ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಗೋಕರ್ಣ ದೇವಸ್ಥಾನ ಮತ್ತೆ ಸರ್ಕಾರದ ಸುಪರ್ದಿಗೆ

Source: sonews | By Staff Correspondent | Published on 19th September 2018, 8:04 PM | Coastal News | State News | Don't Miss |

ಕಾರವಾರ : ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಮಟಾ ತಾಲೂಕಿನ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಶ್ರೀರಾಮಚಂದ್ರಾಪುರ ಮಠದ ಆಡಳಿತದಿಂದ ಸರ್ಕಾರ ಪುನಃ ತನ್ನ ವಶಕ್ಕೆ ಪಡೆದಿದೆ.

ರಾಜ್ಯ ಹೈಕೋರ್ಟ್ ಆದೇಶದಂತೆ ಹಾಗೂ ಸುಪ್ರೀಂಕೋರ್ಟ್‍ನ ತೀರ್ಪಿನ ಹಿನ್ನೆಲೆಯಲ್ಲಿ ದೇವಸ್ಥಾನದ ಉಸ್ತುವಾರಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಬುಧವಾರ ಬೆಳಿಗ್ಗೆ ದೇವಸ್ಥಾನದ ಆಡಳಿತವನ್ನು ವಹಿಸಿಕೊಂಡರು.
    
ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು 2008ರಲ್ಲಿ ರಾಜ್ಯ ಸರ್ಕಾರ ಹೊಸನಗರ ತಾಲೂಕಿನ ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಗೋಕರ್ಣ ದೇವಾಲಯ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ 1997ಕ್ಕೆ ಒಳಪಟ್ಟಿದ್ದು ಸರ್ಕಾರದ ಆಸ್ತಿಯಾಗಿದೆ. ಇದನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ವಹಿಸಿರುವುದು ಸರಿಯಲ್ಲ ಎಂದು ವಾದಿಸಿದ್ದರು.
    
ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಾಧೀಶರಾದ ಬಿ.ವಿ.ನಾಗರತ್ನ ಹಾಗೂ ಅರವಿಂದ್‍ಕುಮಾರ್ ಅವರಿದ್ದ ಪೀಠ ಅರ್ಜಿದಾರರ ವಾದವನ್ನು ಮನ್ನಿಸಿ ದೇವಸ್ಥಾನದ ಆಡಳಿತವನ್ನು ಮತ್ತೆ ರಾಜ್ಯ ಸರ್ಕಾರ ವಶಕ್ಕೆ ಪಡೆಯುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆಡಳಿತವನ್ನು ತಮ್ಮ ಸುಪರ್ದಿಗೆ ಪಡೆದರು. ಅಲ್ಲದೆ ದೇವಸ್ಥಾನಕ್ಕೆ ಸಂಬಂಧಿಸಿದ ಚಿನ್ನ, ಬೆಳ್ಳಿ ಆಭರಣಗಳು, ಹುಂಡಿಯ ಹಣ ಇತ್ಯಾದಿ ವಸ್ತುಗಳನ್ನು ಪರಿಶೀಲಿಸಿ ಉಸ್ತುವಾರಿ ಸಮಿತಿ ವ್ಯಾಪ್ತಿಗೆ ಪಡೆದು ಲೆಕ್ಕಪತ್ರ ದಾಖಲಿಸಿದರು.
    
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ರಾಜ್ಯ ಹೈಕೋರ್ಟ್ ಆದೇಶದಂತೆ ಹಾಗೂ ಸುಪ್ರೀಂಕೋರ್ಟ್‍ನ ತೀರ್ಪಿನಂತೆ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನದ ಉಸ್ತುವಾರಿಯನ್ನು ಬುಧವಾರ ಬೆಳಿಗ್ಗೆ ವಹಿಸಿಕೊಂಡಿದ್ದು, ದೇವಸ್ಥಾನದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಹುಂಡಿಯ ಹಣ ಇನ್ನಿತರ ಸಾಮಗ್ರಿಗಳನ್ನು ಇಂದು ಪರಿಶೀಲಿಸಿ ಲೆಕ್ಕಪತ್ರ ದಾಖಲಿಸಲಾಯಿತು ಎಂದರು.
    
ದೇವಸ್ಥಾನದ ಉಸ್ತುವಾರಿ ಸಮಿತಿ ಅಧ್ಯಕ್ಷರಾಗಿ ದೇವಸ್ಥಾನದ ಆಡಳಿತವನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗಿದ್ದು ಶೀಘ್ರವೇ ಸಮಿತಿಗೆ ಸದಸ್ಯರನ್ನು ನೇಮಿಸಲಾಗುವುದು ಎಂದರು.


    
ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ಗೊಂದಲಗಳಿಲ್ಲ. ಈ ಸಂಬಂಧ ಶ್ರೀರಾಮಚಂದ್ರಾಪುರದ ಮಠದ ಆಡಳಿತದವರ ಆಕ್ಷೇಪ ಅಥವಾ ಅವರಿಗಿರುವ ಗೊಂದಲಗಳ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ. ಆದರೆ ಈ ವಿಷಯದಲ್ಲಿ ಸರ್ಕಾರ ಸ್ಪಷ್ಟವಿದ್ದು ಮುಜರಾಯಿ ಇಲಾಖೆ ಆಯುಕ್ತರ ಮಾರ್ಗಸೂಚಿಯಂತೆ ಆಡಳಿತವನ್ನು ವಹಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
    
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಕುಮಟಾ ಉಪ ವಿಭಾಗಾಧಿಕಾರಿ ಲಕ್ಷ್ಮೀಪ್ರಿಯ, ತಹಸೀಲ್ದಾರ್ ಮೇಘರಾಜ್, ಆಡಳಿತಾಧಿಕಾರಿ ಹಾಲಪ್ಪ ಇನ್ನಿತರ ಅಧಿಕಾರಿಗಳು ಇದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...