ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

Source: S.O. News Service | By I.G. Bhatkali | Published on 21st April 2019, 12:27 AM | Coastal News | State News |

ಭಟ್ಕಳ: ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ಹಿಂದುಳಿದವರು, ದಲಿತರು, ಆದಿವಾಸಿಗಳನ್ನು ಸಂಪೂರ್ಣವಾಗಿ ತುಳಿದು ಸಮಾಜದ ಒಂದು ವರ್ಗಕ್ಕಷ್ಟೇ ಅಧಿಕಾರವನ್ನು ನೀಡುವ ಸಂಚು ರೂಪಿಸಿಕೊಂಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಶನಿವಾರ ಸಂಜೆ ಭಟ್ಕಳ ನಾಮಧಾರಿ ಸಮುದಾಯ ಭವನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಿಂದುಳಿದವರ ಮೇಲೆ ಹಲ್ಲೆ, ಕೊಲೆ ಯತ್ನದ ಕೇಸುಗಳು ದಾಖಲಾಗುತ್ತಿವೆ. ಇದರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಇದು ಖೇದಕರ ಸಂಗತಿಯಾಗಿದೆ ಎಂದರು.

ಪ್ರಸಕ್ತವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 38 ಬಿಜೆಪಿ ಅಭ್ಯರ್ಥಿಗಳು ಗಂಭೀರವಾದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ದೇಶದ ವೀರರಿಗೆ ನೀಡಲಾಗುವ ಅಶೋಕ ಚಕ್ರ ಪುರಸ್ಕøತ ದಿವಂಗತ ಹೇಮಂತ್ ಕರ್ಕರೆಯವರನ್ನು ಶಂಕಿತ ಆರೋಪಿ ಸಾಧ್ವಿ ಪ್ರಜ್ಞಾಸಿಂಗ್ ಅವಮಾನಿಸಿ ಹೇಳಿಕೆ ನೀಡುತ್ತಾರೆ. ಅಂತವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಮಾಡಿಕೊಂಡಿದೆ. ಪ್ರಜ್ಞಾಸಿಂಗ್ ಹೇಳಿಕೆಯ ಬಗ್ಗೆ ದೇಶದ ಪ್ರಧಾನಿ ಈ ಬಗ್ಗೆ ಒಂದೇ ಒಂದು ಮಾತನ್ನು ಆಡುತ್ತಿಲ್ಲ.

ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್, ಈ ಚುನಾವಣೆಯೊಂದನ್ನು ಗೆದ್ದು ಬಿಟ್ಟರೆ ಮುಂದೆ ಚುನಾವಣೆಯೇ ನಡೆಯುವುದಿಲ್ಲ ಎನ್ನುತ್ತಾರೆ. ಇದರ ಅರ್ಥ ಏನು ಎನ್ನುವುದನ್ನು ಹಿಂದುಳಿದ ವರ್ಗದವರು, ದಲಿತರು ಅರ್ಥೈಸಿಕೊಳ್ಳುವ ಕಾಲ ಬಂದಿದೆ. ಪ್ರಧಾನ ಮಂತ್ರಿಗಳು ನೆಹರೂ, ಇಂದಿರಾಗಾಂಧಿ, ರಾಹುಲ್ ಗಾಂಧಿಯವರೆಗೆ ಬೈಯುತ್ತ ದಿನ ಕಳೆಯುತ್ತಿದ್ದಾರೆ. ಆದರೆ ದೇಶದಲ್ಲಿ ಉದ್ಯೋಗ ನಷ್ಟವಾಗುತ್ತಿರುವುದರ ಬಗ್ಗೆ ಉಸಿರೆತ್ತುತ್ತಿಲ್ಲ.

ರಾಜ್ಯಕ್ಕೆ ಬಂದು 20% ಫರ್ಸೆಂಟ್ ರಾಜ್ಯ ಸರಕಾರ ಎನ್ನುತ್ತಾರೆ. ಆದರೆ ರಫೆಲ್ ಕಮಿಷನ್ ಬಗ್ಗೆ ಮಾತನಾಡುವುದಿಲ್ಲ. ಮಾಧ್ಯಮದವರನ್ನು ಎದುರಿಸಲು ಧೈರ್ಯವನ್ನು ಹೊಂದಿರದ ಮೋದಿ, ಅಲ್ಲಲ್ಲಿ ಭಾಷಣ ಮಾಡುತ್ತ ಜನರನ್ನು ಯಾಮಾರಿಸುತ್ತಿದ್ದಾರೆ. ಮೋದಿ ಆಡಳಿತಾವಧಿಯಲ್ಲಿ ಕಪ್ಪು ಹಣ ಬರಲಿಲ್ಲ, ಭ್ರಷ್ಟಾಚಾರ ನಿರ್ಮೂಲನೆ ಆಗಿಲ್ಲಾ.

ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ದೇಶವನ್ನು ಜಾತಿ, ಧರ್ಮದ ಹೆಸರಿನಲ್ಲಿ ಇಬ್ಭಾಗವಾಗಲು ಬಿಡದೇ ಸಂವಿಧಾನದಡಿಯಲ್ಲಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯ ಕಾಲದಲ್ಲಿ ಸಂವಿಧಾನಕ್ಕೆ ಅಪಾಯ ಎದುರಾಗಿದೆ ಎಂದರು.

ಮಾಜಿ ಶಾಸಕ ಮಂಕಾಳು ವೈದ್ಯ, ಮಾಜಿ ಸಚಿವ ಆರ್.ಎನ್.ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಭೀಮಣ್ಣ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಎಲ್.ಎಸ್.ನಾಯ್ಕ, ಎಫ್.ಕೆ.ಮೊಗೇರ, ಜಿಪಂ ಸದಸ್ಯರಾದ ಆಲ್ಬರ್ಟ, ಪುಷ್ಪಾ ನಾಯ್ಕ, ವಿಠ್ಠಲ್ ನಾಯ್ಕ, ಗೋವಿಂದ ನಾಯ್ಕ ಮಂಕಿ ಮೊದಲಾದವರು ಉಪಸ್ಥಿತರಿದ್ದರು.

Read These Next

ಉಪವಿಭಾಗಾಧಿಕಾರಿ ಕಚೇರಿ ಎದುರು ನಾರಾಯಣಗುರುನಗರದ ನಿವಾಸಿಗಳ ಪ್ರತಿಭಟನೆ ಕಂದಾಯ ಇಲಾಖೆ ಆದೇಶ ಹಿಂಪಡೆಯಲು ಒತ್ತಾಯ

ತಾಲೂಕಿನ ನಾರಾಯಣಗುರುನಗರದ ಸರ್ವೆ ನಂಬರ್ 53ರ ನಿವೇಶನಗಳು ಡಿಫಾರೆಸ್ಟ್ ಆಗಿಲ್ಲ ಎಂಬ ನೆಪವೊಡ್ಡಿ, ಯಾವುದೇ ವ್ಯವಹಾರ ನಡೆಸದಂತೆ ...