ತಬ್ಲಿಗಿ ವೈರಸ್, ಪಾಕಿಸ್ತಾನಿ ಪಿಶಾಚಿಗಳು: ಕನ್ನಡ ಮಾಧ್ಯಮಗಳ 'ದ್ವೇಷ ಪ್ರೇಮ'ದ ಹಲವು ಮುಖಗಳು

Source: sonews | By Staff Correspondent | Published on 22nd September 2020, 6:39 PM | National News | Special Report |

ವಕೀಲರು, ಸಾಹಿತಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನೊಳಗೊಂಡ ಸಂಘಟನೆ ‘ದಿ ಕ್ಯಾಂಪೇನ್ ಅಗೇನ್‌ಸ್ಟ್ ಹೇಟ್ ಸ್ಪೀಚ್’ (ಸಿಎಎಚ್‌ಎಸ್) ಕನ್ನಡದ ಮಾಧ್ಯಮಗಳು ಇತ್ತೀಚಿನ ಬೆಂಗಳೂರು ಹಿಂಸಾಚಾರಗಳನ್ನು ವರದಿ ಮಾಡುವಾಗ ದ್ವೇಷದ ಮಾತುಗಳನ್ನಾಡಿದ್ದ ಸಂದರ್ಭಗಳನ್ನು ದಾಖಲೀಕರಿಸಿರುವ ವ್ಯಾಪಕ ವರದಿಯೊಂದನ್ನು ಸಿದ್ಧಪಡಿಸಿದೆ. ‘ವೇಜಸ್ ಆಫ್ ಹೇಟ್: ಜರ್ನಲಿಸಂ ಇನ್ ಡಾರ್ಕ್ ಟೈಮ್ಸ್’ ಎಂದು ಹೆಸರಿಸಲಾಗಿರುವ ವರದಿಯಲ್ಲಿ ಕನ್ನಡ ಮಾಧ್ಯಮಗಳು ಹಿಂಸಾಚಾರದ ವರದಿಗಾರಿಕೆಯಲ್ಲಿ ವ್ಯಕ್ತಿಗಳ ಮಾನಹಾನಿಗೈದಿದ್ದನ್ನು,ಯಾವುದೇ ಸಾಕ್ಷಾಧಾರವಿಲ್ಲದ ಊಹಾಪೋಹಗಳನ್ನು ಬಿಂಬಿಸಿದ್ದನ್ನು ಮತ್ತು ಗುಂಪು ನ್ಯಾಯವನ್ನು ಉತ್ತೇಜಿಸಿದ್ದನ್ನು ಬೆಟ್ಟು ಮಾಡಿದೆ. ಕರ್ನಾಟಕದಲ್ಲಿ ಹೆಚ್ಚು ಜನರು ಓದುತ್ತಿರುವ ಮತ್ತು ವೀಕ್ಷಿಸುತ್ತಿರುವ ಕನ್ನಡ ವೃತ್ತಪತ್ರಿಕೆಗಳು ಮತ್ತು ಟಿವಿ ವಾಹಿನಿಗಳಲ್ಲಿನ ವರದಿಗಾರಿಕೆಗಳನ್ನು ಅದು ತನ್ನ ಅಧ್ಯಯನಕ್ಕೊಳಪಡಿಸಿತ್ತು.

ಕನ್ನಡ ಮಾಧ್ಯಮಗಳ ವರದಿಗಳು ಮತ್ತು ಇಂಗ್ಲೀಷ್ ಸುದ್ದಿ ಸಂಸ್ಥೆಗಳ ಒಂದು ವರ್ಗದ ವರದಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿರಲಿಲ್ಲ ಎಂದಿರುವ ಸಿಎಎಚ್‌ಎಸ್, ಅವುಗಳ ನಿಲುವು ವರದಿಗಾರಿಕೆಯ ಪ್ರಕ್ರಿಯೆಗೆ ಅವಮಾನವನ್ನು ಮಾಡುವಂತಿತ್ತು ಎಂದು ಪ್ರಮುಖವಾಗಿ ಬಿಂಬಿಸಿದೆ.

ವರದಿಯು ಸಿಎಎ ವಿರುದ್ಧ ಪ್ರತಿಭಟನೆಗಳು ಮತ್ತು ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ತಬ್ಲಿಗಿಗಳ ಕುರಿತು ಕನ್ನಡ ಮಾಧ್ಯಮಗಳ ವರದಿಗಾರಿಕೆಗಳಲ್ಲಿ ದ್ವೇಷ ಭಾಷಣದ ಘಟನೆಗಳನ್ನು ಉಲ್ಲೇಖಿಸಿದೆ.

ತಬ್ಲಿಗಿ ಜಮಾಅತ್ ಕುರಿತು ಕನ್ನಡ ಮಾಧ್ಯಮಗಳ ವರದಿಗಾರಿಕೆಯು ಅತ್ಯಂತ ಕೋಮುಭಾವನೆಯಿಂದ ಕೂಡಿತ್ತು ಮತ್ತು ರಾಜ್ಯಾದ್ಯಂತ ಮುಸ್ಲಿಮ್ ಸಮುದಾಯಗಳನ್ನು ಅಪಾಯಕ್ಕೆ ಸಿಲುಕಿಸಿದೆ. ಹೀಗಾಗಿ ಕನ್ನಡ ಮಾಧ್ಯಮಗಳು ಇಂಗ್ಲೀಷ್, ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳ ಮಾಧ್ಯಮಗಳಿಗಿಂತ ತೀರ ಭಿನ್ನವಾಗೇನೂ ಇಲ್ಲ. ಈ ಅವಧಿಯಲ್ಲಿನ ದ್ವೇಷ ಭಾಷಣಗಳು ಒಂದು ಇಡೀ ಸಮುದಾಯದ ಬಗ್ಗೆ ಅಮಾನವೀಯ ನಿಲುವುಗಳನ್ನು ಪ್ರದರ್ಶಿಸಿದ್ದವು ಮತ್ತು ಅವುಗಳನ್ನು ಹಿಂಚಾಚಾರಕ್ಕೆ ಗುರಿಯನ್ನಾಗಿಸಿದ್ದವು ಎಂದು ವರದಿಯು ತಿಳಿಸಿದೆ.

ತಬ್ಲಿಗಿ ಜಮಾಅತ್‌ಗೆ ಸಂಬಂಧಿಸಿದ ಕೊರೋನ ವೈರಸ್ ಪ್ರಕರಣಗಳು ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಕುರಿತು ಕನ್ನಡ ಮಾಧ್ಯಮಗಳ ವರದಿಗಾರಿಕೆಯಲ್ಲಿ ಒಂದು ನಿರಂತರತೆಯಿತ್ತು ಎಂದೂ ವರದಿಯು ಹೇಳಿದೆ. ವರದಿಯು ಟಿವಿ 9 ಕನ್ನಡ, ಸುವರ್ಣ ನ್ಯೂಸ್, ನ್ಯೂಸ್18 ಕನ್ನಡ, ದಿಗ್ವಿಜಯ ನ್ಯೂಸ್, ಪಬ್ಲಿಕ್ ಟಿವಿ, ಕಸ್ತೂರಿ ನ್ಯೂಸ್, ಬಿಟಿವಿ, ಟಿವಿ 5 ಮತ್ತು ರಾಜ್ ನ್ಯೂಸ್ ಹೀಗೆ ಒಂಭತ್ತು ಟಿವಿ ವಾಹಿನಿಗಳು ಮತ್ತು ವಿಜಯ ಕರ್ನಾಟಕ, ವಿಜಯವಾಣಿ, ಉದಯವಾಣಿ, ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಮತ್ತು ವಾರ್ತಾಭಾರತಿ ದೈನಿಕಗಳಲ್ಲಿಯ ವರದಿಗಾರಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದೆ.

‘ಫ್ರೀ ಕಾಶ್ಮೀರ ’ಎಂಬ ಭಿತ್ತಿಪತ್ರವನ್ನು ಪ್ರದರ್ಶಿಸಿದ್ದ ವಿದ್ಯಾರ್ಥಿನಿ ನಳಿನಿ ಬಾಲಕುಮಾರ ಬಂಧನ, ಅಕ್ರಮ ಬಾಂಗ್ಲಾದೇಶಿಗಳು ವಾಸವಿದ್ದಾರೆ ಎಂಬ ಶಂಕೆಯಿಂದ ಬೆಂಗಳೂರಿನಲ್ಲಿಯ ವಲಸಿಗರ ಜೋಪಡಿಗಳ ನೆಲಸಮ, ಬೀದರ್‌ನ ಶಾಹೀನ್ ಸ್ಕೂಲ್‌ನಲ್ಲಿ ಪ್ರದರ್ಶಿಸಲಾಗಿದ್ದ ನಾಟಕವೊಂದಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪಗಳು, ವೀಡಿಯೊದಲ್ಲಿ ‘ಪಾಕಿಸ್ತಾನ್ ಝಿಂದಾಬಾದ್’ ಎಂದು ಹಾಡಿದ್ದ ಆರೋಪದಲ್ಲಿ ಹುಬ್ಬಳ್ಳಿಯ ಮೂವರು ಕಾಶ್ಮೀರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ ಮತ್ತು ಬೆಂಗಳೂರಿನಲ್ಲಿ ಅಮೂಲ್ಯಾ ಲಿಯೋನಾ ಹಾಗೂ ಆರ್ದ್ರಾ ನಾರಾಯಣನ್ ಬಂಧನ ಕುರಿತು ಕನ್ನಡ ಮಾಧ್ಯಮಗಳ ವರದಿಗಾರಿಕೆಯನ್ನು ವರದಿಯು ಪರಿಶೀಲಿಸಿದೆ.

ಫೆಬ್ರವರಿಯಲ್ಲಿ ಮೂವರು ಕಾಶ್ಮೀರಿ ಇಂಜಿನಿಯರ್‌ಗಳ ಬಂಧನದ ವರದಿಯನ್ನು ಮಾಡುವಾಗ ಪಬ್ಲಿಕ್ ಟಿವಿಯ ನಿರೂಪಕ ಎಚ್.ಆರ್.ರಂಗನಾಥ ‘ಅವರೇನಾದರೂ ನೆಲದ ಮೇಲೆ ಕಾಲಿರಿಸಲು ಪ್ರಯತ್ನಿಸಿದರೆ ಅವರ ಕಾಲುಗಳನ್ನೇ ಕತ್ತರಿಸಿ’ಎಂದು ಹುಬ್ಬಳ್ಳಿಯ ಜನತೆಗೆ ಆಗ್ರಹಿಸುವ ಮೂಲಕ ಆರೋಪಿಗಳಿಗೆ ದೈಹಿಕ ಹಿಂಸೆಗೆ ಪ್ರಚೋದನೆ ನೀಡಿದ್ದರು. ಇದೇ ವಾಹಿನಿ ಪ್ರತಿಭಟನೆಗಳು,ಭಿನ್ನಾಭಿಪ್ರಾಯಗಳು ಮತ್ತು ದೇಶದ್ರೋಹದ ಆರೋಪಿಗಳನ್ನು ದ್ವೇಷ ಮತ್ತು ಹಿಂಸಾಚಾರಕ್ಕೆ ವಸ್ತುಗಳನ್ನಾಗಿ ರೂಪಿಸಿತ್ತು ಮತ್ತು ಅವರು ಜೀವ ಬೆದರಿಕೆ ಎದುರಿಸುವಂತೆ ಮಾಡಿತ್ತು. ತಮ್ಮದೇ ಸರಿ ಎಂಬ ನಿಲುವಿನ ಮತ್ತು ತಮ್ಮನ್ನು ರಾಷ್ಟ್ರರಕ್ಷಕರು ಎಂದು ಭಾವಿಸಿಕೊಂಡಿದ್ದ ಟಿವಿ ವಾಹಿನಿಯ ನಿರೂಪಕರು ‘ನಾವು ವಿರುದ್ಧ ಅವರು ’ಎಂಬ ನೀತಿಗೆ ಬದ್ಧರಾದಂತಿತ್ತು ಎಂದು ವರದಿಯು ಹೇಳಿದೆ.

ದೇಶದ್ರೋಹದ ಆರೋಪದಲ್ಲಿ ಬಂಧಿತ ವಿದ್ಯಾರ್ಥಿಗಳ ಪರ ವಕಾಲತ್ ನಡೆಸದಿರಲು ಹುಬ್ಬಳ್ಳಿಯ ಬಾರ್ ಅಸೋಸಿಯೇಷನ್ ನಿರ್ಣಯವನ್ನು ಅಂಗೀಕರಿಸಿತ್ತು. ಈ ನಿರ್ಣಯವನ್ನು ಬೆಂಗಳೂರಿನ ವಕೀಲರು ಪ್ರಶ್ನಿಸಿದ್ದರು. ಬಂಧಿತ ವಿದ್ಯಾರ್ಥಿಗಳ ವಿರುದ್ಧ ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸಲು ಪೊಲೀಸರು ವಿಫಲರಾಗಿದ್ದು, ವಿದ್ಯಾರ್ಥಿಗಳ ವಿರುದ್ಧ ಮೇಲ್ನೋಟಕ್ಕೆ ಯಾವುದೇ ದೇಶದ್ರೋಹ ಪ್ರಕರಣ ಕಂಡು ಬರುತ್ತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಎ.20ರಂದು ಅಭಿಪ್ರಾಯ ವ್ಯಕ್ತಪಡಿಸಿತ್ತು ಮತ್ತು ಜೂನ್‌ನಲ್ಲಿ ಈ ವಿದ್ಯಾರ್ಥಿಗಳು ಜೈಲಿನಿಂದ ಹೊರಬಂದಿದ್ದರು.

ಇದೇ ಪಬ್ಲಿಕ್ ಟಿವಿ ಅಮೂಲ್ಯ ಮತ್ತು ಆರ್ದ್ರಾ ಬಂಧನಗಳನ್ನು ವರದಿ ಮಾಡುವಾಗ ಅವರನ್ನು ‘ಪಾಕ್ ಪಿಶಾಚಿಗಳು’ಎಂದು ಬಣ್ಣಿಸಿತ್ತು ಮತ್ತು ಅವರ ಚಿತ್ರಗಳನ್ನು ತೋರಿಸುವಾಗ ಮುಖಗಳ ಮೇಲೆ ‘ದೇಶ ವಿರೋಧಿಗಳು ’ಎಂಬ ಮುದ್ರೆಯನ್ನೊತ್ತಿತ್ತು.

ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡುತ್ತಿರುವಾಗ ‘ಪಾಕಿಸ್ತಾನ ಝಿಂದಾಬಾದ್’ ಎಂದು ಹೇಳಿದ ಬಳಿಕ ಅಮೂಲ್ಯಾಳನ್ನು ಬಂಧಿಸಲಾಗಿತ್ತು, ಆದರೆ ಆಕೆ ಹಾಗೆ ಹೇಳಿದ್ದ ಸಂದರ್ಭವನ್ನು ಅಥವಾ ತನ್ನ ಮಾತನ್ನು ಪೂರ್ಣಗೊಳಿಸಲು ಆಕೆಗೆ ಅವಕಾಶ ನೀಡಲಾಗಿರಲಿಲ್ಲ. ಇದಾದ ಮರುದಿನವೇ ಮುಸ್ಲಿಮರು, ದಲಿತರು, ಕಾಶ್ಮೀರಿಗಳು, ಆದಿವಾಸಿಗಳಿಗೆ ಈಗ ಸ್ವಾತಂತ್ರ ಬೇಕು ಎಂದು ಬಿಂಬಿಸಿದ್ದ ಭಿತ್ತಿಪತ್ರನ್ನು ಪ್ರದರ್ಶಿಸಿದ್ದಕ್ಕಾಗಿ ಆರ್ದ್ರಾಳನ್ನು ಬಂಧಿಸಲಾಗಿತ್ತು.

ಕರ್ನಾಟಕದಲ್ಲಿನ ಟಿವಿ ವಾಹಿನಿಗಳು ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಹೊರಡಿಸಲಾಗಿದ್ದ ಡೆತ್ ವಾರಂಟ್‌ಗಳನ್ನೂ ಪ್ರಸಾರ ಮಾಡಿದ್ದವು . ಅಮೂಲ್ಯಾಳನ್ನು ಕೊಂದವರಿಗೆ 10 ಲಕ್ಷ ರೂ.ಬಹುಮಾನ ನೀಡುವುದಾಗಿ ಶ್ರೀರಾಮ ಸೇನೆಯ ಸದಸ್ಯನೋರ್ವ ಫೆ.21ರಂದು ಘೋಷಿಸಿದ್ದ. ಈ ಡೆತ್ ವಾರಂಟ್‌ನ್ನು ಒಂದು ಎಚ್ಚರಿಕೆಯನ್ನಾಗಿ ಮತ್ತು ಆಕೆಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಬಾರದು ಎಂಬ ಬೆದರಿಕೆಯನ್ನು ‘ಮನವಿ’ ರೂಪದಲ್ಲಿ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಸಾದರಪಡಿಸಲಾಗಿತ್ತು.

ಜನವರಿಯಲ್ಲಿ ಸುವರ್ಣ ನ್ಯೂಸ್ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ವಾಸವಾಗಿದ್ದಾರೆ ಎಂಬ ವರದಿಯನ್ನು ಪ್ರಸಾರ ಮಾಡಿತ್ತು. ನಗರದಲ್ಲಿಯ ಗಗನಚುಂಬಿ ಅಪಾರ್ಟ್‌ಮೆಂಟ್ಸ್ ಕಟ್ಟಡವೊಂದರ ನಿವಾಸಿಯೋರ್ವ ಚಿತ್ರೀಕರಿಸಿದ್ದ ವೀಡಿಯೊವೊಂದರಲ್ಲಿಯೂ ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆ ಎಂದು ಹೇಳಲಾಗಿತ್ತು. ಮಹದೇವಪುರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಟ್ವಿಟರ್‌ನಲ್ಲಿ ಈ ವೀಡಿಯೊ ವ್ಯಾಪಕವಾಗಿ ಶೇರ್ ಆಗಿತ್ತು.

ಕೆಲದಿನಗಳ ಬಳಿಕ,ಜ,19ರಂದು ಬೆಂಗಳೂರಿನಲ್ಲಿಯ ವಲಸಿಗರ ವಾಸಸ್ಥಳವನ್ನು ನೆಲಸಮಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಆದೇಶವನ್ನು ಹೊರಡಿಸಿತ್ತು. ಈ ವಿಷಯವು ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದು, ನೆಲಸಮ ಕಾರ್ಯಾಚರಣೆ ಕಾನೂನುಬಾಹಿರವಾಗಿದೆ ಎಂದು ಘೋಷಿಸಿದ ಅದು, ತಮ್ಮ ಮನೆಗಳನ್ನು ಕಳೆದುಕೊಂಡವರಿಗೆ ಪುನರ್ವಸತಿಯನ್ನು ಕಲ್ಪಿಸುವಂತೆ ಬಿಬಿಎಂಪಿ ಮತ್ತು ರಾಜ್ಯ ಸರಕಾರಗಳಿಗೆ ಆದೇಶಿಸಿತ್ತು.

ಕೋವಿಡ್-19 ಕುರಿತ ವರದಿಗಾರಿಕೆಗೆ ಹೇಗೆ ಕೋಮುಬಣ್ಣ ನೀಡಲಾಗಿತ್ತು ಎನ್ನುವುದನ್ನೂ ವರದಿಯು ಕಂಡುಕೊಂಡಿದೆ. ಸುವರ್ಣ ವಾಹಿನಿಯು ಕೊರೋನ ವೈರಸ್‌ನ್ನು ‘ತಬ್ಲಿಗಿ ವೈರಸ್ ’ಎಂದು ಬಣ್ಣಿಸಿ ಎ.10ರಂದು ಕಾರ್ಯಕ್ರಮವೊಂದನ್ನು ಪ್ರಸಾರಿಸಿದ್ದರೆ, ಮೈಸೂರಿನಿಂದ ಪ್ರಕಟಗೊಳ್ಳುವ ‘ಸ್ಟಾರ್ ಆಫ್ ಮೈಸೂರ’ ದೈನಿಕವು ‘ಬ್ಯಾಡ್ ಆ್ಯಪಲ್ಸ್ ಇನ್ ದಿ ಬಾಸ್ಕೆಟ್ ’ಎಂಬ ಶೀರ್ಷಿಕೆಯಡಿ ಸಂಪಾದಕೀಯ ಲೇಖನವನ್ನು ಪ್ರಕಟಿಸಿ ತೀವ್ರ ತರಾಟೆಗೊಳಗಾಗಿತ್ತು. ಲೇಖನವು ಮಾರಣಹೋಮಕ್ಕೆ ಕರೆ ನೀಡಿದಂತಿತ್ತು. ಭಿನ್ನಾಭಿಪ್ರಾಯಗಳನ್ನು ಹೊಂದಿದ ವ್ಯಕ್ತಿಗಳ, ವಿಶೇಷವಾಗಿ ದೇಶದ್ರೋಹದ ಆರೋಪವನ್ನು ಹೊತ್ತವರ ವಿರುದ್ಧ ಮಾಧ್ಯಮಗಳಿಂದ ದ್ವೇಷ ಪ್ರಚೋದನೆಯು ವರದಿಗಾರಿಕೆಯಲ್ಲಿನ ತೀವ್ರ ಆತಂಕ ಸೃಷ್ಟಿಸುವ ಪ್ರವೃತ್ತಿಯಾಗಿದೆ ಎಂದು ವರದಿಯು ಹೇಳಿದೆ.

ಬೆಂಗಳೂರಿನಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ಬಡಾವಣೆಗಳಲ್ಲಿನ ಎರಡು ಹಿಂಸಾಚಾರದ ಘಟನೆಗಳ ಕುರಿತು ಮಾಧ್ಯಮಗಳ ವರದಿಗಾರಿಕೆಯನ್ನೂ ವರದಿಯು ಪ್ರಮುಖವಾಗಿ ಬಿಂಬಿಸಿದೆ. ಮೊದಲ ಘಟನೆ ಎಪ್ರಿಲ್‌ನಲ್ಲಿ ಪಾದರಾಯನಪುರದಲ್ಲಿ ನಡೆದಿದ್ದರೆ, ಆಗಸ್ಟ್‌ನಲ್ಲಿ ಎರಡನೇ ಘಟನೆಗೆ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಸಾಕ್ಷಿಯಾಗಿದ್ದವು.

ಈ ಎರಡು ಹಿಂಸಾಚಾರದ ಘಟನೆಗಳ ಮಾಧ್ಯಮ ವರದಿಗಾರಿಕೆಯು ಕನ್ನಡ ಟಿವಿ ಸುದ್ದಿ ವಾಹಿನಿಗಳ ಪಾಲಿಗೆ ದ್ವೇಷಭಾಷಣಗಳ ಮೂಲಕ ಒಂದು ಸಮುದಾಯದ ಎಲ್ಲರನ್ನೂ ಒಂದೇ ಆಗಿ ಬಿಂಬಿಸುವುದು ಮತ್ತು ಅವರನ್ನು ದೂಷಿಸುವುದು ವಾಡಿಕೆಯಾಗಿಬಿಟ್ಟಿದೆ ಎನ್ನವುದನ್ನು ಸೂಚಿಸುತ್ತಿವೆ ಎಂದು ಹೇಳಿರುವ ವರದಿಯು,ಯದ್ವಾತದ್ವಾ ಬಂಧನಗಳಿಗೆ ಆದೇಶಿಸುವುದು ಮತ್ತು ಸಮಸ್ಯೆಯನ್ನು ಕೋಮು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನಾಗಿ ನೋಡುವುದು ಹಿಂಸಾಚಾರಕ್ಕೆ ಸರಕಾರದ ಪ್ರತಿಕ್ರಿಯೆಯಾಗಿದ್ದರೆ ವರದಿಗಾರಿಕೆಯ ಹೆಸರಿನಲ್ಲಿ ದ್ವೇಷ ಭಾಷಣಗಳ ಬಗ್ಗೆ ಮೌನವೇ ನ್ಯಾಯಾಂಗದ ಪ್ರತಿಕ್ರಿಯೆಯಾಗಿದೆ ಎಂದಿದೆ.

ಮಾಧ್ಯಮ ಸಂಸ್ಥೆಗಳಲ್ಲಿ ವಿಶಾಲ ವೈವಿಧ್ಯತೆ,ಆಂತರಿಕ ನಿಯಂತ್ರಣ ಮತ್ತು ದ್ವೇಷಭಾಷಣಗಳಿಗಾಗಿ ಎಫ್‌ಐಆರ್‌ಗಳು ಇಂತಹ ಪ್ರವೃತ್ತಿಯನ್ನು ನಿಗ್ರಹಿಸಲು ನೆರವಾಗಬಹುದು ಎಂದೂ ವರದಿಯು ಹೇಳಿದೆ.

ಕೃಪೆ:varthabharati.in

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...