ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು -ಶಾಸಕ ಕೆ.ಆರ್‌.ರಮೇಶ್

Source: sonews | By Staff Correspondent | Published on 13th September 2019, 11:37 PM | State News |

ಶ್ರೀನಿವಾಸಪುರ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು  ಶಾಸಕ ಕೆ.ಆರ್‌.ರಮೇಶ್ ಕುಮಾರ್‌ ಹೇಳಿದರು.

ತಾಲ್ಲೂಕಿನ ಕಲ್ಲೂರು ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕು. ಅಂಥ ವಾತಾವರನ ದೆಹಲಿ ಶಾಲೆಗಳಲ್ಲಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಶಾಲೆಗಳಿಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸಿದ ಪರಿಣಾಮವಾಗಿಯೇ, ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆಯಲು ಸಾಧ್ಯವಾಯಿತು. ಈ ಪರಿಸ್ಥಿತಿ ಮುಂದುವರಿಯಬೇಕು. ಎಂದು ಹೇಳಿದರು.

ಪ್ರತಿಭಾ ಕಾರಂಜಿ ಕಾರ್ಯಕ್ರಮ ಮಕ್ಕಳಲ್ಲಿ ಹುದುಗಿರುವ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತದೆ.  ಪಠ್ಯ ಚಟುವಟಿಕೆಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ನೋಡಲ್‌ ಅಧಿಕಾರಿ ಹನುಮೇಗೌಡ ಮಾತನಾಡಿ, ಪ್ರತಿಭಾ ಕಾರಂಜಿ, ಪ್ರತಿಭೆಗಳ ಉತ್ಸವವಾಗಿದೆ. ಕಾರ್ಯಕ್ರಮದಲ್ಲಿ 2500 ಮಕ್ಕಳು ಹಾಗೂ 500 ಶಿಕ್ಷಕರು ಸೇರಿದ್ದಾರೆ. ಅವರು ತಮ್ಮ ಅನುಭವಗಳನ್ನು ಹಾಗೂ ಪ್ರತಿಭೆಯನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೆಂಕಟರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್‌, ಮುಖಂಡರಾದ ಕೆ.ಎಚ್.ಸಂಪತ್‌ ಕುಮಾರ್‌, ಕಲಾ ಶಂಕರ್, ರೂಪವತಿ, ವೆಂಕಟೇಶ್‌, ಇಸಿಒಗಳಾದ ಅಮರನಾಥ್, ಸುಬ್ರಮಣಿ, ಪ್ರಾಂಶುಪಾಲ ಸುಬ್ರಮಣಿ, ರಾಮಕೃಷ್ಣಾರೆಡ್ಡಿ, ವೆಂಕಟಸ್ವಾಮಿ, ಅಪ್ಪಣ್ಣ, ತಿಪ್ಪಣ್ಣ ಇದ್ದರ.

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕುಡಿಯು ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ನರೇಶ್‌ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ.  ಆರೋಗ್ಯ ಇಲಾಖೆ ಅಲ್ಲಿಗೆ ವೈದ್ಯರನ್ನು ನೇಮಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜನ ಸಾಮಾನ್ಯರು ಮನೆ ನಿರ್ಮಿಸಿಕೊಳ್ಳಲು ತೆಗೆದುಕೊಂಡು ಹೋಗುವ ಮರಳನ್ನು ಪೊಲೀಸರು ವಶಪಡಿಸಿಕೊಳ್ಳುವ ಬಗ್ಗೆ ಸದಸ್ಯರು ಪಕ್ಷ ಭೇದ ಮರೆತು ಅತೃಪ್ತಿ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ ಸರ್ಕಾರದ ವತಿಯಿಂದ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆ ಇಲ್ಲದವರು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಅವರಿಗೆ ಮರಳು ನಿರಾಕರಿಸಿದರೆ ಹೇಗೆ ಎಂಬುದು ಸದಸ್ಯರ ಪ್ರಶ್ನೆಯಾಗಿತ್ತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌ ಮಾತನಾಡಿ, ತಾಲ್ಲೂಕಿನ ಬಡವರು ಮನೆ ನಿರ್ಮಿಸಿಕೊಳ್ಳಲು ಮರಗಳು ಸಾಗಿಸುವ ಕುರಿತು ತಹಶೀಲ್ದಾರ್‌ ಅವರೊಂದಿಗೆ ಚರ್ಚಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಶೀಘ್ರವಾಗಿ ನೀರು ಪೂರೈಕೆ ಮಾಡಲು, ಬತ್ತಿಹೋದ ಕೊಳವೆ ಬಾವಿಗಳ ವಿದ್ಯುತ್‌ ಸಂಪರ್ಕವನ್ನು ಅಗತ್ಯವಿರುವ ಕೊಳವೆ ಬಾವಿಗಳಿಗೆ ಸ್ಥಳಾಂತರಿಸಬೇಕು ಎಂದು ಹೇಳಿದರು.

  ಸಭೆಯಲ್ಲಿ ಕೃಷಿ ಇಲಾಖೆ ನೀಡುವ ಟಾರ್ಪಾಲಿನ್‌ಗಳನ್ನು ಸಮರ್ಪಕವಾಗಿ ವಿತರಣೆ ಮಾಡದಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.   ಸಭೆಯಲ್ಲಿ ಕೃಷಿ, ಕೈಗಾರಿಕೆ, ಶಿಕ್ಷಣ, ಅಕ್ಷರ ದಾಸೋಹ, ಮೀನುಗಾರಿಕೆ, ರೇಷ್ಮೆ ಕೃಷಿ, ಕುಡಿಯುವ ನೀರು ಪೂರೈಕೆ, ಬೆಸ್ಕಾಂ, ತೋಟಗಾರಿಕೆ, ಅರಣ್ಯ, ಆರೋಗ್ಯ, ಶಿಶು ಅಭಿವೃದ್ಧಿ  ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಆಯಾ ಇಲಾಖೆಗೆ ಸಂಬಂಧಿಸಿದಂತೆ ಇಲಾಖೆ ಮುಖ್ಯಸ್ಥರು ಪ್ರಗತಿಯ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ, ನರಸಿಂಹಯ್ಯ, ರಾಜಶೇಖರರೆಡ್ಡಿ, ನಾಗವೇಣಿ, ಬಿ.ಇ.ಸುಗುಣ ರಾಮಚಂದ್ರ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ ರಾಮಚಂದ್ರಗೌಡ, ಸಹಾಯಕ ನಿರ್ದೇಶಕ ಅಂಬರೀಶ್, ಕಚೇರಿ ವ್ಯವಸ್ಥಾಪಕ ಸುರೇಶ್‌ ಇದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ.

Read These Next