ಟ್

Source: VB | By S O News | Published on 28th March 2021, 5:58 PM | National News |

ಹೊಸದಿಲ್ಲಿ: ಮರಣ ಹೇಳಿಕೆಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಯಾವುದೇ ಕಠಿಣ ಮಾನದಂಡವಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಈ
ಹೇಳಿಕೆಯನ್ನು ಸ್ವಯಂಇಚ್ಛೆಯಿಂದ ನೀಡಿದ್ದರೆ ಮತ್ತು ವಿಶ್ವಾಸಾರ್ಹವಾಗಿದ್ದರೆ ದೋಷ ನಿರ್ಣಯಕೆ ಅದೊ೦ದೇ ಆಧಾರವಾಗಬಲ್ಲದು ಎಂದು ಸ್ಪಷ್ಟಪಡಿಸಿದೆ.

ಮರಣ ಹೇಳಿಕೆಯಲ್ಲಿ ಸತ್ಯತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಶಂಕೆಗಳನ್ನು ಮೂಡಿಸುವ ವಿರೋಧಾಭಾಸಗಳಿದ್ದರೆ ಆಗ ಆರೋಪಿಗೆ ಸಂಶಯದ ಲಾಭವನ್ನು ನೀಡಬೇಕಾಗುತ್ತದೆ ಎಂದು ಅದು ಹೇಳಿದೆ.

ವಹಿಳೆಯೋರ್ವಳ ಮೇಲೆ ಕ್ರೌರ್ಯವನ್ನೆಸಗಿ ಆಕೆಯನ್ನು ಕೊಲೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದ ದಿಲ್ಲಿ ಉಚ್ಚ ನ್ಯಾಯಾಲಯದ ಆಗಸ್ಟ್ 2011ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ನವೀನ ಸಿನ್ಹಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ತನ್ನ ತೀರ್ಪಿನಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಭಾರತೀಯ ಸಾಕ್ಷ್ಯ ಕಾಯ್ದೆ,1872ರ ಕಲಂ  32ರಡಿ ಮರಣ ಹೇಳಿಕೆಯನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬಹುದು. ಅದನ್ನು ಸ್ವಯಂಪ್ರೇರಿತವಾಗಿ ನೀಡಿದ್ದರೆ ಮತ್ತು ವಿಶ್ವಾಸಾರ್ಹವಾಗಿದ್ದರೆ ದೋಷನಿರ್ಣಯಕ್ಕೆ ಅದೊಂದೇ ಆಧಾರವಾಗಬಲ್ಲದು. ಆದರೆ ಅದರ ಸತ್ಯತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಶಂಕೆಗಳಿದ್ದರೆ ಆರೋಪಿಗೆ ಸಂಶಯದ ಲಾಭವನ್ನು ನೀಡಬೇಕಾಗುತ್ತದೆ. ಹೀಗಾಗಿ ಪ್ರಕರಣದಲ್ಲಿಯ ವಾಸ್ತವಾಂಶಗಳು ಮುಖ್ಯವಾಗುತ್ತವೆ. ಮರಣ ಹೇಳಿಕೆಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಯಾವುದೇ ಕಟ್ಟುನಿಟ್ಟಿನ ಮಾನದಂಡವಿರಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಮಾ.25ರ ತೀರ್ಪಿನಲ್ಲಿ ಹೇಳಿದೆ.

1991ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತನ್ನ ಮೃತ ಸೋದರಿಯ ಪತಿ ಮತ್ತು ಅತ್ತಿಗೆಯನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಅರ್ಜಿದಾರ ಮೇಲ್ಮನವಿಯನ್ನು ಸಲ್ಲಿಸಿದ್ದ .

1991,ಸೆ.17ರಂದು ಪತಿಯ ಮನೆಯಲ್ಲಿ ಶೇ.95ರಷ್ಟು ಸುಟ್ಟ ಗಾಯಗಳಾಗಿದ್ದ ಮಹಿಳೆ ಮರುದಿನ ಆಸ್ಪತ್ರೆಯಲ್ಲಿ ಅಸುನೀಗಿದ್ದಳು.

ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುವ ಮೂಲಕ ದಿಲ್ಲಿ ಉಚ್ಚ ನ್ಯಾಯಾಲಯವು ಆರೋಪಿಗಳಿಗೆ ತಪ್ಪಾಗಿ ಸಂಶಯದ ಲಾಭವನ್ನು ನೀಡಿತ್ತು ಎಂದು ಅರ್ಜಿದಾರನ ಪರ ವಕೀಲರು ವಾದಿಸಿದ್ದರು.

ಮೃತಳು ತನ್ನ ಕಕ್ಷಿದಾರರ ನಡುವಿನ ಸಂಬಂಧದ ಬಗ್ಗೆ ಶಂಕಿಸಿದ್ದಳು ಮತ್ತು ಗರ್ಭ ಧರಿಸಲು ತನ್ನ ಅಸಾಮರ್ಥ್ಯದಿಂದಾಗಿ ಹತಾಶಳಾಗಿದ್ದಳು. ಇದೇ ಕಾರಣದಿಂದ ಆಕೆ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ವಾದವನ್ನು ಆರೋಪಿಗಳ ಪರ ವಕೀಲರು ಮಂಡಿಸಿದ್ದರು.

ಮೃತಳ ಹೇಳಿಕೆಯು ವಿರೋಧಾಭಾಸಗಳಿಂದ ಕೂಡಿರುವುದನ್ನು ಪರಿಗಣಿಸಿದರೆ ಮರಣ ಹೇಳಿಕೆಯನ್ನು ನೀಡಲು ಮಹಿಳೆಯು ಮಾನಸಿಕವಾಗಿ ಸುಸ್ಥಿತಿಯಲ್ಲಿದ್ದಳು ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಮರಣ ಹೇಳಿಕೆಯ ಸತ್ಯತೆಯ ಬಗ್ಗೆ ಸಂಶಯ ಸೃಷ್ಟಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...