ಅಂತಿಮ ವರ್ಷದ ವೈದ್ಯಕೀಯ ಪಿ.ಜಿ ಪರೀಕ್ಷೆ ರದ್ಧತಿಗೆ ಸುಪ್ರೀಂ ನಕಾರ

Source: PTI | By MV Bhatkal | Published on 20th June 2021, 11:45 AM | National News |

ನವದೆಹಲಿ: ಪರೀಕ್ಷೆಗಳನ್ನು ಬರೆಯಬೇಕಾದ ವೈದ್ಯರು ‘ಕೋವಿಡ್‌–19' ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಅಂತಿಮ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ತರಗತಿಗಳ ಪರೀಕ್ಷೆ ಮುಂದೂಡುವಂತೆ ಅಥವಾ ರದ್ದುಗೊಳಿಸುವಂತೆ ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ.ಆರ್‌.ಷಾ ಅವರನ್ನೊಳಗೊಂಡ ರಜಾಕಾಲದ ಪೀಠ, ‘ಈ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ಯಾವುದೇ ಸಾಮಾನ್ಯ ಆದೇಶವನ್ನು ರವಾನಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ದೇಶದಲ್ಲಿನ ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅಂತಿಮ ವರ್ಷದ ಪರೀಕ್ಷೆಯ ದಿನಾಂಕಗಳನ್ನು ನಿಗದಿಪಡಿಸುವಂತೆ, ರಾಷ್ಟ್ರೀಯ ವೈದ್ಯಕೀಯ ಮಂಡಳಿ(ಎನ್‌ಎಂಸಿ) ಏಪ್ರಿಲ್‌ನಲ್ಲೇ ಸಲಹೆ ನೀಡಿತ್ತು ಎಂದು ನ್ಯಾಯಾಲಯ ನೆನಪು ಮಾಡಿದೆ.
ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಆಯೋಜಿಸಿದ್ದ ಐಎನ್‌ಐ ಸಿಇಟಿ ಪರೀಕ್ಷೆಗಳನ್ನು ಒಂದು ತಿಂಗಳು ಮುಂದೂಡುವಂತಹ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿತ್ತು. ಏಕೆಂದರೆ, ಅಲ್ಲಿ, ವಿದ್ಯಾರ್ಥಿಗಳು ಸಿದ್ಧವಾಗಲು ಸೂಕ್ತ ಸಮಯ ನೀಡದೆ ಪರೀಕ್ಷೆಯ ದಿನಾಂಕ ನಿಗದಿಪಡಿಸಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಪರೀಕ್ಷೆ ಮುಂದೂಡಲಾಗಿತ್ತು‘ ಎಂದು ನ್ಯಾಯಪೀಠ ಹೇಳಿದೆ.
ಪರೀಕ್ಷೆಗಾಗಿ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸೂಕ್ತ ಸಮಯ ನೀಡುವಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ  ನೀಡಲು ಎನ್‌ಎಂಸಿಗೆ ನಿರ್ದೇಶನ ನೀಡುವಂತೆ ಕೋರಿ 29 ವೈದ್ಯರ ಪರವಾಗಿ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತು.
ಪರೀಕ್ಷೆಗೆ ಸಿದ್ಧತೆ ನಡೆಸಲು ಸೂಕ್ತ ಸಮಯ ಯಾವುದು ಎಂದು ನಮಗೆ ತಿಳಿದಿಲ್ಲ. ಆ ಸಮಯವನ್ನು ನ್ಯಾಯಾಲಯ ಹೇಗೆ ನಿರ್ಧರಿಸಬಹುದು? ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯವಿರುತ್ತದೆ. ಹಾಗಾಗಿ, ಈ ವಿಚಾರಕ್ಕೆ ಸಂಬಂಧಸಿದಂತೆ ಆಯಾ ಪ್ರದೇಶದಲ್ಲಿರುವ ಕೊರೊನಾ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಆಧರಿಸಿ, ಎನ್‌ಎಂಸಿ ಸಲಹೆಯ ಮೇರೆಗೆ ವಿಶ್ವವಿದ್ಯಾಲಯಗಳು ತೀರ್ಮಾನ ಕೈಗೊಳ್ಳಲಿ‘ ಎಂದು ನ್ಯಾಯಪೀಠ ಹೇಳಿದೆ.
ಭಾರತದಂತಹ ವಿಶಾಲವಾದ ರಾಷ್ಟ್ರದಲ್ಲಿ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಎಲ್ಲ ಕಡೆ ಒಂದೇ ರೀತಿ ಇರುವುದಿಲ್ಲ. ದೆಹಲಿಯಲ್ಲಿ ಏಪ್ರಿಲ್– ಮೇ ತಿಂಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿತ್ತು. ಈಗ ಒಂದು ದಿನಕ್ಕೆ 200 ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಅದೇ ರೀತಿ ಕರ್ನಾಟಕದಲ್ಲಿ ಈಗಲೂ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. ಹಾಗಾಗಿ, ನ್ಯಾಯಾಲಯ ಎಲ್ಲ ವಿಶ್ವವಿದ್ಯಾಲಯಗಳ ಅಭಿಪ್ರಾಯ ಪಡೆಯದೇ, ಆದೇಶ ಹೊರಡಿಸಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ತಿಳಿಸಿದೆ.
ಎನ್‌ಎಂಸಿ ಪರವಾಗಿ ಹಾಜರಾಗಿದ್ದ ವಕೀಲ ಗೌರವ ಶರ್ಮಾ, ‘ಎಲ್ಲ ವೈದ್ಯರು ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿಲ್ಲ. ಪರೀಕ್ಷೆ ದಿನಾಂಕ ನಿಗದಿಪಡಿಸುವ ಮುನ್ನ ಪ್ರಾದೇಶಿಕವಾಗಿ ಕೋವಿಡ್‌ ಪರಿಸ್ಥಿತಿಯನ್ನು ಗಮನಿಸುವಂತೆ ಎನ್‌ಎಂಸಿ ಎಲ್ಲ ವಿಶ್ವವಿದ್ಯಾಲಯಗಳಿಗೂ ಏಪ್ರಿಲ್ ತಿಂಗಳಲ್ಲೇ ಸಲಹೆಯನ್ನು ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...