ಮತ್ತೇ ಕಲ್ಯಾಣ ಕಾರ್ಯಕ್ರಮದಲ್ಲಿ ಸ್ವಾಮಿಜಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ

Source: sonews | By Staff Correspondent | Published on 24th August 2019, 5:42 PM | Coastal News | Don't Miss |

ಕಾರವಾರ; ಇಲ್ಲಿನ ಜಿಲ್ಲಾ ಮಂದಿರದಲ್ಲಿ `ಮತ್ತೆ ಕಲ್ಯಾಣ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸಿ ಕರ್ನಾಟಕದಲ್ಲಿ ಜನ್ಮ ತಾಳಿರಿವುದು ನಮ್ಮ ಭಾಗ್ಯ. ಇಲ್ಲಿನ ಸಂತರು, ಶರಣರು, ದಾಸರು ನಮ್ಮ ಬದುಕಿಗೆ ಬೆಳಕನ್ನು ನೀಡಿದರು. ಹೀಗಾಗಿಯೇ ಇದನ್ನು ಧರ್ಮದ ನಾಡು, ಆಧ್ಯಾತ್ಮಿಕ ಬೀಡು ಎಂದು ಕರೆಯುತ್ತೇವೆ. ಆದರೆ ಅಂತಹ ವಾತಾವರಣ ಪ್ರಸ್ತುತ ದಿನಮಾನಗಳಲ್ಲಿ ಕಾಣುತ್ತಿಲ್ಲ. ಕಾರಣ ನಾವು ಅವರ ಸಂದೇಶಗಳನ್ನು ಕೇಳಿಯೂ ಕೇಳದಂತೆ, ಪಶುಗಳಂತೆ ಬದುಕುತ್ತಿದ್ದೇವೆ. ನಮ್ಮ ಬದುಕನ್ನು ಆದರ್ಶದ ನೆಲಗಟ್ಟಿನ  ಮೇಲೆ ಬದುಕಬೇಕು. ಮನುಷ್ಯ ಪ್ರಕೃತಿಯ ಕೀಟವಾಗದೇ ಕಿರೀಟವಾಗಬೇಕು. 12 ನೆಯ ಶತಮಾನದ ಅವಿರಳ ಜ್ಞಾನಿ ಚೆನ್ನಬಸವಣ್ಣ ಕಲ್ಯಾಣದ ಕ್ರಾಂತಿಯ ನಂತರ ವಾಸಿಸಿದ್ದು ಕಾರವಾರಕ್ಕೆ ಹತ್ತಿರವಿರುವ ಉಳವಿಯಲ್ಲಿ. ಅರಿವಿಗೆ ಹಿರಿದು ಕಿರಿದು ಎನ್ನುವ ಬೇಧವಿಲ್ಲ. ಚೆನ್ನಬಸವಣ್ಣ ಬಸವಣ್ಣನವರ ಸೋದರ ಅಳಿಯನಾಗಿ ಬಸವತತ್ವದ ಯೋಜನೆಗಳನ್ನು ಹಾಕಿದರು. ಕಾರವಾರದ ಈ ನೆಲದಲ್ಲಿ ಓಡಾಡಿ ಬಸವತತ್ವವನ್ನು ಪ್ರಚಾರ ಮಾಡಿದವರು. ಬಾಹ್ಯ ಬೆಳಕಿಗಿಂತ ಅಂತರಂಗದ ಜ್ಯೋತಿಯನ್ನು ಕಂಡುಕೊಳ್ಳಬೇಕೆಂದರೆ ಶಿಕ್ಷಣ ಪಡೆಯಲೇಬೇಕು. ಈಗ ನಾವು ಪಡೆಯುವಂತಹ ಶಿಕ್ಷಣ ಅಹಂಕಾರ ಓಡಿಸಿದಿಯೇ? ನೈತಿಕ ನೆಲೆಗಟ್ಟನ್ನು ಬೆಳೆಸಿದೆಯೇ? ಎನ್ನುವ ಪ್ರಶ್ನೆಯನ್ನುಹಾಕಿಕೊಂಡರೆ ಖಂಡಿತಾ ಇಲ್ಲ ಎನ್ನುವ ಉತ್ತರ ಬರುತ್ತದೆ. ನೈತಿಕ ನೆಲೆಗಟ್ಟು ದೊರಕಿ ಅಹಂಕಾರ ದೂರವಾಗಬೇಕಾದರೆ ಶರಣ ವಚನಗಳನ್ನು ಓದಬೇಕು. ವಚನಗಳ ಮೂಲಕ ನಮ್ಮ ಮನಸ್ಸಿನ ಮೈಲಿಗೆಯ ಕೊಳೆಯನ್ನು ತೊಳೆದುಕೊಳ್ಳಬೇಕು. ಅನುಭವ ಲೌಕಿಕವಾದದ್ದು. ಅನುಭಾವ ಅಲೌಕಿಕವಾದ ಅಂತರಂಗದ ಬೆಳಕು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವೇ ಮನಸ್ಸಿನ ಮೈಲಿಗೆ. ಇಂತಹ ಮೈಲಿಗೆಯನ್ನು ತೊಳೆಯಬೇಕಾದರೆ ಸುದ್ಗುಣಗಳನ್ನು ಬೆಳೆಸಿಕೊಂಡು ಸಜ್ಜನರ ಸಂಗ ಮಾಡಿಕೊಳ್ಳಬೇಕು. ನಮ್ಮ ಬುದ್ಧಿ ವಿವೇಕವಾಗಬೇಕಾದರೆ ವಚನಗಳನ್ನು ಓದಿ ಅರ್ಥೈಸಿಕೊಂಡು ಆಚರಣೆಗೆ ತರಬೇಕು. ನಡೆ ಮತ್ತು ನುಡಿಗಳ ನಡುವೆ ಗೋಡೆಗಳನ್ನು ಕಟ್ಟಬಾರದು. ಇಂದಿನ ಮಕ್ಕಳೇ ಮುಂದಿನ ನೇತಾರರು. ವಚನಗಳ ಓದಿ ಮುಂದಿನ ಪೀಳಿಗೆಗೆ ಆದರ್ಶದ ನಾಯಕರಾಗಿ ಬೆಳೆಯಬೇಕು. ನಮ್ಮ ಅಂತರಂಗದ ಕಲ್ಯಾಣದ ಮೂಲಕ ಬಹಿರಂಗದ ಕಲ್ಯಾಣ ಮಾಡಿಕೊಳ್ಳಬೇಕು. ಕಾಯಕ ತತ್ವಗಳನ್ನು ಮೈಗೂಡಿಸಿಕೊಂಡರೆ ದೇವರನ್ನು ಸುಲಬವಾಗಿ ಒಲಿಸಿಕೊಳ್ಳ ಬಹುದು. ಮಾಡುವ ಕಾಯಕ ಸತ್ಯಶುದ್ಧ, ಪ್ರಾಮಾಣಿಕವಾಗಿರಬೇಕು. ಸಮಾಜದಲ್ಲಿ ಮೌಢ್ಯತೆ, ಅಸಮಾನತೆ, ಜಾತಿ ಇಂತಹ ಅನೇಕ ರೋಗಗಳಿವೆ. ಈ ರೋಗಗಳಿಗೆ ಔಷಧಿ ವಚನಗಳು. ಶಿಕ್ಷಣ ಪಡೆಯುವುದು ವಿವೇಕವನ್ನು ಹೆಚ್ಚಿಸಲಿಕ್ಕೆ ಹೊರತು ಉದ್ಯೋಗಕ್ಕಾಗಿ ಅಲ್ಲ. ವೇದವೂ ಜ್ಞಾನ, ವಚನವೂ ಜ್ಞಾನ. ವೇದವನ್ನು ಬಳಸಿಕೊಂಡು ಮೌಢ್ಯತೆಯನ್ನು ಬಿತ್ತುವ ಅನೇಕ ಜನರನ್ನು ಶರಣರು ಕಂಡರು. ಇದರ ವಿರುದ್ಧವಾಗಿ ಹೋರಾಟ ಮಾಡಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ವಚನಗಳನ್ನು ರಚಿಸಿದರು. ಜಾತಿ ಯಾರಿಗೂ ಬೇಕಾಗಿಲ್ಲ ಕೇವಲ ಸವಲತ್ತುಗಳಿಗಾಗಿ ಬಯಸುತ್ತಾರೆ ಎಂದರು.

ಬಸವರಾಜ ಹೊರಟ್ಟಿ  ಮಾತನಾಡಿ ಜಾತ್ಯಾತೀತ ರಾಷ್ಟ್ರ ಎನ್ನುವುದು ಬರೀ ವೇದಿಕೆಯಲ್ಲಿ, ಪುಸ್ತಕಗಳಲ್ಲಿ ಮಾತ್ರ. ಆದರೆ ಆಚರಣೆಯಲ್ಲಿ ಇಲ್ಲ. ಮೊದಲು ನಾನು ಮಂತ್ರಿಯಾದಾಗ ಜಾತಿ ಕೇಳುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ನಾವೆಲ್ಲರೂ ಜಾತ್ಯತೀತ ರಾಷ್ಟ್ರದ ಪ್ರಜೆಗಳು ಎನ್ನುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ವಿಧಾನಸಭೆಯಲ್ಲಿ ಜಾತಿಯ ಬಗ್ಗೆ, ಮೀಸಲಾತಿಯ ಬಗ್ಗೆ ಮಾತನಾಡಿದಾಗ ನನ್ನನ್ನೇ ಅನೇಕ ಜನರು ವಿರೋಧ ಮಾಡಿದ್ದುಂಟು. ಇಂದು ಅನೇಕರು ಹಿಂದುಳಿದವರು ಅಂತ ಹೇಳಿಕೊಂಡು ಎಲ್ಲಾ ರೀತಿಯಲ್ಲೂ ಮುಂದುವರೆದಿದ್ದಾರೆ. ಇಂಥವರಿಗೆ ಮೀಸಲಾತಿಯ ಅವಶ್ಯಕತೆಯಿಲ್ಲ.

ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು :

* ಬಾಲ್ಯ ವಿವಾಹ ನಿಷೇಧ ಮಾಡಿದ್ದರೂ ಇಂದಿಗೂ ನಡೆಯುತ್ತಿದೆ. ಇದಕ್ಕೆ ಕಾರಣವೇನು?

* ಕೆಲವರಿಗೆ ವಿಶೇಷ ಸೌಲಭ್ಯಗಳಿವೆ. ಇನ್ನು ಕೆಲವರಿಗೆ ಇಲ್ಲ  ಈ ತಾರತಮ್ಯವೇಕೆ?

ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಏಕೆ ಬೇಕು?

* ದೇವರನ್ನು ಒಲಿಸಿಕೊಳ್ಳುವ ಸುಲಭ ಮಾರ್ಗ ಯಾವುದು?

* ಬಸವಣ್ಣನವರು ಮೂರ್ತಿ ಪೂಜೆಯನ್ನು ತಿರಸ್ಕಾರ ಮಾಡಿದ್ರು. ಅವರನ್ನೇ ಮೂರ್ತಿಯನ್ನಾಗಿ ಮಾಡಿ ಪೂಜೆ ಮಾಡುವುದು ಎಷ್ಟು ಸರಿ?

ಮತ್ತೆ ಕಲ್ಯಾಣ ಎಂದರೇನು?

ವರ್ತಮಾನದ ಮೂಲಕ ಭವಿಷ್ಯವನ್ನು ಕಟ್ಟಿಕೊಳ್ಳುವುದು ಹೇಗೆ?

ವಚನಗಳನ್ನು ವಿದ್ಯಾರ್ಥಿಗಳು ನಮ್ಮ ನಿತ್ಯಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು?

ಲಿಂಗಾಯತ ಮತ್ತು ವೀರಶೈವ ಇವರ ನಡುವೆ ಸಾಮರಸ್ಯ ಮತ್ತೆ ಕಲ್ಯಾಣದ ಮೂಲಕ ಮೂಡಿಸಬಹುದೇ?

ಬಸವಣ್ಣನವರ ಕಾಲದಿಂದಲೂ ಜಾತಿ ಪದ್ಧತಿಯನ್ನು ಯಾಕೆ ತೊಲಗಿಸಲಾಗುತ್ತಿಲ್ಲ?

ವೇದಗಳಿಗೂ ಹಾಗೂ ವಚನಗಳಿಗಿರುವ ವ್ಯತ್ಯಾಸವೇನು?

ದುಃಖಕ್ಕೆ ಕಾರಣವೇನು?

ವೇದಿಕೆಯಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಅವರ ಮೂಲಕ ಮತ್ತೆ ಕಲ್ಯಾಣದ ಆಶಯವನ್ನು ಈಡೇಸಲಾಗುತ್ತದೆಯೇ?

ಮತ್ತೆ ಕಲ್ಯಾಣದ ಮೂಲಕ ಜಾತಿ ಮುಕ್ತ  ವ್ಯವಸ್ಥೆ ಕಟ್ಟಲು ಸಾಧ್ಯವೇ?

*ಸ್ವಾಮಿ ವಿವೇಕಾನಂದರಂತೆ, ಗಾಂಧಿಯಂತೆ, ಬಸವಣ್ಣನಂತೆ ಬದುಕಿ ಅಂತ ಹೇಳ್ತಾರೆ. ಯಾರೂ ಸಹ ನನ್ನಂತೆ ಬದುಕಿ ಅಂತ ಹೇಳುತ್ತಿಲ್ಲ. ಇದಕ್ಕೆ ತಮ್ಮ ಅಭಿಪ್ರಾಯವೇನು?

 ಹೆಚ್ ಎಸ್ ದ್ಯಾಮೇಶ್ 9449649850

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...