ಶಾಲಾ ಕಾಲೇಜು ಪ್ರಾರಂಭ: ಅಗತ್ಯ ಪೂರ್ವ ಸಿದ್ದತೆಗೆ ಸಿ.ಇ.ಓ ಸೂಚನೆ

Source: SO News | By Laxmi Tanaya | Published on 25th December 2020, 7:10 AM | State News |

ಹಾಸನ : ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಜ. 1 ರಿಂದ 10 ಮತ್ತು 12ನೇ ತರಗತಿಗಳು ಹಾಗೂ ವಿದ್ಯಾಗಮ ಶಿಕ್ಷಣ ಪ್ರಾರಂಭವಾಗಲಿದ್ದು ಎಲ್ಲಾ ರೀತಿಯ ಮುಂಜಾಗ್ರತೆವಹಿಸಿ ಯೋಜಿತ ವ್ಯವಸ್ಥೆ ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಸಿದ್ದತಾ ಸಭೆ ಮಾತನಾಡಿದ ಅವರು, ತರಗತಿಗಳ ಪ್ರಾರಂಭದ ಬಗ್ಗೆ ಶಿಕ್ಷಣ ಸಚಿವರು ಈಗಾಗಲೇ ಸೂಚನೆ ನೀಡಿದ್ದು ಆರೋಗ್ಯ ಸರಕ್ಷತಾ ಕ್ರಮಗಳ ಬಗ್ಗೆ ಗರಿಷ್ಠ ಕಾಳಜಿವಹಿಸಿ ಹಾಗೂ 171 ಪದವಿ ಪೂರ್ವ ಕಾಲೇಜುಗಳಲ್ಲಿ ತರಗತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

 ಜಿಲ್ಲೆಯಲ್ಲಿ 509 ಸರ್ಕಾರಿ, ಖಾಸಗಿ ಅನುದಾನಿತ ಅನುದಾನರಹಿತ ಶಾಲೆಗಳ ಪ್ರಾರಂಭಕ್ಕೆ ಇರುವ ವ್ಯವಸ್ಥೆಗಳನ್ನು ಮೊದಲೇ ಪರಿಶೀಲಿಸಿ ನಿಯಮಾವಳಿ ಪಾಲನೆಗೆ ಇರುವ ಸಾಧಕ ಬಾಧಕಗಳನ್ನು ಗಮನಿಸಬೇಕು ಎಂದು ಅವರು ತಿಳಿಸಿದರು.

 ದೂರದಿಂದಲೂ ವಿದ್ಯಾರ್ಥಿಗಳು ಆಗಮಿಸುವುದರಿಂದ ಡಿ.28 ರಿಂದಲೇ ಹೆಚ್ಚುವರಿ ಬಸ್‍ಗಳನ್ನು ಓಡಿಸಲು ಕ್ರಮವಹಿಸುವಂತೆ ಹಾಗೂ ಪ್ರತಿದಿನ ಬಸ್‍ಗಳನ್ನು ಸ್ವಚ್ಚಗೊಳಿಸಿ ಸ್ಯಾನಿಟೈಜರ್ ಮಾಡಿಸುವಂತೆ ಅವರು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಸೂಚಿಸಿದರು.

 ಬಸ್‍ಗಳಲ್ಲಿ ಸ್ಯಾನಿಟೈಜರ್ ಇರಿಸಿ ಒಳಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಹಾಗೂ ಎಲ್ಲಾರೂ ಮಾಸ್ಕ್ ಧರಿಸಿರುವಂತೆ ನೋಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಪಾಸ್‍ಗಳನ್ನು ಶೀಘ್ರವಾಗಿ ವಿತರಿಸಬೇಕು ಎಂದರು.

 ಆರೋಗ್ಯ ಇಲಾಖೆ ವತಿಯಿಂದ ಸ್ಥಳೀಯ ಪ್ರಾರ್ಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶಿಕ್ಷಕರೆಲ್ಲರಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಶಾಲೆಗಳಲ್ಲಿ ವೈದ್ಯರ ದೂರವಾಣಿ ಸಂಖ್ಯೆ ಇರಬೇಕು ಮಕ್ಕಳಲ್ಲಿ ಏನೇ ರೋಗ ಲಕ್ಷಣ ಕಂಡು ಬಂದಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ನೀಡಿ ಮನೆಗೆ ಕಳಿಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಲಭ್ಯವಿರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹೇಳಿದರು.

 ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಪ್ರಕರಣ ವರದಿಯಾದಲ್ಲಿ ಆ ಬಗ್ಗೆ ಆರೋಗ್ಯ ಕಾರ್ಯಕರ್ತರು ಶಾಲೆಗಳಿಗೆ ಮಾಹಿತಿ ನೀಡಬೇಕು. ಸೋಂಕಿತರ ಮನೆಯಿಂದ ಮಕ್ಕಳು ಶಾಲೆಗಳಿಗೆ ಬರದಂತೆ ಕ್ರಮವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

 ಶಿಕ್ಷಣ ಇಲಾಖೆಯು ಎಲ್ಲಾ ಅಧಿಕಾರಿಗಳು ಮುಖ್ಯೋಪಾದ್ಯಯರು, ಪ್ರಾಂಶುಪಾಲರು, ಸಿ.ಆರ್.ಪಿ., ಬಿ.ಆರ್.ಪಿಗಳೂ ತಮ್ಮ ಶಾಲೆ ಕಾಲೇಜುಗಳು, ಶೌಚಾಲಯಗಳು ಸ್ವಚ್ಚವಾಗಿರುವಂತೆ ಗಮನ ಹರಿಸಬೇಕು, ಸ್ಯಾನಿಟೈಸ್ಸ್ ಮಾಡಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳನ್ನು ಸಂಪರ್ಕಿಸಿ ಸಹಕಾರ ಪಡೆಯಬೇಕು ಎಂದು ಅವರು ತಿಳಿಸಿದರು.
 ನೇರ ತರಗತಿ ಹಾಗೂ ಆನ್‍ಲೈನ್ ತರಗತಿಗಳೆರಡರಿಂದಲೂ ಹೂರಗುಳಿಯುತ್ತಿರುವ ಅವಕಾಶ ವಂಚಿತ ಮಕ್ಕಳನ್ನು ಗುರುತಿಸಿ ಅವರ ಶೈಕ್ಷಣಿಕ ನೆರವಿಗೆ ಒದಗಿಸಬಗುದಾದ ಸಹಕಾರದ ಬಗ್ಗೆ ಗಮನಿಸಿ, ಶಾಲೆಗಳಲ್ಲಿ ಮಕ್ಕಳಿಗೆ ಸಾಮೂಹಿಕ ಪ್ರಾರ್ಥನೆಗೆ, ಆಟೋಟಗಳಿಗೆ ಅವಕಾಶ ನೀಡದಿರಿ, ಗುಂಪು ಗುಡುವಿಕೆಯನ್ನು ಸಂಪೂರ್ಣ ನಿಯಂತ್ರಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಅವರು ಸೂಚಿಸಿದರು.
 ಜ. 1 ರಿಂದ ವಿದ್ಯಾರ್ಥಿಗಳ ವಸತಿ ನಿಲಯಗಳೂ ಪ್ರಾರಂಭವಾಗಬೇಕು ಆದರೆ ಯಾವುದೇ  ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಹಾಜರಾಗುವಂತೆ ಒತ್ತಾಯಿಸುವಂತಿಲ್ಲ, ಎಂದು ಅವರು ಹೇಳಿದರು.

 ಯಾವುದೇ ವಿದ್ಯಾರ್ಥಿಗಳು ತಮ್ಮ ಶಾಲೆಗಳು ದೂರದಲ್ಲಿದ್ದರೆ ಸಮೀಪದ ಶಾಲೆಗೆ ತೆರಳಿ ಪಾಠ ಕೇಳಬಹುದಾಗಿದೆ ಇದಕ್ಕೆ ಶಿಕ್ಷಕರು ಅವಕಾಶ ಮಾಡಿಕೊಡಬೇಕು. ಎಲ್ಲಾ ಶಾಲೆಗಳಲ್ಲಿ, ಹಾಸ್ಟ್‍ಲ್‍ಗಳಲ್ಲಿ ಕಡ್ಡಾಯವಾಗಿ, ಥರ್ಮಲ್ ಸ್ಕ್ಯಾನರ್ ಇರಿಸಿ ದೇಹ ತಾಪಮಾನವನ್ನು ಪರಿಶೀಲಿಸಬೇಕು ಎಂದರು.

 ಎಲ್ಲಾ ಶಾಲೆಗಳಿಗೆ ಪೈಪ್‍ಲೈನ್ ಮೂಲಕ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮಾಡಿದ್ದು ಅಡಿಗೆ ಹಾಗೂ ಶೌಚಾಲಯಗಳಿಗೂ ನೀರಿನ ಸೌಕರ್ಯ ಇದೆಯೇ ಎಂಬುದನ್ನು ಗಮಿಸಿ ಇಲ್ಲದಿದ್ದಾರೆ ತುರ್ತಾಗಿ ಡಿ. 30 ರೊಳಗೆ ಪೂರೈಕೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹೇಳಿದರು.

 ಡಿ. 26 ಮತ್ತು 28 ರಂದು ಎಲ್ಲಾ ಶಾಲೆಗಳಲ್ಲಿ ಎನ್.ಡಿ.ಎಂ.ಸಿ ಹಾಗೂ ಪೋಷಕರ ಸಭೆ ನಡೆಸಬೇಕು. ತರಗತಿ ಹಾಗೂ ವಿದ್ಯಾಗಮನ ಪ್ರಾರಂಭದ ಉದ್ದೇಶ ಕಲಿಕಾ ಸ್ವರೂಪ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ  ಭಾರತಿ ಅವರು ಹೇಳಿದರು.
 ಮಕ್ಕಳನ್ನು ಶಾಲೆ ಕಾಲೇಜಿಗೆ ಕಳುಹಿಸುವುದು ಕಡ್ಡಾಯವಲ್ಲ ಎಂಬುದನ್ನು ತಿಳಿಯಪಡಿಸಬೇಕು, ಎಲ್ಲಾ ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ಹಾಗೂ ಊಟ ತರುವಂತೆ ನೋಡಿಕೊಳ್ಳಬೇಕು.  ಶಾಲೆಗಳಲ್ಲಿ ಬಿಸಿ ನೀರನ್ನು ಮಾತ್ರ ನೀಡಬೇಕು ಈ ಬಗ್ಗೆ ಪೋಷಕರಿಗೆ ತಿಳಿಸಿಕೊಡಬೇಕು ಎಂದು ಅವರು ತಿಳಿಸಿದರು.

 ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಶಾಲಾ, ಕಾಲೇಜುವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಡಿ. 30ರೊಳಗೆ ತರಗತಿ ಪ್ರಾರಂಭಕ್ಕೆ ಮಾಡಲಾಗಿರುವ ವ್ಯವಸ್ಥೆ, ಸ್ವಚ್ಚತೆಗಳ ಬಗ್ಗೆ ಪರಿಶೀಲಿಸಿ ಸರಿಇರುವುದನ್ನು ಖಾತರಿ ಪಡಿಸುವಂತೆ ಸೂಚಿಸಿ ಕರ್ತವ್ಯ ನಿಯೋಜಿಸಬೇಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಒಂದೊಂದು ಶಾಲೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.

 ಶಾಲೆಗೆ ಪ್ರವೇಶದ್ವಾರ ಹೆಚ್ಚಿದ್ದರೆ ಅವುಗಳನ್ನು ತೆರೆಯಿರಿ, ಒಂದು ಬ್ಯಾಚ್‍ಗೂ ಇನ್ನೊಂದು ಬ್ಯಾಚಿನ ನಡುವೆ ಸಮಯದ ಅಂತರ ಇರುವಂತೆ ನೋಡಿಕೊಳ್ಳಿ, ಶಾಲಾ ಸಂಚಿತ ನಿಧಿಯಲ್ಲಿ ಮಾಸ್ಕ್ ಖರೀದಿ, ಸ್ವಚ್ಚತೆಗೆ ಬಳಸಲು ಅವಕಾಶ ಮಾಡಿಕೊಡಿ ಎಂದು ಅವರು ಹೇಳಿದರು.

 ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪ್ರಕಾಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಶ್ರೀನಿವಾಸ್‍ಮೂರ್ತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...