ಮಾವು ಬೆಳೆಗಾರರ ಹಿತ ಕಾಯ್ದುಕೊಳ್ಳಲು ನಿರ್ಧಾರ-ಜಿಲ್ಲಾಧಿಕಾರಿ

Source: sonews | By Staff Correspondent | Published on 14th May 2020, 8:06 PM | State News |

ಶ್ರೀನಿವಾಸಪುರ: ಮಾವು ಬೆಳೆಗಾರರ ಹಿತ ಕಾಯಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ, ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾವಿನ ವಹಿವಾಟು ನಡೆಸಬೇಕೆ ಬೇಡವೆ ಎಂಬ ವಿಷಯದ ಬಗ್ಗೆ ಚರ್ಚಿಸಲು ಏರ್ಪಡಿಸಿದ್ದ ಮಾವು ಬೆಲೆಗಾರರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಾತನಾಡಿ, ಈ ಬಗ್ಗೆ ದೃಢ ಹಾಗೂ ಸರ್ವಸಮ್ಮತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಈಗ ಗ್ರಾಮೀಣ ಪ್ರದೇಶದಲ್ಲಿ ಮಾವು ಖರೀದಿ ಕೇಂದ್ರಗಳನ್ನು ತೆರೆಯಲು ಆಗುವುದಿಲ್ಲ. ಮಾರುಕಟ್ಟೆಯಲ್ಲಿ ಕೊರೊನಾ ಬರದಂತೆ ತಡೆಯುವ ಭರವಸೆ ನೀಡಲು ಸಾಧ್ಯವಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಬೆಳೆ ನಷ್ಟ ಪರಿಹಾರ ನಿರೀಕ್ಷೆ ಮಾಡುವಂತಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗದಂತೆ ಎಲ್ಲರೂ ಒಟ್ಟಾಗಿ ನಡೆಯಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಕಾಲು ದಾರಿಗಳನ್ನೂ ಬಿಡದೆ ಕಾವಲು ಹಾಕಿದ್ದರೂ, ಹೊರ ರಾಜ್ಯಗಳ ಜನರು  ದುರ್ಗಮ ಮಾರ್ಗಗಳ ಮೂಲಕ ಜಿಲ್ಲೆ ಪ್ರವೇಶಿಸುತ್ತಿದ್ದಾರೆ. ಇಷ್ಟು ದಿನ ಹಸಿರು ಜಿಲ್ಲೆಯಾಗಿ ಉಳಿಯಲು ಜನರರು ನೀಡಿದ ಸಹಕಾರವನ್ನು ಮರೆಯಲಾಗದು. ಮಾವಿನ ವಹಿವಾಟಿನ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಬರುವ ಜನರಿಂದ ಕೊರೊನಾ ವೈರಾಣು ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದರು.

ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಎಂ.ಗಾಯಿತ್ರಿ, ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವೇಂದ್ರ ಪ್ರಕಾಶ್‌, ಎಪಿಎಂಸಿ ಅಧ್ಯಕ್ಷ ಎನ್‌.ರಾಜೇಂದ್ರ ಪ್ರಸಾದ್‌, ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು ವಹಿವಾಟು ನಡೆಸುವುದರ ಸಾದಕ ಬಾಧಕಗಳ ಬಗ್ಗೆ ಮಾತನಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎನ್‌.ವೇಣುಗೋಪಾಲ್‌, ರೈತ ಮುಖಂಡರಾದ ಚಿನ್ನಪ್ಪರೆಡ್ಡಿ, ಪಾತಕೋಟ ನವೀನ್‌ ಕುಮಾರ್‌, ವೀರಭದ್ರಸ್ವಾಮಿ, ಪಿ.ಆರ್.ಸೂರ್ಯನಾರಾಯಣ, ವೆಂಕಟರಾಮರೆಡ್ಡಿ, ಅನ್ನೀಸ್‌ ಅಹ್ಮದ್‌, ಚಂದ್ರಶೇಖರ್‌, ಸತ್ಯನಾರಾಯಣ, ಜಯರಾಮರೆಡ್ಡಿ, ರಾಜಾರೆಡ್ಡಿ, ಪ್ರಭಾರಕರ ಗೌಡ, ದಿಂಬಾಲ ರವಿ, ವೆಂಕಟರೆಡ್ಡಿ ಮತ್ತಿತತರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹೆಚ್ಚಿನ ಸಂಖ್ಯೆಯ ರೈತರು ಹಾಗೂ ಮುಖಂಡರು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾವಿನ ವಹಿವಾಟು ನಡೆಸಲು ವಿರೋಧ ವ್ಯಕ್ತಪಡಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next