ಶಿವಮೊಗ್ಗ:ಇಂದಿನಿಂದ ದೇಶಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯಾರಂಭ : ಕೆ.ಎ.ದಯಾನಂದ್

Source: so news | By MV Bhatkal | Published on 15th June 2019, 10:10 PM | State News | Don't Miss |

ಶಿವಮೊಗ್ಗ: ಜಿಲ್ಲೆಯಲ್ಲಿ ಬರುವ ಪ್ರತಿ ಮನೆ, ಕಟ್ಟಡಗಳಲ್ಲಿ ನಡೆಯುವ ಉದ್ಯಮದ ಅಥವಾ ವ್ಯಾಪಾರ ಘಟಕದ ಎಣಿಕೆ ಮಾಡುವ ಹಾಗೂ ಯಾವುದೇ ಘಟಕದಲ್ಲಿ ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವಂತಹ ಉದ್ಯಮಗಳ ಪಟ್ಟಿಯನ್ನು ಸಿದ್ಧಪಡಿಸುವ ಉದ್ಧೇಶದಿಂದ ಇಂದಿನಿಂದ ದೇಶಾದ್ಯಂತ 7ನೇ ಆರ್ಥಿಕ ಗಣತಿ ಕಾರ್ಯ ಆರಂಭಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಗಣತಿಕಾರ್ಯಕ್ಕೆ ಶೀಘ್ರದಲ್ಲಿ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 7ನೇ ಆರ್ಥಿಕ ಗಣತಿ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಪಟ್ಟಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ನಿರ್ದಿಷ್ಟ ಕಟ್ಟಡ ಹೊಂದಿದ್ದು, ವ್ಯವಹಾರ ಮಾಡುವ ಉದ್ದಿಮೆಗಳಲ್ಲದೆ ನಿರ್ದಿಷ್ಟ ಕಟ್ಟಡವಿಲ್ಲದೆ ಸಂತೆ, ಬೀದಿ ಬದಿಯ ವ್ಯಾಪಾರ, ಮನೆಯಲ್ಲಿಯೇ ಕುಳಿತು ನಿರ್ವಹಿಸುವ ಟೈಲರಿಂಗ್ ಮತ್ತು ವಿವಿಧ ಸ್ವ-ಉದ್ಯೋಗಗಳು, ಸಣ್ಣ ಪ್ರಮಾಣದ ಹೈನುಗಾರಿಕೆ ಇತ್ಯಾದಿ ಆರ್ಥಿಕ ಚಟುವಟಿಕೆ ನಡೆಸುವ ಉದ್ಯಮಗಳನ್ನು ಅದರ ಮಾಲೀಕರ ಮನೆಯಲ್ಲಿ ಎಣಿಕೆ ಮಾಡಲಾಗುತ್ತದೆ. ಉದ್ದಿಮೆ ಮಾಲೀಕರ ಲಿಂಗವಾರು, ಸಾಮಾಜಿಕ, ಸಾಮಾಜಿಕ ಗುಂಪುವಾರು ಮಾಹಿತಿಗಳು, ಗಂಡು, ಹೆಣ್ಣು ಕೆಲಸಗಾರರು ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸಗಾರರು, ಉದ್ದಿಮೆಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಗಳನ್ನು ಸಹ ಈ ಗಣತಿಯಲ್ಲಿ ಸಂಗ್ರಹಿಸಲಾಗುವುದು. ಈ ಆರ್ಥಿಕ ಗಣತಿಯಲ್ಲಿ ಲಭ್ಯವಾಗುವ ಮಾಹಿತಿಗಳು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಯೋಜನೆ ಸಿದ್ಧಪಡಿಸಲು ಸರ್ಕಾರಕ್ಕೆ ಮೂಲ ಅಂಕಿ ಅಂಶಗಳಾಗಿರುತ್ತದೆ ಎಂದವರು ನುಡಿದರು.
ಇದರಿಂದಾಗಿ ದೇಶದಾದ್ಯಂತ ರಾಜ್ಯ, ಜಿಲ್ಲೆ, ತಾಲೂಕು ಗ್ರಾಮ ಅಥವಾ ವಾರ್ಡ್ ಮಟ್ಟದಲ್ಲಿ ಆರ್ಥಿಕ ಗಣತಿಯ ದಿನದಂದು ಅಸ್ತಿತ್ವದಲ್ಲಿರುವ ಎಲ್ಲಾ ಉದ್ಯಮಗಳ ಮಾಹಿತಿಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಪ್ರತ್ಯೇಕವಾಗಿ ದೊರೆಯಲಿವೆ. ಈ ಮಾಹಿತಿಯನ್ನು ಅವುಗಳ ಕಾರ್ಯಾಚರಣೆ ಮತ್ತು ಇತರೆ ಮುಖ್ಯಾಂಶಗಳ ಆಧಾರದ ಮೇಲೆ ಒದಗಿಸಿ, ಅವುಗಳಿಂದ ದೇಶದ ಆರ್ಥಿಕತೆ ರಚನೆ ಬಗ್ಗೆ ಸಮಗ್ರ ವಿಶ್ಲೇóಷಣೆ ಮಾಡಲು ಮತ್ತು ಮಾನದಂಡ ನಿಗಧಿಪಡಿಸುವ ಉದ್ದೇಶಕ್ಕಾಗಿ ಬಳಕೆಯಾಗಲಿದೆ ಎಂದವರು ನುಡಿದರು.
ದೇಶದಲ್ಲಿ ಈವರೆಗೆ 6 ಆರ್ಥಿಕ ಗಣತಿಗಳು ನಡೆದಿದ್ದು, 1977ರಲ್ಲಿ ಮೊದಲ ಆರ್ಥಿಕ ಗಣತಿ, ಆ ಬಳಿಕ 1980, 1990, 1998, 2005, 2013ರ ನಂತರದಲ್ಲಿ ಈ ಗಣತಿಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ 6ನೇ ಆರ್ಥಿಕ ಗಣತಿಯಲ್ಲಿ 1,02,392ಉದ್ಯಮಗಳನ್ನು ಗುರುತಿಸಿದ್ದು, ಈ ಉದ್ಯಮಗಳಲ್ಲಿ ಒಟ್ಟು 2,76,859ಕೆಲಸಗಾರರನ್ನು ಗುರುತಿಸಲಾಗಿದೆ. ಇದು 5ನೇ ಆರ್ಥಿಕ ಗಣತಿಯಲ್ಲಿ ಗುರುತಿಸಿದ 78,381ಉದ್ಯಮಗಳಿಗಿಂತ ಶೇ.30ರಷ್ಟು ಉದ್ಯಮಗಳು ಹೆಚ್ಚಾಗಿರುವುದನ್ನು ಗುರುತಿಸಲಾಗಿತ್ತು.
ಆರ್ಥಿಕ ಗಣತಿಯನ್ನು ಸುಗಮವಾಗಿ ಅನುಷ್ಠಾನದ ಉಸ್ತುವಾರಿಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಸಂಬಂಧಿಸಿದ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಸರ್ಕಾರವು ರಚಿಸಿ ಆದೇಶ ಹೊರಡಿಸಿದೆ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಸರಕಾರವೇ ರಚಿಸಿ ಆದೇಶ ಹೊರಡಿಸಿದೆ. ತಾಲೂಕು ಮಟ್ಟದಲ್ಲಿ ಇದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಗಣತಿಕಾರ್ಯದ ವ್ಯವಸ್ಥಿತ ನಿರ್ವಹಣೆಗೆ ಸೂಚಿಸಲಾಗಿದೆ ಎಂದರು.
7ನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯವನ್ನು ಇದೇ ಪ್ರಥಮ ಬಾರಿಗೆ ಮೊಬೈಲ್ ಆಪ್ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿದೆ. ಗಣತಿ ಕಾರ್ಯ ಮತ್ತು ಮೊದಲನೆ ಹಂತದ ಮೇಲ್ವಿಚಾರಣೆಯನ್ನು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಕೈಗೊಳ್ಳಲಾಗುತ್ತದೆ.2011ರ ಗಣತಿ ಬ್ಲಾಕುಗಳು ಮತ್ತು ನಕ್ಷೆಗಳನ್ನು ಜನಗಣತಿ ನಿರ್ದೇಶನಾಲಯದಿಂದ ಸಿಎಸ್‍ಸಿಗಳಿಗೆ ಒದಗಿಸಲಾಗುತ್ತದೆ. ನೋಂದಾಯಿತ ಗಣತಿದಾರರಿಗೆ ಹಂಚಿಕೆಯಾಗುವ ಗಣತಿ ಬ್ಲಾಕುಗಳ ವಿವರಗಳು ಮೊಬೈಲ್ ಆಪ್‍ನಲ್ಲಿಯೇ ಲಭ್ಯವಾಗುವ ವ್ಯವಸ್ಥೆಗೊಳಿಸಲಾಗಿದೆ.
ಈಗಾಗಲೇ ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳಿಗೆ, ಸಾಮಾನ್ಯ ಸೇವಾ ಕೇಂದ್ರಗಳ ವ್ಯವಸ್ಥಾಪಕರುಗಳಿಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳಿಗೂ ತರಬೇತಿಯನ್ನು ಶೀಘ್ರದಲ್ಲಿಯೇ ನೀಡಲಾಗುವುದು. ಎರಡನೇ ಹಂತದ ಮೇಲ್ವಿಚಾರಣೆಯನ್ನು ಸಾಂಖ್ಯಿಕ ಅಧಿಕಾರಿ, ಸಿಬ್ಬಂಧಿಗಳು, ಎನ್.ಎಸ್.ಎಸ್.ಓ ಅಧಿಕಾರಿ, ಸಿಬ್ಬಂಧಿಗಳು ನಿರ್ವಹಿಸುವರು. ಉದ್ಯಮಗಳ ಗುರುತಿಸುವಿಕೆ, ಪರಿಶೀಲನೆಗೆ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಸಹಕಾರ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ, ಕಾರ್ಮಿಕ ಇಲಾಖೆ, ಸಹಕಾರ ಸಂಘಗಳ ನೋಂದಾವಣೆ ಇಲಾಖೆ, ಸ್ಥಳೀಯ ಸಂಸ್ಥೆಗಳು ತಮ್ಮಲ್ಲಿ ನೋಂದಾಯಿತ ಯಾವುದೇ ಉದ್ಯಮ ಗಣತಿಯಿಂದ ಬಿಟ್ಟು ಹೋಗದಂತೆ ಪರಿಶೀಲಿಸಬೇಕಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗಣತಿದಾರರಿಗೆ ಸಹಕರಿಸಬೇಕಾಗಿದೆ. ಜಿಲ್ಲಾ ಮಟ್ಟದ ತರಬೇತಿ ಮತ್ತು ಕ್ಷೇತ್ರ ಸಮೀಕ್ಷಾ ಕಾರ್ಯವನ್ನು ಕೂಡಲೇ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. 
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಉಪವಿಭಾಗಾಧಿಕಾರಿಗಳಾದ ಟಿ.ವಿ.ಪ್ರಕಾಶ್, ದರ್ಶನ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಶ್ರೀಮತಿ ಬ್ರಿಜೆಟ್ ವರ್ಗೀಸ್, ಸಿ.ಎಸ್.ಸಿ. ಜಿಲ್ಲಾ ವ್ಯವಸ್ಥಾಪಕ ಕಿರಣ್ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...