ಕಾರವಾರ: ಭಾರತದಂತಹ ರಾಷ್ಟ್ರದಲ್ಲಿ ಐಕ್ಯತೆಯೇ ಪ್ರಧಾನವಾಗಿದೆ. ಬಹು ಸಂಸ್ಕøತಿಯ ಭಾರತವನ್ನು ನಮ್ಮ ಹಿರಿಯರಾದ ಮಹಾತ್ಮ ಗಾಂಧೀಜಿ, ಜವಾಹರಲಾಲ ನೆಹರು, ಸರದಾರ ವಲ್ಲಭಬಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್ ನಂತಹ ಮಹನೀಯರು ಸಂವಿಧಾನದ ಮೂಲಕ ಒಗ್ಗೂಡಿಸಿದ್ದಾರೆ. ಭಾಷಾವಾರು ಪ್ರಾಂತ್ಯಗಳ ಮೂಲಕ ಇಡೀ ಭಾರತವನ್ನು ಬೆಸೆದ ಶ್ರೇಯಸ್ಸು ಸರದಾರ ವಲ್ಲಭಬಾಯಿ ಪಟೇಲ್ ರವರಿಗೆ ಸಲುತ್ತದೆ. ಭಾರತೀಯರು ಸಹೃದಯಿಗಳು. ನಮ್ಮಲ್ಲಿ ಒಗ್ಗಟ್ಟು ಇದೆ. ನಾವು ನಮ್ಮಲ್ಲಿರುವ ಐಕ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರವಾರ ತಾಲೂಕಾ ಅಧ್ಯಕ್ಷ ನಾಗರಾಜ ಹರಪನಹಳ್ಳಿ ತಿಳಿಸಿದರು.
ಅವರು ಆಝಾದ್ ಯುಥ್ ಕ್ಲಬ್ ಕಾರವಾರದವರು ‘ರಾಷ್ಟ್ರೀಯ ಕೋಮಿ ಏಕತಾ ದಿವಸ’ದ ನಿಮಿತ್ತ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಐಕ್ಯತಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಕ್ಷಯ ಕೊ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಫ್ರ್ಯಾಂಕಿ ಪಿ.ಗುಡಿನೋ ಮಾತನಾಡಿ ಇದೊಂದು ಕೊಮು ಸೌಹಾರ್ದತೆಯನ್ನು ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಜನರಲ್ಲಿ ಒಗ್ಗಟ್ಟು ಮೂಡುತ್ತದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ರಾಷ್ಟ್ರ ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು.ಶೇಖ್ ಮಾತನಾಡಿ ಪ್ರತಿಯೊಂದು ಕಾರ್ಯಕ್ರಮಗಳ ಹಿಂದೆ ಒಂದು ಸಂದೇಶ ಅಡಗಿರುತ್ತದೆ. ನಾವು ಅದನ್ನು ಅನುಪಾಲನೆ ಮಾಡಬೇಕು. ನಮ್ಮಲ್ಲಿರುವ ಒಗ್ಗಟ್ಟನ್ನು ಯಾವುದೇ ಕಾರಣಕ್ಕೂ ಒಡೆಯಲು ಕೊಡಬಾರದು. ನಮ್ಮಲ್ಲಿ ಶಾಶ್ವತವಾಗಿ ಏಕತೆ ಇರಬೇಕು. ಇದೇ ಈ ಕಾರ್ಯಕ್ರಮದ ಸಂದೇಶವಾಗಿದೆ ಎಂದು ಹೇಳಿದರು. ಕ.ಸಾ.ಪ.ಸದಸ್ಯೆ ಫೈರೋಜಾ ಬೇಗಂ ಶೇಖ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕ್ಲಬ್ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್ ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಕ್ಲಬ್ನ ಮಾಜಿ ಅಧ್ಯಕ್ಷ ಜಾವೀದ್ ಶೇಖ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕ್ಲಬ್ನ ಅಧ್ಯಕ್ಷ ಮೊಹಮ್ಮದ್ ಅಸಿಫ್ ಶೇಖ್ ಸಂಘಟಿಸಿದ್ದರು.