ಭಟ್ಕಳ: ತಾಲೂಕಿನ ಆಸ್ಪತ್ರೆ ರಸ್ತೆಯಲ್ಲಿ ಪ್ರತೀ ಭಾನುವಾರ ನಡೆಯುವ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆಗೆ ತೀರ ತೊಂದರೆಯುಂಟಾಗಿದ್ದು, ಪುರಸಭೆ ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಭಟ್ಕಳ ಪುರಸಭೆ ಪ್ರಭಾರಿ ಅಧ್ಯಕ್ಷ ಮೊಹಿಯುದ್ದೀನ್ ಅಲ್ತಾಫ್ ಖರೂರಿ ಅವರು ಭಾನುವಾರ ಮಾರುಕಟ್ಟೆಗೆ ಭೇಟಿ ನೀಡಿ, ಪುರಸಭೆ ಅಧಿಕಾರಿಗಳು ವ್ಯಾಪಾರಿಗಳನ್ನು ಮಾರುಕಟ್ಟೆಯೊಳಗೆ ಸ್ಥಳಾಂತರಿಸಲು ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸಿದರು. ಮಾರುಕಟ್ಟೆಯ ಹೊರಭಾಗದಲ್ಲಿ ಜನರು ಸಣ್ಣಸಮಾನುಗಳನ್ನು ಮಾರಾಟ ಮಾಡುವುದನ್ನು ಕಂಡು, ಪುರಸಭೆಯವರು ಯಾರೂ ರಸ್ತೆಬದಿಯಲ್ಲಿ ವ್ಯಾಪಾರ ಮಾಡಲು ನಿರಾಕರಿಸಿದರೆ, ಅವರ ವಸ್ತುಗಳನ್ನು ಜಪ್ತು ಮಾಡಲು ಆದೇಶಿಸಿದರು.
ಈ ಕ್ರಮದಿಂದಾಗಿ, ರಸ್ತೆಯ ಮೇಲೆ ಮೊದಲಿನಂತೆ ಜನಸಂದಣಿ ಕಡಿಮೆಯಾಗಿದ್ದು, ಜನರು ಸುಲಭವಾಗಿ ಮಾರುಕಟ್ಟೆಗೆ ಬಂದು ಖರೀದಿ ಮಾಡಿ ಹೊರಡುವಂತಾಗಿದೆ. ಪುರಸಭೆ ಅಧಿಕಾರಿಗಳ ಈ ಕ್ರಮದಿಂದ ಜನರು ಹಾಗೂ ವಾಹನಗಳು ಸುಗಮವಾಗಿ ಸಂಚರಿಸಲು ಅವಕಾಶ ದೊರೆತಿದ್ದು, ಮಾರಾಟಗಾರರು ಮಾರುಕಟ್ಟೆಯೊಳಗೆ ತೆರಳಿ ತಮ್ಮ ವ್ಯಾಪಾರವನ್ನು ಮುಂದುವರಿಸುತ್ತಿದ್ದಾರೆ.