ದೆಹಲಿಯ ಕೋಮು ಹಿಂಸಾಚಾರದ ರಾಜಕೀಯ

Source: sonews | By Staff Correspondent | Published on 5th March 2020, 10:02 PM | National News | Special Report |

ಸರ್ಕಾರಿ ಯಂತ್ರಾಂಗದ ಯೋಜಿತ ವೈಫಲ್ಯದಿಂದಾಗಿಯೇ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾಗೂ ಪ್ರಾಣ ನಷ್ಟಗಳು ಸಂಭವಿಸಿವೆ.

ದೆಹಲಿಯ ಹಲವಾರು ಭಾಗಗಳನ್ನು ಆವರಿಸಿಕೊಂಡು ಆಹುತಿ ತೆಗೆದುಕೊಂಡ ಹಿಂಸಾಚಾರಗಳು ಒಂದು ಗಂಭೀರವಾದ ಮಾನವೀಯ ದುರಂತವಾಗಿದ್ದು ನಮ್ಮ ಗಣರಾಜ್ಯವು ಎದುರಿಸುತ್ತಿರುವ ಗಹನವಾದ ನೈತಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ತೋರಿಸುತ್ತದೆ. ಈವರೆಗೆ ಬಂದಿರುವ ವರದಿಗಳ ಪ್ರಕಾರ ದೆಹಲಿಯ ಈಶಾನ್ಯ ಭಾಗಗಳಲ್ಲಿ ೩೮ ಜನರು ಪ್ರಾಣಗಳನ್ನು ಕಳೆದುಕೊಂಡು ನೂರಾರು ಜನರು ಪ್ರಾಣಾಂತಿಕವಾಗಿ ಗಾಯಗೊಂಡಿದ್ದಾರೆ. ಒಂದು  ಸಮುದಾಯವು ಅನುಭವಿಸುತ್ತಿರುವ ಪ್ರಾಣ ಹಾಗೂ ಆಸ್ತಿ ನಷ್ಟಗಳ ಪ್ರಮಾಣವು ಯಾವುದೇ ಲೆಕ್ಕಾಚಾರಗಳಿಗೆ ಮೀರಿದ್ದಾಗಿದ್ದರೆ ಮತ್ತೊಂದು ಸಮುದಾಯದ ನೋವುಗಳನ್ನು ಆಡಳಿತ ಪಕ್ಷವು ತನ್ನ ವಿಭಜಕ ರಾಜಕೀಯವನ್ನು ಮತ್ತಷು ನಂಜುಪೂರಿತವಾಗಿ ಜಾರಿ ಮಾಡಲು ಬಳಸಿಕೊಳ್ಳುತ್ತಿದೆ.

ದ್ವೇಷದ ಬೆಂಕಿಯನ್ನು ಆರಿಸಲು ಮತ್ತು ಮನುಷ್ಯ ಜೀವಗಳನ್ನು ರಕ್ಷಿಸಲು ಬಳಕೆಗೆ ಬಾರದ ಅಪಾರ ಜನಬೆಂಬಲದಿಂದ ಏನು ಪ್ರಯೋಜನ?

ದೆಹಲಿಯ ಜಾಫರಾಬಾದಿನಲ್ಲಿ ಬಿಜೆಪಿಯ ನಾಯಕರೊಬ್ಬರು ಪೌರತ್ವ ಕಾಯಿದೆ ವಿರೋಧಿಗಳ ಮೇಲೆ ಹಿಂಸಾಚಾರ ನಡೆಸುವುದಾಗಿ ಬಹಿರಂಗವಾಗಿ ಮಾಡಿದ ಭಾಷಣವು ನಂತರ ನಡೆದ ಹಿಂಸಾಚಾರಗಳಿಗೆ ತತ್‌ಕ್ಷಣದ ಕಾರಣವಾಯಿತು. ಆದರೂ, ದೆಹಲಿಯ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಗಳು ಸೃಷ್ಟಿಸಿದ್ದ ದ್ವೇಷ ವಾತಾವರಣವು ಇಂಥ ಸಂದರ್ಭಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿತ್ತು. ದೆಹಲಿಯ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ಅಧ್ಯಕ್ಷರೂ ಮತ್ತು ಭಾರತದ ಗೃಹ ಮಂತ್ರಿಗಳು ಎಲ್ಲೆಲ್ಲಿ ಅತ್ಯಂತ ಹೀನಾಯ ಹಾಗೂ ಕೋಮು ಉನ್ಮಾದವನ್ನು ಬಡಿದೆಬ್ಬಿಸುವ ಭಾಷಣಗಳನ್ನು ಮಾಡಿದ್ದರೋ ಅದೇ ಪ್ರದೇಶಗಳಲ್ಲಿ ಈಗ ಅತಿಹೆಚ್ಚು ಹಿಂಸಾಚಾರಗಳು ನಡೆದಿರುವುದು ಕೇವಲ ಕಾಕತಾಳಿಯವಿರಬಹುದೇ? ಅದೇ ಸಮಯದಲ್ಲಿ ಹಿಂಸಾಚಾರ ನಡೆದ ಪ್ರದೇಶಗಳೆಲ್ಲವೂ ಬಿಜೆಪಿಯು ಗೆಲುವನ್ನು ಪಡೆದ ಎಂಟರಲ್ಲಿನ ಐದು ವಿಧಾನ ಸಭಾ ಕ್ಷೇತ್ರಗಳಲ್ಲೇ ನಡೆದಿರುವುದೂ ಸಹ ಬಿಜೆಪಿಯ ಕೋಮು ವಿಭಜಕ ಪ್ರಚಾರಗಳು ಎಷ್ಟು ಪರಿಣಾಮವನ್ನುಂಟು ಮಾಡಿವೆ ಎನ್ನುವುದನ್ನು ಸೂಚಿಸುತ್ತದೆ. ಗಾಯಗೊಂಡ ಪ್ರತಿ ಮೂವರಲ್ಲಿ ಒಬ್ಬರು ಗುಂಡಿನ ಗಾಯಕ್ಕೆ ಗುರಿಯಾಗಿರುವಾಗ ಗೋಲಿ ಮಾರೋ ಘೋಷಣೆಗೂ ಹಿಂಸಾಚಾರಗಳಿಗೂ ಇರುವ ಸಂಬಂಧವನ್ನು ಕಾಣದಿರಲು ಸಾಧ್ಯವೇ? ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ಗಳ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಮಾಡುತ್ತಿರುವವರನ್ನು ದೇಶದ್ರೋಹಿಗಳೆಂದು ಚಿತ್ರಿಸಲು ಆಳುವ ಪಕ್ಷವು ನಿರಂತರವಾಗಿ ನಡೆಸಿದ ಅಪಪ್ರಚಾರದಿಂದಾಗಿ ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿಕೊಂಡು ನಡೆಸಿದ ದಾಳಿಗಳಿಗೆ ಮಾನ್ಯತೆ ಸಿಕ್ಕಂತಾಗಿಬಿಟ್ಟಿತು. ಈ ಬಗೆಯ ರಾಜಕೀಯ-ಸೈದ್ಧಾಂತಿಕ ಮಾನ್ಯತೆಗಳ ಜೊತೆಜೊತೆಗೆ ತಪ್ಪಿತಸ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ತೋರಲಾಗುತ್ತಿರುವ ಆಡಳಿತಾತ್ಮಕ ಮತ್ತು ನ್ಯಾಯಿಕ ಸಡಿಲತೆಗಳು ಸಹ ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕೆಂದರೆ ದೆಹಲಿ ಪೋಲಿಸ್ ಕೇಂದ್ರದ ಗೃಹ ಸಚಿವಾಲಯದ ನಿಯಂತ್ರಣಕ್ಕೆ ಒಳಪಡುತ್ತದೆ.

ದೆಹಲಿಯಲ್ಲಿ ನಡೆದ ಹಿಂಸಾಚಾರದ ಅವಧಿಯಲ್ಲಿ ದೆಹಲಿ ಪೊಲೀಸರು ತೆಗೆದುಕೊಂಡ ಹಾಗೂ ತೆಗೆದುಕೊಳ್ಳದಿದ್ದ ಕ್ರಮಗಳು ಒಂದೆಡೆ ಸಂವೇದನಾಶೂನ್ಯ ನಿರ್ಲಕ್ಷ್ಯದಿಂದ ಕೂಡಿದ್ದರೆ ಮತ್ತೊಂದೆಡೆ ಗಲಭೆಗಳಲ್ಲಿ ಸಕ್ರಿಯವಾದ ಪಾಲುದಾರಿಕೆಯಿಂದಲೂ ಕೂಡಿತ್ತು. ಕೋಮುಹಿಂಸಾಚಾರ ಉದ್ರೇಕಿಸುವಂತಹ ಘೋಷಣೆಗಳನ್ನು ಕೂಗುತ್ತಿದ್ದವರಿಗೆ ಪೊಲೀಸರೇ ರಕ್ಷಣೆ ಕೊಡುತ್ತಿದ್ದದ್ದು ಅಥವಾ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಗಾಯಗೊಂಡು ಕೆಳಗೆ ಬಿದ್ದಿದ್ದರೂ ಅವರನ್ನು ಬಡಿದು ರಾಷ್ಟ್ರಗೀತೆ ಹಾಡುವಂತೆ ಪೊಲೀಸರೇ ಒತ್ತಾಯಿಸುತ್ತಿದ್ದದ್ದು, ಅಥವಾ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯಲ್ಲು ಬರುತ್ತಿದ್ದ ಅಂಬ್ಯುಲೆನ್ಸ್‌ಗಳಿಗೆ ಪೊಲೀಸರೇ ತಡೆಯೊಡ್ಡುತ್ತಿದ್ದಂತಹ ಕ್ರಮಗಳು ಕಾನೂನನ್ನು ಎತ್ತಿ ಹಿಡಿಯಬೇಕಾದ ಪೊಲೀಸರೇ ಹೇಗೆ ತಮ್ಮ ಕರ್ತವ್ಯವನ್ನು ಪಾಲಿಸಲಿಲ್ಲ ಎಂಬುದರ ಉದಾಹರಣೆಗಳಾಗಿವೆ. ಅಷ್ಟು ಮಾತ್ರವಲ್ಲ ಹಿಂಸಾಚಾರಗಳು ನಡೆಯುವ ಸಾಧ್ಯತೆಯ ಬಗ್ಗೆ ಪೊಲೀಸ್ ಬೇಹು ಮಾಹಿತಿಗಳಿದ್ದರೂ ದೆಹಲಿ ಪೊಲೀಸರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂಬ ವರದಿಗಳಿವೆ. ವಾಸ್ತವವಾಗಿ ಹಿಂಸಾಚಾರಕ್ಕೆ ಮುನ್ನ ಬಿಜೆಪಿಯ ನಾಯಕರೊಬ್ಬರು ಕೋಮು ದ್ವೇಷಕ್ಕೆ ಕಿಚ್ಚು ಹಚ್ಚುವ ಭಾಷಣವನ್ನು ಮಾಡುತ್ತಿದ್ದಾಗ ಅವರ ಪಕ್ಕದಲ್ಲೇ ದೆಹಲಿಯ ಪೊಲೀಸ್ ಅಧಿಕಾರಿಗಳು ಸುಮ್ಮನೆ ಕೇಳಿಸಿಕೊಳ್ಳುತ್ತಾ ನಿಂತಿದ್ದರು. ಒಂದು ವೇಳೆ ದೆಹಲಿ ಪೊಲೀಸರು ಕೇವಲ ತಮಗೆ ನೀಡಲಾದ ಆದೇಶಗಳನ್ನು ಪಾಲಿಸುತ್ತಿದ್ದರು ಎಂದಾಗಿದ್ದಲ್ಲಿ ಇದರ ನೇರ ಹೊಣೆ ಕೇಂದ್ರ ಗೃಹ ಸಚಿವಾಲಯದ್ದು ಮತ್ತು ಈಗಲೂ ಬಾಯಿಬಿಚ್ಚದೆ ಮೌನವಾಗಿರುವ ಗೃಹಮಂತ್ರಿಯದ್ದು. ಅಥವಾ ಅವರ ಗೈರುಹಾಜರಿಯೇ ಅವರ ನಿರಂತರ ಹಾಜರಿಯ ಮತ್ತೊಂದು ವಿಧಾನವೂ ಇರಬಹುದೇ? ಗಲಭೆಗಳು ಸ್ಪೂಟಗೊಂಡ ಕಡೆಗಳಲ್ಲಿ ಅದನ್ನು ನಿಯಂತ್ರಿಸಲು ಬೇಕಾಗುವಷ್ಟು ಪೊಲೀಸ್ ಸಿಬ್ಬಂದಿ ಇರಲಿಲ್ಲ ಎನ್ನುವ ವಾದದಲ್ಲಿ ಹೆಚ್ಚಿನ ಹುರುಳಿಲ್ಲ. ಏಕೆಂದರೆ ಅದೇ ವಾಸ್ತವವಾಗಿದ್ದಲ್ಲಿ ಕೂಡಲೇ ಸೇನೆ ಹಾಗೂ ಅರೆಸೇನೆಯನ್ನು ಕರೆಸದೆ ಸಮಯ ಕಳೆದದ್ದೇಕೆ ಎಂಬ ಪ್ರಶ್ನೆಗೆ ಅದು ಉತ್ತರವನ್ನು ನೀಡುವುದಿಲ್ಲ. ಈ ರೀತಿ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರು ತೆಗೆದುಕೊಂಡ  ಹಾಗೂ ತೆಗೆದುಕೊಳ್ಳದ ಕ್ರಮಗಳನ್ನೂ ಹಾಗೂ ಆಳುತ್ತಿರುವ ನಾಯಕದ್ವಯರ ಹಿನ್ನೆಲೆಯನ್ನೂ ಗಮನಿಸಿದಾಗ ಕೇಂದ್ರ ಸರ್ಕಾರದ ಉದ್ದೇಶಗಳ ಬಗ್ಗೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ.

ಕೋಮುಹಿಂಸಾಚಾರ ಉದ್ರೇಕಿಸುವಂತಹ ಘೋಷಣೆಗಳನ್ನು ಕೂಗುತ್ತಿದ್ದವರಿಗೆ ಪೊಲೀಸರೇ ರಕ್ಷಣೆ ಕೊಡುತ್ತಿದ್ದದ್ದು ಅಥವಾ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಗಾಯಗೊಂಡು ಕೆಳಗೆ ಬಿದ್ದಿದ್ದರೂ ಅವರನ್ನು ಬಡಿದು ರಾಷ್ಟ್ರಗೀತೆ ಹಾಡುವಂತೆ ಪೊಲೀಸರೇ ಒತ್ತಾಯಿಸುತ್ತಿದ್ದದ್ದು, ಅಥವಾ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯಲ್ಲು ಬರುತ್ತಿದ್ದ ಅಂಬ್ಯುಲೆನ್ಸ್‌ಗಳಿಗೆ ಪೊಲೀಸರೇ ತಡೆಯೊಡ್ಡುತ್ತಿದ್ದಂತಹ ಕ್ರಮಗಳು ಕಾನೂನನ್ನು ಎತ್ತಿ ಹಿಡಿಯಬೇಕಾದ ಪೊಲೀಸರೇ ಹೇಗೆ ತಮ್ಮ ಕರ್ತವ್ಯವನ್ನು ಪಾಲಿಸಲಿಲ್ಲ ಎಂಬುದರ ಉದಾಹರಣೆಗಳಾಗಿವೆ.

ಈ ಹಿಂಸಾಚಾರಗಳಿಗೆ ಕಾರಣವಾದ ದ್ವೇಷ ಭಾಷಣಗಳನ್ನು ಮಾಡಿದ ವ್ಯಕ್ತಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರವು ಮಾಡುತ್ತಿರುವ ನಿರಂತರ ಪ್ರಯತ್ನಗಳೂ ಸಹ ಈ ಅನುಮಾನಗಳಿಗೆ ಪುರಾವೆಯನ್ನು ಒದಗಿಸುತ್ತವೆ. ಕೇಂದ್ರ ಸರ್ಕಾರz ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯು ದೆಹಲಿ ಹೈಕೋರ್ಟಿನಲ್ಲಿ ಆರೋಪಿತ ವ್ಯಕ್ತಿಗಳ ವಿರುದ್ಧ ಈ ಸದ್ಯಕ್ಕೆ ಎಫ್‌ಐಆರ್ ಅನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದು  ಕಾನೂನಿನ ಆಡಳಿತದ  ಅಪಹಾಸ್ಯವೇ ಆಗಿದೆ. ದೆಹಲಿ ಪೊಲೀಸರ ವರ್ತನೆಗಳನ್ನು ಪ್ರಶ್ನಿಸಿದ ಮತ್ತು ಸಂಬಂಧಪಟ್ಟವರ ಮೇಲೆ ಕೂಡಲೇ ದೂರು ದಾಖಲು ಮಾಡಿಕೊಳ್ಳಲು ಆಗ್ರಹಿಸಿದ ನ್ಯಾಯಾಧೀಶರನ್ನು ತರಾತುರಿಯಲ್ಲಿ ಬೇರೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದು  ಹಾಗೂ ಆ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಿದ ಕೂಡಲೇ ಆ ಪೀಠವು ಇಡೀ ಪ್ರಕರಣದ ವಿಚಾರಣೆಯನ್ನು ದೀರ್ಘಾವಧಿಗೆ ಮುಂದೂಡಿದ್ದೆಲ್ಲವೂ ಕೇವಲ ನ್ಯಾಯದ ನಿರಾಕರಣೆಯನ್ನು ಮಾತ್ರವಲ್ಲದೆ ಆಳುವ ಪಕ್ಷದ ಸದಸ್ಯರನ್ನು ರಕ್ಷಿಸಿಕೊಳ್ಳಲು ಸರ್ಕಾರವು ಪ್ರದರ್ಶಿಸುತ್ತಿರುವ ಧಾರ್ಷ್ಟ್ಯವನ್ನೂ ತೋರಿಸುತ್ತದೆ. ಈ ಹಿಂಸಾಚರಗಳ ತನಿಖೆಯನ್ನು ಜೆಎನ್‌ಯು ಮತ್ತು ಜಾಮಿಯಾ ವಿಶ್ವವಿದ್ಯಾಲಯಗಳಲಿ ಹಿಂಸಾಚಾರ ನಡೆಸಿದ ಕುಖ್ಯಾತಿಯನ್ನು ಪಡೆದಿರುವ ಪೊಲೀಸ್ ಅಧಿಕಾರಿಗಳಿಗೇ ವಹಿಸಿಕೊಟ್ಟಿರುವುದೂ ಸಹ ಸತ್ಯ ಮತ್ತು ನ್ಯಾಯಗಳಿಗೆ ಸರ್ಕಾರದ ಬದ್ಧತೆಯೆಷ್ಟು ಎಂಬ ಸಂದೇಹಕ್ಕೆ ಮತ್ತಷ್ಟು ಕಾರಣಗಳನ್ನು ಒದಗಿಸುತ್ತದೆ.

ಈ ಮೌಲ್ಯಗಳ ಬಗ್ಗೆ ಕೇಂದ್ರ ಸರ್ಕಾರದ ಬದ್ಧತೆಯು ಯಾವಾಗಲೂ ಸಂದೇಹಾಸ್ಪದವೇ ಆಗಿತ್ತು. ಆದರೆ ಹಾಲಿ ಬಿಕ್ಕಟ್ಟು ಅನಾವರಣಗೊಳ್ಳುತ್ತಿದ್ದ ಸಂದರ್ಭದಲ್ಲಿ ದೆಹಲಿ ಸರ್ಕಾರದ ಮತ್ತದರ ರಾಜಕೀಯ ನಾಯಕತ್ವದ ಪಾತ್ರವೂ ಸಹ ತೃಪ್ತಿದಾಯಕವಾಗಿಯೇನೂ ಇರಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಆಡಳಿತಾತ್ಮಕ ಸಾಮರ್ಥ್ಯ ದೆಹಲಿ ಸರ್ಕಾರಕ್ಕಿಲ್ಲವಾದರೂ, ಶಾಂತಿ ಮತ್ತು ಸೌಹಾರ್ದತೆಗಳ ಪರವಾಗಿರುವ ಶಕ್ತಿಗಳನ್ನು ಸಂಘಟಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅದು ನೈತಿಕ ಮತ್ತು ರಾಜಕೀಯ ಮುಂದಾಳತ್ವವನ್ನು ವಹಿಸಬಹುದಾಗಿತ್ತು. ದ್ವೇಷದ ಬೆಂಕಿಯನ್ನು ಆರಿಸಲು ಮತ್ತು ಮನುಷ್ಯ ಜೀವಗಳನ್ನು ರಕ್ಷಿಸಲು ಬಳಕೆಗೆ ಬಾರದ ಅಪಾರ ಜನಬೆಂಬಲದಿಂದ ಏನು ಪ್ರಯೋಜನ? ಕೆಲವು ಬಗೆಯ ನಿzಷ್ಟ ರಾಜಕೀಯ ಕಾರ್ಯಾಚರಣೆಗಳ ಫಲಿತಾಂಶವಾಗಿಯೇ ದೆಹಲಿ ಹಿಂಸಾಚಾರಗಳು ಸಂಭವಿಸಿರುವಾಗ ಅದನ್ನು ಕೇವಲ ಆಡಳಿತಾತ್ಮಕ ಕ್ರಮಗಳಿಂದ ನಿಗ್ರಹಿಸಲು ಸಾಧ್ಯವಿಲ್ಲ. ಅಂತಹ ಆಡಳಿತಾತ್ಮಕ ಸಾಮರ್ಥ್ಯವೂ ದೆಹಲಿ ಸರ್ಕಾರಕ್ಕಿಲ್ಲ. ಅದೇನೇ ಇದ್ದರೂ ಈಗ ಬಾಧಿತ ಪ್ರದೇಶಗಳಿಗೆ ಧಾವಿಸುವುದು ಮತ್ತು ತಮಗಿರುವ ಜನಪ್ರಿಯ ಬೆಂಬಲ ಮತ್ತು ಮಾನ್ಯತೆಯನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ಕೂಡಲೇ ಕಾರ್ಯೋನ್ಮೂಖವಾಗುವಂತೆ ಒತ್ತಡವನ್ನು ಸೃಷ್ಟಿಸುವುದು ಅಗತ್ಯವಾಗಿ ಕೈಗೊಳ್ಳಬೇಕಿರುವ ಕ್ರಮಗಳಾಗಿವೆ. ಆಳುವ ಪಕ್ಷವು ಎಸೆದಿರುವ ಸೈದ್ಧಾಂತಿಕ ಸವಾಲುಗಳನ್ನು ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಎದಿರಿಸಬಹುದೆಂಬ ರಾಜಕೀಯದ ಮಿತಿಗಳನ್ನು ಆಮ್ ಆದ್ಮಿ ಪಕ್ಷದ ಪರಿಸ್ಥಿತಿ ತೋರಿಸುತ್ತದೆ. ನಿರ್ದಿಷ್ಟ ಸಮುದಾಯವನ್ನು ಮಾತ್ರ ಗುರಿಮಾಡಿ ಎಸಗುವ ಹಿಂಸಾಚಾರದ ದೃಶ್ಯಾವಳಿಗಳು ದ್ವೇಷ ಸಿದ್ಧಾಂತಗಳಿಗೆ ಬದ್ಧವಾಗಿರುವ ರಾಜಕೀಯ ಶಕ್ತಿಗಳಿಗೆ ದ್ವೇಷ ಸಿದ್ಧಾಂತವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲೂ ಮತ್ತು ತಮ್ಮನ್ನು ರಕ್ಷಕರೆಂದು ಪ್ರದರ್ಶಿಸಿಕೊಳ್ಳಲು ಸಹಾಯ ಮಾಡುತ್ತವೆ. ಕಾನೂನು ಮತ್ತು ಸುವ್ಯವಸ್ಥೆಯ ವಿಷಯದಲ್ಲಿ ಕೇಂದ್ರ ಸರ್ಕಾರದ ವೈಫಲ್ಯವು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಅದೇ ವೇಳೆಯಲ್ಲಿ ಈ ದ್ವೇಷ ಸಿದ್ಧಾಂತದ ರಣತಂತ್ರದಿಂದ ಹಿಂಸೆಯು ಇನ್ನೂ ತೀವ್ರವಾಗುವ ಸೂಚನೆಗಳಿವೆ. ಐಕ್ಯತೆ ಮತ್ತು ಸೌಹಾರ್ದೆತತೆಗಳಿಗಾಗಿ ಜನರನ್ನು ಅಣಿನೆರೆಸುವ ಮೂಲಕ ಈ ಶಕ್ತಿಗಳಿಗೆ ಸವಾಲೆಸೆಯುವ ಕೆಲಸವನ್ನು ಪ್ರತಿರೋಧಿ ಶಕ್ತಿಗಳು ತುರ್ತಾಗಿ ಕೈಗೆತ್ತಿಕೊಳ್ಳಬೇಕಿದೆ.

ಕೃಪೆ: Economic and Political Weekly  ಅನು: ಶಿವಸುಂದರ್ 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...