ಇಂದಿನಿಂದ ಮಂಗಳೂರು ವಿವಿ ಪರೀಕ್ಷೆ ಸಾರಿಗೆ ಸಮಸ್ಯೆಯಿಂದ ಗೈರಾಗುವ ಕೇರಳ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ : ಕುಲಪತಿ ಯಡಪಡಿತ್ತಾಯ

Source: VB | By S O News | Published on 2nd August 2021, 5:39 PM | Coastal News |

ಮಂಗಳೂರು: ಕೇರಳದ ಕಾಸರಗೋಡು ಮತ್ತು ದ.ಕ. ಜಿಲ್ಲೆಯ ನಡುವಿನ ಬಸ್ ಸಂಚಾರವನ್ನು ವಾರದವರೆಗೆ ದ.ಕ. ಜಿಲ್ಲಾಡಳಿತ ನಿರ್ಬಂಧಿಸಿದೆ. ಈ ನಡುವೆ ಮಂಗಳೂರು ವಿಶ್ವವಿದ್ಯಾನಿಲಯದ ನಿಗದಿಯಂತೆ ಆ.2ರಿಂದ ಪದವಿ ಪರೀಕ್ಷೆಗಳು ನಡೆಯಲಿವೆ. ಸಾರಿಗೆ ಸಮಸ್ಯೆಯಿಂದಾಗಿ ಪರೀಕ್ಷೆಗೆ ಗೈರು ಹಾಜರಾಗುವ ಕೇರಳದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ವಿಶ್ವವಿದ್ಯಾಲಯದ ಬಾಕಿಯುಳಿದ ಪದವಿ ಪರೀಕ್ಷೆಗಳು ಇದೇ ಆ.2ರಿಂದ ಪ್ರಸಕ್ತ ವರ್ಷದ 1, 3 ಮತ್ತು 5ನೇ ಪದವಿ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿವೆ. ಪರೀಕ್ಷೆ ಮುಂದೂಡದೇ ಇರಲು ವಿವಿ ತೀರ್ಮಾನಿಸಿದೆ. ಕೇರಳ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಗೆ ಆಗಮಿಸಿ ಹಾಸ್ಟೆಲ್, ರೂಮ್, ಪಿಜಿಗಳಲ್ಲಿ ಓದುತ್ತಿದ್ದಾರೆ. ಗಡಿಭಾಗದಿಂದ ನಿತ್ಯ ಕಾಲೇಜಿಗೆ ಆಗಮಿಸುವವರು ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಮಾತ್ರ ಈಗ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗಲಿದೆ. ಅಂತಹವರಿಗೆ ವಿಶೇಷ ಪರೀಕ್ಷೆ ನಡೆಸಲಾಗುವುದಾಗಿ ಎಂದು ವಿವಿ ಸ್ಪಷ್ಟಪಡಿಸಿದೆ.

ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜ ರಾಗಲು ಅನಾನುಕೂಲವಾದರೆ ಅಂತಹವರಿಗಾಗಿ ವಿಶೇಷ ಪರೀಕ್ಷೆ ನಡೆಸಲಾಗುವುದು. ಅಲ್ಲದೆ, ಕೋವಿಡ್ ಸೋಂಕಿಗೆ ಒಳಗಾಗಿ ಪರೀಕ್ಷೆ ಬರೆಯಲು ಅಸಾಧ್ಯವಾದರೆ ಅಂತಹ ವಿದ್ಯಾರ್ಥಿಗಳು ವೈದ್ಯಕೀಯ ದೃಢಪತ್ರ ಜೊತೆಗೆ ಪ್ರಾಂಶುಪಾಲರ ಪತ್ರದೊಂದಿಗೆ ವಿವಿಗೆ ಸಲ್ಲಿಸಬೇಕಾಗುತ್ತದೆ ಎಂದು ಕುಲಪತಿ ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.

ಪರೀಕ್ಷೆಗೆ ಅವಕಾಶ ಕೋರಿ ಮನವಿ: ಇದೇ ವೇಳೆ ವಿವಿ ಪರೀಕ್ಷೆಗೆ ಹಾಜರಾಗಲು ಕೇರಳ ವಿದ್ಯಾರ್ಥಿಗಳಿಗೆ ಗಡಿ ಪ್ರದೇಶದಲ್ಲಿ ಅವಕಾಶ ನೀಡುವಂತೆ ಕೋರಿ ಕಾಸರಗೋಡು ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ರವಿವಾರ ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ತಲಪಾಡಿ ಸಹಿತ 13 ಗಡಿ ಪ್ರದೇಶಗಳಲ್ಲಿ ತೀವ್ರ ತಪಾಸಣೆ: ಮಂಗಳೂರು: ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಕೇರಳ ಪ್ರಯಾಣಿಕರ ದ.ಕ. ಜಿಲ್ಲಾ ಪ್ರವೇಶಕ್ಕೆ ರಾಜ್ಯ ಸರಕಾರ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾ ಯಗೊಳಿಸಿದ್ದರಿಂದ ರವಿವಾರ ದ.ಕ. ಪ್ರವೇಶಿಸುವ ಎಲ್ಲ 13 ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗಿದೆ. ರವಿವಾರದಿಂದ ಅನ್ವಯಗೊಂಡಂತೆ ಮಂಗಳೂರು-ಕಾಸರಗೋಡು ಮಧ್ಯೆ ಒಂದು ವಾರದ ಮಟ್ಟಿಗೆ ಎಲ್ಲ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಸ್ವ್ಯಾಬ್ ತಪಾಸಣೆ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಅದರಂತೆ ತಲಪಾಡಿ ಗಡಿಯಲ್ಲಿ ರವಿವಾರ ಸಾರ್ವಜನಿಕರು ಸರತಿಸಾಲಿನಲ್ಲಿ ನಿಂತಿರುವುದು ಕಂಡುಬಂತು. ಕೇರಳದಿಂದ ಆಗಮಿಸುವ ಪ್ರತಿಯೊಬ್ಬರನ್ನೂ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗವು ತೀವ್ರ ತಪಾಸಣೆ ನಡೆಸಿದೆ.

ಕೇರಳದಲ್ಲಿ ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಳಗೊಂಡಿರುವುದು ಬೆಳಕಿಗೆ ಬರುತ್ತಲೇ ಕೆಲವು ದಿನಗಳಿಂದ ಗಡಿಭಾಗಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಕೋವಿಡ್ ಲಸಿಕೆ ಅಥವಾ ಕೋವಿಡ್ ನೆಗೆಟಿವ್‌ ವರದಿ ತೋರಿಸಿದರೆ ಸಾಕಾಗಿತ್ತು. ಆದರೆ ಕೇರಳದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದಂತೆ ಶನಿವಾರ ತುರ್ತು ಸಭೆ ನಡೆಸಿದ ದ.ಕ. ಜಿಲ್ಲಾಧಿಕಾರಿ ಕಾಸರಗೋಡು ಜಿಲ್ಲೆಗೆ ಬಸ್ ಸಂಚಾರ ಸ್ಥಗಿತಗೊಳಿಸಿ ಆದೇಶಿಸಿದ್ದರು. ಅಲ್ಲದೆ ಸ್ಟ್ಯಾಬ್ ಟೆಸ್ಟ್ ನೆಗೆಟಿವ್ ವರದಿಯನ್ನು ಕಡ್ಡಾ ಯಗೊಳಿಸಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...