ಕೋಲಾರ:ಕೆಸಿವ್ಯಾಲಿ ಕಾಮಗಾರಿಗೆ ಅಡ್ಡಿಪಡಿಸಿದರೆ ಲಕ್ಷ ಮಹಿಳೆಯರಿಂದ ಪೊರಕೆಸೇವೆ-ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ 

Source: shabbir | By Arshad Koppa | Published on 29th July 2017, 8:37 PM | State News | Guest Editorial |

ಕೋಲಾರ:- ಕೆಸಿ ವ್ಯಾಲಿ ಯೋಜನೆ ಪೈಪ್‍ಲೈನ್ ಕಾಮಗಾರಿ ಸ್ಥಗಿತಕ್ಕೆ ಆದೇಶಿಸಿದರೆ ಜಿಲ್ಲೆಯ ಒಂದು ಲಕ್ಷ ಮಹಿಳೆಯರಿಂದ ಪೊರಕೆ ಸೇವೆ ಆಂದೋಲನ ನಡೆಸಬೇಕಾದೀತು ಎಂದು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಿದರು.
ಶುಕ್ರವಾರ ದಳಸನೂರು ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಬೆಳೆ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಎರಡೂ ಜಿಲ್ಲೆಯ ಸುಮಾರು 1 ಲಕ್ಷ ಕುಟುಂಬಗಳಿಗೆ ಸಾಲ ಸೌಲಭ್ಯ ನೀಡಿದೆ, ಬರದಿಂದ ತತ್ತರಿಸಿರುವ ಜಿಲ್ಲೆಗೆ ನೀರು ಹರಿಸುವ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವ ಕುರಿತು ಜಿಲ್ಲೆಯ ಪ್ರತಿಯೊಬ್ಬರಿಗೂ ಆಕ್ರೋಶವಿದೆ ಎಂದರು.
ಈ ಎಲ್ಲಾ ತಾಯಂದಿರು ಪೊರಕೆ ಹಿಡಿದು ಹೆದ್ದಾರಿಗಿಳಿದರೆ ಏನಾಗಬಹುದು ಎಂಬ ಅರಿವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಇರಬೇಕಾಗಿದೆ, ಇಲ್ಲವಾದಲ್ಲಿ ತಕ್ಕ ಶಾಸ್ತಿ ಅನುಭವಿಸುವಂತಾಗುತ್ತದೆ ಎಂದು ಎಚ್ಚರಿಸಿದರು.
ಬರದಿಂದ ತತ್ತರಿಸಿರುವ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ, ಇಲ್ಲಿನ ಕೃಷಿ, ಅಂತರ್ಜಲ ಉಳಿಸಲು ಸಚಿವ ಕೆ.ಆರ್.ರಮೇಶ್‍ಕುಮಾರ್ ಅವರು ಸತತ ಪರಿಶ್ರಮದಿಂದ ಕೆಸಿ ವ್ಯಾಲಿ ನೀರು ಕೆರೆಗಳಿಗೆ ತುಂಬಿಸುವ ಈ ಯೋಜನೆ ಶೀಘ್ರ ಅನುಷ್ಟಾನಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದರು.
ಇಂತಹ ಕಷ್ಟದ ಸಂದರ್ಭದಲ್ಲಿ ಪೈಪ್ ಲೈನ್ ಅಳವಡಿಕೆಗೆ ಸಹಕರಿಸಬೇಕಾದ ಹೆದ್ದಾರಿ ಪ್ರಾಧಿಕಾರ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದೆ, ನೀರಿಲ್ಲದೇ ಕಂಗೆಟ್ಟಿರುವ ಜಿಲ್ಲೆಯ ಜನತೆಯ ತಾಳ್ಮೆ ಪರೀಕ್ಷಿಸುವ ಯತ್ನ ಸರಿಯಲ್ಲ ಎಂದು ಕಿವಿಮಾತು ಹೇಳಿದರು.
ಹೊಸಕೋಟೆಯಿಂದ ನರಸಾಪುರದವರೆಗೂ ನಮ್ಮದೇ ರೈತರ ಭೂಮಿಯಲ್ಲಿ ಕೆಸಿ ವ್ಯಾಲಿ ಪೈಪ್ ಲೈನ್ ಅಳವಡಿಸಬೇಕಾಗಿದೆ, ಈ ಸಂಬಂಧ ಸಚಿವ ರಮೇಶ್‍ಕುಮಾರ್ ಪ್ರಾಧಿಕಾರದ ಅಧಿಕಾರಿಗಳಿಗೆ ಸೆಡ್ಡು ಹೊಡೆದು ರಸ್ತೆ ಬದಿ ಪೈಪುಗಳನ್ನು ತರಿಸಿ ಹಾಕಿಸಿದ್ದಾರೆ ಎಂದರು.
ನಮ್ಮ ರೈತರೇ ಹೆದ್ದಾರಿ ಮಾಡಲು ನಿಮಗೆ ಭೂಮಿ ಕೊಟ್ಟಿದ್ದಾರೆ, ಇದೀಗ ಆ ಭೂಮಿಯಲ್ಲಿ ಪೈಪ್‍ಲೈನ್ ಹಾಕಿಸಿದ್ದರೆ ನಿಮಗಾಗುವ ನಷ್ಟವೇನೂ ಇಲ್ಲ, ಯಾವುದೇ ದುರುದ್ದೇಶದಿಂದ ಅಡ್ಡಿಪಡಿಸುವ ಯತ್ನ ನಡೆಸೀರಿ ಜೋಕೆ ಎಂದರು.
ಜಿಲ್ಲೆಯ ತಾಯಂದಿರು
ಸಂಘರ್ಷಕ್ಕೆ ಸಿದ್ದ
ಬರ, ಅಂತರ್ಜಲ ಕೊರತೆಯಿಂದ ಜಿಲ್ಲೆಯ ಕೃಷಿನಾಶವಾಗಿದೆ, ಅನ್ನದಾತರಾಗಿದ್ದ ರೈತರು ಕೂಲಿ ಕಾರ್ಮಿಕರಾಗಿ ದುಡಿಯುವ ದುಸ್ಥಿತಿ ಜಿಲ್ಲೆಯಲ್ಲಿದ್ದು, ಇದನ್ನು ತಪ್ಪಿಸಲು ಸರ್ಕಾರ ಜಾರಿಗೆ ತಂದಿರುವ ಕೆಸಿ ವ್ಯಾಲಿ ಕಾಮಗಾರಿ ಸ್ಥಗಿತಗೊಂಡರೆ ಸಹಿಸುವಷ್ಟು ಸಹನೆ ಇಲ್ಲಿನ ರೈತರು,ಮಹಿಳೆಯರಿಗಿಲ್ಲ ಎಂದರು.
ಎರಡೂ ಜಿಲ್ಲೆಗಳ ಒಂದು ಲಕ್ಷ ಮಹಿಳೆಯರೊಂದಿಗೆ ಹೆದ್ದಾರಿ ಪ್ರಾಧಿಕಾರದ ವಿರುದ್ದ ಸಂಘರ್ಷಕ್ಕೆ ಸಿದ್ದವಿದ್ದೇವೆ, ಜಿಲ್ಲೆಯ ಜನರ ಬದುಕಿನ ಪ್ರಶ್ನೆ ಕೆಸಿ ವ್ಯಾಲಿ ಯೋಜನೆಯಾಗಿದ್ದು, ಇದಕ್ಕೆ ತಡೆಯೊಡ್ಡುವ ಅಮಾನವೀಯ ಆಲೋಚನೆ ಬಿಟ್ಟುಬಿಡಿ ಎಂದು ತಾಕೀತು ಮಾಡಿದರು.
ರಾಜ್ಯ ಮಾವು ಅಭಿವೃದ್ದಿ ಮಂಡಳಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ, ಡಿಸಿಸಿ ಬ್ಯಾಂಕ್ ಹಳ್ಳಿಗಳ ಪ್ರತಿ ಕುಟುಂಬವೂ ಸಹಕಾರಿ ಸಂಘಗಳಲ್ಲಿ ಸದಸ್ಯತ್ವ ಪಡೆಯಬೇಕು ಎಂದು ಕರೆ ನೀಡಿದರು.
ಸಹಕಾರ ಸಂಘಗಳು ಮಾತ್ರವೇ ಜನರ ಆಶಯಗಳಿಗೆ ತಕ್ಕಂತೆ ಸಾಲ ಸೌಲಭ್ಯ ಒದಗಿಸುತ್ತವೆ, ಸರ್ಕಾರದ ಸಾಲ ಯೋಜನೆಗಳು ಇಲ್ಲಿಂದಲೇ ಅನುಷ್ಟಾನವಾಗುವುದರಿಂದ ಪ್ರತಿಯೊಂದು ಕುಟುಂಬವೂ ಇದರ ಸದಸ್ಯತ್ವ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಣಿಗಾನಹಳ್ಳಿ ವೆಂಕಟರೆಡ್ಡಿ, ಅಶ್ವಥ್ಥರೆಡ್ಡಿ, ಬೈಚೇಗೌಡ, ಉಪಸ್ಥಿತರಿದ್ದು ಎಸ್‍ಎಫ್‍ಸಿಎಸ್ ಅಧ್ಯಕ್ಷ ವೀರಭದ್ರಸ್ವಾಮಿ ಸ್ವಾಗತಿಸಿ,ನಿರೂಪಿಸಿದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...