ಎಸ್ ಪಿ ಬಾಲಸುಬ್ರಹ್ಮಣ್ಯಂ ಅಸ್ತಂಗತ. ಬಡವಾಯ್ತು ಜಗತ್ತಿನ ಸಂಗೀತಲೋಕ.

Source: SO News | By Laxmi Tanaya | Published on 25th September 2020, 3:20 PM | National News | Don't Miss |

ಚೆನೈ : ಜಗತ್ತಿನ ಕೋಟ್ಯಾಂತರ ಪ್ರಿಯರ ನೆಚ್ಚಿನ ಕಣ್ಮಣಿಯಾಗಿದ್ದ  ಗಾನಗಂಧರ್ವ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅನಾರೋಗ್ಯದಿಂದ  ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಅವರಿಗೆ 74 ವರ್ಷ ವಯಸ್ಸಾಗಿತ್ತು.

ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಸ್ಪಿಬಿ  ಕಳೆದ ಆಗಸ್ಟ್‌ 5 ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಗೆ ದಾಖಲಾಗಿದ್ದರು. ಹಲವು ದಿನಗಳ ಚಿಕಿತ್ಸೆಯ ಬಳಿಕ ಕೊರೊನಾ ಸೋಂಕಿನಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದ ಅವರನ್ನ   ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿತ್ತಾದರೂ  ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದರು.

ಕಳೆದ ಮೂರ್ನಾಲ್ಕು ದಿನಗಳಿಂದ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಎಸ್‌ ಪಿ ಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಶುಕ್ರವಾರ  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

 ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕರಾಗಿರುವ ಬಾಲಸುಬ್ರಹ್ಮಣ್ಯ ಅವರು ದಕ್ಷಿಣ ಭಾರತದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅವರದ್ದು ಅದ್ವಿತೀಯ ಸಾಧನೆ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಅವರು ನಿರಂತರವಾದ ಸಾಧನೆ ಮಾಡಿದ್ದಾರೆ.

 

ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ

ಜೂನ್ 4, 1946 ರಂದುಜನಿಸಿದ ಬಾಲಸುಬ್ರಹ್ಮಣ್ಯಂ ಸಂಗೀತ ಕಲಿಯೋದಕ್ಕೆ ಅವರ ತಂದೆ ಹರಿಕಥೆ ಹೇಳುತ್ತಿದ್ದ ಎಸ್.ಪಿ.ಸಾಂಬಮೂರ್ತಿ ಯವರೇ  ಪ್ರೇರಣೆಯಾದರು.  ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತವನ್ನ ಅಭ್ಯಾಸ ಮಾಡಿದ ಎಸ್‌ ಪಿ ಬಿ  ನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.

1966 ರಲ್ಲಿ ಎಸ್‌ ಪಿ ಬಿ ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾಗಿ ಇಬ್ಬರಿಂದಲೂ ಮೆಚ್ಚುಗೆಯನ್ನ ಪಡೆದರು.  ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ 'ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ'ದಲ್ಲಿ ಹಾಡಲು ಬಾಲೂಗೆ ಅವಕಾಶ ನೀಡಿದರು. ಇದರಿಂದಾಗಿ ಸಂತೋಷ ವ್ಯಕ್ತಪಡಿಸಿದ  ಬಾಲು 'ನಾನು ಘಂಟಸಾಲ ಅವರ ಏಕಲವ್ಯ ಶಿಷ್ಯ' ಎಂದು ಹೇಳಿಕೊಂಡಿದ್ದಾರೆ. 


ತಮಿಳು ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಹಾಡುಗಳು,  ಕನ್ನಡದಲ್ಲಿ ಒಂದೇ ದಿನ 17 ಗೀತೆಗಳು.  ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಹಾಡಿರುವುದು ಇತಿಹಾಸ.  ದಕ್ಷಿಣ ಭಾರತದ ರಜನೀಕಾಂತ್, ಕಮಲಹಾಸನ್, ಚಿರಂಜೀವಿ ಹೀಗೆ ಎಪ್ಪತ್ತು ಎಂಭತ್ತರ ದಶಕದಿಂದ ಎರಡು ಸಾವಿರದ ದಶಕದವರೆಗಿನ ಬಹುತೇಕ ಹೀರೋಗಳ ಅಚ್ಚುಮೆಚ್ಚಿನ ಧ್ವನಿ ಬಾಲು ಅವರದ್ದು.  ಅವರ ಧ್ವನಿ  ಎಂ.ಜಿ. ಆರ್, ಶಿವಾಜಿ ಗಣೇಶನ್, ಎನ್ ಟಿ ರಾಮರಾವ್, ರಾಜ್ ಕುಮಾರ್, ಅಕ್ಕಿನೇನಿ ಅಂತಹ ಹಿರಿಯರಿಗೆ ಕೂಡಾ ಮೋಡಿ ಮಾಡಿತ್ತು. 

ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ,ಪದ್ಮಭೂಷಣ, ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಬಾಲು ಅವರನ್ನು ಹುಡುಕಿಕೊಂಡು ಬಂದಿವೆ. ಎಸ್ ಪಿ ಬಿ ಅವರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ. ವಿವಿಧ ಭಾಷೆಗಳಲ್ಲಿ  ಇಷ್ಟೊಂದು ಹಾಡುಗಳನ್ನ ಹಾಡಿರುವವರು ಗಾಯಕ ಎಸ್ಪಿಬಿ  ಒಬ್ಬರೇ. 

ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರಲ್ಲಿರುವುದನ್ನು ಎಂದಿಗೂ ಮರೆಯುವಂತಿಲ್ಲ.

ಒಂದು ದಶಕದಿಂದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ನಡೆಸಿಕೊಟ್ಟ ಬಾಲು,  ಇತರ ಭಾಷೆಗಳಲ್ಲೂ ಅಂತದೇ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜರುಗಳವರೆಗೆ ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುತ್ತಿದ್ದ ಏಕೈಕ ವ್ಯಕ್ತಿತ್ವ ಎಸ್‌ ಪಿ ಬಿ ಅವರದ್ದು. ಒಟ್ಟಿನಲ್ಲಿ  ಸಾಂಸ್ಕೃತಿಕ ರಾಯಭಾರಿಯಾಗಿದ್ದ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

 

Read These Next

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...