ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಸುಗಮವಾಗಿ ನಡೆಯಲು ಕ್ರಮ :ಕೆ.ಬಿ.ಶಿವಕುಮಾರ್

Source: so news | Published on 19th March 2020, 12:28 AM | State News | Don't Miss |

 

ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮಾರ್ಚ್ 27ರಿಂದ ಏಪ್ರಿಲ್ 09ರವರೆಗೆ ಜಿಲ್ಲೆಯ 84ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಉದ್ದೇಶಿಸಿದ್ದು, ಈ ಪರೀಕ್ಷೆಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಭಾಂಗಣದಲ್ಲಿ ಪರೀಕ್ಷೆಗಳ ಮೇಲ್ವಿಚಾರಕರಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂಧಿಗಳು ಕರ್ತವ್ಯದಲ್ಲಿ ಉದಾಸೀನ ಮಾಡುವುದು ಹಾಗೂ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲಾಗುವುದಿಲ್ಲ. ಪ್ರತಿ ಸಿಬ್ಬಂಧಿಯೂ ಅನಾವಶ್ಯಕವಾಗಿ ಕಾಲಹರಣ ಮಾಡದೆ ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಅವರು ಪರೀಕ್ಷಾ ಮೇಲ್ವಿಚಾರಕರಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ಕೇಂದ್ರದಲ್ಲಿ ಪ್ರಾಥಮಿಕವಾಗಿ ಇರಬೇಕಾದ ಶೌಚಾಲಯ, ಕುಡಿಯುವ ನೀರು ಇರುವ ಬಗ್ಗೆ ಹಾಗೂ ಸಿಸಿ ಕ್ಯಾಮರಾ, ಗೋಡೆ ಗಡಿಯಾರ ಅಳವಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಕರ್ತವ್ಯದಲ್ಲಿ ಶಿಸ್ತು, ಸಂಯಮ ಕಾಪಾಡಿಕೊಳ್ಳಬೇಕು. ಅಧಿಕಾರಗಳ ನಡುವೆ ಸಮನ್ವಯತೆ ಅಗತ್ಯ ಎಂದವರು ನುಡಿದರು.
ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಕ್ಕೆ ಸೂಚಿಸಲಾದ ಅಧಿಕಾರಿಗಳನ್ನು ಹೊರತುಪಡಿಸಿ ಮೇಲ್ವಿಚಾರಕರನ್ನೊಳಗೊಂಡು, ಪರೀಕ್ಷಾರ್ಥಿಗಳು ಮೊಬೈಲ್, ಸ್ಮಾರ್ಟ್‍ವಾಚ್, ವಿದ್ಯುನ್ಮಾನ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅದಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದ ಅವರು, ಎಲ್ಲಾ ಹಂತದ ಅಧಿಕಾರಿಗಳು ಪರೀಕ್ಷಾ ನಿಯಮಗಳನ್ನು ಪಾಲಿಸಬೇಕು. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200ಮೀ. ಪ್ರದೇಶದ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗುವುದಲ್ಲದೇ ಕೇಂದ್ರದ ಸುತ್ತಮುತ್ತಲಿನ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂಧಿಗಳು, ಪರೀಕ್ಷಾರ್ಥಿಗಳಲ್ಲದೆ ಕೇಂದ್ರಕ್ಕೆ ಪ್ರವೇಶಿಸುವ ಹೊರಗಿನ ವ್ಯಕ್ತಿಗಳ ಮೇಲೂ ವಿಶೇಷ ನಿಗಾ ವಹಿಸಲಾಗುವುದು ಎಂದ ಅವರು ನಡೆಯುವ ಪರೀಕ್ಷೆಗಳು ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸುವಂತಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕಗಳಿಲ್ಲದೆ ಪರೀಕ್ಷೆ ಬರೆಯುವಂತಾಗಬೇಕು. ನಿಯೋಜಿತ ಎಲ್ಲಾ ಅಧಿಕಾರಿ-ಸಿಬ್ಬಂಧಿಗಳ ಶ್ರಮದಿಂದ ಜಿಲ್ಲೆ ಪರೀಕ್ಷಾ ಫಲಿತಾಂಶದಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಳ್ಳುವಂತಾಗಲೆಂದು ಆಶಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಅವರು ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಎಷ್ಟೆ ವರ್ಷಗಳ ಸೇವೆ ಸಲ್ಲಿಸಿ, ಅನುಭವ ಹೊಂದಿದ್ದರೂ ಪ್ರತಿ ಪರೀಕ್ಷೆ ಹಾಗೂ ಚುನಾವಣಾ ಕಾರ್ಯವೂ ಅಧಿಕಾರಿಗಳಿಗೆ ಹೊಸತನದಿಂದ ಕೂಡಿರುತ್ತದೆ ಎಂದರು. ಪ್ರತಿ ಎರಡು ಪರೀಕ್ಷಾ ಕೇಂದ್ರಕ್ಕೆ ಓರ್ವ ಮಾರ್ಗಾಧಿಕಾರಿ ಹಾಗೂ ಪ್ರತಿ ಕೇಂದ್ರಕ್ಕೆ ಒರ್ವರಂತೆ 84ಕೇಂದ್ರಗಳಿಗೆ ಪತ್ರಾಂಕಿತ ದರ್ಜೆಯ 84ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾದ ಎಲ್ಲಾ ಸಿಬ್ಬಂಧಿಗಳಿಗೆ ಗುರುತಿನ ಪತ್ರ ವಿತರಿಸಲಾಗಿದೆ ಎಂದರು.
ಈ ಪರೀಕ್ಷೆಯಲ್ಲಿ 12287ವಿದ್ಯಾರ್ಥಿಗಳು, 11956ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 24243ಅಭ್ಯರ್ಥಿಗಳು ಪರೀಕ್ಷೆ ಬರೆಯಲಿರುವುದು ವಿಶೇಷ. ಕಾರ್ಯಾಗಾರದಲ್ಲಿ ಹಾಸನ ಡಯಟ್‍ನ ಪ್ರಾಂಶುಪಾಲ ಹಾಗೂ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಪುಟ್ಟರಾಜು, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಶೇಖರ್ ತೆಕ್ಕಣ್ಣನವರ್, ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Read These Next

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣ ಕುರಿತು ಚರ್ಚೆ

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣ ಕುರಿತು ಚರ್ಚೆ

ಕೋವಿಡ್ ನಿಯಂತ್ರಣ ಕಾರ್ಯ ನಿರ್ಲಕ್ಷಿಸುವ ಅಧಿಕಾರಿಗಳು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಕೋವಿಡ್ ನಿಯಂತ್ರಣ ಕಾರ್ಯ ನಿರ್ಲಕ್ಷಿಸುವ ಅಧಿಕಾರಿಗಳು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣ ಕುರಿತು ಚರ್ಚೆ

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣ ಕುರಿತು ಚರ್ಚೆ