ಸಿದ್ದೀಕ್ ಕಪನ್‌ಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು; “ಪ್ರತಿಯೊಬ್ಬರಿಗೂ ಮುಕ್ತ ಅಭಿವ್ಯಕ್ತಿಯ ಹಕ್ಕು ಇದೆ”

Source: Vb | By I.G. Bhatkali | Published on 10th September 2022, 8:03 AM | National News |

ಹೊಸದಿಲ್ಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಉತ್ತರ ಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಹಾಗೂ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠ, ಕಪ್ಪನ್ ಮುಂದಿನ 6 ವಾರಗಳು ದಿಲ್ಲಿಯಲ್ಲಿ ಇರಬೇಕಾಗುತ್ತದೆ ಹಾಗೂ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಹಾಜರಾತಿ ಹಾಕಬೇಕಾಗುತ್ತದೆ. ನಂತರ ಅವರು ಕೇರಳಕ್ಕೆ ಮರಳಬಹುದು. ಆದರೆ, ಪೊಲೀಸರಿಗೆ ವರದಿ ಮಾಡುತ್ತಲೇ ಇರಬೇಕು ಎಂದು ಹೇಳಿತು.

ತನಿಖೆಯ ಪ್ರಗತಿಯ ಬಗ್ಗೆ ಈ ಹಂತದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತು. ಆದರೆ, ಕಪ್ಪನ್ ಅವರು ಎಷ್ಟು ಸಮಯ ಕಸ್ಟಡಿಯಲ್ಲಿ ಕಳೆದಿದ್ದಾರೆ ಎನ್ನುವುದನ್ನು ಹಾಗೂ ಪ್ರಕರಣದ ವಿಚಿತ್ರ ಸ೦ಗತಿಗಳು ಹಾಗೂ ಸಂದರ್ಭಗಳನ್ನು ಪರಿಗಣನೆಗೆ ತೆಗೆದುಕೊಂಡಿತು. ಉತ್ತರಪ್ರದೇಶ ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮಹೇಶ್ ಜೇಠಲಾನಿ ಅವರು, ಸಿದ್ದೀಕ್ ಕಪ್ಪನ್ ಅವರಲ್ಲಿ ಪತ್ತೆಯಾದ ದಾಖಲೆಗಳು ಪ್ರಚೋದನಾಕಾರಿ ಸ್ವರೂಪದ್ದಾಗಿದ್ದವು. ಕಪ್ಪನ್ ಹಾಗೂ ಸಹ ಆರೋಪಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಹಾಥರಸ್‌ಗೆ ತೆರಳುತ್ತಿದ್ದರು ಎಂದು ವಾದಿಸಿದರು. ಆದರೆ, ಕಪ್ಪನ್‌ರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳು ಪ್ರಚೋದನಾಕಾರಿ ಸ್ವರೂಪದ್ದಾಗಿದ್ದವು ಎಂಬ ಉತ್ತರಪ್ರದೇಶ ಸರಕಾರದ ವಾದವು ಸುಪ್ರೀಂ ಕೋರ್ಟ್‌ಗೆ ಮನವರಿಕೆಯಾಗಲಿಲ್ಲ.

ಈ ದಾಖಲೆಗಳು ಹಾಥರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದ ದಲಿತ ಯುವತಿಗೆ ನ್ಯಾಯ ಕೋರಿ ಪ್ರತಿಭಟನೆಗೆ ಕರೆ ನೀಡಿದ್ದ ಕರಪತ್ರಗಳಾಗಿದ್ದವು ಎನ್ನುವುದನ್ನು ಗಮನಿಸಿದ ಪೀಠ, ಪ್ರತಿಯೊಬ್ಬ ವ್ಯಕ್ತಿಯೂ ಮುಕ್ತ ಅಭಿವ್ಯಕ್ತಿಯ ಹಕ್ಕನ್ನು ಹೊಂದಿದ್ದಾನೆ ಎಂದು ಹೇಳಿತು. ಬಲಿಪಶುವಿಗೆ ನ್ಯಾಯ ದೊರಕಿಸುವ ಅಗತ್ಯವಿದೆ ಎಂಬ ಪರಿಕಲ್ಪನೆಯ ಪ್ರಚಾರವು ಕಾನೂನಿನ ಕಣ್ಣಿನಲ್ಲಿ ಅಪರಾಧವೇ ಎಂದು ಅದು ಪ್ರಶ್ನಿಸಿತು.

2012ರ ದಿಲ್ಲಿ ಅತ್ಯಾಚಾರ-ಕೊಲೆ ಪ್ರಕರಣದ ಬಳಿಕ ಇಂಡಿಯಾ ಗೇಟ್‌ನಲ್ಲಿ ಜನರು ಪ್ರತಿಭಟನೆ ನಡೆಸಿದ್ದರು ಮತ್ತು ಅದು ಕಾನೂನಿನಲ್ಲಿ ಬದಲಾವಣೆಗೆ ಕಾರಣವಾಗಿತ್ತು ಎಂದು ಪೀಠದ ಸದಸ್ಯರಾಗಿದ್ದ ನ್ಯಾ.ಎಸ್.ರವೀಂದ್ರ ಭಟ್ ಅವರು ಬೆಟ್ಟು ಮಾಡಿದರು.

ಅವರಿಗೆ ಹಾಥರಸ್‌ನಲ್ಲಿ ಯಾವುದೇ ಕೆಲಸ ಇರಲಿಲ್ಲ ಎಂದು ಹೇಳುವ ಮೂಲಕ ಅಲಹಾಬಾದ್ ಉಚ್ಚ ನ್ಯಾಯಾಲಯ ಆಗಸ್ಟ್ 2ರಂದು ಕಪ್ಪನ್ ಅವರಿಗೆ ಜಾಮೀನು ನಿರಾಕರಿಸಿತ್ತು. ಆನಂತರ ಕಪ್ಪನ್ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಅಲಹಾಬಾದ್ ಉಚ್ಚ ನ್ಯಾಯಾಲಯ ಆಗಸ್ಟ್ 23ರಂದು ಕಪ್ಪನ್ ಅವರೊಂದಿಗೆ ಪ್ರಯಾಣಿಸಿದ್ದ ಹಾಗೂ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದ ಮುಹಮ್ಮದ್ ಆಲಂಗೆ ಜಾಮೀನು ನೀಡಿತ್ತು. ಠಾಕೂರರಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ದಲಿತ ಬಾಲಕಿಯ ಕುಟುಂಬವನ್ನು ಭೇಟಿಯಾಗಲು ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಇತರ ಮೂವರೊಂದಿಗೆ 2020 ಅಕ್ಟೋಬರ್ 5ರಂದು ಹಾಥರಸ್‌ಗೆ ತೆರಳುತ್ತಿದ್ದ ಸಂದರ್ಭ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...