ಉಕ್ರೇನ್ ರಾಜಧಾನಿಗೆ ರಷ್ಯಾ ಸೇನೆ ಲಗ್ಗೆ

Source: Vb | By I.G. Bhatkali | Published on 26th February 2022, 8:48 AM | Global News |

ಹೊಸದಿಲ್ಲಿ: ಉಕ್ರೇನ್ ರಾಜಧಾನಿ ಕೀವ್ ದಾಳಿಗೆ ಅಥವಾ ಮುತ್ತಿಗೆಗೆ ಒಳಗಾಗಲಿದೆ ಎಂಬ ಹೆಚ್ಚುತ್ತಿರುವ ಭೀತಿಗಳ ನಡುವೆಯೇ ರಶ್ಯದ ಆಕ್ರಮಣಕಾರಿ ಸೇನೆಯ ಮುಂಚೂಣಿ ಪಡೆಯೊಂದು ಶುಕ್ರವಾರ ನಗರವನ್ನು ಪ್ರವೇಶಿಸಿದ್ದು, ಮೊದಲ ಬಾರಿಗೆ ಘರ್ಷಣೆಗಳು ಭುಗಿಲೆದ್ದಿವೆ. ನಗರದಲ್ಲಿ ಉಂಟಾಗಿರುವ ಹಾನಿಯು ರಷ್ಯನ್ ಪಡೆಯ ದಾಳಿಯ ಭೀಕರತೆಯನ್ನು ತೋರಿಸುತ್ತಿದೆ.

ಕೀವ್‌ನ ಉತ್ತರದಲ್ಲಿರುವ ಒಬೊಲನ್‌ ಜಿಲ್ಲೆಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಾಟ ಮತ್ತು ಸ್ಫೋಟಗಳಿಂದ ಭಯಭೀತ ಪಾದಚಾರಿಗಳು ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ನಗರದ ಕೇಂದ್ರಭಾಗದಲ್ಲಿ ದೊಡ್ಡ ಸ್ಫೋಟಗಳ ಶಬ್ದಗಳು ಕೇಳಿಬರುತ್ತಿದ್ದವು. ಅಲ್ಲಿಯ ನಿವಾಸಿಗಳು ಮೊದಲ ಬಾರಿಗೆ ಕರ್ಥ್ಯ ಮತ್ತು ಬಾಂಬ್ ಸ್ಫೋಟಗಳ ಸದ್ದುಗಳ ನಡುವೆ ತಮ್ಮ ಮೊದಲ ರಾತ್ರಿಯನ್ನು ಕಳೆದಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

'ವೈರಿ ವಿಧ್ವಂಸಕ ಮತ್ತು ವಿಚಕ್ಷಣ' ಗುಂಪು ಘರ್ಷಣೆಗಳನ್ನು ಪ್ರಚೋದಿಸಿತ್ತು ಎಂದು ಉಕ್ರೇನ್ ರಕ್ಷಣಾ ಸಚಿವಾಲಯವು ಹೇಳಿದೆ. ಗುರುವಾರ ಹೆಲಿಕಾಪ್ಟರ್ ನಲ್ಲಿದ್ದ ರಶ್ಯ ಸೈನಿಕರು ಒಬೊಲನ್‌ಸ್ಟಿಗೆ ಸಮೀಪದ ಗೊಸ್ಟೋಮೆಲ್ ವಾಯುನೆಲೆಯ ಮೇಲೆ ದಾಳಿ ನಡೆಸಿದಾಗ ರನ್ ಪಡೆಗಳು ಮೊದಲ ಬಾರಿಗೆ ಕೀವ್ ನಗರದ ಹೊರವಲಯವನ್ನು ತಲುಪಿದ್ದವು. ಉತ್ತರ ಕೀವ್‌ನ ಅಗಲವಾದ ಹೆದ್ದಾರಿಗಳಲ್ಲಿ ಮತ್ತು ದಟ್ಟವಾದ ಜನವಸತಿಯ ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಗಳ ನಡುವೆ ನಡೆಯುತ್ತಿರುವ ಕಾಳಗವು ಸುಮಾರು 30 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ರಾಜಧಾನಿಯ ಮೇಲೆ ರಶ್ಯ ಪಡೆಗಳು ದಾಳಿ ನಡೆಸಿದರೆ ಏನು ಕಾದಿದೆ ಎನ್ನುವುದನ್ನು ಸೂಚಿಸಬಹುದು.

ದ್ವಿತೀಯ ಮಹಾಯುದ್ಧದ ಬಳಿಕ ಐರೋಪ್ಯ ದೇಶವೊಂದರ ಮೇಲಿನ ಬೃಹತ್ ದಾಳಿಯಲ್ಲಿ ತನ್ನ ಯೋಧರು ರಶ್ಯದ ಆಕ್ರಮಣಕಾರರ ವಿರುದ್ಧ ಹೋರಾಡುತ್ತಿರುವಾಗ ಉಕ್ರೇನ್ ಅಧ್ಯಕ್ಷವೊಲೊಡಿಮಿರ್ ಲೆನ್‌ ಅವರು ಕೀವ್‌ನಲ್ಲಿಯೇ ಉಳಿಯುವುದಾಗಿ ಶಪಥವನ್ನು ತೊಟ್ಟಿದ್ದಾರೆ. 'ವೈರಿದೇಶವು ನನ್ನನ್ನು ನಂ.1 ಗುರಿಯನ್ನಾಗಿ ಗುರುತಿಸಿದೆ' ಎಂದು ವೀಡಿಯೊ ಸಂದೇಶದಲ್ಲಿ ಎಚ್ಚರಿಕೆಯನ್ನು ನೀಡಿರುವ ಅವರು, ನನ್ನ ಕುಟುಂಬವು ನಂ.2 ಗುರಿಯಾಗಿದೆ. ನಾನು ರಾಜಧಾನಿಯಲ್ಲಿಯೇ ಇರುತ್ತೇನೆ. ನನ್ನ ಕುಟುಂಬವು ಸಹ ಉಕ್ರೇನ್‌ನಲ್ಲಿದೆ 'ಎಂದು ಹೇಳಿದ್ದಾರೆ.

ತನ್ನ ದೇಶವು ಉಕ್ರೇನ್‌ನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಬಯಸಿದೆ ಎಂದು ಶುಕ್ರವಾರ ಮಾಸ್ಕೊದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ರಷ್ಯದ ವಿದೇಶಾಂಗ ಸಚಿವ ಸೆರ್ಗಿ ಲಾವೋವ್ ಅವರು, ಉಕ್ರೇನನ್ನು ನಿಸ್ಸೇನಿಕರಿಸಲು ಮತ್ತು ನಾಝಿಮುಕ್ತಗೊಳಿಸಲು ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲು ರಷ್ಯದ ಅಧ್ಯಕ್ಷ ಬ್ಲಾದಿಮಿರ್ ಪುಟಿನ್ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಕಳೆದ ಎಂಟು ವರ್ಷಗಳಿಂದಲೂ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಮಾಸ್ಕೊಗೆ ಸಂಯೋಜಿತ ಕ್ರಿಮಿಯಾಕ್ಕೆ ನೀರು ಪೂರೈಸಲು ಪ್ರಮುಖ ಕಾಲುವೆಯೊಂದನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ರಶ್ಯದ ಪಡೆಗಳು ತಿಳಿಸಿವೆ. ಕ್ರಿಮಿಯಾ 2014ರವರೆಗೂ ತನ್ನ ಹೆಚ್ಚಿನ ನೀರನ್ನು ಉತ್ತರ ಕ್ರಿಮಿಯನ್ ಕಾಲುವೆಯ ಮೂಲಕ ಉಕ್ರೇನ್‌ನ ನೀಪರ್ ನದಿಯಿಂದ ಪಡೆದುಕೊಳ್ಳುತ್ತಿತ್ತು. 2014ರಲ್ಲಿ ಕ್ರಿಮಿಯಾ ರಶ್ಯದೊಂದಿಗೆ ಸಂಯೋಜಿತಗೊಂಡ ಬಳಿಕ ಉಕ್ರೇನ್ ಅಧಿಕಾರಿಗಳು ಕಾಲುವೆಗೆ ತಡೆಯೊಡ್ಡಿದ್ದರು.

ಉಕ್ರೇನ್ ಮೇಲಿನ ಆಕ್ರಮಣವು ರಷ್ಯದ ವಿರುದ್ಧ ಗಂಭೀರ ಆರ್ಥಿಕ ನಿರ್ಬಂಧಗಳನ್ನು ಆಹ್ವಾನಿಸಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತಭವನದಿಂದ ಮಾಡಿದ ಭಾಷಣದಲ್ಲಿ ಎರಡು ಅತ್ಯಂತ ದೊಡ್ಡ ಬ್ಯಾಂಕುಗಳಾದ ಸ್ಟೆರ್‌ ಬ್ಯಾಂಕ್ ಮತ್ತು ವಿಟಿಬಿ ಸೇರಿದಂತೆ ಇನ್ನೂ ನಾಲ್ಕು ಬ್ಯಾಂಕುಗಳು ಪಾಶ್ಚಾತ್ಯ ದೇಶಗಳ ನಿರ್ಬಂಧಗಳಿಗೆ ಗುರಿಯಾಗಲಿವೆ. ಇದರ ಜೊತೆಗೆ ಸೂಕ್ಷ್ಮ ಬಿಡಿಭಾಗಗಳ ಮೇಲೆ ಹೇರಲಾಗಿರುವ ರಫ್ತು ನಿಯಂತ್ರಣಗಳು ರಶ್ಯದ ಅರ್ಧಕ್ಕೂ ಹೆಚ್ಚಿನ ಹೈಟೆಕ್ ಆಮದುಗಳನ್ನು ಕಡಿತಗೊಳಿಸುತ್ತದೆ. ದಂಡನೆಗಳು ತೀವ್ರವಾಗಿರುತ್ತವೆ ಮತ್ತು ರಶ್ಯದ ಆರ್ಥಿಕತೆಯ ಮೇಲೆ ಶಾಶ್ವತ ಪರಿಣಾಮವನ್ನುಂಟು ಮಾಡಲಿವೆ ಎಂದು ಹೇಳಿದ್ದಾರೆ.

ಪುಟಿನ್ ಅವರ ಮೇಲೆ ನೇರವಾಗಿ ನಿರ್ಬಂಧಗಳನ್ನು ಹೇರಲು ಸದ್ಯಕ್ಕೆ ಪ್ರಯತ್ನಿಸುವುದಿಲ್ಲ ಎಂದು ಬೈಡನ್ ದೃಢಪಡಿಸಿದರು. ಪುಟಿನ್ ತನ್ನ ಎರಡು ದಶಕಗಳ ಅಧಿಕಾರಾವಧಿಯಲ್ಲಿ ಬೃಹತ್ ರಹಸ್ಯ ಸಂಪತ್ತನ್ನು ಗಳಿಸಿದ್ದಾರೆ ಎನ್ನಲಾಗಿದೆ.

ಉಕ್ರೇನ್ ಬಿಕ್ಕಟ್ಟು ಕುರಿತು ಅಮೆರಿಕವು ಭಾರತದೊಂದಿಗೆ ಸಮಾಲೋಚನೆಗಳನ್ನು ನಡೆಸಲಿದೆ ಎಂದೂ ಬ್ರೆಡನ್ ತಿಳಿಸಿದರು. ಭಾರತವು ರಶ್ಯದೊಂದಿಗೆ ಐತಿಹಾಸಿಕ ಮತ್ತು ಸದೃಢ ಸ್ನೇಹವನ್ನು ಹೊಂದಿದೆ. ಇದೇ ವೇಳೆ ಕಳೆದ ಒಂದೂವರೆ ದಶಕಗಳಲ್ಲಿ ಅಮೆರಿಕದೊಂದಿಗೆ ಅದರ ವ್ಯೂಹಾತ್ಮಕ ಪಾಲುದಾರಿಕೆಯು ಅಭೂತಪೂರ್ವ ವೇಗದಲ್ಲಿ ಬೆಳವಣಿಗೆಯಾಗಿದೆ.

ಗುರುವಾರ ತಡರಾತ್ರಿ ಪುಟಿನ್ ಅವರೊಂದಿಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಅವರನ್ನು ಮನವಿ ಮಾಡಿಕೊಂಡಿದ್ದಾರೆ. ಭಾರತದ ತುರ್ತು ಹಸ್ತಕ್ಷೇಪವನ್ನು ಉಕ್ರೇನ್ ಕೋರಿಕೊಂಡ ಬಳಿಕ ಈ ಮಾತುಕತೆ ನಡೆದಿದೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...