ಕಾರವಾರದ ದೇವದತ್ ಕಾಮತ್ ಉ.ಪ್ರ. ಚುನಾವಣೆಗೆ ಕಾಂಗ್ರೆಸ್ ಕಾನೂನು ಸಮನ್ವಯ ಸಮಿತಿ ಚೇರ್ಮನ್

Source: KM/S O News | By I.G. Bhatkali | Published on 19th January 2022, 8:13 PM | Coastal News |

ಕಾರವಾರ: ಕಾರವಾರದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ, ಬೆಳಗಾವಿ ಸೇರಿದಂತೆ ಕಾರವಾರ ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಸಫಲರಾದ ಮುಂಬೈ ಪ್ರಾಂತ್ಯದ ವಿಧಾನ ಪರಿಷತ್ ಸದಸ್ಯ ಪಿ.ಎಸ್. ಕಾಮತ್ ಅವರ ಮೊಮ್ಮಗ ಹಾಗೂ ಕಾರವಾರದ ಶ್ರೇಷ್ಠ ನ್ಯಾಯವಾದಿ ಎಸ್.ಪಿ. ಕಾಮತ್‌ರ ಏಕೈಕ ಪುತ್ರ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ದೇವದತ್ ಕಾಮತ್ ಅವರನ್ನು ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಕಾನೂನು ಸಮನ್ವಯ ಸಮಿತಿ ಚೇರ್ಮನ್ ಆಗಿ ನೇಮಕ ಮಾಡಲಾಗಿದೆ.

ಈ ಕುರಿತು ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಜಯಕುಮಾರ ಲಲ್ಲ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಎಐಸಿಸಿಯ ನಿರ್ಧಾರದಂತೆ ಆದೇಶ ಮಾಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಗು ಇತರೇ ಸಂಸ್ಥೆಗಳ ಜೊತೆ ಸಮನ್ವಯತೆ ಸಾಧಿಸಲು ರಚಿಸಿದ ಕಾನೂನು ಸಮನ್ವಯ ಸಮಿತಿ ಇದಾಗಿದೆ. ಇದಕ್ಕೆ ಎಐಸಿಸಿ ಅನುಮೋದನೆ ನೀಡಿದ್ದು ದೇವದತ್ ಕಾಮತ ಅಧ್ಯಕ್ಷರಾಗಿ ಈ ಮಹತ್ವದ ಹುದ್ದೆಗೆ ನೇಮಕವಾಗಿದ್ದಾರೆ. ಅವರೊಂದಿಗೆ ಉಪಾಧ್ಯಕ್ಷರಾಗಿ ವರುಣ ಚೋಪ್ರಾ, ಸದಸ್ಯರಾಗಿ ನಿಶಾಂತ ಪಾಟೀಲ ಹಾಗೂ ಸ್ಮಾರ್ತ‌್ರ ಸಿಂಗ್ ನೇಮಕವಾಗಿದ್ದಾರೆ.

2019ರಲ್ಲಿ ಸುಪ್ರೀಂ ಕೋರ್ಟ್ ಇವರನ್ನು ಹಿರಿಯ ನ್ಯಾಯವಾದಿಯಾಗಿ ಪರಿಗಣಿಸಿತ್ತು. ವಕೀಲಿ ವೃತ್ತಿಯಲ್ಲಿ ಅತ್ಯಂತ ಪ್ರತಿಭಾವಂತ ತರುಣನಾಗಿರುವ ದೇವದತ್ ಕಾಮತ 37ನೇ ವಯಸ್ಸಿನಲ್ಲಿಯೇ ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ನೇಮಕಗೊಂಡು ಕರ್ನಾಟಕ ಸರಕಾರದ ವಿವಿಧ ವ್ಯಾಜ್ಯಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದರು.

Read These Next