ಸಾಗರಮಾಲಾ ಯೋಜನೆ ವಿರುದ್ಧ ಮುಂದುವರಿದ ವಿರೋಧ; ರೈತ ಸಂಘ, ಜಯಕರ್ನಾಟಕ ಬೆಂಬಲ ಎಂಟನೇ ದಿನ ಪೂರೈಸಿದ ಮೀನುಗಾರರ ಪ್ರತಿಭಟನೆ

Source: S O News Service | By Office Staff | Published on 21st January 2020, 8:18 PM | Coastal News |

ಕಾರವಾರ: ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರರ ಪ್ರತಿಭಟನೆ ಸೋಮವಾರ 8ನೇ ದಿನ ಪೂರೈಸಿತು. ಕಾಮಗಾರಿ ಸ್ಥಗಿತಗೊಳ್ಳದ ಹಿನ್ನಲೆಯಲ್ಲಿ ಪ್ರತಿಭಟನೆ ಮುಂದುವರೆದಿದೆ. 
ಮೀನುಗಾರರ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆ ಹಾಗೂ ರೈತ ಸಂಘಗಳು ಕೂಡ ಸೋಮವಾರ ಸಾಥ್ ನೀಡಿದ್ದು, ಜಿಲ್ಲಾಧಿಕಾರಿ ಕಛೇರಿ ಎದುರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. 
ಬಂದರು ವಿಸ್ತರಣೆಯಿಂದಾಗಿ ನಗರದ ಪ್ರಮುಖ ಆಕರ್ಷಣೆಯಾಗಿರುವ, ಮೀನುಗಾರರ ಮುಖ್ಯ ಜೀವನಾಧಾರವಾಗಿರುವ ಟ್ಯಾಗೋರ್ ಕಡಲತೀರದ ಅರ್ಧ ಭಾಗ ಕಾಮಗಾರಿಗೆ ಬಲಿಯಾಗಲಿದೆ. ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಕಳೆದ ಎಂಟು ದಿನಗಳಿಂದ ಮೀನುಗಾರರು, ಮೀನುಗಾರ ಮಹಿಳೆಯರು ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿ ಧರಣಿಗೆ ಕುಳಿತಿದ್ದಾರೆ. 
ಜಯಕರ್ನಾಟಕ ಸಂಘಟನೆ, ಕಾರವಾರ ಆಟೋ ಯೂನಿಯನ್ ವತಿಯಿಂದ ಮೀನುಗಾರರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧವೂ ಘೋಷಣೆಗಳನ್ನ ಕೂಗಿದ ಪ್ರತಿಭಟನಾಕಾರರು ಕಡಲತೀರವನ್ನು ಕಸಿದುಕೊಂಡು ಮೀನುಗಾರರನ್ನು ಬೀದಿಗೆ ತಳ್ಳಲು ಮುಂದಾಗಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆ ಮೂಲಕ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ನ್ಯಾಯಕ್ಕಾಗಿ ಆಗ್ರಹಿಸಿ ಧಿಕ್ಕಾರ ಕೂಗಿದರು. ಕಳೆದ ಏಳೆಂಟು ದಿನಗಳಿಂದಲೂ ಮೀನುಗಾರರು ಪ್ರತಿಭಟನೆಯಲ್ಲಿ ನಿರತರಾಗಿದ್ದರೂ ಸಹ ಯಾವೊಬ್ಬ ಜನಪ್ರತಿನಿಧಿಯೂ ಇದುವರೆಗೆ ಸಮಸ್ಯೆ ಆಲಿಸಲು ಆಗಮಿಸಿಲ್ಲ. ಅಲ್ಲದೇ ಕಾಮಗಾರಿಗೂ ಸಹ ತಡೆ ನೀಡದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸರ್ಕಾರ ಮೀನುಗಾರರ ಪರ ನಿಲ್ಲಬೇಕೆಂದು ಆಗ್ರಹಿಸಿ ಮನವಿ ನೀಡಿದ್ದಾರೆ.
ಬಂದರು ವಿಸ್ತರಣೆಯಿಂದಾಗಿ ನಗರದ ಅಲಿಗದ್ದಾ ಕಡಲತೀರ ಸಂಪೂರ್ಣ ನಾಶವಾಗಲಿದ್ದು, ಅಲ್ಲಿ ಮೀನುಗಾರಿಕೆಯನ್ನು ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಅಲ್ಲದೇ ಬಂದರು ನಿರ್ಮಾಣದಿಂದಾಗಿ ಕಡಲತೀರವೇ ಇಲ್ಲದಂತಾಗುವುದರಿಂದ ಅಲ್ಲಿನ ಮೀನುಗಾರರು ಮೀನುಗಾರಿಕೆಯನ್ನೇ ತೊರೆಯಬೇಕಾಗಿದೆ. ನಗರದ ಟ್ಯಾಗೋರ್ ಕಡಲತೀರದಲ್ಲೂ ಮಕ್ಕಳ ಉದ್ಯಾನದ ವರೆಗೆ ಅಲೆತಡೆಗೋಡೆ ನಿರ್ಮಾಣವಾಗುವುದರಿಂದ ಸಾಂಪ್ರದಾಯಿಕ ಮೀನುಗಾರರು ಸಾಕಷ್ಟು ತೊಂದರೆ ಎದುರಿಸಬೇಕಾಗಿದೆ. ಆದ್ದರಿಂದ ನಗರಕ್ಕೆ ಇರುವ ಏಕೈಕ ಕಡಲತೀರವನ್ನು ಉಳಿಸಿಕೊಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 
ಧರಣಿಗೆ ಕುಳಿತಿದ್ದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಸಲ್ಲಿಸಿದ್ದು ಈ ವಿಚಾರವನ್ನ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಅಂತಾ ಜಿಲ್ಲಾಧಿಕಾರಿ ತಿಳಿಸಿದರು. ಪ್ರತಿಭಟನೆ ಎಂಟನೇಯ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಮೀನುಗಾರರ ಮುಖಂಡರು ಹಾಗೂ ರೈತ ಸಂಘದ ಮುಖಂಡರೊಂದಿಗೆ ಸಭೆಯನ್ನ ನಡೆಸಿದರು. ಈ ವೇಳೆ ಪ್ರತಿಭಟನೆ ಹಿಂಪಡೆದುಕೊಳ್ಳುವಂತೆ ಮನವಿ ಮಾಡಿದರೂ ಸಹ ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿಲ್ಲವಾಗಿದ್ದು, ಕಾಮಗಾರಿ ಸ್ಥಗಿತಗೊಂಡು ಯೋಜನೆ ಹಿಂಪಡೆದುಕೊಂಡಲ್ಲಿ ಮಾತ್ರ ಧರಣಿ ನಿಲ್ಲಿಸುವುದಾಗಿ ಮೀನುಗಾರರು ತಿಳಿಸಿದ್ದಾರೆ. ಒಟ್ಟಾರೇ ಕಾರವಾರ ಬಂದರು ವಿಸ್ತರಣೆ ಕಾಮಗಾರಿ ವಿಚಾರ ನಾ ಕೊಡೆ ನೀ ಬಿಡೆ ಎನ್ನುವಂತಾಗಿದೆ.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...