ದೇಶದ್ರೋಹ ಕಾನೂನು ಅಗತ್ಯವಿದೆಯೇ? ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಖಡಕ್ ಪ್ರಶ್ನೆ

Source: VB news | By I.G. Bhatkali | Published on 16th July 2021, 4:42 PM | National News |

ಹೊಸದಿಲ್ಲಿ,: ಬ್ರಿಟಿಷರ ಕಾಲದ ದೇಶದ್ರೋಹ ಕಾನೂನನ್ನು ಗುರುವಾರ 'ವಸಾಹತುಶಾಹಿ 'ಎಂದು ಬಣ್ಣಿಸಿದ ಸರ್ವೋಚ್ಚ ನ್ಯಾಯಾಲಯವು ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿದ್ದರೂ ಈಗಲೂ ಈ ಕಾನೂನಿನ ಅಗತ್ಯವಿದೆಯೇ ಎಂದು ಕೇಂದ್ರವನ್ನು ಪ್ರಶ್ನಿಸಿತು. ಈ ಕಾನೂನು ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಗಂಭೀರ ಬೆದರಿಕೆಯನೊಡುತ್ತದೆ ಮತ್ತು ಅಧಿಕಾರಿಗೆ ಯಾವುದೇ ಉತ್ತರದಾಯಿತ್ತದ ಹೊಣೆಗಾರಿಕೆಯಿಲ್ಲದೆ ಮರ್ಬಳಕೆಗಾಗಿ ಅಗಾಧ ಅಧಿಕಾರವನ್ನು ನೀಡುತ್ತದೆ ಎಂದು ಹೇಳಿದ ನ್ಯಾಯಾಲಯವು, ಈ ಕಾನೂನು ಅತ್ಯುತ್ಸಾಹಿ ಬಡಗಿಯ ಕೈಯಲ್ಲಿ ನೀಡಿದ ಗರಗಸದಂತಿದೆ ಎಂದು ಹೋಲಿಸಿತು.

ದೇಶದ್ರೋಹ ಕಾನೂನು (ಐಪಿಸಿಯ ಕಲಂ 124 ಎ) ವಸಾಹತುಶಾಹಿ ಕಾನೂನಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದ ಬಳಿಕವೂ ಈ ಕಾನೂನಿನ ಅಗತ್ಯ ನಮಗಿದೆಯೇ ಎಂದು ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ಪ್ರಶ್ನಿಸಿದರು. ಸರಕಾರವು ಹಳೆಯ ಕಾಲದ ಕಾನೂನುಗಳನ್ನು ರದ್ದುಗೊಳಿಸುತ್ತಿದೆ. ಅದೇಕೆ ಈ ಕಾನೂನಿನ ಬಗ್ಗೆ ಗಮನ ಹರಿಸುತ್ತಿಲ್ಲ ಎಂದೂ ನ್ಯಾಯಾಲಯವು ಪ್ರಶ್ನಿಸಿತು. ಕೆಲವು ಮಾರ್ಗಸೂಚಿಗಳೊಂದಿಗೆ ಈ ಕಾನೂನನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಆಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ಪ್ರತಿಪಾದಿಸಿದರು.

ಅತ್ಯುತ್ಸಾಹಿ ಬಡಗಿಯ ಕೈಗೆ ನೀಡಿದ ಗರಗಸ

ಕಾನೂನಿನ ಭಾರೀ ದುರ್ಬಳಕೆಯಾಗುತ್ತಿದೆ. ದೇಶದ್ರೋಹ ಕಾನೂನಿನ ಬಳಕೆ ಮರದ ತುಂಡೊಂದನ್ನು ಕತ್ತರಿಸಲು ಅತ್ಯುತ್ಸಾಹಿ ಬಡಗಿಯ ಕೈಯಲ್ಲಿ ಗರಗಸ ಕೊಟ್ಟಂತೆ, ಆತ ಇಡೀ ಅರಣ್ಯವನೇ ಕತ್ತರಿಸುತ್ತಾನೆ, ಇದು ಈ ಕಾನೂನಿನ ಪರಿಣಾಮವಾಗಿದೆ ಎಂದು ನ್ಯಾ.ರಮಣ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಹೇಳಿತು.

ಪೊಲೀಸ್ ಅಧಿಕಾರಿಯೊರ್ವ ಗ್ರಾಮದಲ್ಲಿ ಯಾರಾ ದರೂ ಯಾವುದಾದರೂ ಕಾರಣದಿಂದ ಪ್ರಕರಣದಲ್ಲಿ ಸಿಲುಕಿಸಲು ಬಯಸಿದರೆ ಆತ ಐಪಿಸಿಯಕಲಂ 124 ಎ ಅನ್ನು ಬಳಸಬಹುದು ಎಂಬ ಭೀತಿ ಜನರಲ್ಲಿದೆ ಎಂದೂ ಅದು ಹೇಳಿತು, ದೇಶದ್ರೋಹ ಕಾನೂನಿನ ಸಿಂಧುತ್ತವನ್ನು ತಾನು ಪರಿಶೀಲಿಸುವುದಾಗಿ ತಿಳಿಸಿದ ನ್ಯಾಯಾಲಯವ ಮೇಜರ್ ಜನರಲ್ (ನಿವೃತ್ತ) ಎಸ್.ಜಿ. ಒಂಬತ್ತುಕೆರೆ ಅವರ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸೂಚಿಸಿತು. ಈ ಕಾನೂನು ವಾಕ್ ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿಗೆ ನಿರ್ಬಂಧವನ್ನುಂಟು ಮಾಡುತ್ತಿದೆ ಎಂದು ಅರ್ಜಿದಾರರ ದೂರಿದ್ದಾರೆ.

ಅದು ವಸಾಹತುಶಾಹಿ ಕಾಲದ ಕಾನೂನಾಗಿದೆ ಎನ್ನುವುದು ವಿವಾದವಾಗಿದೆ. ಮಹಾತ್ಮಾ ಗಾಂಧಿಯವರ ಧನಿಯನ್ನಡಗಿಸಲು ಮತ್ತು ಸ್ವಾತಂತ್ರ್ಯ ಆಂದೋಲನವನ್ನು ದಮನಿಸಲು ಇದೇ ಕಾನೂನನ್ನು ಬಳಸಲಾಗಿತ್ತು ಎಂದು ಹೇಳಿದ ನ್ಯಾಯಾಲಯವು,ಈ ಕಾನೂನನ್ನು ಪ್ರಶ್ನಿಸಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

ಕಾನೂನನ್ನು ರದ್ದುಗೊಳಿಸಬೇಕಿಲ್ಲ ಮತ್ತು ಅದರ ಕಾನೂನಾತಕ ಉದ್ದೇಶ ಈಡೇರಲು ಮಾರ್ಗಸೂಚಿಗಳನ್ನು ರೂಪಿಸಿದರೆ ಸಾಕು ಎಂದು ಅಟಾರ್ನಿ ಜನರಲ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾರಮಣ, ಒಂದು ಪಾವು ಇನ್ನೊಂದು ಪಕ್ಷವು ಹೇಳುವುದನ್ನು ಕೇಳಲು ಬಯಸದಿದ್ದರೆ ಅದು ಈ ಕಾನೂನನ್ನು ಬಳಸಬಹುದು ಮತ್ತು ಇತರರನ್ನು ಸಿಲುಕಿಸಬಹುದು. ಇದು ವ್ಯಕ್ತಿಗಳ ಪಾಲಿಗೆ ಗಂಭೀರ ಪ್ರಶ್ನೆಯಾಗಿದೆ ಎಂದರು.

ಈ ಕಾನೂನಿನ ದುರ್ಬಳಕೆಯಾಗುತ್ತಿದೆ ಮತ್ತು ಅಧಿಕಾರಿಗೆ ಯಾವುದೇ ಉತ್ತರದಾಯಿತ್ತ ಇಲ್ಲ ಎನ್ನುವುದು ನಮ್ಮ ಕಳವಳವಾಗಿದೆ ಎಂದು ಅಟಾರ್ನಿ ಜನರಲ್‌ಗೆ ತಿಳಿಸಿದ ನ್ಯಾ.ರಮಣ, 'ನಾವು ಯಾವುದೇ ರಾಜ್ಯ ಅಥವಾ ಸರಕಾರವನ್ನು ದೂರುತ್ತಿಲ್ಲ. ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66 ಎ ಬಳಕೆ ಹೇಗೆ ಮುಂದುವರಿದಿತ್ತು ಎನ್ನುವುದನ್ನು ನೋಡಿ, ಅದರಿಂದ ಎಷ್ಟೆಲ್ಲ ಜನರು ಸಂಕಷ್ಟಕ್ಕೊಳಗಾಗಿದ್ದರು ಮತ್ತು ಇದಕ್ಕೆ ಯಾವುದೇ ಉತ್ತರದಾಯಿತ್ವ ಇರಲಿಲ್ಲ' ಎಂದು ಹೇಳಿದರು. ದೇಶದ್ರೋಹ ಕಾನೂನಿನ ಇತಿಹಾಸದಲ್ಲಿ ಸಾಬೀತಾದ ಪ್ರಕರಣಗಳು ಕನಿಷ್ಠವಾಗಿವೆ ಮತ್ತು ದೋಷ ನಿರ್ಣಯದ ಪ್ರಮಾಣ ತೀರ ಕಡಿಮೆಯಿದೆ ಎಂದೂ ಅವರು ಬೆಟ್ಟು ಮಾಡಿದರು.

ನಾವು ನಮ್ಮ ಉತ್ತರವನ್ನು ಸಲ್ಲಿಸುತ್ತೇವೆ ಮತ್ತು ಅದು ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಹೇಳಿದರು.

ದೇಶದ್ರೋಹ ಕಾನೂನು ಸಂಪೂರ್ಣವಾಗಿ ಅಸಾಂವಿಧಾನಿಕವಾಗಿದೆ ಮತ್ತು ಅದನ್ನು ರದ್ದುಗೊಳಿಸಬೇಕು ಎಂದು ಒಂಬತ್ತುಕೆರೆ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ. ಅರ್ಜಿದಾರರು ತನ್ನ ಬದುಕನ್ನು ದೇಶಕ್ಕಾಗಿ ಹೆಚ್ಚುಕಡಿಮೆ ತ್ಯಾಗವನ್ನೇ ಮಾಡಿದ್ದಾರೆ. ಹೀಗಾಗಿ ಅವರದು ಪ್ರೇರಿತ ಅರ್ಜಿಯಲ್ಲ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ಇದಕ್ಕೂ ಮುನ್ನ ದೇಶದ್ರೋಹ ಕಾನೂನನ್ನು ಪ್ರಶ್ನಿಸಿ ಪತ್ರಕರ್ತರಿಬ್ಬರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯದ ಪ್ರತ್ಯೇಕ ಪೀಠವೊಂದು ಕೇಂದ್ರಕ್ಕೆ ಸೂಚಿಸಿತ್ತು. ಪತ್ರಕರ್ತರಾದ ಮಣಿಪುರದ ಕಿಶೋರಚಂದ್ರ ವಾಂಗ್ಯಮ್ಹಾ ಮತ್ತು ಛತ್ತೀಸ್‌ಗಡದ ಕನೈಯಾಲಾಲ ಶುಕ್ಲಾ ಅವರು ಈ ಕಾನೂನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು ಮತ್ತು ಪತ್ರಕರ್ತರ ವಿರುದ್ಧ ವಿವಾದಾತ್ಮಕವಾಗಿ ದೇಶದ್ರೋಹ ಆರೋಪಗಳನ್ನು ಹೊರಿಸಲಾಗುತ್ತಿದೆ. ಲಕದ್ದೀಪದ ಚಿತ್ರ ನಿರ್ಮಾಪಕಿ ಆಯತಾ ಸುಲ್ತಾನಾ, ಪತ್ರಕರ್ತ ಸಿದ್ದೀಕ್ ಕನ್‌ ಮತ್ತು ಕ್ರಿಸ್ತ ಧರ್ಮಗುರು ಹಾಗೂ ಮಾನವ ಹಕ್ಕು ಹೋರಾಟಗಾರರಾಗಿದ್ದು ಜಾಮೀನಿಗಾಗಿ ಕಾಯುತ್ತಲೇ ಆಸು ನೀಗಿದ 84ರ ಹರೆಯದ ಸ್ವಾನ್ ಸ್ವಾಮಿ ಅವರು ಕೆಲವು ಉದಾಹರಣೆಗಳಾಗಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...