ಉಡಾಫೆ, ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗ ಇಲ್ಲ. ಅಧಿಕಾರಿಗಳ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ ಸಿ.ಎಂ. ಸಿದ್ದರಾಮಯ್ಯ

Source: SO News | By Laxmi Tanaya | Published on 6th June 2023, 1:06 PM | State News | Don't Miss |

ದಾವಣಗೆರೆ :  ಪ್ರಜಾಪ್ರಭುತ್ವದಲ್ಲಿ ಜನರೇ ಮಾಲಿಕರಾಗಿದ್ದು ಜನರ ಆಶೋತ್ತರಗಳಿಗೆ ಸ್ಪಂಧಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಸೂಚನೆ ನೀಡಿದರು.
 ಅವರು ಸೋಮವಾರ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದರು. ಜನ ಬದಲಾವಣೆ ಬಯಸಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸದೇ ಉಡಾಫೆ, ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗವಿಲ್ಲ, ಅವರ ಮೇಲೆ ಯಾರದೂ ಮುಲಾಜಿಲ್ಲದೇ ನಿರ್ದಾಕ್ಷೀಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  

 ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಉತ್ತಮವಾದ ಸಂಬಂಧ ಇಟ್ಟುಕೊಳ್ಳಬೇಕು. ಅವರು ಪ್ರತಿನಿಧಿ, ಅಧಿಕಾರಿಗಳು ಜನ ಸೇವಕರು, ಜನರ ಕಷ್ಟ, ಸುಖಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಆದರೆ ವಿಳಂಬ ಮಾಡಬಾರದು. ವಿಳಂಬ ಮಾಡುವುದು ಸಹ ಒಂದು ರೀತಿಯ ಭ್ರಷ್ಟಾಚಾರ ಮಾಡಿದಂತೆ. ಜಿಲ್ಲಾ ಮಟ್ಟದಲ್ಲಿ ಜನಸ್ನೇಹಿ ಆಡಳಿತ ಇರಬೇಕು. ಜನರು ಕಚೇರಿಗಳಿಗೆ ಬಂದಾಗ ಗೌರವಯುತವಾಗಿ ನಡೆದುಕೊಂಡು, ಕಷ್ಟಗಳಿಗೆ ಪರಿಹಾರ ಮಾಡುವುದಲ್ಲದೇ ಜನರ ಜೊತೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ಎಂದರು.

 ದಾವಣಗೆರೆ ಜಿಲ್ಲೆ ಇನ್ನಷ್ಟು ಪ್ರಗತಿ; ದಾವಣಗೆರೆ ಜಿಲ್ಲೆ ಬಹಳ ಪ್ರಗತಿ ಪರವಾದ ಜಿಲ್ಲೆಯಾಗಿದ್ದು ಇನ್ನಷ್ಟು ಪ್ರಗತಿ ಕಾಣಬೇಕಾಗಿದೆ. ಜಿಲ್ಲೆಯ ಅಭಿವೃದ್ದಿಯಲ್ಲಿ ವಿವಿಧ ಇಲಾಖೆಗಳ ಪಾತ್ರ ಬಹಳ ಪ್ರಮುಖವಾಗಿದೆ. ತಹಶೀಲ್ದಾರ ಕಚೇರಿ ಜನರಿಗೆ ಹೆಚ್ಚು ಸೇವೆ ಕೊಡುವ ಕಚೇರಿಯಾಗಿದ್ದು ಇಲ್ಲಿ ಲಂಚಗುಳಿತನ, ಅಲೆದಾಡಿಸುವುದು ಹೆಚ್ಚಿದೆ ಎಂಬ ದೂರುಗಳಿವೆ, ಇದಕ್ಕೆ ಅವಕಾಶ ನೀಡುವುದಿಲ್ಲ. ತಹಶೀಲ್ದಾರ್ ಕಚೇರಿ, ಪೊಲೀಸ್ ಸ್ಟೇಷನ್, ತಾಲ್ಲೂಕು ಪಂಚಾಯತ್, ಕೃಷಿ, ರೇಷ್ಮೆ, ತೋಟಗಾರಿಕೆ, ಸಮಾಜ ಕಲ್ಯಾಣ ಸೇರಿದಂತೆ ಇಲಾಖೆಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.

ಅಧಿಕಾರಿಗಳ ಕ್ಷೇತ್ರ ಭೇಟಿಗೆ ಸೂಚನೆ: ಜಿಲ್ಲಾಧಿಕಾರಿ ತಹಶೀಲ್ದಾರರ ಕಚೇರಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ, ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಇದರಿಂದ ಕೆಳಗಿನ ಅಧಿಕಾರಿಗಳು ಜಾಗೃತರಾಗುವರು. ಅಧಿಕಾರಿಗಳು ತಮ್ಮ ಜವಾಬ್ದಾರಿ, ಕರ್ತವ್ಯವನ್ನು ಸಮಾಜದ ಅಭಿವೃದ್ದಿಗಾಗಿ ಮಾಡಬೇಕು. ಮೇಲಾಧಿಕಾರಿಗಳು ಪದೇ ಪದೇ ಭೇಟಿ ನೀಡಿ ಕೆಲಸ ಕಾರ್ಯಗಳ ಪರಿಶೀಲನೆ, ಉಸ್ತುವಾರಿ ಮಾಡಲಿಲ್ಲವೆಂದರೆ ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಜಿಲ್ಲಾ ಮಟ್ಟದ ಆಡಳಿತ ಸದಾ ಪಾರದರ್ಶಕವಾಗಿರಬೇಕು ಎಂದರು.

 ದೂರುಗಳಿಗೆ ಪ್ರತಿಕ್ರಿಯಿಸಿ: ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ಮತ್ತು ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು. ಅನೇಕ ಅಧಿಕಾರಿಗಳು ಕ್ಷೇತ್ರಗಳಿಗೆ ಹೋಗದೆ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ಹೋಗುತ್ತಾರೆ. ಸರ್ಕಾರ ವಾಹನ ಸೇರಿದಂತೆ ಎಲ್ಲಾ ಸೌಲಭ್ಯ ನೀಡಿದ್ದು ಐಷರಾಮಿ ಜೀವನ ಮಾಡಲಿ ಎಂದಲ್ಲ, ಜನರ ಕೆಲಸ ಮಾಡಲಿ ಎಂದು, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ಜನರ ಕೆಲಸ ಮಾಡಬೇಕೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು ಎಂದರು.

 ಪೂರ್ವ ಮುಂಗಾರು ನಷ್ಟ ಪರಿಹಾರ; ಪೂರ್ವ ಮುಂಗಾರಿನಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಬೆಳೆಗಳಿಗೆ ಹಾನಿಯಾಗಿದ್ದು ಇದಕ್ಕೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲಾಗುತ್ತದೆ ಎಂದರು.

ಜೂನ್ 9 ರಿಂದ ಮುಂಗಾರು ಪ್ರವೇಶ: ಇದೇ ಜೂನ್ 9 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶಿಸುವ ಮುನ್ಸೂಚನೆ ಇದ್ದು ಕೃಷಿ ಚಟುವಟಿಕೆಗಳು ಹೆಚ್ಚಾಗಲಿವೆ. ಈ ವೇಳೆ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜಂಟಿ ಕೃಷಿ ನಿರ್ದೇಶಕರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಬಿತ್ತನೆ ಬೀಜ, ರಸಗೊಬ್ಬರ, ರಾಸಾಯಿನಿಕಗಳ ದಾಸ್ತಾನಿನ ಬಗ್ಗೆ ನಿಗಾವಹಿಸಬೇಕು. ಇದೇ ವೇಳೆ ಪ್ರವಾಹ ತಡೆಗೂ ಪೂರ್ವ ಸಿದ್ದತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದರು.

ನೈತಿಕ ಪೊಲೀಸ್‍ಗಿರಿಗೆ ಅವಕಾಶ ಇಲ್ಲ: ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ರಕ್ಷಣಾಧಿಕಾರಿಯವರು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಯಾವುದೇ ದೂರು ಬಾರದಂತೆ ನೋಡಿಕೊಳ್ಳಬೇಕು. ಆದರೆ ಯಾವುದೇ ನೈತಿಕ ಪೊಲೀಸ್‍ಗಿರಿಗೆ ಅವಕಾಶ ಇರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

 ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಲ್ಲಿಕಾರ್ಜುನ್: ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲಾ ಮಂತ್ರಿಯಾಗುತ್ತಾರೆ. ಅವರು ಸುಧೀರ್ಘವಾಗಿ ಕೆಡಿಪಿ ಸಭೆಗಳನ್ನು ನಡೆಸುವರು. ಈ ವೇಳೆ ಜಿಲ್ಲೆಯ ಶಾಸಕರುಗಳು ಚರ್ಚಿಸಿ ಜಿಲ್ಲೆಯಲ್ಲಿ ಈ ಹಿಂದೆ ಏನಾಗಿತ್ತು, ಮುಂದೆ ಏನಾಗಬೇಕೆಂದು ಜಿಲ್ಲೆಯ ಅಭಿವೃದ್ದಿ ಕುರಿತು ಚರ್ಚೆ ಮಾಡಿ ಎಂದು ಸಲಹೆ ನೀಡಿದರು.  

 ಸ್ಮಾರ್ಟ್ ಸಿಟಿ ಕಾಮಗಾರಿ ಹಣ ಪಾವತಿ ತಡೆಯಿರಿ:  ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿದ್ದು ಕೆಲವು ಕಡೆ ಅವೈಜ್ಞಾನಿಕವಾಗಿ ಮತ್ತು ಗುಣಮಟ್ಟದ ಕೊರತೆಯುಳ್ಳ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗಳನ್ನು ಪರಿಶೀಲಿಸುವವರೆಗೂ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದೆ ತಡೆಹಿಡಿಯಲು ಸೂಚಿಸಿದ ಸಚಿವರು ಕೊಡಗನೂರು ಕೆರೆ ಕಳೆದ ಮುಂಗಾರಿನಲ್ಲಿ ಏರಿ ಕುಸಿದಿದ್ದು ಮೂರು ಭಾರಿ ಇದೇ ರೀತಿಯಾಗಿದೆ. ಆದರೆ ರಿಪೇರಿಗೆಂದು ಕೋಟ್ಯಾಂತರ ರೂ.ಗಳನ್ನು ವ್ಯಯ ಮಾಡಿದ್ದರೂ ಗುಣಮಟ್ಟದ ಕಾಮಗಾರಿ ಮಾಡಿಲ್ಲ, ಕೂಲಂಕುಷವಾಗಿ ಪರಿಶೀಲಿಸಲು ಜಿಲ್ಲಾಧಿಕಾರಿಗೆ ತಿಳಿಸಿದರು.

 ಮಾಯಕೊಂಡ ಕ್ಷೇತ್ರದ ಶಾಸಕ ಕೆ. ಎಸ್.ಬಸವಂತಪ್ಪ ಮಾತನಾಡಿ, ಇಂದಿರಾ ಕ್ಯಾಂಟಿನ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಇಎಸ್‍ಐ, ಪಿ.ಎಫ್ ಪಾವತಿಸಿಲ್ಲ, ಸಂಬಂಧಿಸಿದ ಏಜೆನ್ಸಿಯವರು ಪಾವತಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.

 ಹೊನ್ನಾಳಿ ಶಾಸಕ ಜಿ.ಡಿ.ಶಾಂತನಗೌಡ  ಹೊನ್ನಾಳಿಯಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾಗಿಲ್ಲ, ಆರಂಭಿಸಲು ಕ್ರಮ ಕೈಗೊಳ್ಳಲು ಮತ್ತು ನೆರೆ ಹಾವಳಿಯಿಂದ ಮನೆ ಬಿದ್ದವರನ್ನು ಸರಿಯಾಗಿ ಗುರುತಿಸದೇ ಕೈಬಿಡಲಾಗಿದ್ದು ಪರಿಶೀಲಿಸಿ ಪರಿಹಾರ ಒದಗಿಸಲು ಮನವಿ ಮಾಡಿದರು.

 ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಜಿಲ್ಲೆಯ ಅಂಕಿ ಅಂಶಗಳ ಕುರಿತು ಸವಿವರವಾದ ಮಾಹಿತಿ ಪ್ರಸ್ತುತಪಡಿಸಿದರು.

ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್, ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗ, ಜಗಳೂರು ಶಾಸಕ ಡಿ.ದೇವೇಂದ್ರಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ್, ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್, ಮೇಯರ್ ವಿನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಡಾ; ಅರುಣ್.ಕೆ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...