ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ!

Source: sonews | By Staff Correspondent | Published on 11th May 2018, 11:52 PM | State News | Special Report | Interview | Don't Miss |

ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ರಚಿಸಿದ್ದ ರಾಜೇಂದ್ರ ಸಾಚಾರ್ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದವರು. ಈ ಸಮಿತಿ 2006ರಲ್ಲಿ ಸಲ್ಲಿಸಿದ ವರದಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿತ್ತು. ಮುಸ್ಲಿಮರು ಇತರ ಸಾಮಾಜಿಕ ಗುಂಪುಗಳಿಗಿಂತ ತೀರಾ ಹಿಂದುಳಿದಿರುವುದನ್ನು ವರದಿ ಬೆಳಕಿಗೆ ತಂದಿತ್ತು.

ನ್ಯಾಷನಲ್ ಕಮಿಟಿ ಫಾರ್ ಅಪ್ಲೈಡ್ ಎಕನಾಮಿಕ್ ರೀಸರ್ಚ್ ಎಂಬ ಲಾಭರಹಿತ ಸಂಸ್ಥೆಯಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞ ಹುದ್ದೆ ತ್ಯಜಿಸಿದ ಬಳಿಕ ಶರೀಫ್, ದೆಹಲಿಯಲ್ಲಿ ಸೆಂಟರ್ ಫಾರ್ ರೀಸರ್ಚ್ ಆ್ಯಂಡ್ ಡಾಟಾಬೇಸ್ ಇನ್ ಡೆವಲಪ್‍ಮೆಂಟ್ ಪಾಲಿಸಿ ಎಂಬ ಸ್ವಂತ ಸ್ವಯಂಸೇವಾ ಸಂಸ್ಥೆ ರಚಿಸಿದರು. ವಾಷಿಂಗ್ಟನ್‍ನಲ್ಲಿರುವ ಅಮೆರಿಕ- ಭಾರತ ನೀತಿ ಸಂಸ್ಥೆಯ ಮುಖ್ಯ ಸಂಶೋಧಕರಾಗಿ ಪ್ರಸ್ತುತ ಅವರು ಭಾರತ ಹಾಗೂ ಅಮೆರಿಕದಲ್ಲಿ ಕಾರ್ಯಭಾರ ಹೊಂದಿದ್ದಾರೆ.

ಈ ತಿಂಗಳ 12ರಂದು ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಶರೀಫ್ ಹಾಗೂ ಅವರ ಸಹವರ್ತಿ ಖಾಲಿದ್ ಸೈಫುಲ್ಲಾ ಅವರು ಕರ್ನಾಟಕದ ಮತದಾರರ ಪಟ್ಟಿಯನ್ನು ಅಧ್ಯಯನ ಮಾಡಿದ್ದಾರೆ. ರಾಜಕೀಯ ಪ್ರಕ್ರಿಯೆಯಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆ ಮಟ್ಟವನ್ನು ಅಧ್ಯಯನ ಮಾಡುವುದು ಅವರ ಉದ್ದೇಶವಾಗಿತ್ತು. ಇದರಲ್ಲಿ ಕಂಡುಬಂದ ಅಂಶಗಳ ಪ್ರಕಾರ, ಮತದಾರರ ಪಟ್ಟಿಯಿಂದ ಶೇಕಡ 20ರಷ್ಟು ವಯಸ್ಕ ಮುಸ್ಲಿಮರ ಹೆಸರುಗಳು ಕಾಣೆಯಾಗಿರುವುದು ದೃಢಪಟ್ಟಿದೆ. ಈ ವರದಿಯ ಹಿನ್ನೆಲೆಯಲ್ಲಿ ಇತರ ಸಾಮಾಜಿಕ ಗುಂಪುಗಳ ಜನರ ಹೆಸರು ಬಿಟ್ಟುಹೋಗಿರುವ ಬಗ್ಗೆ ಹಾಗೂ ಮುಸ್ಲಿಮರು ಬಿಟ್ಟುಹೋಗಿರುವ ಬಗ್ಗೆ ತುಲನೆ ಮಾಡುವಂತೆ scroll.in ಅವರನ್ನು ಕೇಳಿಕೊಂಡಿತ್ತು. ಅವರು ತುಲನಾತ್ಮಕ ಕೋಷ್ಟಕವನ್ನು ಸಿದ್ಧಪಡಿಸಿದ್ದು, ಫೋನ್ ಮತ್ತು ಇ-ಮೇಲ್ ಮೂಲಕ ನಡೆದ ಸಂದರ್ಶನಕ್ಕೆ ಇದು ಮೂಲ ಆಧಾರವಾಗಿದೆ.

ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಕರ್ನಾಟಕದ ಮತದಾರರ ಪಟ್ಟಿಯ ಅಧ್ಯಯನಕ್ಕೆ ನಿಮಗೆ ಪ್ರೇರಣೆ ಏನು?

ಕಳೆದ ಎರಡು ವರ್ಷಗಳಿಂದ, ಮುಸ್ಲಿಮರಿಗೆ ಸಂಬಂಧಿಸಿದಂತೆ ಪೌರತ್ವ ವಿಷಯಗಳ ಬಗ್ಗೆ ಗಮನ ಹರಿಸಿದ್ದೇನೆ. ಅದರಲ್ಲೂ ಮುಖ್ಯವಾಗಿ ಅಸ್ಸಾಂನಲ್ಲಿ ಸರ್ಕಾರ ಯಾರು ನಾಗರಿಕರು ಹಾಗೂ ಯಾರು ಅಲ್ಲ ಎನ್ನುವುದನ್ನು ಗುರುತಿಸಲು ಪ್ರಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನ ಹರಿಸಿದ್ದೇನೆ. ಬಳಿಕ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ನಂತರ ಭೇಟಿ ನೀಡಿದ್ದೇನೆ. ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಮತದಾರರ ಸಂಖ್ಯೆ ಇಳಿಮುಖವಾಗುತ್ತಿರುವುದು ಗಮನಕ್ಕೆ ಬಂತು. ಈ ಅಂಶ ಕರ್ನಾಟಕದ ಮತದಾರರ ಪಟ್ಟಿಯ ಅಧ್ಯಯನಕ್ಕೆ ಪ್ರೇರಣೆಯಾಯಿತು.

ಕರ್ನಾಟಕದ ಮತದಾರರ ಪಟ್ಟಿ ನಿಮಗೆ ಎಲ್ಲಿ ಲಭ್ಯವಾಯಿತು?

ಕರ್ನಾಟಕ ಚುನಾವಣಾ ಆಯೋಗದ ಅಧಿಕೃತ ವೆಬ್‍ಸೈಟ್‍ನಿಂದ ಅಂಕಿ ಅಂಶಗಳನ್ನು ನಮ್ಮ ತಂಡ ಸಂಗ್ರಹಿಸಿದೆ. ಇದು ಮುಕ್ತ ಸಂಪನ್ಮೂಲ. ಫೆಬ್ರವರಿಯಲ್ಲಿ ಈ ಮಾಹಿತಿ ಪಡೆಯಲಾಗಿದೆ. ಆಗ ಕರ್ನಾಟಕದಲ್ಲಿ ಮತದಾರರ ಸಂಖ್ಯೆ 4.98 ಕೋಟಿ ಇತ್ತು. ಆ ಬಳಿಕ ಏಪ್ರಿಲ್‍ನಲ್ಲಿ ಕರ್ನಾಟಕ ಚುನಾವಣಾ ಅಧಿಕಾರಿ ಪತ್ರಿಕಾ ಪ್ರಕಟಣೆ ನೀಡಿ, 1.3 ಕೋಟಿ ಹೆಚ್ಚುವರಿ ಮತದಾರರನ್ನು ಮೂರು ದಿನಗಳ ಸಾಮೂಹಿಕ ನೋಂದಣಿ ಅಭಿಯಾನದಲ್ಲಿ ಸೇರಿಸಲಾಗಿದೆ ಎಂದು ಹೇಳಿದರು. ಆದ್ದರಿಂದ ಈಗ ಕರ್ನಾಟಕದ ಮತದಾರರ ಸಂಖ್ಯೆ 6.2 ಕೋಟಿ.

ನಿಮ್ಮ ಅಧ್ಯಯನದಲ್ಲಿ ತಿಳಿದುಬಂದ ಪ್ರಧಾನ ಅಂಶಗಳು ಯಾವುವು?
ಕರ್ನಾಟಕದ ವಯಸ್ಕರಲ್ಲಿ ಬಹಳಷ್ಟು ಮಂದಿ ಮತಪಟ್ಟಿಯಲ್ಲಿ ಸೇರಿಲ್ಲ. ಈ ಸಂಖ್ಯೆ ಮುಸ್ಲಿಮರಲ್ಲಿ ಅಧಿಕ. ಶೇಕಡ 20ರಷ್ಟು ಅಥವಾ 13 ಲಕ್ಷ ಮುಸ್ಲಿಂ ವಯಸ್ಕರು ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ. ಏಕೆಂದರೆ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಲ್ಲ. ಮುಸ್ಲಿಮೇತರ ಸಮುದಾಯಗಳಲ್ಲಿ ಶೇಕಡ 12.3 ಅಂದರೆ 53.2 ಲಕ್ಷ ಮಂದಿಯ ಹೆಸರು ಸೇರಿಲ್ಲ ಎಂಬ ಕಾರಣಕ್ಕೆ ಇವರೂ ಮತದಾನ ಮಾಡುವಂತಿಲ್ಲ. ಅಧ್ಯಯನದಲ್ಲಿ ಇವರನ್ನು "ಎಲ್ಲ ಇತರರು" ಎಂದು ವ್ಯಾಖ್ಯಾನಿಸಲಾಗಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡ 13ರಷ್ಟು ಮಂದಿ ಮಾತ್ರ ಮುಸ್ಲಿಮರು ಎಂಬ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಈ ಅಧ್ಯಯನವನ್ನು ನೋಡಬೇಕು.

ಮುಸ್ಲಿಮರ ಜತೆ ಹೋಲಿಕೆಗೆ ಇತರ ಎಲ್ಲರೂ ಎಂದು ಏಕೆ ಆಯ್ಕೆ ಮಾಡಿಕೊಂಡಿದ್ದೀರಿ?, ಬದಲಾಗಿ ಹಿಂದೂ ಅಥವಾ ಪರಿಶಿಷ್ಟ ಜಾತಿಯವರನ್ನು ಏಕೆ ಆಯ್ಕೆ ಮಾಡಿಲ್ಲ?
ಮುಸ್ಲಿಮರ ಹೆಸರಿನ ಕಾರಣದಿಂದಾಗಿ ಮುಸ್ಲಿಂ ಮತದಾರರನ್ನು ಮತಪಟ್ಟಿಯಲ್ಲಿ ಗುರುತಿಸುವುದು ಸುಲಭ. ಇದಕ್ಕೆ ವಿರುದ್ಧವಾಗಿ ಪರಿಶಿಷ್ಟ ಜಾತಿಯವವರು ಅಥವಾ ಮೇಲ್ಜಾತಿಯವರು ಅಥವಾ ಇತರ ಹಿಂದುಳಿದ ವರ್ಗಗಳ ಮತದಾರರನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟ. ಏಕೆಂದರೆ ಹೆಸರಿನಿಂದ ಆ ಮತದಾರರ ಜಾತಿಯನ್ನು ಗುರುತಿಸುವುದು ಸಾಧ್ಯವಿಲ್ಲ. ಅಂತೆಯೇ, ಮುಸ್ಲಿಮೇತರ ಅಲ್ಪಸಂಖ್ಯಾತರ ಹೆಸರಿನಿಂದ ಕೂಡಾ ಅವರು ಯಾವ ಧರ್ಮಕ್ಕೆ ಸೇರಿದವರು ಎಂದು ಗುರುತಿಸುವುದು ಸಾಧ್ಯವಿಲ್ಲ. ಆದ್ದರಿಂದ ಹೋಲಿಕೆಯ ಸಲುವಾಗಿ ಮುಸ್ಲಿಮರು ಹಾಗೂ ಇತರ ಎಲ್ಲ ವರ್ಗಗಳು ಎಂಬ ವರ್ಗೀಕರಣ ಮಾಡಲಾಗಿದೆ. ಇದರಲ್ಲಿ ಹಿಂದೂಗಳು ಮತ್ತು ಮುಸ್ಲಿಮೇತರ ಧಾರ್ಮಿಕ ಅಲ್ಪಸಂಖ್ಯಾತರು ಸೇರುತ್ತಾರೆ.

ಮತದಾರರ ಪಟ್ಟಿಯಿಂದ ಕೈಬಿಟ್ಟ ಮುಸ್ಲಿಂ ಮತದಾರರ ಹೆಸರುಗಳನ್ನು ಹೇಗೆ ಪತ್ತೆ ಮಾಡಿದ್ದೀರಿ?
ಮೊದಲು ನಾವು ಮುಸ್ಲಿಂ ಮತದಾರರ ಡಾಟಾಬ್ಯಾಂಕ್ ಸೃಷ್ಟಿಸಿದೆವು. ಇದು ಮುಸ್ಲಿಂ ಮತದಾರರಿರುವ ಕುಟುಂಬಗಳ ಪಟ್ಟಿ. ನಮ್ಮ ಇಡೀ ಕಾರ್ಯಯೋಜನೆಯ ವಿನ್ಯಾಸವೇ ಮತದಾರರ ಪಟ್ಟಿಯಲ್ಲಿ ಮುಸ್ಲಿಂ ಮತದಾರರ ಹೆಸರು ಇದೆಯೇ, ಇಲ್ಲವೇ ಎನ್ನುವುದನ್ನು ಅಧ್ಯಯನ ಮಾಡುವುದಾಗಿತ್ತು. scroll.in ಇತರ ಗುಂಪುಗಳ ಬಿಟ್ಟುಹೋದ ಮತದಾರರ ಸಂಖ್ಯೆಯ ಜತೆ ಬಿಟ್ಟು ಹೋದ ಮುಸ್ಲಿಂ ಮತದಾರರ ಸಂಖ್ಯೆಯನ್ನು ತುಲನೆ ಮಾಡಲು ವಿನಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ, 25 ಕ್ಷೇತ್ರಗಳಲ್ಲಿ ಇತರ ಎಲ್ಲ ಸಮುದಾಯಗಳ ವರ್ಗವನ್ನು ಸೃಷ್ಟಿಸಿದೆವು. ಈ ಪ್ರತಿಯೊಂದು ಕ್ಷೇತ್ರಗಳಲ್ಲೂ, ಒಟ್ಟು ಕುಟುಂಬಗಳ ಪೈಕಿ ಕನಿಷ್ಠ ಶೇಕಡ 10 ಕುಟುಂಬಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದವು. ಆ ಬಳಿಕ ನಾವು 25 ಕ್ಷೇತ್ರಗಳ ಮುಸ್ಲಿಂ ಹಾಗೂ ಇತರ ವರ್ಗದ ಮತದಾರರ ಕುಟುಂಬಗಳ ಪಟ್ಟಿ ಸಿದ್ಧಪಡಿಸಿದೆವು.

ಮತದಾರರಿರುವ ಕುಟುಂಬಗಳು ಎಂಬುದರ ನಿಖರ ಅರ್ಥವೇನು?
ಪ್ರತಿ ಕುಟುಂಬದಲ್ಲಿ ಕನಿಷ್ಠ ಇಬ್ಬರು ಮತದಾರರಿರುತ್ತಾರೆ ಎನ್ನುವುದು ನಮ್ಮ ನಿರೀಕ್ಷೆ. ಪತಿ ಮತ್ತು ಪತ್ನಿ. ಕೆಲ ಕುಟುಂಬಗಳಲ್ಲಿ ಬೆಳೆದ ಮಕ್ಕಳು ಸೇರುವುದರಿಂದ ಪತಿ, ಪತ್ನಿ, ವಯಸ್ಕ ಅವಿವಾಹಿತ ಮಕ್ಕಳು ಸೇರುತ್ತಾರೆ. ಮೂರು ತಲೆಮಾರುಗಳು ಜತೆಯಾಗಿರುವ ಕೆಲ ಕುಟುಂಬಗಳೂ ಇವೆ. ಆದರೆ ಪ್ರತಿ ಕುಟುಂಬದ ಕನಿಷ್ಠ ನಿರೀಕ್ಷಿತ ಮತಗಳ ಸಂಖ್ಯೆ ಎರಡು, ಪತಿ ಹಾಗೂ ಪತ್ನಿ. ಆದರೆ ಯಾವುದೇ ಸಮಾಜದಲ್ಲಿ, ಒಬ್ಬಂಟಿಯಾಗಿ ವಾಸಿಸುವವರೂ ಇರಬಹುದು. ಕರ್ನಾಟಕದಲ್ಲಿ ಶೇಖಡ 4.7ರಷ್ಟು ಕುಟುಂಬಗಳು ಏಕವ್ಯಕ್ತಿ ಕುಟುಂಬಗಳಾಗಿವೆ.

ಇದು ಭಾರತದ ಜನಗಣತಿ ಅಂಕಿ ಅಂಶಗಳೇ?
ಹೌದು. ಮತದಾರರ ಪಟ್ಟಿ ಮತ್ತು ಕುಟುಂಬಗಳ ಹಂಚಿಕೆಯ ಪಟ್ಟಿ ಬಳಸಿಕೊಂಡು...

ಕುಟುಂಬಗಳ ಹಂಚಿಕೆಯನ್ನು ಹೇಗೆ ಸೃಷ್ಟಿಸಿದ್ದೀರಿ?
ಇದು ತೀರಾ ಸುಲಭ. ಪ್ರತಿ ಮತದಾರರಿಗೂ ವಿಳಾಸ ಇರುತ್ತದೆ. ಒಂದು ಮನೆಯಲ್ಲಿ ಮೂವರು ಮತದಾರರಿದ್ದರೆ, ವಿಳಾಸವನ್ನು ಮೂರು ಬಾರಿ ನಮೂದಿಸಿರುತ್ತಾರೆ. ವಿಳಾಸ ಪುನರಾವರ್ತನೆಯಾಗಿಲ್ಲ ಎಂದಾದರೆ, ಒಬ್ಬನೇ ಮತದಾರ ಆ ಕುಟುಂಬದಲ್ಲಿದ್ದಾನೆ ಎಂಬ ಅರ್ಥ. ಎರಡು ಬಾರಿ ವಿಳಾಸ ಇದ್ದರೆ ಇಬ್ಬರು ಮತದಾರರಿದ್ದಾರೆ ಎಂಬರ್ಥ. ನಾವು ಒಬ್ಬ ಮತದಾರರ ಕುಟುಂಬಗಳನ್ನು ಹಾಗೂ ಎರಡು ಅಥವಾ ಹೆಚ್ಚಿನ ಮತದಾರರಿರುವ ಕುಟುಂಬಗಳನ್ನು ಪ್ರತ್ಯೇಕಿಸಿದ್ದೇವೆ. ಎಲ್ಲ 25 ಕ್ಷೇತ್ರಗಳಲ್ಲಿ, ಮುಸ್ಲಿಂ ಮತ್ತು ಇತರ ವರ್ಗ ಸೇರಿದಂತೆ ಒಂಟಿ ಮತದಾರ ಕುಟುಂಬಗಳ ಸಂಖ್ಯೆ ಶೇಕಡ 4.7ರಷ್ಟಾಗಿದೆ. ಆದ್ದರಿಂದ ಈ ಶೇಕಡ 4.7 ಕುಟುಂಬಗಳನ್ನು ಹೊರತುಪಡಿಸಿದರೆ, ಉಳಿದೆಲ್ಲ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚಿನ ಮತದಾರರಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ.

ಕೇವಲ 25 ಕ್ಷೇತ್ರಗಳ ಅಂಕಿ ಅಂಶಗಳ ಆಧಾರದಲ್ಲಿ ಫಲಿತಾಂಶವನ್ನು ಇಡೀ ರಾಜ್ಯಕ್ಕೆ ಅನ್ವಯಿಸಬಹುದೇ?
25 ಕ್ಷೇತ್ರಗಳು ಎಂದರೆ ಒಟ್ಟು 224 ಕ್ಷೇತ್ರಗಳ ಪೈಕಿ ಶೇಕಡ 11ರಷ್ಟಾಗುತ್ತವೆ. ಶೇಕಡ 11ರಷ್ಟು ಮಾದರಿ, ಇಡೀ 224 ಕ್ಷೇತ್ರಗಳ ಪ್ರಾತಿನಿಧಿಕ ಅಂಕಿ ಅಂಶವನ್ನು ಪ್ರತಿಬಿಂಬಿಸುತ್ತವೆ ಎಂದು ಯಾವ ಅಂಕಿಸಂಖ್ಯೆಗಳ ತಜ್ಞರೂ ಹೇಳಬಹುದು.

ಚುನಾವಣಾ ಆಯೋಗದ ವೆಬ್‍ಸೈಟ್‍ನಿಂದ ಅಂಕಿ ಅಂಶಗಳನ್ನು ಪಡೆದಿರುವುದರಿಂದಲೂ ಸಮಸ್ಯೆ ಸೃಷ್ಟಿಯಾಗಬಹುದಲ್ಲವೇ?
ಮಾಹಿತಿ ಸಂಗ್ರಹ ಹಾಗೂ ಮಾಹಿತಿ ಕಲೆಹಾಕುವಲ್ಲಿ ನನಗೆ 40 ವರ್ಷಗಳ ಅನುಭವ ಇದೆ. ಯಾವ ವಿಧಾನದ ಮೂಲಕ ಮಾಹಿತಿಯನ್ನು ಪಡೆಯಬೇಕೋ ಆ ಎಲ್ಲ ಶಿಷ್ಟಾಚಾರಗಳನ್ನು ಪೂರೈಸಲಾಗಿದೆ. ನಾವು ಅನುಸರಿಸಿದ ವಿಧಾನಗಳು ಶ್ರಮಸಾಂದ್ರ ಹಾಗೂ ಶ್ರಮದಾಯಕ. ಹಲವು ಪ್ರಕರಣಗಳಲ್ಲಿ ವೈಯಕ್ತಿಕ ಪ್ರಕರಣಗಳನ್ನು ತಾಳೆ ಮಾಡುವುದೂ ಅಗತ್ಯ ಎನಿಸಿತ್ತು. ಕರ್ನಾಟಕದ ಚುನಾವಣಾಧಿಕಾರಿಗಳು ಫೆಬ್ರವರಿಯಲ್ಲಿ ತಮ್ಮ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ ಅಂಕಿ ಅಂಶಗಳು ಬಳಕೆ ಯೋಗ್ಯ ವಿಧಾನದಲ್ಲಿ ಇರಲಿಲ್ಲ. ಈ ಮಾಹಿತಿಗಳನ್ನು ಪಿಡಿಎಫ್ ವಿಧಾನದಿಂದ ವರ್ಡ್ ಮತ್ತು ಎಕ್ಸೆಲ್ ವಿಧಾನಕ್ಕೆ ಪರಿವರ್ತಿಸಲು ಅತ್ಯಾಧುನಿಕ ಕಂಪ್ಯೂಟರ್ ಪ್ರೋಗ್ರಾಮಿಂಗ್ ವಿಧಾನವನ್ನು ನಾವು ಅನುಸರಿಸಿದ್ದೇವೆ. ಈ ಅಂಕಿ ಅಂಶಗಳು ಕನ್ನಡದಲ್ಲಿದ್ದವು. ಪ್ರೋಗ್ರಾಮಿಂಗ್ ಮೂಲಕ ನಾವು ಇದನ್ನು ಓದಲು ಯೋಗ್ಯವಾದ ಇಂಗ್ಲಿಷ್ ವಿಧಾನಕ್ಕೆ ಬದಲಿಸಿದೆವು.

ನಿಮ್ಮ ಈ ವರದಿಯನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
ಸಹಜವಾಗಿಯೇ, ನಾನು ಇತರ ಎಲ್ಲ ವರ್ಗಗಳ ಬಿಟ್ಟುಹೋದ ಮತದಾರರ ಸಂಖ್ಯೆಯ ಸಾಮಾಜಿಕ ಗುರುತಿಸುವಿಕೆಯನ್ನು ತಿಳಿಯಲು ಬಯಸುತ್ತೇನೆ. ನನ್ನ ಮನಸ್ಸು ಹೇಳುವಂತೆ ಇದು ದುರ್ಬಲ ವರ್ಗಗಳಾದ ದಲಿತರ ಗುಂಪುಗಳಿರಬಹುದು. ಸಾಚಾರ್ ಸಮಿತಿಯ ವರದಿ ತೋರಿಸಿಕೊಟ್ಟಂತೆ ಮುಸ್ಲಿಂ ಸಮುದಾಯ ದುರ್ಬಲ ವರ್ಗವಾಗಿರುವ ಹಿನ್ನೆಲೆಯಲ್ಲಿ ಇದೇ ಆಧಾರದಲ್ಲಿ ಈ ಅಂದಾಜು ಮಾಡಲಾಗಿದೆ. ಈ ಸಮುದಾಯದ ಶೇಕಡ 20ರಷ್ಟು ವಯಸ್ಕರು ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಲ್ಲ. ಕರ್ನಾಟಕದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇಕಡ 13 ಆಗಿದೆ. ಈ ಶೇಕಡ 13ರ ಪೈಕಿ ಒಂದು ಪಾಲು 18 ವರ್ಷಕ್ಕಿಂತ ಕೆಳಗಿನವರು ಇರಬಹುದು. ಶೇಕಡ 20ರಷ್ಟು ಮುಸ್ಲಿಂ ವಯಸ್ಕರು ಮತದಾರರ ಪಟ್ಟಿಯಲ್ಲೂ ಸೇರಿಲ್ಲ ಎಂದಾದರೆ, ಅವರು ಮತದಾನದಿಂದ ದೂರ ಉಳಿಯುವ ಮಟ್ಟ ಕೂಡಾ ಪ್ರಜ್ಞಾಪೂರ್ವಕವಲ್ಲದಿದ್ದರೂ ಅತ್ಯಧಿಕ ಎನ್ನಬಹುದು.

ಅಂಕಿ ಅಂಶಗಳಿಂದ ತಿಳಿದುಬರುವಂತೆ, ಕೆಲ ಕ್ಷೇತ್ರಗಳ ಮುಸ್ಲಿಂ ಬಾಹುಳ್ಯದ ಪ್ರದೇಶಗಳೇ ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗಿವೆ. ಒಂದು ಉದಾಹರಣೆ ನೀಡುವುದಾದರೆ, ಬೆಂಗಳೂರಿನ ಒಂದು ಕೊಳಗೇರಿಯಲ್ಲಿ 23 ಸಾವಿರ ಏಕ ಮತ ಮುಸ್ಲಿಂ ಕುಟುಂಬಗಳಿವೆ. ಇದು ಆ ಪ್ರದೇಶದ ಒಟ್ಟು ಕುಟುಂಬಗಳ ಸಂಖ್ಯೆಯ ಶೇಕಡ 60ಕ್ಕಿಂತಲೂ ಅಧಿಕ.

ಮುಸ್ಲಿಮರ ಮತ್ತು ಇತರರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅಂಶವನ್ನು ಕರ್ನಾಟಕ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೀರಾ?
ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಿಂದ ಬಿಟ್ಟುಹೋಗಿರುವ ಅಂಶವನ್ನು ನಾವು ಕರ್ನಾಟಕದ ಅಲ್ಪಸಂಖ್ಯಾತರ ಆಯೋಗ ಮತ್ತು ಕರ್ನಾಟಕ ಸರ್ಕಾರದ ಕಾರ್ಯದರ್ಶಿಯವರ ಗಮನಕ್ಕೆ ತಂದಿದ್ದೇವೆ. ಇವರು ಚುನಾವಣಾ ಆಯೋಗದ ಜತೆಗೆ ಮಾತುಕತೆ ನಡೆಸುತ್ತಾರೆ. ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಹಾಗೂ ಭಾರತದ ಚುನಾವಣಾ ಆಯೋಗಕ್ಕೂ ಪತ್ರ ಬರೆಯುವ ಮೂಲಕ ಅವರ ಗಮನಕ್ಕೂ ಇದನ್ನು ತಂದಿದ್ದೇವೆ. 1.3 ಕೋಟಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎನ್ನಲಾದ ಸಮೂಹ ನೋಂದಣಿ ಕಾರ್ಯಕ್ರಮದಲ್ಲೂ, ಪ್ರತಿಯೊಬ್ಬರನ್ನು ಸೇರಿಸುವುದು ಸಾಧ್ಯವಾಗಿಲ್ಲ. ಯಾವ ಧರ್ಮ ಅಥವಾ ಜಾತಿಗೆ ಸೇರಿದವರು ಎಂಬ ಅಂಶದ ಹೊರತಾಗಿಯೂ ವಯಸ್ಕರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು ಗಂಭೀರ ವಿಷಯ. ಅದರಲ್ಲೂ ಮುಖ್ಯವಾಗಿ ದುರ್ಬಲ ವರ್ಗದ ಗುಂಪುಗಳ ವಿಚಾರದಲ್ಲಂತೂ ಇದು ಮತ್ತೂ ಗಂಭೀರ. ಏಕೆಂದರೆ, ಈ ಗುಂಪುಗಳು ಪ್ರಜಾಪ್ರಭುತ್ವ ಪ್ರಕ್ರಿಯೆ ಮೂಲಕ ತಮ್ಮ ಬದುಕು ಬದಲಾಗುತ್ತದೆ ಹಾಗೂ ಸಾಮಾಜಿಕ ಚಿತ್ರಣ ಬದಲಾಗುತ್ತದೆ ಹಾಗೂ ತಮ್ಮ ಸಬಲೀಕರಣವಾಗುತ್ತದೆ ಎಂದು ಈ ವರ್ಗ ನಂಬುತ್ತದೆ.

ಒಂದು ಕುಟುಂಬದಲ್ಲಿ ಒಬ್ಬನನ್ನು ಮಾತ್ರ ಮತದಾರ ಎಂದು ಸೇರಿಸುವುದಕ್ಕೆ ಕಾರಣ ಏನಿರಬಹುದು?
ಇದು ಒಂದು ಬಗೆಯ ಬೇಡಿಕೆ- ಪೂರೈಕೆಯಂತಹ ಸಮಸ್ಯೆ. ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ, ತಾವು ಮತ ಹಾಕಿದರೂ ಅಷ್ಟೇ, ಬಿಟ್ಟರೂ ಅಷ್ಟೇ ಎಂಬ ಭಾವನೆ ಮುಸ್ಲಿಮರಲ್ಲಿ ಬಲವಾಗುತ್ತಿದೆ. ಉದಾಹರಣೆಗೆ, ಭಾರತೀಯ ಜನತಾ ಪಕ್ಷ ಇತ್ತೀಚಿನ ಹಲವು ಚುನಾವಣೆಗಳಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನೂ ಕಣಕ್ಕೆ ಇಳಿಸಿಲ್ಲ. ಮುಸ್ಲಿಂ ಮತಗಳು ನಮಗೆ ಬೇಕಿಲ್ಲ ಎಂದೂ ಅದು ಹೇಳುತ್ತಿದೆ. ಇಂತಹ ಭಾಷಣಗಳು, ಮುಸ್ಲಿಮರು ತಾವಾಗಿಯೇ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವುದರಿಂದ ಅವರನ್ನು ವಿಮುಖರನ್ನಾಗಿಸುತ್ತದೆ. ಇದು ದುರ್ಬಲ ವರ್ಗದವರ ಮನೋಸ್ಥಿತಿ ಕೂಡಾ ಹೌದು.

ಎರಡನೆಯದಾಗಿ, ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಹೊಣೆ ಹೊತ್ತ ವ್ಯಕ್ತಿಗಳು ಅಡ್ಡರಸ್ತೆಗಳಿಗಷ್ಟೇ ಹೋಗಿ, ಮನೆಗಳನ್ನು ತೋರಿಸಿ, ಮನೆಯ ಮಾಲಕ ಯಾರು ಎಂದು ಕೇಳುತ್ತಾರೆ. ಸಾಮಾನ್ಯವಾಗಿ ಆ ಕುಟುಂಬದ ಮುಖ್ಯಸ್ಥರ ಹೆಸರನ್ನು ಗುರುತು ಹಾಕಿಕೊಂಡು, ಕುಟುಂಬದ ಇತರ ಸದಸ್ಯರ ಹೆಸರು ಬಿಟ್ಟುಬಿಡುತ್ತಾರೆ. ಮನೆ ಮನೆ ಸಮೀಕ್ಷೆಗಳನ್ನು ಅವರು ನಡೆಸುವುದಿಲ್ಲ. ಸಾಮಾನ್ಯವಾಗಿ ನೋಂದಣಿ ಅಧಿಕಾರಿಗೆ ಮಾರ್ಗದರ್ಶನ ಮಾಡುವವರು ಪ್ರಬಲ ಸಾಮಾಜಿಕ ಗುಂಪಿನ ವ್ಯಕ್ತಿಯಾಗಿರುತ್ತಾನೆ.

ಮೂರನೆಯದಾಗಿ ಮುಸ್ಲಿಮರ ವಿರುದ್ಧದ ವ್ಯವಸ್ಥಿತ ಪಕ್ಷಪಾತ ಧೋರಣೆಯೂ ಕಾರಣವಾಗಿರಬಹುದು. ಈ ಪಕ್ಷಪಾತ ಎಷ್ಟು ಪ್ರಬಲ ಎಂದರೆ, ಒಂದು ಕ್ಷೇತ್ರದ ಇಡೀ ಪ್ರದೇಶವನ್ನೇ ಕೈಬಿಡುವಷ್ಟರ ಮಟ್ಟಿಗೂ ಇರುತ್ತದೆ.

ಸಮಸ್ಯೆಯ ಬೇಡಿಕೆ ಬದಿಯಿಂದ ನೋಡಿದರೆ, ಇಡೀ ವ್ಯವಸ್ಥೆಯೇ ಅವರನ್ನು ಮತದಾನ ಮಾಡಲು ಉತ್ತೇಜಿಸುವಂತೆ ಇರುವುದಿಲ್ಲ. ಕೆಲ ಸಾಮಾಜಿಕ ಗುಂಪುಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಬಾರದಂತೆ ಕೆಲ ರಾಜಕಾರಣಿಗಳು ದಮನಿಸುತ್ತಾರೆ. ಆದರೆ ಇದೇ ರಾಜಕಾರಣಿಗಳು ತಮ್ಮ ಸಮುದಾಯದ ಜನರನ್ನು ಮತಪಟ್ಟಿಯಲ್ಲಿ ಸೇರಿಸಲು ಉತ್ತೇಜಿಸುತ್ತಾರೆ ಹಾಗೂ ಮತ ಹಾಕುವಂತೆ ಪ್ರೇರಣೆ ನೀಡುತ್ತಾರೆ. ದುರದೃಷ್ಟವೆಂದರೆ, ಈ ಮತದಾನ ವ್ಯವಸ್ಥೆಯ ಇಂಥ ರೂಪಾಂತರವನ್ನು ತಡೆಯುವ ನಿಟ್ಟಿ ನಲ್ಲಿ ಚುನಾವಣಾ ಆಯೋಗ ಸಕ್ರಿಯ ಹೆಜ್ಜೆ ಇಟ್ಟಿಲ್ಲ.

ಕೃಪೆ:vbnewsonline

Read These Next

ಫೆಂಗಲ್ ಪ್ರಭಾವ: ರಾಜ್ಯದ ವಿವಿಧೆಡೆ ವ್ಯಾಪಕ ಮಳೆ; ಇನ್ನೆರಡು ದಿನ ಮಳೆ ಮುಂದುವರಿಯುವ ಸಾಧ್ಯತೆ

ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಮುಂದಿನ ಎರಡು ದಿನ ಕಾಲ ನಿರಂತರ ಮಳೆ ...

ಸಿಎಂ ಸಿದ್ದರಾಮಯ್ಯರಿಂದ ಪ್ರಧಾನಿ ಮೋದಿ ಭೇಟಿ; ನೀರಾವರಿ ಯೋಜನೆಗಳಿಗೆ ನೆರವು ಕೋರಿ ಮನವಿ; ನಬಾರ್ಡ್ ಸಾಲದ ಪ್ರಮಾಣ ಕಡಿತಕ್ಕೆ ಆಕ್ಷೇಪ

ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಭದ್ರಾ ಮೇಲ್ದಂಡೆ, ಮಹಾದಾಯಿ, ಮೇಕೆದಾಟು ನೀರಾವರಿ ...

ರಾಜ್ಯದ ಮೂರೂ ಕ್ಷೇತ್ರಗಳು ಕೈವಶ; ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಎನ್‌ಡಿಎ

ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ...

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಕೈಗೆ ರಕ್ತದ ಕಲೆಯೂ ಆಗಿಲ್ಲ, ಕತ್ತಿ ರಕ್ತದಿಂದ ತೊಯ್ದೂ ಇಲ್ಲ… ಈ ಅಪಾಯಕಾರಿ ರಾಜಕಾರಣದ ಕುತಂತ್ರವನ್ನು ಅರಿತು ಮತದಾರರು ಮತ ಚಲಾಯಿಸಬೇಕು..

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಅವರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ...

ವಿವೇಕಾನಂದರ ಹಿಂದೂ ಧರ್ಮಕ್ಕೂ, ಗೋಡ್ಸೆ ಹಿಂದೂ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ -ಡಾ.ರಾಮ್ ಪುನಿಯಾನಿ

ಓದು, ತಲೆ ಬುಡ ಯಾವುದೂ ಇಲ್ಲದೇ ಅಂಗಡಿ ಮುಂಗಟ್ಟಿನಲ್ಲಿ ನಿಂತು ಇತರರನ್ನು ಹೀಯಾಳಿಸಿ ಸುಖ ಪಡುವ, ಕನಸುಗಳಲ್ಲಿಯೇ ತೇಲಾಡಿ ...

ಭಟ್ಕಳ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ ಮುರುಡೇಶ್ವರ ದಲ್ಲಿ ಅದ್ದೂರಿ ಸ್ವಾಗತ

20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ  ವಿವಿಧ ಸಂಘಟನೆ ಹಾಗೂ ...