ಆತ್ಮಹತ್ಯೆಗಳನ್ನು ವೈಭವೀಕರಿಸದೇ, ಎಲ್ಲರಲ್ಲೂ ಆತ್ಮವಿಶ್ವಾಸ ತುಂಬಿ ಬದುಕನ್ನು ಸಮರ್ಥವಾಗಿ ಎದುರಿಸುವ ಮನೋಬಲ ಮೂಡಿಸಬೇಕು: ಪ್ರಧಾನ ಜಿಲ್ಲಾ ನ್ಯಾಯಾಧೀಶ ಉಮೇಶ್ ಅಡಿಗ

Source: SO News | By Laxmi Tanaya | Published on 13th September 2021, 10:16 PM | State News | Don't Miss |

ಧಾರವಾಡ : ವರ್ಷದಿಂದ ವರ್ಷಕ್ಕೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಆಧುನಿಕ ಜೀವನ ಪದ್ಧತಿಯೊಂದಿಗೆ ಸಮಾಜದಲ್ಲಿನ ಬದಲಾವಣೆಯು ಕಾರಣವಾಗುತ್ತಿದೆ. ಮಾಧ್ಯಮ ಹಾಗೂ ಸಮಾಜವು ಆತ್ಮಹತ್ಯೆಗಳನ್ನು ವೈಭವೀಕರಿಸದೇ ಮನೋಬಲ ಕುಗ್ಗಿರುವವರಲ್ಲಿ ಆತ್ಮವಿಶ್ವಾಸ ತುಂಬಿ ಬದುಕನ್ನು ಸಮರ್ಥವಾಗಿ ಎದುರಿಸುವ ಆತ್ಮಸ್ಥೈರ್ಯ, ಮನೋಬಲವನ್ನು ಅವರಲ್ಲಿ ಮೂಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಉಮೇಶ್ ಎಂ. ಅಡಿಗ ಅವರು ಹೇಳಿದರು.

 ಅವರು ಸೋಮವಾರ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆಯು ಡಿಮ್ಹಾನ್ಸ್ ಆಸ್ಪತ್ರೆಯ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದಲ್ಲಿ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ” ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಮಾಧ್ಯಮ ವರದಿಗಳು ಹಾಗೂ ಸಮಾಜದಲ್ಲಿನ ವರ್ತನೆಗಳು ಆತ್ಮಹತ್ಯೆ ಪ್ರಕರಣಗಳ ಕುರಿತು ಕೂಲಂಕಷವಾಗಿ ವಿವರಿಸಿ, ವೈಭವೀಕರಿಸಿ ಪ್ರಸಾರವಾಗುತ್ತಿರುವುದರಿಂದ ಖಿನ್ನತೆ ಹಾಗೂ ಆತ್ಮವಿಶ್ವಾಸ ಕುಗ್ಗಿರುವ ವ್ಯಕ್ತಿಯನ್ನು ಮಾನಸಿಕವಾಗಿ ಆತ್ಮಹತ್ಯೆಗೆ ಪ್ರೇರಣೆ ನೀಡಿದಂತಾಗುತ್ತಿದೆ. ಇದನ್ನು ನಿಲ್ಲಿಸಿ ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಯಲ್ಲಿ ಆತ್ಮಹತ್ಯೆಯೊಂದೇ ದಾರಿಯಲ್ಲ ಎಂಬ ಶಿಕ್ಷಣವನ್ನು ನೀಡಬೇಕು. ವ್ಯಕ್ತಿ ಜೀವನದಲ್ಲಿ ಗೆಲುವು ಸಾಧಿಸಲು ಇಂದು ಸಮೂಹ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿವೆ ಎಂದು ಅವರು ಹೇಳಿದರು. 

 ಹಿಂದಿನ ಶಿಕ್ಷಣ ಪದ್ದತಿಯು ಪ್ರತಿಯೊಬ್ಬರಲ್ಲಿ ಶಿಕ್ಷಣದೊಂದಿಗೆ ಸಾಂಘಿಕ ಜೀವನದ ಪಾಠವನ್ನು ಕಲಿಸಿ ಜೀವನದ ಮೌಲ್ಯಗಳನ್ನು ಬೆಳೆಸುತಿತ್ತು. ಆಧುನಿಕ ಶಿಕ್ಷಣದಲ್ಲಿ ಒಂಟಿತನ, ಅವಸರ, ಅತಿರೇಕಗಳನ್ನು ವ್ಯಕ್ತಿಯಲ್ಲಿ ಬೆಳೆಸುವಂತಹ ವಾತಾವರಣ ಕಾಣುತ್ತೇವೆ. ಪಾಲಕರ ಮನೋಧೋರಣೆ ವಿದ್ಯಾಥಿಗಳ ಮೇಲೆ ಪರಿಣಾಮ ಬೀರುತ್ತದೆ. ನಕಾರಾತ್ಮಕ ಚಿಂತನೆ ಆತ್ಮಹತ್ಯೆಗೆ ಕಾರಣವಾಗಬಹುದು. ಆದರಿಂದ ಪ್ರತಿಯೋಬ್ಬರಲ್ಲಿ ಸಕಾರಾತ್ಮಕ ಚಿಂತನೆ, ಆತ್ಮತೃಪ್ತಿ, ಆತ್ಮವಿಶ್ವಾಸ ಬೆಳೆಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.

 ಒಂಟಿಯಾಗಿ ಇರುವುದು ಬೇಡ. ಕಷ್ಟ ತೊಂದರೆಗಳನ್ನು ಮುಚ್ಚಿಡಬೇಡಿ, ಮುಕ್ತವಾಗಿ ಕುಟುಂಬದವರೊಂದಿಗೆ, ಆಪ್ತರೊಂದಿಗೆ ಚರ್ಚಿಸಿ. ಸದಾ ಚಟುವಟಿಕೆಯಿಂದಿರಿ. ಧ್ಯಾನ, ಯೋಗಾಸನ ಇವುಗಳ ಮೂಲಕ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಿಕೊಳ್ಳಿ. ನಿಯಮಿತವಾಗಿ ಪೌಷ್ಟಿಕ ಆಹಾರ ಸೇವಿಸಿ, ನಿದ್ರೆ ಹಾಗೂ ದೈಹಿಕ ಆರೋಗ್ಯಕ್ಕೆ ಗಮನ ನೀಡಿ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಸಕಾರಾತ್ಮಕವಾಗಿ ಯೋಚಿಸಿ. ಯಾವುದೇ ದುರ್ಬಲ ಕ್ಷಣದಲ್ಲಿ ಆತ್ಮಹತ್ಯೆಯಂತಹ ತೀವ್ರವಾದ ನಿರ್ಧಾರ ಮಾಡುವ ಮುನ್ನ ಸಹಾಯ, ಸಲಹೆಗೆ  ವೈದ್ಯರು, ಆಪ್ತ ಸಮಾಲೋಚಕರು, ಆಪ್ತರೊಂದಿಗೆ ಸಂಪರ್ಕಿಸಿ. ಮಾನಸಿಕ ತೊಂದರೆಗಳಿಗೆ ಸೂಕ್ತವಾಗಿ ಮನೋವೈದ್ಯರಲ್ಲಿ ಚಿಕಿತ್ಸೆ ಪಡೆಯಿರಿ, ನಿರ್ಲಕ್ಷಿಸದಿರಿ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರು ತಿಳಿಸಿದರು. 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಮ್ಹಾನ್ಸ್ ನಿರ್ದೇಶಕ ಮಹೇಶ ದೇಸಾಯಿ ಮಾತನಾಡಿ, ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಡಿಮ್ಹಾನ್ಸ್ ಸಂಸ್ಥೆಯಿಂದ ವಿಶ್ವ ಆತ್ಮಹತ್ಯೆ ಪ್ರತಿಬಂಧಕ ಸಪ್ತಾಹ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಆಕಾಶವಾಣಿ ಸಂದರ್ಶನ, ವಿವಿಧ ಇಲಾಖೆ ಸಿಬ್ಬಂದಿಗಳಿಗೆ ಉಪನ್ಯಾಸ, ರೈತ ಜಾಗೃತಿ, ಶಾಲಾ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಯುವ ಜಾಗೃತಿ ಕುರಿತು ವಿವಿಧ ಕಾರ್ಯಕ್ರಮಗಳನ್ನು ಸಮುದಾಯ ಮಟ್ಟದಲ್ಲಿ ಯಶಸ್ವಿಯಾಗಿ ಸಂಘಟಿಸಲಾಯಿತ್ತು ಮತ್ತು ಮಾನಸಿಕ ಆರೋಗ್ಯ ತಜ್ಞ ವೈದ್ಯರಿಂದ ಆತ್ಮಹತ್ಯೆ ತಡೆಗಟ್ಟುವ ಕುರಿತು ವಿಶೇಷ ಲೇಖನಗಳನ್ನು ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದರು.

 ಡಿಮ್ಹಾನ್ಸ್ ಸಂಸ್ಥೆಯು ತನ್ನ ಮೂಲ ಕಾರ್ಯದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಸಮುದಾಯ ಮಟ್ಟದಲ್ಲಿ ಆಯೋಜಿಸುತ್ತಿದೆ. ಕೋವಿಡ್‍ದಂತಹ ಸಂಕಷ್ಟದ ಸಂದರ್ಭದಲ್ಲಿ ಡಿಮ್ಹಾನ್ಸ್ ಸಂಸ್ಥೆ ಸಮಪರ್ಕವಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆ ಗಳಿಸಿದೆ. ಪ್ರಯೋಗಾಲಯದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಕೋವಿಡ್ ಸ್ಯಾಂಪಲ್‍ಗಳನ್ನು ಪರೀಕ್ಷಿಸಿ, ಸಾಮಥ್ರ್ಯ ತೊರಿಸಿದೆ. ಸರ್ಕಾರದ ಸಹಾಯದಿಂದ ಡಿಮ್ಹಾನ್ಸ್ ಸಂಸ್ಥೆಯಲ್ಲಿ ಸದ್ಯದಲ್ಲಿಯೇ ಜನೆಟಿಕ್ಸ್ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

 ಆತ್ಮಹತ್ಯೆ ಮಾಡಿಕೊಳ್ಳುವ ಜನರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಸುತ್ತಮುತ್ತಲಿನವರಿಗೆ ಹೊರೆ ಎಂದು ಭಾವಿಸುತ್ತಾರೆ. ಮತ್ತು ಏಕಾಂಗಿ ಮತ್ತು ಬೇರೆ ಆಯ್ಕೆಗಳಿಲ್ಲ ಎಂದು ಭಾವಿಸುತ್ತಾರೆ  ಕೋವಿಡ್-19 ಸಾಂಕ್ರಾಮಿಕವು ಪ್ರತ್ಯೇಕತೆ ಮತ್ತು ದುರ್ಬಲತೆಯ ಭಾವನೆಗಳನ್ನು ಹೆಚ್ಚಿಸಿದೆ. ನಮ್ಮ ಸಣ್ಣ ಮಾತು ಅವರಿಗೆ ಭರವಸೆ ನೀಡಬಹುದು. ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಮತ್ತು ಬೆಂಬಲ ನೀಡಿ. ಹಿಂದಿನ ಸಾಧನೆಗಳ ಬಗ್ಗೆ ಮಾತನಾಡಿ. ಭವಿಷ್ಯದ ಭರವಸೆಯನ್ನು ನೀಡಿ, ನಾವು ಅವರ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ಅವರಿಗೆ ಬೆಂಬಲ ನೀಡಲು ಬಯಸುತ್ತೇವೆ ಎಂದು ಆತ್ಮಹತ್ಯೆಗೆ ಪ್ರಯತ್ನಿಸುವವರಲ್ಲಿ ಮನವರಿಕೆ ಮಾಡಿಕೊಡಬೇಕೆಂದು ಡಾ. ಮಹೇಶ ದೇಸಾಯಿ ಹೇಳಿದರು.

 ಡಾ. ಶ್ರೀನಿವಾಸ ಕೊಸಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಪಂಚದಲ್ಲಿ ಪ್ರತಿ ವರ್ಷ 7 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಯಿಂದ ಸಾಯುತ್ತಾರೆ. ಈ ಸಂಖ್ಯೆಯಲ್ಲಿ ಶೇಕಡ 17 ರಷ್ಟು ಭಾರತದವರಾಗಿದ್ದಾರೆ. ಭಾರತದಲ್ಲಿ ಪ್ರತಿದಿನ 381 ಜನರು ಆತ್ಮಹತ್ಯೆಯಿಂದ ಸಾಯುತ್ತಾರೆ. 2019ರಲ್ಲಿ ಭಾರತದಲ್ಲಿ ಆತ್ಮಹತ್ಯೆಗಳಿಂದ 1.39 ಲಕ್ಷಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಇದರಲ್ಲಿ, ಆತ್ಮಹತ್ಯೆಯಿಂದ ಸಾವನ್ನಪ್ಪಿದ 90 ಸಾವಿರಕ್ಕಿಂತ ಹೆಚ್ಚು ಜನರು 18 ರಿಂದ 45 ವಯಸ್ಸಿನವರು ಎಂದು ಅವರು ಹೇಳಿದರು.

 ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ.ಸಿ.ಎಂ., ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಗೋಡಸೆ, ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಶಶಿ ಪಾಟೀಲ ಹಾಗೂ ಡಿಮ್ಹಾನ್ಸ್ ವೈಧ್ಯಕೀಯ ಅಧೀಕ್ಷಕ ಡಾ.ಶ್ರೀನಿವಾಸ ಕೊಸಗಿ ಉಪಸ್ಥಿತರಿದ್ದರು.
 ಕಾರ್ಯಕ್ರಮದಲ್ಲಿ ಡಾ. ಐಶ್ವರ್ಯ ಅವರು ಆತ್ಮಹತ್ಯೆ ತಡೆಗಟ್ಟುವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆತ್ಮಹತ್ಯೆ ತಡೆಗಟ್ಟುವ ಕುರಿತು ಪೋಸ್ಟರ್, ಕ್ಯಾಲೆಂಡರ್ ಸೇರಿದಂತೆ ವಿವಿಧ ಪ್ರಚಾರ ಸಾಮಗ್ರಿಗಳನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶ ಉಮೇಶ ಅಡಿಗ ಬಿಡುಗಡೆ ಮಾಡಿದರು. 

  ಪ್ರಶಾಂತ ಪಾಟೀಲ ಹಾಗೂ ಶ್ರೀದೇವಿ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಡಾ.ಬಿ.ಜಿ.ಅನಂತರಾಮು ವಂದಿಸಿದರು. ಡಿಮ್ಹಾನ್ಸ್ ಹಾಗೂ ಜಿಲ್ಲಾ ಆಸ್ಪತ್ರೆಯ ವೈಧ್ಯಕೀಯ ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read These Next

ಬೆಂಗಳೂರು: 2021ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ - ಸಚಿವ ಬಿ. ಶ್ರೀರಾಮುಲು

2021ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ...

ಬೆಂಗಳೂರು: ಅಕ್ಟೋಬರ್ 24ರಿಂದ ಒಂದು ವಾರಗಳ ಕಾಲ ‘ಕನ್ನಡಕ್ಕಾಗಿ ನಾವು’ ಅಭಿಯಾನ - ಸಚಿವ ಸುನೀಲ್ ಕುಮಾರ್

ರಾಜ್ಯಾದಾದ್ಯಂತ 66ನೆ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಎಂದಿನಂತೆ ನವೆಂಬರ್ ಒಂದರಂದು ಮಾತ್ರ ...

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ನ್ಯಾಮತಿ ತಾಲ್ಲೂಕು ಸುರಹೊನ್ನೆಯಲ್ಲಿ ಜಿಲ್ಲಾಧಿಕಾರಿ ಗಳ ನಡೆ ಹಳ್ಳಿ ಕಡೆ- ಗ್ರಾಮವಾಸ್ತವ್ಯಕ್ಕೆ ಚಾಲನೆ

ದಾವಣಗೆರೆ : ಕೊರೊನಾ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮ ವಾಸ್ತವ್ಯ ...

ಬಾಗಲಕೋಟೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ; ಪಾಪ್ಯುಲರ್ ಫ್ರಂಟ್ ಕಳವಳ

ಬಾಗಲಕೋಟೆಯ ಜಿಲ್ಲೆಯ ಇಳಕಲ್ ನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಸಂಘಪರಿವಾರದ ಹಿನ್ನೆಲೆಯ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ...

ಭಟ್ಕಳ: ಶ್ರೀವಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ನಾಯ್ಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ

ಶ್ರೀವಲಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪವಿತ್ರಾ ಜಯಕರ ನಾಯ್ಕ ದಿಶಾ ಭಾರತ ಸಂಸ್ಥೆ ಹಾಗೂ ಈಸ್ಟ್ ವೆಸ್ಟ್ ...