ಅರಣ್ಯ ಭೂಮಿ ಖಾಸಗಿಯವರಿಗೆ ನೀಡಲು ಮುಂದಾಗಿರುವುದು ಅಕ್ಷಮ್ಯ ಅಪರಾಧ : ಸಿಎಂ ಬಿಎಸ್‌ವೈಗೆ ಸಿದ್ದರಾಮಯ್ಯ ಪತ್ರ

Source: VB News | Published on 23rd November 2020, 12:18 AM | State News |

 

ಬೆಂಗಳೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ರೈತರ ಕೃಷಿ ಭೂಮಿಯನ್ನು ಖಾಸಗಿಯವರಿಗೆ ನೀಡಿ ಉಳ್ಳವನೇ ಹೊಲದೊಡೆಯ ಆಗಲು ಸರಕಾರ ಒಪ್ಪಿಗೆ ಕೊಟ್ಟಿದ್ದಾಯಿತು. ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ರೈತರು ಬೆಳೆದ ಬೆಳೆಯನ್ನೂ ಖಾಸಗಿಯವರ ಪಾದಕ್ಕೆ ಅರ್ಪಿಸಿದ್ದಾಯಿತು. ಈಗ ಅರಣ್ಯ ಪ್ರದೇಶವನ್ನೂ ಖಾಸಗಿಯವರಿಗೆ ನೀಡಲು ಸರಕಾರ ಮುಂದಾಗುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ಕಚ್ಚಾ ವಸ್ತು ಪೂರೈಸಲು ನೀಡಲಾಗಿದ್ದ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಈಗ ಏಕಾಏಕಿ ಖಾಸಗಿಯವರಿಗೆ ಒಪ್ಪಿಸಲು ಸರಕಾರ ಮುಂದಾಗಿರುವುದರ ವಿರುದ್ಧ ಮಲೆನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.
ಅರಣ್ಯದಲ್ಲಿ ಒಂದು ಮರ ಕಡಿದರೆ ಅರಣ್ಯ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ಶಿಕ್ಷಿಸಲಾಗುತ್ತದೆ. ಹೀಗಿರುವಾಗ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಖಾಸಗಿಯವರಿಗೆ ಒಪ್ಪಿಸುವುದು ಬಹಳ ದೊಡ್ಡ ಅಪರಾಧವಾಗುತ್ತದೆ. ಜತೆಗೆ ಈ ಕ್ರಮದಿಂದ ಇಡಿ ಮಲೆನಾಡನ್ನು ಕೆಲವೇ ವರ್ಷಗಳಲ್ಲಿ ಬಯಲುಸೀಮೆ ಮಾಡಿದಂತಾಗುತ್ತದೆ. ಹೀಗಾಗಿ ಸರಕಾರ ಪಾರದರ್ಶಕವಾಗಿ ವರ್ತಿಸಬೇಕು. ಎಂಪಿಎಂ ವಿಚಾರದಲ್ಲಿ, ಮಲೆನಾಡಿಗರ ಬದುಕಿನ ವಿಚಾರದಲ್ಲಿ ಹುಡುಗಾಟ ಆಡಬಾರದು.

ಈ ಕೂಡಲೇ 1980ರಲ್ಲಿ ವಿಧಿಸಲಾಗಿದ್ದ ಷರತ್ತಿನ ಪ್ರಕಾರ ಲೀಸ್‍ಗೆ ನೀಡಲಾಗಿದ್ದ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ವಾಪಾಸ್ ಅರಣ್ಯ ಇಲಾಖೆ ಸುಪರ್ದಿಗೆ ಪಡೆದುಕೊಳ್ಳಬೇಕು. ಎಂಪಿಎಂ ಕಾರ್ಖಾನೆಯ ನೌಕರರಿಗೆ ಸರಕಾರ ತನ್ನ ಬೊಕ್ಕಸದಿಂದಲೇ ಪರಿಹಾರ, ಸಂಬಳ ನೀಡಬೇಕು. ಅರಣ್ಯ ಮಾರಾಟ ಮಾಡಿ ಸಂಬಳ ಕೊಡುವಂತಹ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸಬಾರದು. ಹಾಗೇನಾದರೂ ಆದರೆ ರಾಜ್ಯದ ಮರ್ಯಾದೆ ರಾಷ್ಟ್ರ-ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಬೇಕಾಗುತ್ತದೆ. 50 ಸಾವಿರ ಎಕರೆ ಅರಣ್ಯವೆಂದರೆ ಅದಕ್ಕೆ ಬೆಲೆ ಕಟ್ಟಲಾಗದು. ಆದುದರಿಂದ ಅರಣ್ಯ ಇಲಾಖೆಗೆ ಈ ಪ್ರದೇಶದಲ್ಲಿ ನೈಸರ್ಗಿಕ ಅರಣ್ಯ ಬೆಳೆಯಲು ಅವಕಾಶ ಮಾಡಿಕೊಡಬೇಕು. ಈ ಮೂಲಕ ಪಶ್ಚಿಮಘಟ್ಟ ಹಾಗೂ ಮಲೆನಾಡಿದ ಪರಿಸರವನ್ನು ಪುನರುಜ್ಜೀವನಗೊಳಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮಲೆನಾಡಿನ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ನೀಡಲು ಸರಕಾರ ಹುನ್ನಾರ ನಡೆಸುತ್ತಿರುವುದರ ವಿರುದ್ಧ ಈಗಾಗಲೇ ಮಲೆನಾಡಿನ ಜಿಲ್ಲೆಗಳಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಹೋರಾಟ ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಪರರು, ಪರಿಸರ ಹೋರಾಟಗಾರರು, ಜನರು ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಸರಕಾರಕ್ಕೂ ಮನವಿ ಪತ್ರ ಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಹೋರಾಟಗಾರರ ಒಕ್ಕೂಟದ ಜತೆ ಈ ಬಗ್ಗೆ ನಾನೂ ಚರ್ಚಿಸಿದ್ದೇನೆ. ಸರಕಾರ ಪಾರದರ್ಶಕವಾಗಿ ವರ್ತಿಸದೆ ಗುಟ್ಟು ಗುಟ್ಟಾಗಿ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಖಾಸಗಿಯವರಿಗೆ ನೀಡಿ, ಈಗಾಗಲೇ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿರುವ ಮಲೆನಾಡಿನ ಜನಜೀವನ ಮತ್ತು ಭವಿಷ್ಯದ ಜತೆಗೆ ಸರಕಾರ ಹುಡುಗಾಟ ಆಡುತ್ತಿದೆ.

1980ರಲ್ಲಿ ಭದ್ರಾವತಿಯ ಮೈಸೂರು ಪೇಪರ್ ಮಿಲ್ (ಎಂಪಿಎಂ) ಕಾರ್ಖಾನೆಗೆ 40 ವರ್ಷಗಳ ಸೀಮಿತ ಅವಧಿಗೆಂದು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿದ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಲೀಸ್ ನೀಡಲಾಗಿತ್ತು. ಈ ಲೀಸ್ ಅವಧಿ ಮುಗಿದ ಕೂಡಲೇ ಈ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಇದೇ 2020ರ ಆಗಸ್ಟ್‍ನಲ್ಲಿ ಲೀಸ್ ಅವಧಿ ಮುಗಿದಿದೆ. ಜತೆಗೆ ಎಂಪಿಎಂ ಕಾರ್ಖಾನೆ ಕೆಲಸ ನಿಲ್ಲಿಸಿ ವರ್ಷವೇ ಕಳೆದಿದೆ. ಹೀಗಾಗಿ ನಿಯಮಾನುಸಾರ ಹಾಗೂ ಲೀಸ್ ನೀಡುವ ವೇಳೆಯಲ್ಲಿ ವಿಧಿಸಿದ್ದ ಷರತ್ತಿನ ಪ್ರಕಾರ 20 ಸಾವಿರ ಹೆಕ್ಟೇರ್ ಪ್ರದೇಶ ಈ ಕ್ಷಣವೇ ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು. ಹಾಗಾಗುವುದರ ಬದಲು ಖಾಸಗಿಯವರಿಗೆ ಈ ಪ್ರದೇಶವನ್ನು ನೀಡಿ ಮಲೆನಾಡಿನ ಬದುಕನ್ನು ಇನ್ನಷ್ಟು ನರಕ ಮಾಡಲು ಯೋಜಿಸಿರುವಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ

​​​

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...