ಸಂತ್ರಸ್ತರಿಗೆ ಮನೆ ಹಸ್ತಾಂತರಕ್ಕೆ ಕ್ರಮವಹಿಸಲು ಆರ್.ವಿ.ದೇಶಪಾಂಡೆ ಸೂಚನೆ

Source: so news | By Manju Naik | Published on 19th June 2019, 9:24 PM | State News | Don't Miss |

ಮಡಿಕೇರಿ:-ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾದ ಕುಟುಂಬದವರಿಗೆ ಮನೆಗಳನ್ನು ಶೀಘ್ರ ಹಸ್ತಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಸೂಚಿಸಿದ್ದಾರೆ. 
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟ, ಪರಿಹಾರ ಮನೆಗಳ ಪ್ರಗತಿ ಮತ್ತಿತರ ಬಗ್ಗೆ ನಡೆದ ಸಭೆಯಲ್ಲಿ ಸಚಿವರು ಮಾತನಾಡಿದರು. 
ಜುಲೈ, 31 ರೊಳಗೆ ಕರ್ಣಂಗೇರಿ ಮನೆಗಳನ್ನು ಹಸ್ತಾಂತರಿಸಬೇಕು. ಹಾಗೆಯೇ ಆಗಸ್ಟ್, 15 ರೊಳಗೆ ಮದೆನಾಡು ಗ್ರಾಮದ ಬಳಿ ನಿರ್ಮಿಸಲಾಗಿರುವ ಮನೆಗಳನ್ನು ಹಸ್ತಾಂತರಿಸಬೇಕು. ಉಳಿದಂತೆ ಜಂಬೂರಿನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳನ್ನು ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಆರ್.ವಿ.ದೇಶಪಾಂಡೆ ಅವರು ನಿರ್ದೇಶನ ನೀಡಿದರು. 
ಹಾಗೆಯೇ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗೆ ಮನೆಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಹರಿಗೆ ಮನೆ ನೀಡಲು ಮುಂದಾಗಬೇಕು ಎಂದು ಅವರು ಹೇಳಿದರು. 
ಈ ಬಗ್ಗೆ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಕಳೆದ ವರ್ಷದ ಪ್ರಕೃತಿ ವಿಕೋಪದಿಂದಾಗಿ 431 ಮನೆಗಳು ಪೂರ್ಣ ಹಾನಿಯಾಗಿದೆ. 405 ಮನೆಗಳು ಭಾಗಶಃ ಹಾನಿಯಾಗಿದ್ದು, ಒಟ್ಟು 770 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ 431 ಮನೆಗಳನ್ನು ಪ್ರಥಮ ಹಂತದಲ್ಲಿ ನಿರ್ಮಿಸಲಾಗುತ್ತಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಅವರು ತಿಳಿಸಿದರು. 
ಸ್ವತಃ ಮನೆ ನಿರ್ಮಿಸಿಕೊಳ್ಳಲು 83 ಕುಟುಂಬದವರಿಂದ ಅರ್ಜಿಗಳು ಬಂದಿದ್ದು, ಇವರಲ್ಲಿ ಮನೆ ನಿರ್ಮಿಸಲು ಸೂಕ್ತ ಸ್ಥಳವಿರುವ 53 ಕುಟುಂಬಗಳಿಗೆ ಅನುಮತಿ ನೀಡಲಾಗಿದೆ ಎಂದು ಟಿ.ಜವರೇಗೌಡ ಅವರು ಮಾಹಿತಿ ನೀಡಿದರು. 
ಮನೆಗಾಗಿ ಜಿಲ್ಲಾಧಿಕಾರಿ ಅವರ ಕಚೇರಿ, ಉಪ ವಿಭಾಗಾಧಿಕಾರಿಯವರ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗೆ ಹಾಗೂ ವಿಶೇಷ ಅದಾಲತ್ ಸೇರಿದಂತೆ ಒಟ್ಟು 1200 ಅರ್ಜಿಗಳು ಮನೆ ನಿರ್ಮಾಣಕ್ಕೆ ಬೇಡಿಕೆ ಬಂದಿದ್ದು, ಪರಿಶೀಲನಾ ಹಂತದಲ್ಲಿದೆ ಎಂದು ಟಿ.ಜವರೇಗೌಡ ಅವರು ಮಾಹಿತಿ ನೀಡಿದರು. 
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಪ್ರಕೃತಿ ವಿಕೋಪ ಎಲ್ಲಾ ಸಂತ್ರಸ್ತರಿಗೆ ಮನೆ ಕಲ್ಪಿಸಬೇಕು. ಮೂರನೇಯವನಿಂದ ಪರಿಶೀಲನೆಗೆ ಒಳಪಡಿಸುವುದಕ್ಕೆ ಆಕ್ಷೇಪವಿದೆ ಎಂದು ಅವರು ಹೇಳಿದರು. 
ಹಾಗೆಯೇ ಸಂಪಾಜೆ, ಗಾಳಿಬೀಡು ಬಳಿ ಜಾಗವನ್ನು ಗುರುತಿಸಲಾಗಿದೆ. ಆದರೆ ಇದುವರೆಗೆ ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ಕೆ.ಜಿ.ಬೋಪಯ್ಯ ಅವರು ಸಚಿವರ ಗಮನಕ್ಕೆ ತಂದರು. 
ಈ ಬಗ್ಗೆ ಮಾತನಾಡಿದ ಕಂದಾಯ ಸಚಿವರು ಸಂಪಾಜೆ ಮತ್ತು ಗಾಳಿಬೀಡುವಿನಲ್ಲಿ ಶೀಘ್ರವೇ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ರಾಜೀವ್ ಗಾಂಧಿ ವಸತಿ ನಿಗಮದ ಎಂಜಿನಿಯರ್ ಶ್ರೀನಿವಾಸ್ ಅವರು ಕರ್ಣಂಗೇರಿ ಹಾಗೂ ಮದೆನಾಡು ಗ್ರಾಮದ ಬಳಿ ಕ್ರಮವಾಗಿ 35 ಮತ್ತು 80 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಜಂಬೂರಿನಲ್ಲಿ 120 ಮನೆಗಳ ಕಾಮಗಾರಿ ಮೇಲ್ಛಾವಣಿ ಹಂತದಲ್ಲಿದೆ. 150 ಮನೆಗಳ ಅಡಿಪಾಯ ಪೂರ್ಣಗೊಂಡಿದೆ. ಕರ್ಣಂಗೇರಿ ಮತ್ತು ಮದೆನಾಡುವಿನಲ್ಲಿ ಆದಷ್ಟು ಶೀಘ್ರ ಮನೆ ಹಸ್ತಾಂತರಿಸಬಹುದಾಗಿದೆ ಎಂದು ಅವರು ತಿಳಿಸಿದರು. 
ಪ್ರಕೃತಿ ವಿಕೋಪದ ಮನೆ ನಿರ್ಮಾಣ ಕಾಮಗಾರಿ, ರಸ್ತೆ ಸೇರಿದಂತೆ ವಿವಿಧ ಹಂತದ ಕಾಮಗಾರಿಗಳನ್ನು ಸಮಾರೋಪಾದಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು. 
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ಜನಪ್ರತಿನಿಧಿಗಳ ವಿಶ್ವಾಸ ಪಡೆದು ಕಾರ್ಯನಿರ್ವಹಿಸಬೇಕು. ಅದು ಜಿಲ್ಲೆಯಲ್ಲಿ ಆಗುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. 
ಕಾನೂನು ಪ್ರಕಾರ ಕಾರ್ಯನಿರ್ವಹಿಸಿ ಆದರೆ ಪ್ರಜಾಪ್ರಭುತ್ವ ಎಂಬುದನ್ನು ಮರೆಯಬೇಡಿ ಎಂದು ಆರ್.ವಿ.ದೇಶಪಾಂಡೆ ಅವರು ಕಿವಿಮಾತು ಹೇಳಿದರು. 
ತೋಟಗಳಲ್ಲಿ ಮನೆ ನಿರ್ಮಾಣಕ್ಕೆ ವಿರಾಜಪೇಟೆ ತಹಶೀಲ್ದಾರರು ಎನ್‍ಒಸಿ ನೀಡುತ್ತಿಲ್ಲ ಎಂದು ಕೆ.ಜಿ.ಬೋಪಯ್ಯ ಅವರು ದೂರಿದರು. 
ಈ ಬಗ್ಗೆ ಮಾಹಿತಿ ನೀಡಿದ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಅವರು ಸಭೆಯಲ್ಲಿ ಪ್ರಾಥಮಿಕವಾಗಿ ಚರ್ಚಿಸಲಾಗಿದೆಯೇ ಹೊರತು, ಇನ್ನೂ ಸಹ ನಡವಳಿ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 
ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಜನರಿಗೆ ಒಳಿತಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಅರಣ್ಯ ಸಂರಕ್ಷಣೆ ಜೊತೆಗೆ ಜನರ ದಿನನಿತ್ಯದ ಬದುಕನ್ನು ಸಹ ಗಮನಿಸಬೇಕಿದೆ ಎಂದು ಅವರು ಸಲಹೆ ಮಾಡಿದರು. 
ಜಿಲ್ಲೆಯ ಇಳಿಜಾರು, ಬೆಟ್ಟಗುಡ್ಡ, ನದಿ, ತೊರೆ, ಹಳ್ಳಕೊಳ್ಳದ ಬಳಿಯ ಸ್ವಂತ ಜಾಗದಲ್ಲಿ ಮನೆ ನಿರ್ಮಾಣಕ್ಕೆ ನಿರ್ಭಂಧ ಹೇರಿದ್ದು, ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕೆ.ಜಿ.ಬೋಪಯ್ಯ ಅವರು ಒತ್ತಾಯಿಸಿದರು. 
ಕಳೆದ ವರ್ಷದ ಪ್ರಕೃತಿ ವಿಕೋಪದಿಂದಾಗಿ ಮಕ್ಕಂದೂರು ಮತ್ತು ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ಆದರೆ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಕೆ.ಜಿ.ಬೋಪಯ್ಯ ಅವರು ಆಗ್ರಹಿಸಿದರು. 
ಇಳಿಜಾರು, ಬೆಟ್ಟಗುಡ್ಡ, ನದಿ, ತೊರೆ, ಹಳ್ಳಕೊಳ್ಳದ ಬಳಿ ಮನೆ ನಿರ್ಮಾಣ ಮಾಡಬಾರದು ಎಂದು ತಜ್ಞರಿಂದ ತಾಂತ್ರಿಕ ವರದಿ ನೀಡಿದ್ದು, ಅದರಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಸಹ ಈ ಸಂಬಂಧ ಪುನರ್ ಪರಿಶೀಲಿಸಲು ಮತ್ತೊಮ್ಮೆ ತಾಂತ್ರಿಕ ತಂಡ ಕಳುಹಿಸಲಾಗುವುದು. ಆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸಹ ಜೊತೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಆರ್. ವಿ.ದೇಶಪಾಂಡೆ ಅವರು ಸಲಹೆ ಮಾಡಿದರು. 
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು. 
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸಬೇಕು. ಅಗತ್ಯವಿರುವೆಡೆ ಸೇತುವೆಗಳನ್ನು ನಿರ್ಮಿಸಬೇಕು ಎಂದು ಅವರು ಸಲಹೆ ಮಾಡಿದರು. 
ಮಾಲ್ದಾರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಗಿರಿಜನ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಕೂಡಲೇ ಜಿಲ್ಲೆಯ ಎಲ್ಲಾ ಗಿರಿಜನ ಹಾಡಿಗಳಲ್ಲಿ ಬಾಕಿ ಇರುವ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಕೆ.ಜಿ.ಬೋಪಯ್ಯ ಅವರು ಒತ್ತಾಯಿಸಿದರು. 
ಈ ಬಗ್ಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಎರಡು ದಿನದಲ್ಲಿ ವಿದ್ಯುತ್ ಸಂಪರ್ಕ ಸಂಬಂಧ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅವರು ಸೂಚಿಸಿದರು. 
ಜಿಲ್ಲೆಯ ಬಡ ಜನರು ಸೌದೆ ತರಲು ಹೋದರೆ ಛಾಯಾಚಿತ್ರ ತೆಗೆದು ಪ್ರಕರಣ ದಾಖಲಿಸುತ್ತಾರೆ. ಲೋಡ್‍ಗಟ್ಟಲೆ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಕೆ.ಜಿ.ಬೋಪಯ್ಯ ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. 
ಮಾಕುಟ್ಟ ಮಾರ್ಗ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗಡಿ ಬಳಿ ಸೇತುವೆ ನಿರ್ಮಿಸಬೇಕಿದ್ದು, ಮಾಕುಟ್ಟ ಬಳಿ ಸೇತುವೆ ನಿರ್ಮಿಸಲು ಅರಣ್ಯ ಇಲಾಖೆ ಅವರು ಬಿಡುತ್ತಿಲ್ಲ. ಆದಷ್ಟು ಶೀಘ್ರದಲ್ಲಿ ಮಾಕುಟ್ಟ ಬಳಿ ಸೇತುವೆ ನಿರ್ಮಿಸಬೇಕು ಎಂದು ಕೆ.ಜಿ.ಬೋಪಯ್ಯ ಅವರು ಒತ್ತಾಯಿಸಿದರು. 
ಬೆಳೆ ಪರಿಹಾರ ಸಮರ್ಪಕವಾಗಿ ವಿತರಿಸಬೇಕು. ಪೊನ್ನಂಪೇಟೆ ಮತ್ತು ಕುಶಾಲನಗರವನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಣೆ ಮಾಡಿದ್ದು, ಅದರಂತೆ ಕಾರ್ಯನಿರ್ವಹಿಸಬೇಕು. 94ಸಿ ಮತ್ತು 94ಸಿಸಿ ಅಕ್ರಮ ಸಕ್ರಮ ಅರ್ಜಿಗಳು ಹಾಗೂ ಪೋಡಿ ಪ್ರಕರಣಗಳ ವಿಲೇವಾರಿ, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತಿತರ ಪ್ರಗತಿ ಸಾಧಿಸುವಂತೆ ಕಂದಾಯ ಸಚಿವರು ಸೂಚಿಸಿದರು. 
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಆದ ಹಾನಿ, ಬೆಳೆ ಹಾನಿ ಪರಿಹಾರ, ಪುನರ್ ನಿರ್ಮಾಣದ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. 
ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಕೆ.ಪಿ.ಚಂದ್ರಕಲಾ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ, ಪ್ರಾದೇಶಿಕ ಆಯುಕ್ತರಾದ ಯಶವಂತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ನಾನಾ ಇಲಾಖೆ ಅಧಿಕಾರಿಗಳು ಇದ್ದರು.

Read These Next

ಅಂಜುಮನ್ ಶಿಕ್ಷಣ ಸಂಸ್ಥೆಯ ಸುಪುತ್ರಿ ಶಿರಾಲಿಯ ಡಾ. ಅನಿಸಾ ಶೇಖ್ ಗೆ ದಂತ ವೈದ್ಯಕೀಯದಲ್ಲಿ ಪುರಸ್ಕಾರ

ಭಟ್ಕಳ: ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ‘ದುಖ್ತರ್-ಎ-ಅಂಜುಮನ್(ಅಂಜುಮನ್ ಪುತ್ರಿ) ಪ್ರಶಸ್ತಿ ...