ಹೊಸದಿಲ್ಲಿ: ಮೊದಲ ಹಂತದ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣ

Source: S.O. News service | By S O News | Published on 21st February 2021, 1:22 AM | National News |

ಹೊಸದಿಲ್ಲಿ: ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಭಾರತ- ಚೀನಿ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗ ಪೂರ್ವ ಲಡಾಖ್‌ನ ಹಾಟ್‌ಸ್ವಿಂಗ್ಸ್, ಗೋಗ್ರ ಮತ್ತು ಡೆಪ್ತಾಂಗ್‌ನಲ್ಲಿ ಸೇನೆ ಹಿಂದೆಗೆತ ಪ್ರಕ್ರಿಯೆ ಮುಂದುವರಿಸುವ ನಿಟ್ಟಿನಲ್ಲಿ ಫೆ.20ರಂದು ಉಭಯ ಸೇನೆಗಳ ಕಮಾಂಡರ್ ಮಟ್ಟದ ಮಾತುಕತೆ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಸೇನಾ ಕಮಾಂಡರ್ ಮಟ್ಟದ 10ನೇ ಸುತ್ತಿನ ಮಾತುಕತೆ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಚೀನಾದ ಭಾಗದಲ್ಲಿರುವ ಮೋಲ್ಡೊ ಗಡಿಕೇಂದ್ರದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ.

ಪ್ಯಾಂಗೊಂಗ್ ಸರೋವರ ಪ್ರದೇಶದಿಂದ ಸೇನೆ ಹಿಂದೆಗೆತ ಪೂರ್ಣಗೊಂಡ ಬಳಿಕ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ನಡೆಯುವ ಮೊದಲ ಮಾತುಕತೆ ಇದಾಗಿದೆ.

ಪ್ಯಾಂಗೊಂಗ್‌ನ ದಕ್ಷಿಣ ದಂಡೆಯಿಂದ ಸೇನಾಪಡೆ, ಆಯುಧಗಳು ಹಾಗೂ ಇನ್ನಿತರ ಸೇನಾ ಸಾಮಗ್ರಿಗಳನ್ನು ಹಿಂದೆಗೆದುಕೊಳ್ಳುವ, ಬಂಕರ್ ಗಳು, ಟೆಂಟ್‌ಗಳು ಹಾಗೂ ಇತರ ತಾತ್ಕಾಲಿಕ ನಿರ್ಮಾಣಗಳನ್ನು ಕಳಚುವ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದ್ದು ಶುಕ್ರವಾರ ಉಭಯ ದೇಶಗಳ ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸಿ ಖಾತರಿ ಪಡಿಸಿದಾರೆ ಎಂದು ಮೂಲಗಳು ಹೇಳಿವೆ.  ಲಡಾಖ್ ವಲಯದಲ್ಲಿ ಉದ್ವಿಗ್ನತೆ ಶಮನಗೊಳಿಸುವ ನಿಟ್ಟಿನಲ್ಲಿ ಉಳಿದ ಪ್ರದೇಶದಿಂದ ಸೇನೆ ಹಿಂದೆಗೆತ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕೆಂದು ಶನಿವಾರದ ಮಾತುಕತೆಯಲ್ಲಿ ಭಾರತ ಬಲವಾಗಿ ಪ್ರತಿಪಾದಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಾತುಕತೆಯಲ್ಲಿ ಲೇಹ್‌ನಲ್ಲಿ ನೆಲೆಯಾಗಿರುವ 14 ಕಾರ್ಪ್ ತುಕಡಿಯ ಕಮಾಂಡರ್ ಲೆ.ಜ. ಪಿಜಿಕೆ ಮೆನನ್ ಭಾರತದ ನಿಯೋಗದ ನೇತೃತ್ವ ವಹಿಸಲಿದ್ದರೆ ಚೀನಿ ನಿಯೋಗದ ನೇತೃತ್ವವನ್ನು ಮೇಜರ್ ಜನರಲ್ ಲಿಯು ಲಿನ್ ವಹಿಸುತ್ತಾರೆ ಎಂದು ವರದಿಯಾಗಿದೆ. ಪ್ಯಾಂಗೊಂಗ್ ಸರೋವರ ಪ್ರದೇಶದಿಂದ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣಗೊಂಡ 48 ಗಂಟೆಯೊಳಗೆ, ಉಳಿದ ಎಲ್ಲಾ ಬಿಕ್ಕಟ್ಟಿನ ಇತ್ಯರ್ಥದ ಬಗ್ಗೆ ಚರ್ಚಿಸಲು ಉಭಯ ಸೇನೆಗಳ ಹಿರಿಯ ಕಮಾಂಡರ್‌ಗಳ ಮಟ್ಟದ ಸಭೆ ನಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...