ಕಾರವಾರ: ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ

Source: S O News Service | By Office Staff | Published on 17th February 2020, 7:45 PM | Coastal News |

ಕಾರವಾರ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಫೇಬ್ರವರಿ 17 ರಂದು ತಂಬಾಕು ಮಾರಾಟ ಮಾಡುವ ಅಂಗಡಿಕಾರರಿಗೆ ಹಾಗೂ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುವ ಸಾರ್ವಜನಿಕರಿಗೆ ಶಾಲಾ ಮಕ್ಕಳಿಂದ ಗುಲಾಬಿ ಹೂ ನೀಡುವುದರ ಮೂಲಕ ಅರಿವು ಮೂಡಿಸುವ "ಗುಲಾಬಿ ಆಂದೋಲನ" ಹಮ್ಮಿಕೊಳ್ಳಲಾಯಿತು.  

ಬೆಳಿಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಜಾಗೃತಿ ಜಾಥಾ ಆರಂಭವಾಯಿತು. ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿಗಳಿಂದ ಗುಲಾಬಿ ಹೂವು ಹಾಗೂ ಕರಪತ್ರವನ್ನು ವಿತರಿಸುವುದರ ಮೂಲಕ ತಂಬಾಕು ಸೇವನೆಯ ದುಷ್ಪರಿಣಾಮಗಳು ಮತ್ತು ಕೋಟ್ಪಾ-2003ರ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಾಯಿತು. 

ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಡಾ.ಜಿ.ಎನ್ ಅಶೋಕಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಾ.ವಿನೋದ ಭೂತೇ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಡಾ.(ಕ್ಯಾಪ್ಟನ್) ರಮೇಶ್ ರಾವ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಎಸ್.ಜಿ.ನಾಯ್ಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರು  ಪ್ರೇಮಕುಮಾರ ನಾಯ್ಕ, ಸಮಾಜ ಕಾರ್ಯಕರ್ತರು  ಗೋರೇಸಾಬ ನದಾಫ, ಶಿಕ್ಷಣ ಇಲಾಖೆಯ ರಾಜು ಜಿ. ನಾಯ್ಕ ಹಾಗೂ ಸರ್ಕಾರಿ ಪ್ರೌಢಶಾಲೆ, ಸೇಂಟ್ ಜೊಸೇಫ್ ಆಂಗ್ಲಮಾಧ್ಯಮ ಶಾಲೆ, ಬಾಲಮಂದಿರ ಪ್ರೌಢಶಾಲೆ, ಹಿಂದೂ ಹೈಸ್ಕೂಲ್, ಕಾರವಾರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಇತರರು ಹಾಜರಿದ್ದರು.

Read These Next