`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

Source: S.O. News Service | By V. D. Bhatkal | Published on 9th October 2019, 11:40 PM | Coastal News | State News | National News | Special Report |

ಭಟ್ಕಳ: ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ಭಯೋತ್ಪಾದಕ ಆಫಾಕ್ ಲಂಕಾನ ಹೆಂಡತಿ ಅರ್‍ಸೆಲಾ ಅಭೀರಾ ಆ ದಿನ ತಾನು ಅನುಭವಿಸಿದ ಸಂಕಟವನ್ನು ಬರೆದುಕೊಂಡಿದ್ದು ಹಾಗೆ! ಗಂಡ, ಮಕ್ಕಳು, ಅತ್ತೆ, ಮಾವ, ಮಾವನಮನೆ... ಹೀಗೆ ಸಾಮಾನ್ಯ ಹೆಣ್ಣುಮಕ್ಕಳಂತೆ ನೂರೆಂಟು ಕನಸನ್ನು ಕಟ್ಟಿಕೊಂಡು 13 ವರ್ಷಗಳ ಹಿಂದೆ ತನ್ನ ದೇಶ ಪಾಕಿಸ್ತಾನವನ್ನು ಬಿಟ್ಟು ಭಟ್ಕಳಕ್ಕೆ ಬಂದಿದ್ದ ಆಕೆ ತನ್ನ ಕನಸು, ಬದುಕು ಎಲ್ಲವೂ ಕಣ್ಣ ಮುಂದೆಯೇ ಛಿದ್ರಗೊಂಡಿದ್ದನ್ನು ಎಂತವರಿಗೂ ಕಣ್ಣೀರು ಬರಿಸುವಂತೆ ಬರೆದಿಟ್ಟು ಹೊರಟು ಹೋಗಿದ್ದಾಳೆ. ಒಂದು ದುರಂತ ಸಿನೇಮಾ ಚಿತ್ರದ ಕಥೆಯಂತೆ ಆಕೆಯ ಪ್ರತಿ ಮಾತೂ ನಮ್ಮನ್ನು ಕಂಗಾಲಾಗಿಸುತ್ತದೆ. ಗಡಿ ಮೀರಿದ ಭಾವುಕ ಪ್ರಪಂಚದಲ್ಲಿ ನೂರೆಂಟು ಪ್ರಶ್ನೆಗಳು ನಮ್ಮನ್ನು ಹಿಂಡಿ ಹಿಪ್ಪೆಯಾಗಿಸುತ್ತದೆ. 

ದೇಶ ತೊರೆಯುವ ಮುನ್ನಾ ದಿನ ಆಕೆ ವಿಪರೀತ ಭಾವುಕಳಾಗಿದ್ದನ್ನು ಆಕೆಯ ಮಾತನಲ್ಲಿಯೇ ವ್ಯಕ್ತವಾಗುತ್ತದೆ. `ಅರೇ! ನನ್ನ ಮನೆಯಲ್ಲಿ ನಾನೀಗ ಓರ್ವ ಅತಿಥಿಯಾಗಿ ಬಿಟ್ಟಿದ್ದೇನೆ. ಕೋಣೆಯಲ್ಲಿರುವ ಬಟ್ಟೆ ಬರೆಗಳು ನನ್ನದಲ್ಲವೇನೋ ಎಂಬ ಭಾವನೆ ಬರುತ್ತಿದೆ. ಕೋಣೆಯ ನಾಲ್ಕೂ ಗೋಡೆಗಳು ನನ್ನನ್ನು ಕೇಳುತ್ತಿವೆ, ನೀನು ಮತ್ತೆ ಈ ಸ್ಥಳಕ್ಕೆ ಬರುವಿಯೋ, ಇಲ್ಲವೋ? ಇದೇ ಕೊನೆಯೋ?  ನನ್ನ ಮೂರು ಮಕ್ಕಳೂ ನನ್ನತ್ತ ಓಡಿ ಬಂದಾಗಲೆಲ್ಲ ನನ್ನ ಹೃದಯ ಚೂರು ಚೂರಾಗಿ ಹೋಗುತ್ತಿದೆ. ಆದರೆ ಅದನ್ನು ಅವರಿಗೆ ತೋರ್ಪಡಿಸುವ ಹಾಗಿಲ್ಲ. ಹಗಲಿನಲ್ಲಿಯೇ ನನಗೆ ತೂಕಡಿಕೆ! ದಿನ ಹೇಗೋ ಕಳೆದು ಹೋಗುತ್ತಿದೆ. ಇದ್ದಕ್ಕಿದ್ದಂತೆಯೇ ರಾತ್ರಿ ಆವರಿಸಿಕೊಂಡು ಬಿಟ್ಟಿದೆ. ಅದೊಂದು ದುರಂತಮಯ ರಾತ್ರಿ! ನಾನು ಬ್ಯಾಗ್ ಕಟ್ಟಿಕೊಳ್ಳುವಾಗಲೆಲ್ಲ ಏನೂ ಅರಿಯದ ಮಕ್ಕಳು ನನ್ನನ್ನು ಕೇಳುತ್ತಲೇ ಇದ್ದಾರೆ. ಆದರೆ ನಾನು ಅವರಿಗೆ ಹೇಳುವ ಹಾಗಿಲ್ಲ. ದೇವರೇ ಈ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳು ಎಂದಷ್ಟೇ ಬೇಡಿಕೊಂಡು ಸುಮ್ಮನಾದೆ. ನನ್ನನ್ನು ಕೇಳಿ ಕೇಳಿ ಮಕ್ಕಳು ಒಂದೊಂದು ಮೂಲೆಯಲ್ಲಿ ನಿದ್ದೆಗೆ ಜಾರಿದ್ದಾರೆ. ಅಲ್ಲೀಗ ನೀರವ ಮೌನ. ಕಿಟಕಿಯಲ್ಲಿ ನೋಡಿದರೆ ಚಂದಿರ ಕಾಣಿಸುತ್ತಿದ್ದಾನೆ. ಆತ ನನಗೆ ಏನೋ ಹೇಳುತ್ತಿದ್ದಾನೇನೋ ಎನ್ನಿಸುತ್ತಿದೆ. ಕಿವಿಯಲ್ಲಿ ಬೆಳಿಗ್ಗೆಯ ನಮಾಜಿನ ಕರೆ!'

`ಬೆಳಿಗ್ಗೆಯಾಗುತ್ತಿದ್ದಂತೆಯೇ ಅಕ್ಕಪಕ್ಕದ ಮನೆಯವರು, ಸಂಬಂಧಿಕರು ಎಲ್ಲರೂ ನನ್ನ ಮನೆಯತ್ತ ಬರುತ್ತಿದ್ದರು. ನನ್ನ ಬಾಯಿಂದ ಯಾವುದೇ ಮಾತು ಬರುತ್ತಿಲ್ಲ. ಅವರನ್ನು ಕಂಡಾಗ, ಅವರು ಮಾತನಾಡುವಾಗ ಅವರೆಲ್ಲ ಭಾವುಕರಾಗಿರುವುದು ಗೊತ್ತಾಗುತ್ತದೆ. ನಾನು ಮತ್ತೆ ಮೌನಿಯಾಗಿ ದೇವರನ್ನು ನೆನೆಯುತ್ತಿದ್ದೆ. ಮತ್ತೆ ನನ್ನ ಮಕ್ಕಳತ್ತ ಮುಖ ಮಾಡುತ್ತಿದ್ದೆ. ಈ ರೀತಿ ಮಕ್ಕಳನ್ನು ಬಿಟ್ಟು ಹೋಗುವ ಸ್ಥಿತಿ ಯಾರಿಗೂ ಬರುವುದು ಬೇಡ, ದೇವರೇ ಕೊಂದು ಬಿಡು ಎಂದು ಹೇಳಿಕೊಳ್ಳಲಾರಂಭಿಸಿದೆ. ನನ್ನನ್ನು ಕರೆದೊಯ್ಯಲು ವಾಹನ ಬಂದೇ ಬಿಟ್ಟಿತು. ಆ ವಾಹನ ನನಗೆ ನಿಜಕ್ಕೂ ಶವ ಪೆಟ್ಟಿಗೆಯಂತೆ ಗೋಚರಿಸಿತು. ನಾನು ವಾಹನವನ್ನು ಏರಿದೆ. ಆ ಗಾಡಿಯಲ್ಲಿ ನನ್ನ ದೇಹ ಮಾತ್ರ ಇತ್ತು, ಅದಕ್ಕೆ ಜೀವ ಇದ್ದಿರಲಿಲ್ಲ! ಗಾಡಿ ಮುಂದಕ್ಕೆ ಹೋಗುತ್ತಲೇ ಇತ್ತು. ನನ್ನ ಪುಟ್ಟ ಮಗ ಪದೇ ಪದೇ ಫೋನ್ ಕರೆ ಮಾಡುತ್ತಿದ್ದ. ನನ್ನನ್ನು ಬಿಟ್ಟು ನೀನೊಬ್ಬಳೇ ಹೋಗುತ್ತಿದ್ದೆಯಲ್ಲಾ, ನೀನು ಬಹಳ ಕೆಟ್ಟವಳು... ಹೇಳುತ್ತಲೇ ಇದ್ದ! ನಾನೀಗ ನನ್ನ ತಾಯಿಯ ಮನೆಯನ್ನು ಸೇರಿಕೊಂಡಿದ್ದೇನೆ. ಅಲ್ಲಿಯೂ ನಾನು ಅಪರಿಚಿತಳೇ ಆಗಿ ಬಿಟ್ಟಿದ್ದೇನೆ...!'

ಪಾಕಿಸ್ತಾನಿ ಪ್ರಜೆ ಅರ್‍ಸೆಲಾ ಉಳಿದ ಹೆಣ್ಣುಮಕ್ಕಳಂತೆ ತಾನು ಭಟ್ಕಳಕ್ಕೆ ಮದುವೆಯಾಗಿ ಬಂದ ಆರಂಭದ ದಿನಗಳು, ಕನಸನ್ನು ತನ್ನ ಸುದೀರ್ಘ ಪತ್ರದ ಆರಂಭದಲ್ಲಿ ಬರೆದುಕೊಂಡಿದ್ದಾಳೆ. ಗಂಡನ ಮನೆಗೆ ಬಂದಾಗ ತಾನು ಅನುಭವಿಸಿದ ಸಂತಸ, ಎಲ್ಲರ ಪ್ರೀತಿ, ವಿಶ್ವಾಸ, ಮನೆಯ ಹಿರಿಯ ಅತ್ತಿಗೆಯಾಗಿ ತನ್ನ ಹೆಗಲೇರಿದ ಜವಾಬ್ದಾರಿ, ಗಂಡನ ಆದಾಯದಲ್ಲಿನ ಏರುಪೇರು ಎಲ್ಲವನ್ನೂ ಬಿಚ್ಚಿಟ್ಟಿದ್ದಾಳೆ. ಗಂಡ ಶಂಕಿತ ಭಯೋತ್ಪಾದಕನಾಗಿ ಜೈಲು ಸೇರಿದ ನಂತರ, ಆತ ನಿರಪರಾಧಿಯಾಗಿ ಬರಬಹುದು ಎಂಬ ಎಣಿಕೆ ಹುಸಿಯಾದದ್ದು, ಜೀವನದ ಸಂತಸವೇ ಮರೆಯಾಗುತ್ತ ಹೋಗಿದ್ದನ್ನೂ ಪತ್ರದಲ್ಲಿ ದಾಖಲಿಸಿದ್ದಾಳೆ. `ಆರಂಭದಲ್ಲಿ ಯಾರಾದರೂ ಮನೆಯ ಗೇಟ್ ತೆರೆದ ಶಬ್ದ ಕೇಳಿದರೆ ಗಂಡನೇ ಬಂದಿರಬಹುದು ಎಂದುಕೊಳ್ಳುತ್ತಿದ್ದೆ. ಆದರೆ ನನ್ನ ಎಣಿಕೆಯಲ್ಲ ಹುಸಿಯಾಯಿತು. ಹುಟ್ಟಿದ ಹುಡುಗನೂ ಅಪ್ಪನನ್ನು ನೋಡಲು ಸಾಧ್ಯವಾಗದೇ ಒಂದು ರೀತಿಯಲ್ಲಿ ಅನಾಥನಾದ, ವಿಶಾಲವಾದ ನೆಲ ಕಿರಿದಾಯಿತು, ಭಾರ ಹೊರಲು ಸಿದ್ಧವಾಗಿದ್ದ ನನ್ನ ಹೆಗಲು ಶಕ್ತಿ ಕಳೆದುಕೊಳ್ಳುತ್ತ ಹೋಯಿತು' ಎನ್ನುತ್ತಾಳೆ. ಈ ನಡುವೆ ಗಂಡ ಭಯೋತ್ಪಾದಕನಾದ ನಂತರ ತನ್ನ ಮನೆಗೆ ಬರಲು ಸಂಬಂಧಿಕರು ಹಿಂದೇಟು ಹಾಕುತ್ತಿದ್ದ ರೀತಿ, ಕೋಣೆಯಲ್ಲಿ ಮಕ್ಕಳೊಡನೆ ಇರುವಾಗ ಕಾಡುತ್ತಿದ್ದ ಭಯ, ತಂದೆಯ ಸಾವು ಎಲ್ಲವನ್ನೂ ಹೇಳಿಕೊಂಡಿರುವ ಆಕೆ, ಭಾರತದಲ್ಲಿಯೇ 2 ತಿಂಗಳು ಕಳೆಯಲು ಅವಕಾಶ ನೀಡಿದ ನಂತರ ತಾನು ಗೊಂದಲಕ್ಕೆ ಸಿಲುಕಿದ್ದು, ಅಧಿಕಾರಿಗಳ ಮೇಲೆ ಸಂಶಯ ಪಟ್ಟಿರುವುದನ್ನೂ ಪತ್ರದಲ್ಲಿ ಹೇಳಿಕೊಂಡಿದ್ದಾಳೆ. ಅರ್‍ಸೇಲಾಳ ಪತ್ರ ಎಲ್ಲೆಡೆ ಹರಿದಾಡುತ್ತಲೇ ಇದೆ. ಸದ್ಯ ಆಕೆ ಪಾಕಿಸ್ತಾನದಲ್ಲಿದ್ದಾಳೆ. ದಾಖಲೆಯಲ್ಲಿ ಆಕೆ ಪಾಕಿಸ್ತಾನಿ ಪ್ರಜೆ, ಬೇಡವೆಂದರೂ ಭಾರತಕ್ಕೆ, ಭಟ್ಕಳಕ್ಕೆ ಸೊಸೆ! ಗಡಿ ಮೀರಿ ಬದುಕು ಕಟ್ಟಿಕೊಂಡ ಅರ್‍ಸೆಲಾಳನ್ನು ಕೇಳಿದರೆ ಎರಡೂ ದೇಶಗಳೂ ನನ್ನದೇ ಎನ್ನುತ್ತಾಳೆ! ದೇಶವೊಂದು ಇಬ್ಭಾಗವಾಗಿ 70 ವರ್ಷ ಕಳೆದ ಮೇಲೂ ನಾವು ಇಂತಹ ನೋವಿನ ಕಥೆಯನ್ನು ಕೇಳಿಸಿಕೊಳ್ಳಬೇಕಾಗಿರುವುದು ದುರಂತದ ಸಂಗತಿಯಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...