ಉಡುಪಿ ಸರಕಾರಿ ಆಸ್ಪತ್ರೆ ಸಿಬ್ಬಂದಿಯಿಂದ ಮುಷ್ಕರ, ಮೂರು ತಿಂಗಳ ಸಂಬಳ ಬಾಕಿ ಆರೋಪ, ಆಡಳಿತ ಮಂಡಳಿಯಿಂದ ಸಮಸ್ಯೆ ಪರಿಹಾರದ ಭರವಸೆ

Source: VB | By S O News | Published on 10th June 2021, 7:19 PM | Coastal News | State News |

ಉಡುಪಿ: ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿಯವರ ಬಿಆರ್‌ಎಸ್ ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೇಟ್ ಲಿಮಿಟೆಡ್ ಮುನ್ನಡೆಸುತ್ತಿರುವ ಉಡುಪಿ ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು, ನರ್ಸ್ ಸೇರಿದಂತೆ ಎಲ್ಲ ವಿಭಾಗಗಳ ಸಿಬ್ಬಂದಿ ಇಂದು ಬೆಳಗ್ಗೆ ಏಕಾಏಕಿ ಮುಷ್ಕರ ನಡೆಸಿದರು. ಇದರಿಂದ ನೂರಾರು ಗರ್ಭಿಣಿಯರು ಹೊರರೋಗ ವಿಭಾಗದಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ತೊಂದರೆ ಅನುಭವಿಸಿದರು.

ಕಳೆದ ಮಾರ್ಚ್‌ನಿಂದ ಮಾಸಿಕ ವೇತನ ನೀಡಿಲ್ಲ ಎಂದು ಆರೋಪಿಸಿ

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಯ ಸಮಸ್ಯೆ ಬಗ್ಗೆ ಅಧಿಕಾರಿಗಳು ಮಾತುಕತೆ ನಡೆಸಿ ತಾತ್ಕಾಲಿಕ ಶಮನ ಮಾಡಿದ್ದಾರೆ. ಅಲ್ಲದೆ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮುಷ್ಕರದ ವೇಳೆ ಆಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿಯೊಬ್ಬರಿಗೆ ಹೊಟ್ಟೆನೋವು ಕಾಣಿಸಿ ಕೊಂಡಿದ್ದರಿಂದ, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಅವರನ್ನು ಮಂಗಳೂರು ವೆಸ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಉಳಿ ದಂತೆ ಯಾರಿಗೂ ಸಮಸ್ಯೆ ಆಗಿಲ್ಲ. ಜಿಲ್ಲಾಧಿಕಾರಿಯ ಸೂಚನೆಯಂತೆ ಇಲ್ಲಿನ ಸಿಬ್ಬಂದಿಗೆ ಒಂದು ತಿಂಗಳ ಸಂಬಳ ಆರೋಗ್ಯ ಇಲಾಖೆಯಿಂದ ನೀಡಲು ಕ್ರಮ ವಹಿಸಲಾಗುವುದು.

ಡಾ.ನಾಗಭೂಷಣ ಉಡುಪ, ಡಿಎಚ್‌ಒ, ಉಡುಪಿ

ಬುಧವಾರ ಬೆಳಗ್ಗೆ 5:30ಕ್ಕೆ ಬೈಂದೂರು ತ್ರಾಸಿಯಿಂದ ಹೊರಟು 6:30ಕ್ಕೆ ಆಸ್ಪತ್ರೆಗೆ ತಲುಪಿದ್ದೇವೆ. ಆದರೆ ಇಲ್ಲ ಮಧ್ಯಾಹ್ನವಾದರೂ ನಮ್ಮನ್ನು ಕೇಳುವವರಿಲ್ಲ. ಒಬ್ಬರು ಗರ್ಭಿಣಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದರೂ ಯಾರು ನೋಡುವವರು ಇರಲಿಲ್ಲ. ಇವರು ಮುಷ್ಕರ ನಡೆಸುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ ಇಷ್ಟೊಂದು ಜನರು ಸಮಸ್ಯೆಗೆ ಸಿಲುಕುತ್ತಿರಲಿಲ್ಲ.

ಶ್ರೀವಿದ್ಯಾ, ತ್ರಾಸಿ, ಬೈಂದೂರು

ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಸುಮಾರು 200ಕ್ಕೂ ಅಧಿಕ ಸಿಬ್ಬಂದಿ ಇಂದು ಬೆಳಗ್ಗೆಯಿಂದ ಮುಷ್ಕರ ನಡೆಸಿದರು. ಆಸ್ಪತ್ರೆ ಯೊಳಗೆಯೇ ಧರಣಿ ಕುಳಿತ ಸಿಬ್ಬಂದಿ, ಕೂಡಲೇ ವೇತನ ನೀಡುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು. ತುರ್ತು ಚಿಕಿತ್ಸೆ ಹೊರತು ಪಡಿಸಿ ಉಳಿದಂತೆ ವೈದ್ಯರು, ನರ್ಸ್, ಫಾರ್ಮಸಿ, ಲ್ಯಾಬ್ ಸೇರಿದಂತೆ ಎಲ್ಲ ವಿಭಾಗಗಳ ಸಿಬ್ಬಂದಿ ಈ ಮುಷ್ಕರದಲ್ಲಿ ಭಾಗವಹಿಸಿದ್ದರು.

ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ: ಸ್ಥಳಕ್ಕೆ ಆಗಮಿಸಿದ ಉಡುಪಿ ನಗರ ಠಾಣೆಯ ಪೊಲೀಸರು, ಯಾವುದೇ ಅನುಮತಿ ಪಡೆಯದೆ ಲಾಕ್‌ಡೌನ್ ಸಂದರ್ಭದಲ್ಲಿ ಈ ರೀತಿ ಮುಷ್ಕರ ನಡೆಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಮುಷ್ಕರ ನಿರತರಿಗೆ ಮನವರಿಕೆ ಮಾಡಿಸಿದರು. ಮುಷ್ಕರ ಕೈಬಿಟ್ಟು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರು.

ಬಳಿಕ ಬಂದ ಜಿಲ್ಲಾ ಸರ್ಜನ್ ಡಾ.ಮಧುಸೂನ್ ನಾಯಕ್ ಹಾಗೂ  ಕಾರ್ಮಿಕ್  ಅಧಿಕಾರಿಗಳು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದರು. ಒಂದು ತಿಂಗಳು ಸಂಬಳವನ್ನು ಆರೋಗ್ಯ ಇಲಾಖೆಯಿಂದ ಮತ್ತು ಉಳಿದ ಸಂಬಳವನ್ನು ಆಡಳಿತ ಮಂಡಳಿ ನೀಡುವ ಬಗ್ಗೆ ನಿರ್ಧರಿಸ ಲಾಯಿತು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮುಷ್ಕರ ಕೈಬಿಟ್ಟ ಸಿಬ್ಬಂದಿ ಕರ್ತವ್ಯ ಹಾಜರಾದರೆಂದು ತಿಳಿದುಬಂದಿದೆ.

ಮಾತುಕತೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾ ಸರ್ಜನ್, ಸಿಬ್ಬಂದಿಗೆ

ಮೂರು ತಿಂಗಳಿನಿಂದ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಯಾಗುವ ರೀತಿಯಲ್ಲಿ ಕಾರ್ಮಿಕ ಅಧಿಕಾರಿ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದಾರೆ. ಬೇರೆ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಹಾಗೂ ಸರಕಾರಿ ಮಟ್ಟದಲ್ಲಿ ಮಾತುಕತೆ ನಡೆಸಿ ಪರಿಹರಿಸುವ ಬಗ್ಗೆ ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

ಚಿಕಿತ್ಸೆ ಸಿಗದೆ ಪರದಾಡಿದ ಗರ್ಭಿಣಿಯರು

ಸುಮಾರು 80 ಕಿ.ಮೀ. ದೂರದ ಬೈಂದೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಆಸ್ಪತ್ರೆಗೆ ಆಗಮಿಸಿದ ನೂರಾರು ಗರ್ಭಿಣಿಯರು ಮುಷ್ಕರದಿಂದ ಸರಿಯಾದ ಚಿಕಿತ್ಸೆ ದೊರೆಯದೆ ಪರದಾಡಿದರು. ಈ ಮಧ್ಯೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬೆಳಗಿನ ಜಾವ 6:30ರಿಂದ ಮಧ್ಯಾಹ್ನದವರೆಗೆ ನೂರಾರು ಗರ್ಭಿಣಿಯರು ಆಸ್ಪತ್ರೆಯ ಹೊರರೋಗ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಕಾಯುತ್ತಿರುವ ದೃಶ್ಯ ಕಂಡುಬಂತು.

'ಸ್ಕ್ಯಾನಿಂಗ್ ಮಾಡಲು ಕಾಯುತ್ತಿದ್ದೇನೆ. ಇನ್ನು ಮಾಡಿಲ್ಲ. ತುರ್ತು ಚಿಕಿತ್ಸಾ ಘಟಕಕ್ಕೆ ಹೋದರೂ ವೈದ್ಯರಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ದೂರ ಊರಿನಿಂದ ಬಂದು ಹಲವು ತಾಸುಗಳಿಂದ ಕಾಯುತ್ತಿದ್ದೇವೆ. ಯಾರಿಂದಲೂ ಸರಿಯಾದ ಸ್ಪಂದನ ಸಿಗುತ್ತಿಲ್ಲ' ಎಂದು ಗರ್ಭಿಣಿ ವಸಂತಿ ಎಂಬವರು ದೂರಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...