ಅವಿಭಜಿತ ಜಿಲ್ಲೆಯ ಫ್ಯಾಕ್ಸ್‍ಗಳ ಗಣಕೀಕರಣಕ್ಕೆ ಜೂನ್ 30ರ ಕಾಲಮಿತಿ ತಪ್ಪಿದಲ್ಲಿ ಆರ್ಥಿಕ ಸೌಲಭ್ಯ ನಿಲುಗಡೆ-ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

Source: sonews | By Staff Correspondent | Published on 30th May 2020, 9:49 PM | State News |

ಕೋಲಾರ: ಅವಿಭಜಿತ ಜಿಲ್ಲೆಯ ಎಲ್ಲಾ ಸೊಸೈಟಿಗಳ ಗಣಕೀಕರಣ ಕಾರ್ಯ ಜೂನ್ ಅಂತ್ಯದೊಳಗೆ ಮುಗಿಸಿರಬೇಕು ಇಲ್ಲವಾದಲ್ಲಿ ಯಾವುದೇ ಆರ್ಥಿಕ ಸೌಲಭ್ಯ ನೀಡುವುದಿಲ್ಲ ಎಂದು ಎಸ್‍ಎಫ್‍ಸಿಎಸ್ ಸಿಇಒಗಳಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.

ಶನಿವಾರ ನಗರದ ಸಹಕಾರಿ ಯೂನಿಯನ್ ಸಭಾಗಂಣದಲ್ಲಿ ನಡೆದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಫ್ಯಾಕ್ಸ್ ಹಾಗೂ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕಾಲಮಿತಿಯಲ್ಲಿ ಗಣಕೀಕರಣ ಮುಗಿಸಲು ಇರುವ ತೊಂದರೆ ಏನು ಎಂದು ಪ್ರಶ್ನಿಸಿದ ಅವರು, ಸಹಕಾರಿ ವ್ಯವಸ್ಥೆ ಉಳಿಸಬೇಕು ಎಂದಿದ್ದರೆ ಕೆಲಸ ಮಾಡಿ ಇಲ್ಲವಾದಲ್ಲಿ ಹೊರ ಹೋಗಿ ಎಂದು ತಾಕೀತು ಮಾಡಿದ ಅವರು, ಗಣಕೀಕರಣವಾಗದಿದ್ದರೆ ಸಾಲ,ಬಡ್ಡಿಹಣ ಯಾವುದೇ ಫಂಡ್ಸ್ ಬ್ಯಾಂಕಿನಿಂದ ಬಿಡುಗಡೆ ಮಾಡುವುದಿಲ್ಲ ಎಂದರು.

ಗಣಕೀಕರಣಕ್ಕೆ ನಿರ್ಲಕ್ಷ್ಯ ಸಿಇಒಗಳು ತರಾಟೆಗೆ

ಗುಡಿಬಂಡೆ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ,ಮಾಲೂರು ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು ಜೂನ್ 5 ರೊಳಗೆ ಗಣಕೀಕರಣದ ಮೊದಲ ಹಂತ ಮುಗಿದರಬೇಕು, ಇದು ನಿಮಗೆ ಅಂತಿಮ ಎಚ್ಚರಿಕೆ ಎಂದು ತಿಳಿಸಿದರು.

ಈಗಾಗಲೇ ನಿಮಗೆ ತರಬೇತಿ ನೀಡಲಾಗಿದೆ, ಆದರೂ ನಿರ್ಲಕ್ಷ್ಯ ಏಕೆ, ನೀವು ಸರಿಹೋಗದಿದ್ದರೆ ಮತ್ತೆ ಸೊಸೈಟಿಗಳಿಗೆ ಹಳೆ ದಿವಾಳಿ ಸ್ಥಿತಿ ಬಂದರೂ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸೊಸೈಟಿಗಳು ಹಿಂದಿನಂತಿಲ್ಲ, ಡಿಸಿಸಿ ಬ್ಯಾಂಕಿನಿಂದ ಕೋಟ್ಯಾಂತರ ರೂ ನಿಮ್ಮ ಮೂಲಕ ಸಾಲ ವಿತರಿಸಿದ್ದೇವೆ, ಇಷ್ಟೊಂದು ವಹಿವಾಟು ಇರುವಾಗ ಪಾರದರ್ಶಕತೆ ಬೇಕು, ರೈತರು, ಮಹಿಳೆಯರು ನಿಮ್ಮನ್ನು ಅನುಮಾನದಿಂದ ನೋಡಬಾರದು ಎಂದರು.

310 ಕೋಟಿ ರೂ  ಠೇವಣಿ ಸಂಗ್ರಹ

ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ಸೇವೆ ಸಲ್ಲಿಸುವ ಉದ್ದೇಶದಿಂದ ಸೆಕ್ಷನ್ 11 ವ್ಯಾಪ್ತಿಯಲ್ಲಿದ್ದ ಬ್ಯಾಂಕನ್ನು ಹೊರಗೆ ತರಲಾಯಿತು, ನಂತರ ಎನ್‍ಪಿಎ ಕಡಿಮೆ ಮಾಡಲಾಯಿತು, ಹೀಗೆ ಹಂತಹಂತವಾಗಿ ಬ್ಯಾಂಕ್ ಹಣಕಾಸು ವಹಿವಾಟಿನಲ್ಲಿ ಚೇತರಿಕೆಯಾಗಿದ್ದು, 310 ಕೋಟಿ ರೂ ಠೇವಣಿ ಸಂಗ್ರಹಿಸಲಾಗಿದೆ ಎಂದರು.

ರೈತರಿಗೆ ಕೆಸಿಸಿ ಸಾಲ, ಮಹಿಳಾ ಸಂಘಗಳಿಗೆ ಸಾಲ ಸೇರಿದಂತೆ ವಿವಿಧ ರೀತಿಯ ಸಾಲ ನೀಡಿದ್ದು, ಪ್ರಾಮಾಣಿಕವಾಗಿ ಮರುಪಾವತಿ ಆಗುತ್ತಿದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಖ್ಯಾತಿ ಗಳಿಸಿದೆ, ಬ್ಯಾಂಕಿನ ಕಿಸಾನ್ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಬಗ್ಗೆ ತಿಳಿಸಿ, ಬಡ್ಡಿದರ ನಮ್ಮಲ್ಲೇ ಹೆಚ್ಚು ಎಂದು ಮನವರಿಕೆ ಮಾಡಿ ಎಂದರು.

ಲಾಕ್‍ಡೌನ್ ಹಿನ್ನಲೆಯಲ್ಲಿ ಯವುದೇ ಸಾಲ ಕಟ್ಟುವಷ್ಟಿಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಮಾಡಿಲ್ಲ, ಕೆಲವು ಮಂದಿ ಅಪಪ್ರಚಾರ ಮಾಡುತ್ತಿದ್ದಾರೆ, ಹಿಂದೆ ಪ್ರತಿ ತಿಂಗಳು 26 ಕೋಟಿ ರೂ ವಸೂಲಿ ಆಗುತ್ತಿತ್ತು, ಆದರೆ ಈ ಎರಡು ತಿಂಗಳಿಂದ ಕೇವಲ 3 ಕೋಟಿ ಮಾತ್ರ ವಸೂಲಿಯಾಗಿದೆ ಎಂದು ತಿಳಿಸಿ ಸಾಲಗಾರರ ಮನವೊಲಿಸಿ ಮರುಪಾವತಿ ಮಾಡಿಸಿ ಎಂದರು.

ನಿರ್ದೇಶಕ ಯಲವಾರ ಸೋಣ್ಣೇಗೌಡ ಮಾತನಾಡಿ, ಕಾರ್ಯದರ್ಶಿಗಳು, ಸಿಇಒಗಳು ಸಬೂಬುಗಳು ಹೇಳಿಕೊಂಡು ಕುಳಿತರೆ ಕೆಲಸ ಆಗುವುದಿಲ್ಲ, ಗಣಕೀಕರಣಗೊಳಿಸಬೇಕು ಎಂದು ಸತತವಾಗಿ 8 ತಿಂಗಳಿಂದ ಪ್ರಯತ್ನ ನಡೆಯುತ್ತಿದೆ, ನೀವು ಇನ್ನು ನೆಪ ಹೇಳಿಕೊಂಡು ಕುಳಿತರೆ ಹೇಗೆ ಎಂದು ಅಸಮಧಾನವ್ಯಕ್ತಪಡಿಸಿದರು.

ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬೆಳೆ ಬೆಳೆಯುವಂತ ರೈತರನ್ನು ಗುರುತಿಸಿ ಬೆಳೆ ಸಾಲ ನೀಡಬೇಕು, ಪಹಣಿ ಇರುವ ರೈತರಿಗೆಲ್ಲ ಸಾಲ ನೀಡಲು ಆಗುವುದಿಲ್ಲ, ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಬೇಕು, ಬಾಕಿ ಇರುವ ಬೆಳೆ ಸಾಲ ಸಂಪೂರ್ಣವಾಗಿ ವಸೂಲಿ ಮಾಡಿ, ಪಡಿತರದಿಂದ ಲಾಭ ಎನ್ನುವ ಮನೋಭಾವ ಬಿಡಿ ಎಂದರು.

ಸಭೆಯಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನೀಲಕಂಠೇಗೌಡ, ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಕೆ.ವಿ.ದಯಾನಂದ್, ಬಿ.ವಿ.ವೆಂಕಟರೆಡ್ಡಿ,ಮೋಹನ್ ರೆಡ್ಡಿ, ನಾಗಿರೆಡ್ಡಿ,  ನಾರಾಯಣರೆಡ್ಡಿ, ಹನುಮಂತರೆಡ್ಡಿ, ನಾಗನಾಳ ಸೋಮಣ್ಣ,ಗೋವೀಂದರಾಜ್, ಅನಿಲ್ ಕುಮಾರ್,ಚೆನ್ನರಾಯಪ್ಪ, ಎಂಡಿ ರವಿ, ಎಜಿಎಂಗಳಾದ ಶಿವಕಮಾರ್, ಖಲೀಂವುಲ್ಲಾ, ಬೈರೇಗೌಡ ಹಾಜರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್ 1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು

ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್ 1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು