ಟಿಪ್ಪುವಿನ ಆದ್ಯತೆ ರಾಜನೀತಿಯಾಗಿತ್ತೇ ಹೊರತು ಧಾರ್ಮಿಕ ಹಿತಾಸಕ್ತಿಯಲ್ಲ

Source: sonews | By Staff Correspondent | Published on 15th November 2017, 11:22 PM | Coastal News | Special Report | Guest Editorial | Don't Miss |

ಮೈಸೂರು ರಾಜ್ಯವನ್ನು ಹೆಚ್ಚು ಕಾಲ ಆಳುವ ಪರಮಗುರಿ ಹೊಂದಿದ್ದ ಟಿಪ್ಪುವಿಗೆ ಮುಖ್ಯವಾಗಿದ್ದು ರಾಜನೀತಿಯೇ ವಿನಾ ಧರ್ಮವಲ್ಲ ಎಂಬುದು ಆಸ್ಟ್ರೇಲಿಯಾದ ಇತಿಹಾಸ ತಜ್ಞೆ ಕೇಟ್ ಬ್ರಿಟಲ್‌ಬ್ಯಾಂಕ್‌ ಅಧ್ಯಯನದ ಸಾರ. ಅವರ ‘ದ ಲೈಫ್ ಆಫ್ ಟಿಪ್ಪು ಸುಲ್ತಾನ್’ ಕೃತಿ ಅನುಸರಿಸಿ ಬರೆದ ಲೇಖನವಿದು

ಕೇಟ್ ಬ್ರಿಟಲ್‌ಬ್ಯಾಂಕ್‌

 

ಟಿಪ್ಪು ಅಧಿಕಾರವನ್ನು ಉಳಿಸಿಕೊಳ್ಳಬೇಕೆಂದರೆ, ದಕ್ಷಿಣದ ವಿವಿಧ ಜನಾಂಗಗಳ ಸಾಮರಸ್ಯದ ಮತ್ತು ನಂಬಿಕೆಯ ಶ್ರದ್ಧಾಭಕ್ತಿಯ ತಾಣಗಳನ್ನು ಬಳಸಿಕೊಳ್ಳಲೇಬೇಕಿತ್ತು. ಆ ಹಿನ್ನೆಲೆಯಲ್ಲೇ ನಾವು ಟಿಪ್ಪು ತನ್ನ ಆಡಳಿತ ವ್ಯಾಪ್ತಿಯಲ್ಲಿ ಇದ್ದ ಅಪಾರ ಧಾರ್ಮಿಕ ಕೇಂದ್ರಗಳನ್ನು ಪೋಷಿಸಿದ್ದನ್ನು ನೋಡಬೇಕು. ಈ ನೀತಿ ಟಿಪ್ಪುವಿಗೆ ಮಾತ್ರ ಸೀಮಿತವೇನೂ ಅಲ್ಲ. ಶತಮಾನಗಳಿಂದಲೂ ರಾಜರುಗಳು ತಮ್ಮ ವ್ಯಾಪ್ತಿಯ ಪವಿತ್ರ ಕ್ಷೇತ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಿದ್ದರು. ಅದಕ್ಕೆ ಅತ್ಯಂತ ಉತ್ತಮ ಉದಾಹರಣೆ, ದಕ್ಷಿಣದ ಗಂಗೆ ಎಂದೇ ಕರೆಯುವ ಕಾವೇರಿ ನದಿ ತೀರದುದ್ದಕ್ಕೂ ಇರುವ ಸಾಲುಸಾಲು ಧಾರ್ಮಿಕ ಕೇಂದ್ರಗಳನ್ನು ದಕ್ಷಿಣ ಭಾರತದ ಎಲ್ಲಾ ರಾಜರುಗಳೂ ಪೊರೆದದ್ದು. ರಾಜರ ಪಾಲಿಗೆ ಕಾವೇರಿ ಕೇವಲ ನದಿಯಷ್ಟೇ ಆಗಿರಲಿಲ್ಲ. ಅದು ಒಂದು ಧಾರ್ಮಿಕ ಶಕ್ತಿಯಾಗಿಯೂ ಅವರಿಗೆ ಒದಗಿಬಂದಿದೆ.

ಕಾವೇರಿಯ ಹರಿವಿನ ಮಾರ್ಗದಲ್ಲಿ ಶ್ರೀರಂಗಂ, ಶಿವನಸಮುದ್ರಂ ಮತ್ತು ಶ್ರೀರಂಗಪಟ್ಟಣ ಎಂಬ ಮೂರು ದ್ವೀಪಗಳು ನಿರ್ಮಾಣಗೊಂಡಿವೆ. ಈ ಮೂರೂ ದ್ವೀಪಗಳಲ್ಲಿ ಶೇಷ ಶಯನನಾದ ವಿಷ್ಣುವಿನ ದೇವಾಲಯಗಳಿವೆ ಮತ್ತು ಆ ಪೈಕಿ ಅತ್ಯಂತ ಸುಂದರವಾದದ್ದು ಶ್ರೀರಂಗಂ. ಆದರೆ ಮೂರೂ ದೇವಾಲಯಗಳಿಗೆ ಸಮಾನ ರಾಜಾಶ್ರಯ ಇತ್ತು. 1610ರಲ್ಲಿ ವಿಜಯನಗರ ಸಾಮಂತ ತಿರುಮಲನಿಂದ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ಬಳಿಕ, ರಾಜ ಒಡೆಯರು ತಮ್ಮ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಸ್ಥಳಾಂತರಿಸಿದರು.

ವಿಷ್ಣುವಿನ ಬೃಹತ್ ದೇವಾಲಯವಿರುವ ಶ್ರೀರಂಗಪಟ್ಟಣಕ್ಕೆ ಇರುವ ಧಾರ್ಮಿಕ ಮಹತ್ವದ ಹಿನ್ನೆಲೆಯಲ್ಲಿ, ಟಿಪ್ಪು ಬಯಸಿದ್ದರೆ ತನ್ನ ರಾಜಧಾನಿಯನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬಹುದಿತ್ತು. ಆದರೆ, ಆತ ಅಲ್ಲಿಯೇ ತನ್ನ ರಾಜಧಾನಿಯನ್ನು ಮುಂದುವರಿಸಿದ್ದೇ ಅಲ್ಲದೆ; ಶ್ರೀರಂಗನಾಥ ಸ್ವಾಮಿಗೆ ಒಡೆಯರು ನೀಡುತ್ತಿದ್ದ ರಾಜಾಶ್ರಯವನ್ನೂ ಮುಂದುವರಿಸಿದ. ಜೊತೆಗೆ, ತನ್ನ ಅರಮನೆಯ ಅಂಚಿನಲ್ಲೇ ಇದ್ದ ರಂಗನಾಥಸ್ವಾಮಿ ದೇವಾಲಯದ ಬಳಿಯೇ ಮಸೀದಿಯೊಂದನ್ನು ನಿರ್ಮಿಸಿದ. ದ್ವೀಪದ ಮತ್ತೊಂದು ಬದಿಯಲ್ಲಿ ಸಂಗಮದ ಸಮೀಪ ಹೈದರ್ ಸಮಾಧಿ ಇತ್ತು ಮತ್ತು ಅದರ ಬಳಿಯೂ ಟಿಪ್ಪು ಮತ್ತೊಂದು ಮಸೀದಿ ನಿರ್ಮಿಸಿದ. ಸರಳವಾಗಿ ಹೇಳಬೇಕೆಂದರೆ; ಉದಾರ ದಾನ-ಉಂಬಳಿ ನೀಡುವುದು ಭಾರತೀಯ ರಾಜಪರಂಪರೆಯ ಒಂದು ಉದ್ದೇಶಪೂರ್ವಕ ಪರಂಪರೆಯಾಗಿ ಬೆಳೆದುಬಂದಿತ್ತು. ಆ ಮೂಲಕ ರಾಜರು ತಮ್ಮ ಅಧಿಕಾರ ಮತ್ತು ಸಂಪತ್ತಿನೊಂದಿಗೆ ತಮ್ಮ ಧಾರ್ಮಿಕ ಶ್ರದ್ಧೆಯನ್ನೂ, ಸಹಿಷ್ಣುತೆಯನ್ನೂ ಪ್ರದರ್ಶನ ಮಾಡುವುದು ಅನಿವಾರ್ಯವಾಗಿತ್ತು. ಹಾಗಾಗಿಯೇ ಧಾರ್ಮಿಕ ಕೇಂದ್ರಗಳಿಗೆ ಭೂದಾನ, ಅಮೂಲ್ಯ ಆಭರಣ, ಪೂಜಾಸಾಮಗ್ರಿಗಳನ್ನು ದಾನ ನೀಡುವುದು, ಧಾರ್ಮಿಕ ವಿವಾದಗಳನ್ನು ಬಗೆಹರಿಸುವುದು ಮುಂತಾದ್ದನ್ನು ಆಡಳಿತರೂಢರ ಆದ್ಯ ಕರ್ತವ್ಯ ಎಂಬಂತೆ ರೂಢಿಸಿಕೊಂಡುಬರಲಾಗಿತ್ತು. ಅದಕ್ಕೆ ಪ್ರತಿಯಾಗಿ ಧಾರ್ಮಿಕ ಕೇಂದ್ರಗಳಿಂದ ಅವರು ತಮ್ಮ ಆಡಳಿತಕ್ಕೆ ಶ್ರೀರಕ್ಷೆಯನ್ನೂ, ರಾಜ್ಯದ ಸುರಕ್ಷೆ ಮತ್ತು ಸಂಪತ್ತಿಗಾಗಿ ದೈವ ಪ್ರಾರ್ಥನೆಯನ್ನೂ ಪಡೆಯುತ್ತಿದ್ದರು. ಟಿಪ್ಪು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಶೃಂಗೇರಿ ಮಠ ಸೇರಿದಂತೆ ವಿವಿಧ ದೇವಾಲಯ, ಸೂಫಿ ದರ್ಗಾ ಮತ್ತು ಮಸೀದಿಗಳಿಗೆ ಆತ ಉದಾರವಾಗಿ ನೀಡಿದ ಉಂಬಳಿ, ಕಾಣಿಕೆ, ದೇಣಿಗೆಗಳು ಶಾಸನ ಮತ್ತು ಸಂಸ್ಥೆಗಳ ದಾಖಲೆಗಳಲ್ಲಿ ಸಾಕಷ್ಟು ಸಾಕ್ಷ್ಯಪುರಾವೆಗಳೊಂದಿಗೆ ಉಲ್ಲೇಖವಾಗಿವೆ.

ಕೇರಳದ ಕೊಝಿಕೊಡ್‌ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿರುವ ಇನಾಂ ರಿಜಿಸ್ಟರ್ ಗಮನಿಸಿದರೆ; ಟಿಪ್ಪು ತನ್ನ ಅವಧಿಯಲ್ಲಿ ಎಷ್ಟೊಂದು ಪ್ರಮಾಣದಲ್ಲಿ ಧಾರ್ಮಿಕ ದತ್ತಿಗಳನ್ನು ನೀಡಿದ್ದಾನೆ ಎಂಬುದನ್ನು ಅಂದಾಜಿಸಬಹುದು. ಕ್ಯಾಲಿಕಟ್, ಎರ್ನಾಡ್, ಬೆಟ್ಟತ್ ನಾಡ್ ಮತ್ತು ಚೌಘಾಟ್ ತಾಲೂಕುಗಳ ದೇವಾಲಯ ಮತ್ತು ಮಸೀದಿಗಳಿಗೆ ಸುಮಾರು 67 ಭೂದಾನ ಮಾಡಿರುವುದಾಗಿ ಇನಾಂ ರಿಜಿಸ್ಟರ್ ಹೇಳುತ್ತದೆ. ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿ ಇಷ್ಟು ಪ್ರಮಾಣದ ಉಂಬಳಿ ಅಥವಾ ಭೂದಾನ ಮಾಡಿದ್ದನೆಂದರೆ; ಇಡೀ ತನ್ನ ಆಡಳಿತ ವ್ಯಾಪ್ತಿಯ ವಿಸ್ತಾರದಲ್ಲಿ ಎಷ್ಟೊಂದು ಪ್ರಮಾಣದಲ್ಲಿ ಧಾರ್ಮಿಕ ದತ್ತಿಯನ್ನು ಮಾಡಿರಬಹುದು ಎಂಬುದನ್ನು ನಾವು ಊಹಿಸಬಹುದು.

ಟಿಪ್ಪು ಹಲವು ದೇವಾಲಯಗಳಿಗೆ ಅಪಾರ ಬೆಲೆಬಾಳುವ ಆಭರಣ, ಪೂಜಾಸಾಮಗ್ರಿಗಳನ್ನು ದಾನ ಮಾಡಿದ್ದ ಎಂಬುದಕ್ಕೆ ಈಗಲೂ ಹಲವು ಧಾರ್ಮಿಕ ಕೇಂದ್ರಗಳಲ್ಲಿ ಸಾಕ್ಷ್ಯ ಇವೆ. ಶ್ರೀರಂಗಪಟ್ಟಣದ ರಂಗನಾಥ ದೇವಾಲಯದ ಬೆಳ್ಳಿಯ ತಟ್ಟೆಗಳು, ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಅಪರೂಪದ ಶಿವಲಿಂಗ, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಬೆಳ್ಳಿಯ ಪೂಜಾಸಾಮಗ್ರಿ ಹಾಗೂ ಆನೆಗಳನ್ನು ನೀಡಿದ್ದ ಎಂಬುದನ್ನು ಹಲವು ಶಾಸನಗಳಲ್ಲಿ ಕಾಣಬಹುದು.

ಶೃಂಗೇರಿ ಮಠದೊಂದಿಗಂತೂ ಟಿಪ್ಪುವಿನದ್ದು ಬಹಳ ಆತ್ಮೀಯ ಬಾಂಧವ್ಯ. ಹಾಗಾಗಿ ಮಠಕ್ಕೆ ಆತ ಬೆಲೆಬಾಳುವ ವಸ್ತ್ರ, ಪೂಜಾಸಾಮಗ್ರಿಗಳನ್ನು ನೀಡಿದ್ದಾನೆ. ಅತ್ಯಂತ ಪುರಾತನ ರಾಜವಂಶಗಳಲ್ಲಿ ಒಂದಾದ ಗಂಗರ ಕಾಲದಿಂದಲೇ ವಿವಿಧ ರಾಜರುಗಳಿಂದ 200ಕ್ಕೂ ಹೆಚ್ಚು ತಾಮ್ರಶಾಸನಗಳು ಹಾಗೂ ಸನ್ನದುಗಳನ್ನು ಪಡೆದಿರುವುದೇ ಶೃಂಗೇರಿ ಮಠ ದಕ್ಷಿಣ ಭಾರತದಲ್ಲಿ ಆಗ ಎಂತಹ ಧಾರ್ಮಿಕ ಮಹತ್ವ ಪಡೆದಿತ್ತು ಎಂಬುದಕ್ಕೆ ನಿದರ್ಶನ. ಶೃಂಗೇರಿ ಸ್ವಾಮೀಜಿಗಳನ್ನು ಜಗದ್ಗುರು ಎಂದು ಸಂಬೋಧಿಸುತ್ತಿದ್ದ ಟಿಪ್ಪು, 1792ರಲ್ಲಿ ಮರಾಠರು ಮಠದ ಮೇಲೆ ದಾಳಿ ನಡೆಸಿದಾಗ, ಸ್ವಾಮೀಜಿಗಳಿಗೆ ಬರೆದ ಪತ್ರದಲ್ಲಿ, “ದಾಳಿಕೋರರು ತಮ್ಮ ಕೃತ್ಯಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು, ಈ ಕಲಿಯುಗದಲ್ಲಿ ಅತಿ ಶೀಘ್ರವೇ ಅನುಭವಿಸಲಿದ್ದಾರೆ” ಎಂದು ಹೇಳಿದ್ದಾನೆ. ಅಲ್ಲದೆ, “ಗುರುಗಳಿಗೆ ವಂಚನೆ- ಅನ್ಯಾಯ ಎಸಗುವವರ ವಂಶವೇ ಸರ್ವನಾಶವಾಗಲಿದೆ” ಎಂದು ಆ ಪತ್ರವನ್ನು ಮುಗಿಸಿದ್ದಾನೆ.

ಟಿಪ್ಪು ರಾಜಕೀಯ ದೃಷ್ಟಿಕೋನವಲ್ಲದೆ, ಧಾರ್ಮಿಕ ಲೆಕ್ಕಾಚಾರದ ಮೇಲೆ ಆಡಳಿತ ನಡೆಸಿದ್ದರೆ, ತನ್ನ ಅರಮನೆಯ ಆಸುಪಾಸಿನಲ್ಲೇ ಇದ್ದ ರಂಗನಾಥ ದೇವಾಲಯದ ಏಳಿಗೆಗೆ ಅವಕಾಶವನ್ನೇ ನೀಡುತ್ತಿರಲಿಲ್ಲ. ಆದರೆ, ಅಲ್ಲಿನ ವರಾಹ ದೇವಾಲಯವನ್ನು ಭಗ್ನಗೊಳಿಸಲು ಕಾರಣ, ಮೈಸೂರು ಒಡೆಯರ ಆಡಳಿತ ಚಿಹ್ನೆಯಾಗಿ ವರಾಹ ಕೂಡ ಬಳಕೆಯಾಗಿತ್ತು ಎಂಬುದಾಗಿತ್ತು. ಟಿಪ್ಪುವಿನ ಇಂತಹ ರಾಜಕೀಯಪ್ರೇರಿತ ನಡೆಯಿಂದ ಕ್ರೈಸ್ತ ಕೇಂದ್ರಗಳು ಕೂಡ ಹೊರತಾಗಿರಲಿಲ್ಲ ಎಂಬುದಕ್ಕೆ ನಿದರ್ಶನ ಬಿದನೂರು ನಗರದ ವೆಂಕಟರಮಣ ದೇವಾಲಯದಲ್ಲಿರುವ ಗಂಟೆ. ಅದು 1713ರಲ್ಲಿ ಆಮ್ ಸ್ಟರ್ಡಾಂನಲ್ಲಿ ನಿರ್ಮಾಣಗೊಂಡಿರುವ ಆ ಘಂಟೆಯನ್ನು ಟಿಪ್ಪು, ಮಲಬಾರಿನ ಚರ್ಚೊಂದನ್ನು ಭಗ್ನಗೊಳಿಸಿ, ತಂದು ಈ ದೇವಾಲಯಕ್ಕೆ ನೀಡಿದ್ದಾನೆ.

ಹಾಗೇ, ಧಾರ್ಮಿಕ ನಂಬಿಕೆಯ ಆಧಾರದ ಮೇಲೆ ಟಿಪ್ಪು ಯಾವುದೇ ಸಮುದಾಯವನ್ನು ತಾರತಮ್ಯದಿಂದ ಕಾಣುತ್ತಿರಲಿಲ್ಲ ಎಂಬುದಕ್ಕೆ ಆತನ ಆಡಳಿತದಲ್ಲಿ ದಿವಾನರಾಗಿದ್ದವರು, ಹಿಂದೂವಾಗಿದ್ದ ಪೂರ್ಣಯ್ಯ ಎಂಬುದೇ ಸಾಕ್ಷಿ. ನಮಗೆ ಗೊತ್ತಿರುವಂತೆ ಕೆನರಾ ಕ್ರೈಸ್ತರು ಬ್ರಿಟಿಷರೊಂದಿಗೆ ಕೈಜೋಡಿಸಿ, ತನ್ನ ವಿರುದ್ಧ ಷಡ್ಯಂತ್ರ ಹೂಡಿದ್ದಾರೆ ಎಂದು ಟಿಪ್ಪುವಿಗೆ ಅವರ ಬಗ್ಗೆ ಸಂಶಯವಿತ್ತು. ಅಂತಹ ಸಂಶಯದಿಂದಲೇ ಕೇರಳದ ನಾಯರ್ ಮತ್ತು ಕೊಡವರನ್ನೂ ದಂಡಿಸಿದ್ದ. ಈ ಎಲ್ಲರೊಂದಿಗೆ ತನ್ನದೇ ಮುಸ್ಲಿಂ ಧರ್ಮಕ್ಕೆ ಸೇರಿದ ಮಹದ್ವಿ ಅಥವಾ ಮಹದವಿಯಾ ಸಮುದಾಯದವನ್ನೂ ಕೂಡ 1794ರಲ್ಲಿ ತನ್ನ ರಾಜ್ಯದಿಂದ ಹೊರಹಾಕಿದ್ದ. ಟಿಪ್ಪು ಸೇನೆಯ ಅಶ್ವದಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಆ ಜನಾಂಗದ ಕೆಲವು ಸಾವಿರ ಮಂದಿ ಮೈಸೂರಿನಲ್ಲಿ ವಾಸವಿದ್ದರು. ಬ್ರಿಟಿಷರ ಒತ್ತೆಯಾಳಾಗಿದ್ದ ಟಿಪ್ಪುವಿನ ಮಕ್ಕಳು ಬಿಡುಗಡೆಯಾಗಿ ಬರುವ ದಿನವೇ ಮಹದ್ವಿ ಜನಾಂಗದವರ ಕೆಲವು ಧಾರ್ಮಿಕ ಆಚರಣೆಗಳು ನಿಗದಿಯಾಗಿದ್ದವು. ಆ ಹಿನ್ನೆಲೆಯಲ್ಲಿ ಸದ್ದುಗದ್ದಲವಿಲ್ಲದೆ, ಹೆಚ್ಚಿನ ಸಂಭ್ರಮಾಚರಣೆ ಮಾಡದೇ ಆಚರಣೆ ಮುಂದುವರಿಸುವಂತೆ ಟಿಪ್ಪು ಆದೇಶಿಸಿದ್ದರೂ, ಆತನ ಆದೇಶ ಮೀರಿ ಅವರು ನಡೆದುಕೊಂಡಿದ್ದರಿಂದ ಆ ಸಮುದಾಯವನ್ನು ಹೊರಗಟ್ಟಿದ ಎಂಬ ಮಾಹಿತಿ ಇದೆ. ಜೊತೆಗೆ ಆ ಸಮುದಾಯದ ಮೇಲೂ ಟಿಪ್ಪುವಿಗೆ ಯಾವ ಪೂರ್ವಾಗ್ರಹ ಇರಲಿಲ್ಲ ಎಂಬುದಕ್ಕೆ ಇಸ್ತಾಂಬುಲ್ ಗೆ ಟಿಪ್ಪು ವಕ್ತಾರರಾಗಿ ತೆರಳಿದ್ದ ನಾಲ್ವರು ವಕೀಲರ ಪೈಕಿ ಮಹದ್ವಿ ಸಮುದಾಯಕ್ಕೆ ಸೇರಿದ ಜಾಫರ್ ಖಾನ್ ಕೂಡ ಒಬ್ಬನಾಗಿದ್ದ ಎಂಬುದೇ ನಿದರ್ಶನ. ಆದರೆ, ಈ ಸಮುದಾಯವನ್ನು ಹೊರಗಟ್ಟಲು ಮತ್ತೊಂದು ಕಾರಣ, ಅವರು ಬ್ರಿಟಿಷ್ ಸೇನೆಯೊಂದಿಗೆ ಕೈಜೋಡಿಸಿರಬಹುದು ಎಂಬ ಶಂಕೆ ಟಿಪ್ಪುವಿಗೆ ಬಂದಿತ್ತು ಎಂಬ ವಾದವೂ ಇದೆ. ಅದಕ್ಕೆ ಪೂರಕವೆಂಬಂತೆ ನಾಲ್ಕನೇ ಆಂಗ್ಲಮೈಸೂರು ಯುದ್ಧದಲ್ಲಿ ಮಹದ್ವಿ ಸಮುದಾಯದ ಹಲವು ಅಶ್ವದಳ ಯೋಧರು ಆರ್ಥರ್ ವೆಲ್ಲಸ್ಲಿ ಪಡೆಯಲ್ಲಿದ್ದರು! ಆದರೆ, ಟಿಪ್ಪು ಶಂಕೆ ನಿಜವಾಗಿತ್ತೇ? ಅಥವಾ ಟಿಪ್ಪು ತಮ್ಮನ್ನು ಹೊರಹಾಕಿದ ಸೇಡಿಗಾಗಿ ಅವರು ಬ್ರಿಟಿಷರೊಂದಿಗೆ ಕೈಜೋಡಿಸಿದ್ದರೆ ಎಂಬುದು ಮಾತ್ರ ಸ್ಪಷ್ಟವಿಲ್ಲ.

ಇಂದು, ಧಾರ್ಮಿಕ ವೈರುಧ್ಯ ಮತ್ತು ಭಿನ್ನತೆಯ ಕಾರಣಕ್ಕೆ ಹಿಂಸಾಚಾರಗಳು ಭುಗಿಲೇಳುತ್ತಿರುವ ಹೊತ್ತಲ್ಲಿ 200 ವರ್ಷಗಳ ಹಿಂದಿನ ಘಟನೆಗಳನ್ನು ನಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುವುದು ಬಹಳ ಸುಲಭ. ಆದರೆ, ನಾವು ಬದುಕುತ್ತಿರುವ ಈ ಜಗತ್ತು ವಸಾಹತೀಕರಣದ ಕೂಸು. ಆದರೆ, ಇಂದು ನಮ್ಮ ಮನಸ್ಸುಗಳನ್ನು ಆವರಿಸಿರುವ ಈ ವಸಾಹತೀಕರಣ 18ನೇ ಶತಮಾನದ ಅಂತ್ಯದ ವೇಳೆ ಭಾರತ ಉಪಖಂಡದಲ್ಲಿ ಆಗ ತಾನೆ ಅಂಬೆಗಾಲಿಡಲಾರಂಭಿಸಿತ್ತು. ಆದರೆ, 19ನೇ ಶತಮಾನದ ಹೊತ್ತಿಗೆ ಬ್ರಿಟಿಷರು, ತಮ್ಮ ವಸಾಹತುಗಳ ಜನಸಮುದಾಯದ ಮೇಲೆ ತಮ್ಮ ಅಧಿಕಾರದೊಂದಿಗೆ ಜನಾಂಗೀಯ ಪೂರ್ವಾಗ್ರಹಗಳನ್ನೂ ಹೇರಿದರು. ತಮ್ಮ ಅನುಕೂಲಕ್ಕೆ ತಕ್ಕಂತೆ ಒಡೆದು ಆಳುವ ನೀತಿ ಪಾಲಿಸಿದರು. ಅದರಲ್ಲೂ ಮೊಘಲರೊಂದಿಗೆ ತಮ್ಮ ಅನುಭವ ಹಾಗೂ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ನಡುವಿನ ಶತಮಾನಗಳ ಸಂಘರ್ಷದ ಹಿನ್ನೆಲೆಯಲ್ಲಿ ಮುಸ್ಲಿಮರ ವಿರುದ್ಧ ಉಳಿದವರನ್ನು ಎತ್ತಿಕಟ್ಟಿದರು.

ಧಾರ್ಮಿಕ ವಿಷಯಗಳಿಂದ ದೂರ ಉಳಿಯುವುದಾಗಿ ಬ್ರಿಟಿಷರು ಹೇಳಿಕೊಂಡಿದ್ದರೂ, ವಾಸ್ತವವಾಗಿ ಪ್ರತಿಯೊಬ್ಬ ವ್ಯಕ್ತಿಯನ್ನೂ ಅವರು ಧಾರ್ಮಿಕ ಹಿನ್ನೆಲೆಯಿಂದಲೇ ಗುರುತಿಸುತ್ತಿದ್ದರು ಮತ್ತು ತಮ್ಮ ಆಡಳಿತ- ವ್ಯವಹಾರದಲ್ಲಿ ಧರ್ಮವನ್ನೇ ಪ್ರಮುಖವಾಗಿ ಮಾನದಂಡವಾಗಿ ಪರಿಗಣಿಸುತ್ತಿದ್ದರು. ಹಾಗಾಗಿ ಬ್ರಿಟಿಷ್ ರಾಜ್ ಅವಧಿಯಲ್ಲಿ ಭಾರತದಲ್ಲಿ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಸಮಾಜ ಧಾರ್ಮಿಕ ನೆಲೆಯಲ್ಲಿ ಕಠಿಣವಾಯಿತು ಮತ್ತು ಪರಿಣಾಮವಾಗಿ ಭಿನ್ನ ಧಾರ್ಮಿಕ ನಂಬುಗೆಯ ಸಮುದಾಯಗಳ ನಡುವಿನ ಕಂದಕ ಹಿಗ್ಗುತ್ತಾ ಹೋಯಿತು. ಔದ್ಯೋಗೀಕರಣದ ಬಳಿಕ ಭಿನ್ನ ಆಚರಣೆ, ನಂಬಿಕೆ, ಸಂಪ್ರದಾಯಗಳ ಜನ ಅಕ್ಕಪಕ್ಕದಲ್ಲಿ ನೆಲೆಸತೊಡಗಿದ ಮೇಲೆ ಭಿನ್ನಾಭಿಪ್ರಾಯಗಳು, ಅಸಹನೆ, ಸಮಾಧಾನಗಳು ಮತ್ತು ಕೆಲವೊಮ್ಮೆ ಸಂಘರ್ಷಗಳು ತಡೆಯಲಾಗದ ಅನಿವಾರ್ಯತೆಗಳಾದವು. ಆದರೆ, ವಸಾಹತೀಕರಣಕ್ಕೆ ಮುನ್ನ ಭಾರತೀಯ ಸಮಾಜ ಹೀಗಿರಲಿಲ್ಲ.

ಕೃಪೆ:www.thestate

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...