ಎಸ್.ಸಿ ಎಸ್.ಟಿ ಪ್ರಕರಣಗಳಿಗೆ ತಕ್ಷಣ ಸ್ಪಂದಿಸಲಾಗುವುದು - ಜಿಲ್ಲಾಧಿಕಾರಿ

Source: sonews | By Staff Correspondent | Published on 17th September 2019, 6:21 PM | Coastal News |

ಕಾರವಾರ: ದಲಿತರ ಕ್ಷೇಮಾಬಿವೃದ್ಧಿಗಾಗಿ ಜಿಲ್ಲಾಡಳಿತ ಅತ್ಯಂತ ಕ್ರೀಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಸ್.ಸಿ ಎಸ್.ಟಿ ಪ್ರಕರಣಗಳಿಗೆ ತಕ್ಷಣ ಸ್ಪಂದಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಅವರು ಹೇಳಿದರು. 
  
ಜಿಲ್ಲಾಧಿಕಾರಿಗಳ ಸಭಾ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯ ಯಾವುದೇ ಮೂಲೆಯಲ್ಲಾದರೂ ಕೂಡ ದಲಿತರಿಗೆ ಸಮಸ್ಯೆಗಳು ಉಂಟಾಗಿ ದೂರು ನೀಡಿದಲ್ಲಿ ತಕ್ಷಣ ಸ್ಪಂದಿಸುವ ಕಾರ್ಯವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ  ಪೊಲೀಸ್ ಇಲಾಖೆಯಿಂದ ಮಾಡಲಾಗುವುದು ಎಂದು ಅವರು ಹೇಳಿದರು. 
  
ಮುಂಡಗೋಡ ತಾಲೂಕಿನ ಕಾತೂರು ಗ್ರಾಮದ ಸಂತೋಷ ತಿಪ್ಪಣ್ಣ ಹರಿಜನ ಇವರಿಗೆ ಸರಕಾರದಿಂದ ಮಂಜೂರಾದ ಜಮೀನನ್ನು ಅನುಭೋಗಿಸಲು ತಡೆ ಉಂಟು ಮಾಡಿರುವುದರ ಬಗ್ಗೆ ಬಂದಹ ಅರ್ಜಿಗೆ ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮವಹಿಸಲಾಗುವುದು, ಜಾತಿ ನಿಂದನೆ ದೌರ್ಜನ್ಯಗಳಾದ ಪ್ರಕರಣಗಳನ್ನು ಸಾಮಾನ್ಯ ಅಂದಾಜಿನ ಮೇಲೆ ಹೇಳದೇ, ನಿರ್ದಿಷ್ಟವಾದ ಪ್ರಕರಣದ ಬಗ್ಗೆ ಸಭೆಗೆ ಮಾಹಿತಿ ನೀಡಿದರೆ ತಕ್ಷಣ ಸ್ಪಂದಿಸಲಾಗುವುದು ಎಂದು ಅವರು ಹೇಳಿದರು. 
 
ಸದಸ್ಯ  ದಿಯೋಗ ಸಿದ್ದಿ ಅವರು ಮಾತನಾಡಿ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಹಲವಾರು ಪ್ರಕರಣಗಳು ಬಿ ವರದಿಯೊಂದಿಗೆ ಅಂತ್ಯಗೊಳ್ಳುತ್ತಿರುವ ಬಗ್ಗೆ ಹಾಗೂ ಎಸ್.ಸಿ ಎಸ್.ಟಿ ಸಂಬಂದಿಸಿದ  ಪಿ. ಎಸ್. ಐ. ಗಳ ಮೇಲೆ ಸುಳ್ಳು ಕೇಸ್‍ಗಳನ್ನು ಹಾಕಿ ಅನ್ಯಾಯ ಮಾಡುತ್ತಿರುವುದಾಗಿ ಸಭೆಯ ಗಮನಕ್ಕೆ ತಂದಾಗ ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ಅವರು ಪ್ರತಿಕ್ರಿಯಿಸಿ ಪೊಲೀಸ್ ಅಧಿಕಾರಿಗಳು ಸಾಕಷ್ಟು ಪ್ರಕರಣಗಳಲ್ಲಿ ಸಾಕ್ಷಿ ಇಲ್ಲದೇ ಇರುವುದರಿಂದ ಹಾಗೂ ದೂರುದಾರರು ಮತ್ತು ಆರೋಪಿಗಳು ಮಧ್ಯವರ್ತಿಗಳ ಮುಖಾಂತರ ಪೊಲೀಸ್ ಠಾಣೆಯ ಹೊರಗಡೆ ಅನಧೀಕೃತವಾಗಿ ರಾಜೀ ಸಂದಾನ ಮಾಡುತ್ತಿರುವದರಿಂದ ಸಾಕಷ್ಟು ಪ್ರಕರಣಗಳು ವೈಫಲ್ಯಗೊಂದಿರುತ್ತವೆ. ಇದರಿಂದಾಗಿ ಬಿ ಪ್ರಕರಣಗಳು ಆಗುತ್ತಿರುವುದಾಗಿ ತಿಳಿಸಿದರು. 
 
ಸದಸ್ಯೆ ಯಮುನಾ ಗಾಂವವಕರ ಮಾತನಾಡಿ ಗುತ್ತಿಗೆ ಪೌರ ಕಾರ್ಮಿಕರಿಗೆ ಸರಕಾರದಿಂದ ದೊರೆಯಬೇಕಾದ ರಕ್ಷಣೆ ಆರೋಗ್ಯ ಸೇವೆ ಮತ್ತು ವಸತಿ ಗೃಹ ಸೌಲಭ್ಯ ಮತ್ತು ಖಾಯಂ ಕೆಲಸ ಇಲ್ಲದೇ ಸಾಕಷ್ಟು ತೊಂದರೆಗಳು ಆಗುತ್ತಿವೆ ಎಂದು ಸಭೆಗೆ ತಿಳಿಸಿದಾಗ ಸಭಾ ಅಧ್ಯಕ್ಷರು ಗುತ್ತಿಗೆ ಕಾರ್ಮಿಕರನ್ನು ಖಾಯಂ ಗೊಳಿಸುವ ಪ್ರಕ್ರೀಯೆ ಚಾಲ್ತಿಯಲ್ಲಿರುತ್ತದೆ ಹಾಗೂ ಇಂದಿರಾ ಕ್ಯಾಂಟಿನ್, ಗೃಹಭಾಗ್ಯ ಯೋಜನೆಯಡಿಯಲ್ಲಿ ಅವರನ್ನೂ ಪರಿಗಣಿಸಲಾಗುವುದು ಎಂದರು. 
  
ಸಭೆಯಲ್ಲಿ ಸರಕಾರಿ ಅಭಿಯೋಜಕಿ ಶ್ರೀಮತಿ ತನುಜಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುರುಷೋತ್ತಮ,  ಮತ್ತು  ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಎಸ್ ಪಕಿರಪ್ಪಾ,  ಮಂಜುನಾಥಕುಮಾರ ಆಗೇರ, ಎಸ್ ಪಕಿರಪ್ಪ, ಗೀತಾ ರಾಮಣ್ಣ ಬೋವಿ. ತುಳಸಿದಾಸ ಪಾವಸ್ಕರ, ವೆಂಕಟೇಶ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.   
 

Read These Next