ರಾಯಚೂರು ಜಿಲ್ಲೆಯ ಮಾನ್ವಿ ಬಳಿ ಸಾರಿಗೆ ಬಸ್ ಮತ್ತು ಖಾಸಗಿ ಶಾಲಾ ಬಸ್ ನಡುವೆ ಭೀಕರ ಅಪಘಾತ; ಇಬ್ಬರು ವಿದ್ಯಾರ್ಥಿಗಳ ಸಾವು
ಮಾನ್ವಿ: ಶಿಕ್ಷಕ ದಿನಾಚರಣೆಯ ಹುಮ್ಮಸ್ಸಿನಲ್ಲಿ ಶಾಲೆಗೆ ಹೊರಟಿದ್ದ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ವಿದ್ಯಾರ್ಥಿಗಳ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳಪೆ ರಸ್ತೆಯ ಕಾರಣ ಈ ಅಪಘಾತ ಉಂಟಾಗಿದ್ದು ವಿದ್ಯಾರ್ಥಿಗಳ ಸಾವಿಗೆ ರಸ್ತೆ ಅಗಲೀಕರಣ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಮೃತಪಟ್ಟಿರುವ ವಿದ್ಯಾರ್ಥಿಗಳನ್ನು ಸಮರ್ಥ ಅಮರೇಶ(7) ಹಾಗೂ ಶ್ರೀಕಾಂತ್ ಮಾರೇಶ(12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 15 ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಶಾಲಾ ಬಸ್ ಚಾಲಕ ಹಾಗೂ ಓರ್ವ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮಾನ್ವಿಯಿಂದ ರಾಯಚೂರಿಗೆ ಹೊರಟಿದ್ದ ಸಾರಿಗೆ ಬಸ್ ಹಾಗೂ ಶಾಲಾ ಮಕ್ಕಳನ್ನು ಕರೆದುಕೊಂಡು ಮಾನ್ವಿ ಕಡೆಗೆ ತೆರಳುತ್ತಿದ್ದ ಬಸ್ ಮಧ್ಯೆ ಢಿಕ್ಕಿ ಹೊಡೆದು ಈ ದುರ್ಘಟನೆ ಜರುಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಸಾರ್ವಜನಿಕರ ಸಹಾಯದಿಂದ ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸಿಎಂ ಸಂತಾಪ, ಪರಿಹಾರಕ್ಕೆ ಕ್ರಮ :ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡ ಸುದ್ದಿ ಕೇಳಿ ಸಂಕಟವಾಯಿತು. ಮೃತ ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮಕ್ಕಳಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು, ಮೃತ ಮಕ್ಕಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರವನ್ನು ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.