ಮುಂಬೈ ರೈಲು ಸ್ಥಗಿತಗೊಂಡು ಏಳು ತಿಂಗಳು. ಮುಂಬೈ-ಮಂಗಳೂರಿಗೆ ವಿಶೇಷ ರೈಲು ಓಡಿಸುವಂತೆ ರೈಲ್ವೆ ಬಳಕೆದಾರರ ಬೇಡಿಕೆ

Source: SO News | By Laxmi Tanaya | Published on 13th October 2020, 3:04 PM | Coastal News | Don't Miss |

ಮಂಗಳೂರು  : ಮಂಗಳೂರಿನಿಂದ ಮುಂಬಯಿಗೆ ರೈಲು ಸಂಚಾರ ಸ್ಥಗಿತಗೊಂಡು 7 ತಿಂಗಳು ಸಮೀಪಿಸುತ್ತಿದ್ದು, ಕರಾವಳಿ ಕರ್ನಾಟಕದ  ಪ್ರಮುಖ ಸಂಚಾರ ವ್ಯವಸ್ಥೆ ಸ್ತಬ್ಧಗೊಂಡಿದೆ.

ರೈಲ್ವೇ ಮಂಡಳಿ ದೇಶದ ವಿವಿಧ ಭಾಗಗಳಲ್ಲಿ ಆರಂಭಿಸಲುದ್ದೇಶಿಸಿರುವ 200 ವಿಶೇಷ ರೈಲುಗಳಲ್ಲಿ ಮಂಗಳೂರು-ಮುಂಬಯಿ ಮಾರ್ಗವನ್ನು ಸೇರಿಸಿ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಈ ವಿಚಾರವಾಗಿ ಸೆಂಟ್ರಲ್‌ ರೈಲ್ವೇ ವಲಯ ಕೂಡ ರೈಲ್ವೇ ಮಂಡಳಿಗೆ ಪ್ರಸ್ತಾವನೆ ಕಳುಹಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌ – ಮುಂಬಯಿ ಲೋಕಮಾನ್ಯ ತಿಲಕ್‌ ಮತ್ಸ್ಯಗಂಧ ಎಕ್ಸ್‌ ಪ್ರೆಸ್‌ ಹಾಗೂ ಮಂಗಳೂರು ಜಂಕ್ಷನ್‌- ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್ ರೈಲು ಮಾ. 21ರಿಂದ ಸ್ಥಗಿತಗೊಂಡಿದೆ. ಪ್ರಸ್ತುತ ಮಂಗಳೂರು ಜಂಕ್ಷನ್‌ ನಿಲ್ದಾಣದ ಮೂಲಕ ತಿರುವನಂತಪುರ-ಕುರ್ಲಾ ವಿಶೇಷ ರೈಲು (ರೈಲು ನಂ. 06345/346) ಹಾದು ಹೋಗುತ್ತಿದೆ. ಕರಾವಳಿ ಕರ್ನಾಟಕದ ಜನರು ಈ ರೈಲು ಸೇವೆಯನ್ನು ಅವಲಂಬಿಸಬೇಕಾಗಿದೆ.

ಹಬ್ಬಗಳ ಹಿನ್ನೆಲೆಯಲ್ಲಿ ಅ. 15ರಿಂದ ನವೆಂಬರ್‌ 30ರ ವರೆಗೆ ದೇಶದೆಲ್ಲೆಡೆ 200 ವಿಶೇಷ ರೈಲುಗಳನ್ನು ಓಡಿಸಲು ಮಂಡಳಿ ನಿರ್ಧರಿಸಿದೆ. ಪ್ರಥಮ ಹಂತವಾಗಿ 39 ವಿಶೇಷ ರೈಲುಗಳಿಗೆ ಅನುಮತಿಸಲಾಗಿದ್ದು, ಇದರಲ್ಲಿ ಕರ್ನಾಟಕ ಭಾಗದಿಂದ ಯಶವಂತಪುರದಿಂದ ಕಾಮಕ್ಯ, ಬಾರ್ಮಾರ್‌, ಹೌರಾ ಹಾಗೂ ಬೆಂಗಳೂರು -ಚೆನ್ನೈ ಸೇರಿದಂತೆ 5 ರೈಲುಗಳಿವೆ.

ಪ್ರಸ್ತುತ ಮಂಗಳೂರು ಸೆಂಟ್ರಲ್‌ನಿಂದ ಚೆನ್ನೈ ಎಕ್ಸ್‌ ಪ್ರೆಸ್‌ ಮಾತ್ರ ಸಂಚರಿಸುತ್ತಿದೆ. ಬೆಂಗಳೂರು ವಿಶೇಷ ರೈಲನ್ನು ಪ್ರಯಾಣಿಕರ ಕೊರತೆ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದೆ. ಕೊರೊನಾ ಪೂರ್ವದಲ್ಲಿ ಮಂಗಳೂರು ಜಂಕ್ಷನ್‌ನಿಂದ ಸಂಚರಿಸುತ್ತಿದ್ದ ಮಂಗಳೂರು ಜಂಕ್ಷನ್‌-ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್ ರೈಲನ್ನು ರೈಲು ಸಂಚಾರ ಸಾಮಾನ್ಯಸ್ಥಿತಿಗೆ ಬರುವವರೆಗೆ ವಿಶೇಷ ರೈಲು ಆಗಿ ಓಡಿಸಬಹುದಾಗಿದೆ ಎಂಬ ಬೇಡಿಕೆಯನ್ನು ಕರಾವಳಿ ಕರ್ನಾಟಕದ ರೈಲ್ವೇ ಬಳಕೆದಾರರು ಮಂಡಿಸಿದ್ದಾರೆ.

 ಕೊಂಕಣ ಮಾರ್ಗದ ವ್ಯಾಪ್ತಿಯನ್ನು ಹೊಂದಿರುವ ಕೇಂದ್ರ ರೈಲ್ವೇ ಕೂಡ ಹಬ್ಬಗಳ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮುಂಬಯಿಗೆ ಕೋವಿಡ್‌-19 ವಿಶೇಷ ರೈಲು ಸಂಚಾರದ ಪ್ರಸ್ತಾವನೆಯನ್ನು ರೈಲ್ವೇ ಮಂಡಳಿಯ ಮುಂದಿರಿಸಿದೆ.

ಕೊರೊನಾ ಕಾರಣದಿಂದಾಗಿ ಉದ್ಯೋಗ, ವಾಣಿಜ್ಯ ಚಟುವಟಿಕೆಗಳನ್ನು ತೊರೆದು ಊರಿಗೆ ಬಂದಿದ್ದವರು ಮರಳಿ ಮುಂಬಯಿಯತ್ತ ತೆರಳಲು ಆರಂಭಿಸಿದ್ದಾರೆ. ಅದುದರಿಂದ ವಿಶೇಷ ರೈಲು ಸಂಚಾರ ಅತೀ ಅವಶ್ಯವಾಗಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...