ದೇಶದ್ರೋಹ ಕಾನೂನಿಗೆ ತಡೆ; ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪುನರ್‌ಪರಿಶೀಲನೆ ಪೂರ್ಣಗೊಳ್ಳುವವರೆಗೆ ವಿರಾಮ

Source: Vb | By I.G. Bhatkali | Published on 12th May 2022, 10:46 AM | National News |

ಹೊಸದಿಲ್ಲಿ: ಸರಕಾರದಿಂದ ದೇಶದ್ರೋಹ ಕಾನೂನಿನ ಪುನರ್‌ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ವಿವಾದಾತ್ಮಕ ಕಾನೂನಿನಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ದೂರವಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ತನ್ನ ಐತಿಹಾಸಿಕ ತೀರ್ಪಿನಲ್ಲಿ ಆದೇಶಿಸಿದೆ.

ಈ ಆದೇಶವು ವಸಾಹತುಶಾಹಿ ಯುಗದ ಪಳೆಯುಳಿಕೆಯಾಗಿರುವ ಈ ಕಾನೂನಿನಡಿ ಆರೋಪಿಗಳಾಗಿರುವ ನೂರಾರು ಜನರ ಮೇಲೆ ಪರಿಣಾಮವನ್ನು ಬೀರಲಿದೆ. ದೇಶದ್ರೋಹದ ಆರೋಪದಲ್ಲಿ ಜೈಲು ಸೇರಿರುವವರು ಈಗ ಜಾಮೀನು ಕೋರಿ ನ್ಯಾಯಾಲಯಗಳನ್ನು 

ಇವರು ಅರ್ಜಿದಾರರು
ವೃತ್ತ ಮೇಜರ್‌ ಜನರಲ್ ಎಸ್.ಜಿ. ಒಂಭತ್ತುಕೆರೆ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪತ್ರಕರ್ತರಾದ ಅನಿಲ್ ಚಮಡಿಯಾ, ಪ್ಯಾಟ್ರಿಷಿಯಾ ಮುಖಮ್ ಮತ್ತು ಅನುರಾಧಾ ಭಾಸಿನ್, ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಮತ್ತು ಜರ್ನಲಿಸ್ಟ್ ಯೂನಿಯನ್ ಆಫ್ ಅಸ್ಸಾಂ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಮುಂದಿನ ವಿಚಾರಣೆಯು ಜುಲೈನಲ್ಲಿ ನಡೆಯಲಿದೆ.

ಸಂಪರ್ಕಿಸಬಹುದಾಗಿದೆ.

ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕಾಗಿ ದೇಶದ್ರೋಹ ಕಾನೂನನ್ನು ಹೇರಿದ್ದಂತಹ ಹಲವು ಪ್ರಕರಣಗಳಲ್ಲಿ ಅದರ ದುರುಪಯೋಗವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪ್ರಸ್ತಾಪಿಸಿದ ಸರ್ವೋಚ್ಚ ನ್ಯಾಯಾಲಯವು, ದೇಶದ್ರೋಹದ ಆರೋಪದಲ್ಲಿ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸುವಂತಿಲ್ಲ ಮತ್ತು ಸರಕಾರವು ಕಾನೂನನ್ನು ಪುನರ್‌ಪರಿಶೀಲಿಸುತ್ತಿರುವಾಗ ಬಾಕಿಯಿರುವ ಎಲ್ಲ ಪ್ರಕರಣಗಳನ್ನು ತಡೆಹಿಡಿಯಬೇಕು ಎಂದು ಹೇಳಿದೆ.

'ದೇಶದ್ರೋಹ ಕಾನೂನಿನ ನಿಬಂಧನೆಗಳು ಪ್ರಸ್ತುತ ಸ್ಥಿತಿಗೆ ಅನುಗುಣವಾಗಿಲ್ಲ ಎನ್ನುವುದನ್ನು ಕೇಂದ್ರವು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ. ಇನ್ನಷ್ಟು ಪುನರ್‌ಪರಿಶೀಲನೆ ಆಗುವವರೆಗೆ ಈ ಕಾನೂನನ್ನು ಬಳಸದಿರುವುದು ಸೂಕ್ತ. ಪುನರ್ ಪರಿಶೀಲನೆ ಮುಗಿಯುವವರೆಗೆ ಕಲಂ 124 ಎ (ದೇಶದ್ರೋಹ ಕಾನೂನು) ಅಡಿ ಯಾವುದೇ ಎಫ್‌ಐಆರ್ ದಾಖಲಿಸುವುದರಿಂದ ಅಥವಾ ಈ ಕಾನೂನಿನಡಿ ಕ್ರಮವನ್ನು ಕೈಗೊಳ್ಳುವುದರಿಂದ ಕೇಂದ್ರ ಮತ್ತು ರಾಜ್ಯಗಳು ದೂರವಿರುತ್ತವೆ ಎಂದು ನಾವು ಆಶಿಸಿದ್ದೇವೆ ಮತ್ತು ನಿರೀಕ್ಷಿಸಿದ್ದೇವೆ' ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ದೇಶದ್ರೋಹ ಕಾನೂನಿಗೆ ತಡೆ:ಯಾವುದೇ ಹೊಸ ಪ್ರಕರಣಗಳು ದಾಖಲಾದರೆ ಆರೋಪಿಗಳು ಈ ಆದೇಶವನ್ನು ಉಲ್ಲೇಖಿಸಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ತಿಳಿಸಿದ ಅವರು, ಕಾನೂನಿನ ದುರುಪಯೋಗವನ್ನು ತಡೆಯುವಂತೆ ರಾಜ್ಯಗಳಿಗೆ ನಿರ್ದೇಶಗಳನ್ನು ಹೊರಡಿಸಲು ಕೇಂದ್ರವು ಸ್ವತಂತ್ರವಾಗಿದೆ ಎಂದರು.

ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ತೀಕವಾಗಿ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು, 'ನಾವು ಪರಸ್ಪರ ಗೌರವಿಸುತ್ತೇವೆ. ನ್ಯಾಯಾಲಯವು ಸರಕಾರ, ಶಾಸಕಾಂಗವನ್ನು ಗೌರವಿಸಬೇಕು ಮತ್ತು ಸರಕಾರವೂ ನ್ಯಾಯಾಲಯವನ್ನು ಗೌರವಿಸಬೇಕು. ನಮ್ಮ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ ಮತ್ತು ಯಾರೂ ಲಕ್ಷ್ಮಣ ರೇಖೆಯನ್ನು ದಾಟಬಾರದು' ಎಂದು ಹೇಳಿದರು.

ಅಂದು ಮಹಾತ್ಮಾ ಗಾಂಧಿ ಮತ್ತು ಲೋಕಮಾನ್ಯ ಬಾಲ ಗಂಗಾಧರ ತಿಲಕ್ ವಿರುದ್ಧ ಬ್ರಿಟಿಷರು ಬಳಸಿದ್ದ ದೇಶದ್ರೋಹ ಕಾನೂನನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿದ್ದ ಕೇಂದ್ರವು ಸೋಮವಾರ ಹಠಾತ್ ತನ್ನ ನಿಲುವನ್ನು ಬದಲಿಸಿ ಸದ್ರಿ ಕಾನೂನನ್ನು ಪುನರ್‌ಪರಿಶೀಲಿಸಲು ತಾನು ನಿರ್ಧರಿಸಿರುವುದಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಕಾನೂನು ಯಾವುದೇ ವ್ಯಕ್ತಿ ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದು ವಾರಂಟ್ ಇಲ್ಲದೆ ಆತನನ್ನು ಬಂಧಿಸಲು ಅವಕಾಶವನ್ನು ನೀಡುತ್ತದೆ.

ತಾನು ಕಾನೂನನ್ನು ಪುನರ್‌ ಪರಿಶೀಲಿಸುತ್ತಿರುವಾಗ ಕಾನೂನಿಗೆ ತಡೆಯಾಜ್ಞೆಯನ್ನು ನೀಡಬಾರದು ಎಂದು ಬುಧವಾರ ವಾದಿಸಿದ ಸರಕಾರವು, ಸದ್ಯಕ್ಕೆ ದೇಶದ್ರೋಹ ಆರೋಪವನ್ನು ಹೊರಿಸಬೇಕೇ ಎನ್ನುವುದನ್ನು ಅಧೀಕ್ಷಕರು ಅಥವಾ ಮೇಲಿನ ಮಟ್ಟದ ಪೊಲೀಸ್ ಅಧಿಕಾರಿಗಳು ನಿರ್ಧರಿಸಬಹುದಾಗಿದೆ ಎಂದು ಸೂಚಿಸಿತ್ತು.

ಪರಿಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಲು ಜವಾಬ್ದಾರಿಯುತ ಅಧಿಕಾರಿಯನ್ನೊಳಗೊಂಡ ಪರಿಶೀಲನೆಯ ವ್ಯವಸ್ಥೆಯಿರುವುದು ಅಗತ್ಯವಾಗಿದೆ, ಹೇಗಿದ್ದರೂ ನ್ಯಾಯಾಂಗ ವೇದಿಕೆಗಳು ಇದ್ದೇ ಇವೆ ಎಂದು ಹೇಳಿದ ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದಲ್ಲಿ ಕಾನೂನಿಗೆ ತಡೆಯಾಜ್ಞೆಯನ್ನು ನೀಡುವಂತಿಲ್ಲ ಎಂದು ವಾದಿಸಿದರು.

'ಈಗಾಗಲೇ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಅವು ಇತ್ಯರ್ಥಗೊಳಿಸಬೇಕಿದೆ. ಭಾರತದಾದ್ಯಂತ ಪ್ರಕರಣಗಳ ಗಂಭೀರತೆ ನಮಗೆ ತಿಳಿದಿಲ್ಲ. ಈ ಪ್ರಕರಣಗಳಲ್ಲಿ ಇತರ ಭಯೋತ್ಪಾದನೆ ಆರೋಪಗಳೂ ಇರಬಹುದು. ಈ ಬಾಕಿಯುಳಿದಿರುವ ಪ್ರಕರಣಗಳು ಪೊಲೀಸರು ಅಥವಾ ಸರಕಾರದ ಮುಂದಿಲ್ಲ, ಆದರೆ ಅವು ನ್ಯಾಯಾಲಯಗಳ ಮುಂದಿವೆ. ಹೀಗಾಗಿ ನ್ಯಾಯಾಲಯಗಳ ವಿವೇಚನೆಯನ್ನು ನಾವು ಅಂದಾಜಿಸಬಾರದು' ಎಂದರು.

ಕೇಂದ್ರದ ನಿಲುವನ್ನು ವಿರೋಧಿಸಿದ ಅರ್ಜಿದಾರರು ಸರಕಾರವು ಪುನರ್ ಪರಿಶೀಲಿಸುವವರೆಗೆ ದೇಶದ್ರೋಹ ಕಾನೂನಿಗೆ ವಿರಾಮ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ರಾ, 'ದೇಶದ ನ್ಯಾಯಾಂಗಕ್ಕೆ ಗೌರವವನ್ನು ನಾವು ಕಡೆಗಣಿಸುವಂತಿಲ್ಲ' ಎಂದು ಹೇಳಿದರು.

ದೇಶಾದ್ಯಂತ ಈ ಕಾನೂನಿನಡಿ 800ಕ್ಕೂ ಅಧಿಕ ಪ್ರಕರಣಗಳಿವೆ ಮತ್ತು 13,000 ಜನರು ಜೈಲುಗಳಲ್ಲಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ತಿಳಿಸಿದರು.

ಸುಪ್ರೀಂ ತನ್ನ ಆದೇಶದಲ್ಲಿ ಹೇಳಿದ್ದೇನು?
ದೇಶದ್ರೋಹ ಕಾನೂನಿನ ಪುನರ್ ಪರಿಶೀಲನೆ ನಡೆಯುತ್ತಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅದನ್ನು ಬಳಸ ಬಾರದು ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೂ ಒಳಗೊಂಡಿದ್ದ ಪೀಠವು, ಈ ನಿರ್ಧಾರ ಮತ್ತು ಕಾನೂನಿನಡಿ ಎಲ್ಲ ಹಾಲಿ ಕಲಾಪಗಳಿಗೆ ತಡೆಯಾಜ್ಞೆಯು ಕೇಂದ್ರ ಸರಕಾರವು ತನ್ನ ಅಫಿಡವಿಟ್‌ನಲ್ಲಿ ಹೇಳಿರುವುದಕ್ಕೆ ಅನುಗುಣವಾಗಿದೆ ಎಂದು ತನ್ನ ಆದೇಶದಲ್ಲಿ ಹೇಳಿದೆ. ನರೇಂದ್ರ ಮೋದಿ ಸರಕಾರವು ಈ ವಸಾಹತುಶಾಹಿ ಯುಗದ ಕಾನೂನು ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಭಾವಿಸಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿತ್ತು.

ದೇಶದ್ರೋಹ ಕಾನೂನಿನ ದುರುಪಯೋಗವಾಗಿ ರುವ ನಿದರ್ಶನಗಳನ್ನು ಅರ್ಜಿದಾರರು ಮತ್ತು ಅಟಾರ್ನಿ ಜನರಲ್ ಬೆಟ್ಟು ಮಾಡಿದ್ದಾರೆ. ಈ ಸಹಮತದ ಹಿನ್ನೆಲೆಯಲ್ಲಿ ಸರಕಾರಗಳು ಕಾನೂನಿನ ಬಳಕೆಯನ್ನು ಮುಂದುವರಿಸದಿರುವುದು ಸೂಕ್ತವಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಕಾನೂನು ಪುನರ್‌ ಪರಿಶೀಲನೆಯಲ್ಲಿರುವಾಗ ಅದರಡಿ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಂಡರೆ ಬಾಧಿತರು ಈ ಆದೇಶವನ್ನು ಉಲ್ಲೇಖಿಸಿ ಪರಿಹಾರಕ್ಕಾಗಿ ನ್ಯಾಯಾಲಯಗಳನ್ನು ಸಂಪರ್ಕಿಸಬಹುದು ಎಂದು ಪೀಠವು ಸ್ಪಷ್ಟಪಡಿಸಿದೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...