ಆರ್.ಎಸ್.ಎಸ್. ಮುಸ್ಲಿಮ್ ವಿರೋಧಿಯಲ್ಲ ಬದಲಾಗಿ ಅದು ಹಿಂದೂ ಹಾಗೂ ದೇಶವಿರೋಧಿಯಾಗಿದೆ-ಮಹೇಂದ್ರಕುಮಾರ್

Source: sonews | By Staff Correspondent | Published on 17th March 2019, 11:49 PM | Coastal News | Don't Miss |

ಉಡುಪಿ: ಆರೆಸ್ಸೆಸ್ ಮುಸ್ಲಿಮರ ವಿರೋಧಿ ಅಲ್ಲ. ಯುವಕರನ್ನು ದಾರಿ ತಪ್ಪಿಸಲು ಅದನ್ನು ಬಳಕೆ ಮಾಡುತ್ತಿದೆಯೇ ಹೊರತು, ಅದು ನಿಜವಾಗಿಯೂ ದಲಿತರು, ಶೂದ್ರ, ಶೋಷಿತ, ಹಿಂದುಳಿದ ವರ್ಗ, ಹಿಂದೂ ಹಾಗೂ ದೇಶ ವಿರೋಧಿಯಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಇನ್ನೊಂದು ಸ್ವಾತಂತ್ರ ಹೋರಾಟದ ಅಗತ್ಯ ಈ ದೇಶಕ್ಕೆ ಬರಲಿದೆ ಎಂದು  ಭಜರಂಗದಳದ ಮಾಜಿ ನಾಯಕ ಹಾಗೂ ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ಶಾಂತಿ, ಸಹೋದರತೆ ಮತ್ತು ಐಕ್ಯತೆಗಾಗಿ ಸಹಬಾಳ್ವೆ ಉಡುಪಿ ವತಿಯಿಂದ ಉಡುಪಿ ಕಲ್ಸಂಕ ಬಳಿಯ ರಾಯಲ್ ಗಾರ್ಡನ್‌ನಲ್ಲಿ ರವಿವಾರ ಆಯೋಜಿಸಲಾದ ‘ಸರ್ವಜನೋತ್ಸವ’ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.

ದಲಿತರ ವಿರುದ್ಧ ನಡೆಯುತ್ತಿರುವ ಅಮಾನವೀಯ ಶೋಷಣೆಗಳ ಪರವಾಗಿ ಆರೆಸ್ಸೆಸ್ ಎಂದಿಗೂ ನಿಂತಿಲ್ಲ. ಹಿಂದೂ ಧರ್ಮದೊಳಗಿನ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲ್ಲ. ಕುವೆಂಪು ಅವರನ್ನು ಆದರ್ಶ ವ್ಯಕ್ತಿಯಾಗಿ ಇಂದಿಗೂ ಸ್ವೀಕರಿಸಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದ ನಾವು ಇಡೀ ದೇಶವನ್ನು ಬಲಿಕೊಡುತ್ತಿದ್ದೇವೆ ಎಂದು ಅವರು ಆರೋಪಿಸಿದರು.

ನರೇಂದ್ರ ಮೋದಿ ಇಂದು ಮುಂಚೂಣಿಯಲ್ಲಿ ಆಳ್ವಿಕೆ ಮಾಡುತ್ತಿದ್ದರೆ ಅವರ ಹಿಂದೆ ಆರೆಸ್ಸೆಸ್ ಸಿದ್ಧಾಂತ ಕೆಲಸ ಮಾಡುತ್ತಿದೆ. ಮುಖವಾಡ ಧರಿಸಿಕೊಂಡು ಹಿಂಸೆಯನ್ನು ಬಿತ್ತುವ ಕೆಲಸ ನಡೆಯುತ್ತಿದೆ. ಇಡೀ ದೇಶವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ನಮ್ಮ ದೇಶ ಭಾರತಾಗಿಯೇ ಉಳಿಯಬೇಕು. ಅದಕ್ಕೆ ನಾವೆಲ್ಲ ಬೀದಿಗೆ ಇಳಿಯಬೇಕು ಎಂದು ಅವರು ಹೇಳಿದರು.

ಸಹೋದರತೆಯಿಂದ ಬದುಕುವುದೇ ಶ್ರೇಷ್ಠ ಧರ್ಮ: ಮರುಳಕಂಕರ ಸ್ವಾಮೀಜಿ

ಭಾರತೀಯ ಧರ್ಮಗ್ರಂಥವಾಗಿರುವ ಸಂವಿಧಾನ ಹೇಳಿದಂತೆ ನಡೆದುಕೊಳ್ಳುವ ಬದಲು ಯಾವುದೋ ಕಾಲದ ರಾಮಾಯಣ, ಮಹಾಭಾರತ ಮುಂದಿಟ್ಟು ಕೊಂಡು ನಮ್ಮ ಜೀವನವನ್ನು ದೇವರ ಹೆಸರಿನಲ್ಲಿ ಬಲಿ ಕೊಡುತ್ತಿದ್ದೇವೆ ಎಂದು ಕುಲಬುರ್ಗಿ ಮರುಳಕಂಕರ ದೇವರ ಗುರು ಪೀಠದ ಶ್ರೀಸಿದ್ಧಬಸವ ಕಬೀರ ಮಹಾಸ್ವಾಮಿ ಹೇಳಿದ್ದಾರೆ.

ಸಮಾವೇಶವನ್ನು ತೆಂಗಿನ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ, ಅವರು ಮಾತನಾಡುತಿದ್ದರು.

ಎಲ್ಲರನ್ನು ಸಹೋದರಂತೆ ಕಾಣುವುದೇ ನಿಜವಾದ ದೊಡ್ಡ ಹಾಗೂ ಶ್ರೇಷ್ಠ ಧರ್ಮ. ಆದರೆ ಇಂದು ಧರ್ಮಗಳು ಜಾತಿಯ ಪ್ರತಿರೂಪ ತಾಳಿ ವಿಷಮ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ಇದರಿಂದ ನಾವು ದೇಶದ ರಕ್ಷಣೆ ಮಾಡಬೇಕಾಗಿದೆ. ಸಹಬಾಳ್ವೆಯಿಂದ ಬದುಕುವ ಮೂಲಕ ನಾವೆಲ್ಲ ಒಂದು ಎಂಬುದು ಇಡೀ ದೇಶಕ್ಕೆ ತೋರಿಸಬೇಕಾಗಿದೆ ಎಂದು ಅವರು ಹೇಳಿದರು.

ಇಂದು ಕಾವಿಯೊಳಗೆ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣದಂತಹ ಸಾಕಷ್ಟು, ಕೆಟ್ಟ ವಿಚಾರಗಳು ಅಡಗಿ ಕೂತಿವೆ. ಭವಿಷ್ಯ ನುಡಿಯುವ ಸ್ವಾಮೀಜಿಗಳು ಇತ್ತೀಚೆಗೆ ನಡೆದ ಯೋಧರ ಮೇಲಿನ ಭಯೋತ್ಪಾದನಾ ದಾಳಿಯನ್ನು ಯಾಕೆ ಮೊದಲೇ ಹೇಳಿಲ್ಲ. ಆಗ ಅವರು ಎಲ್ಲಿ ಮಲಗಿದ್ದರು. ಅವರ ಪಂಚಾಗ, ಜ್ಯೋತಿಷ್ಯ ಏನು ಮಾಡುತ್ತಿತ್ತು. ನಮ್ಮನ್ನು ಯಾವುದೇ ದೇವರು ರಕ್ಷಣೆ ಮಾಡಲ್ಲ. ನಮ್ಮ ಆತ್ಮವೇ ನಮ್ಮನ್ನು ರಕ್ಷಣೆ ಮಾಡುತ್ತದೆ. ಆದುದರಿಂದ ನಾವು ವಿಚಾರವಾದ ವನ್ನು ತಿಳಿದುಕೊಳ್ಳಬೇಕು ಎಂದರು.

ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷ ವೈ.ಎಸ್.ವಿ.ದತ್ತಾ ಮಾತನಾಡಿ, ಚೌಕಿದಾರ ಕಳ್ಳತನ ಮಾಡಿದರೂ ಸಿಕ್ಕಿ ಬಿಳದಂತೆ ಎಚ್ಚರ ವಹಿಸುತ್ತಿದ್ದಾರೆ. ಇಡೀ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಬಗ್ಗೆ ಅರಿತುಕೊಳ್ಳಬೇಕಾಗಿದೆ. ನಿರ್ಭೀತರಾಗಿ ಇರಬೇಕಾದ ದೇಶದ ಎಲ್ಲ ಸ್ವಾಯತ್ತ ಸಂಸ್ಥೆಗಳು ಒಬ್ಬ ವ್ಯಕ್ತಿಯ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿವೆ. ಇದು ನಮ್ಮ ದೇಶದ ಘೋರ ದುರಂತವಾಗಿದೆ ಎಂದು ಆರೋಪಿಸಿದರು.

ಅಧ್ಯಕ್ಷತೆಯನ್ನು ಚಿಂತಕ ದಿನೇಶ್ ಅಮೀನ್ ಮಟ್ಟು ವಹಿಸಿದ್ದರು. ಅಂಕಣಕಾರ ಶಿವಸುಂದರ್ ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್, ಸಿಪಿಎಂ ಮುಖಂಡ ಜಿ.ಎನ್.ನಾಗರಾಜ್, ದಲಿತ ಚಿಂತಕ ಇಂಧೂದರ ಹೊನ್ನಾಪುರ, ಧರ್ಮ ಗುರು ಚೇತನ್ ಲೋಬೊ, 'ವಾರ್ತಾಭಾರತಿ' ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಹಿರಿಯ ಚಿಂತಕ ಜಿ.ರಾಜ ಶೇಖರ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಾಜಿ ಅಬ್ದುಲ್ಲಾ ಪರ್ಕಳ, ದಸಂಸ ಮುಖಂಡ ಶೇಖರ್ ಹೆಜಮಾಡಿ, ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್ ಕೊಡವೂರು, ಕೊರಗ ಮುಖಂಡರಾದ ಪುತ್ರನ್ ಹೆಬ್ರಿ, ಬೊಗ್ರ ಕೊರಗ, ಪ್ರಶಾಂತ್ ಜತ್ತನ್ನ, ಎಸ್. ವಿಜಯ್, ಅಲ್ವಿನ್ ಕ್ವಾಡ್ರಸ್, ಜನೆಟಾ ಬರ್ಬೊಸ, ಅನಿತಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಂದಿಸಿದರು. ಅಲ್ವಿನ್ ದಾಂತಿ ಹಾಗೂ ಡಾ.ಸುನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತೆಂಗಿನ ಸಸಿ, ಮಡಕೆಗೆ ಏಲಂ !

ಕಾರ್ಯಕ್ರಮದ ಕೊನೆಯಲ್ಲಿ ಸಮಾವೇಶ ಉದ್ಘಾಟನೆ ಸಂದರ್ಭದಲ್ಲಿದ್ದ ತೆಂಗಿನ ಸಸಿ ಹಾಗೂ ನೀರು ಬಳಸಿದ ಮಡಕೆಯನ್ನು ಏಲಂ ಹಾಕಿರುವುದು ಎಲ್ಲರ ಗಮನ ಸೆಳೆಯಿತು.

ಏಲಂನಲ್ಲಿ ಹಲವು ಮಂದಿ ಭಾಗವಹಿಸಿದ್ದರು. ಕೊನೆಗೆ ತೆಂಗಿನ ಸಸಿಯನ್ನು ಶಭಿ ಖಾಝಿ ಅವರು ಒಂದು ಸಾವಿರ ರೂ.ಗೆ ಹಾಗೂ ಮಡಕೆಯನ್ನು ರಮೇಶ್ ಕಾಂಚನ್ 500ರೂ.ಗೆ ಖರೀದಿಸಿದರು. ಈ ಕಾರ್ಯಕ್ರಮ ಕೊನೆಯಲ್ಲಿ ಮನರಂಜನೆಯ ರೀತಿಯಲ್ಲಿ ನಡೆಯಿತು.

ಸರ್ವ ಧರ್ಮೀಯ ಸ್ವಯಂ ಸೇವಕರು

ಸಾಹಸ್ರಾರು ಸಂಖ್ಯೆಯಲ್ಲಿ ನೆರೆದ ಈ ಸಮಾವೇಶದಲ್ಲಿ ಹಿಂದೂ, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಸ್ವಯಂ ಸೇವಕರಾಗಿ ದುಡಿಯುವ ಮೂಲಕ ಸೌಹಾರ್ದತೆಯನ್ನು ಮೆರೆದರು.

ಸಮಾವೇಶದಲ್ಲಿ ನೆರೆದ ಮಂದಿ ನೀರು, ಮಜ್ಜಿಗೆ ವಿತರಿಸುವ ಕಾರ್ಯವನ್ನು ಸರ್ವ ಧಮೀಯರು ಜೊತೆಯಾಗಿ ನಡೆಸಿದರು. ಇದರಲ್ಲಿ ಮಹಿಳೆಯರು, ಹಿರಿಯರು ಕೂಡ ಇದ್ದರು. ಅಲ್ಲದೆ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಈ ಮೂಲಕ ಸ್ವಯಂ ಸೇವಕರ ಕ್ರಮ ಮೆಚ್ಚುಗೆಗೆ ಪಾತ್ರ ವಾಯಿತು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...