ಪೌರತ್ವ ತಿದ್ದುಪಡೆ ಕಾಯ್ದೆಯ ಪ್ರತಿರೋಧ

Source: sonews | By Staff Correspondent | Published on 20th January 2020, 6:39 PM | National News | Special Report | Don't Miss |

ಗೋಪಾಲ್ ಗುರು

ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಇಂದು ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳು ಬಹಳಕಾಲದ ನಂತರ ಸಾರ್ವಜನಿಕರ ಹೋರಾಟಗಳನ್ನು ವಿಶಾಲಭಿತ್ತಿಯಲ್ಲಿ ಗ್ರಹಿಸಬೇಕಾದ ಅಗತ್ಯವನ್ನು ಹುಟ್ಟುಹಾಕಿದೆ. ಈ ಪ್ರತಿಭಟನೆಗಳು ಎರಡು ನಿರ್ದಿಷ್ಟ ಬಗೆಗಳಲ್ಲಿ  ವಿಶಾಲವಾದ ಅರ್ಥವನ್ನು ಒದಗಿಸುತ್ತವೆ. ಮೊದಲನೆಯದಾಗಿ ಈ ಪ್ರತಿಭಟನೆಗಳು ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಗಳೆಂಬ ಎರಡು ಅವಳಿ ಮೌಲ್ಯಗಳನ್ನು ಆಧರಿಸಿದ ಗಾಂಧಿವಾದಿ ರಾಷ್ಟ್ರಪರಿಕಲ್ಪನೆಯ ಬಗ್ಗೆ ಸಾರ್ವಜನಿಕರ ಗಮನವು ಹೊರಳುವಂತೆ ಒತ್ತಡ ಹಾಕಿದೆ. ಎರಡನೆಯದಾಗಿ ಇತರ ಹಲವು ವಿಷಯಗಳ ಜೊತೆಗೆ ಭಾರತೀಯ ಜೀವನದ ಹೊಸ ಸಂವಿಧಾನಾತ್ಮಕತೆಯನ್ನು ಒದಗಿಸಿದ ಅಂಬೇಡ್ಕರ್ ಅವರನ್ನೂ ಈ ಪ್ರತಿಭಟನೆಗಳು ಉಲ್ಲೇಖಿಸುತ್ತಿವೆ. ಈ ಸಂವಿಧಾನಾತ್ಮಕತೆಯು ಅಂಬೇಡ್ಕರ್ ಅವರ ಸಾಂವಿಧಾನಿಕ ಪ್ರಜಾತಂತ್ರ ಹಾಗೂ ಪ್ರಜಾತಾಂತ್ರಿಕ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಒಳಗೊಂಡಿದೆ.

ಸಾಂವಿಧಾನಾತ್ಮಕ ಪ್ರಜಾತಂತ್ರವು ಆಳುವ ಸರ್ಕಾರಗಳು ವ್ಯಕ್ತಿಗಳ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದನ್ನು ಶಾಸನಾತ್ಮಕವಾಗಿ ಕಡ್ಡಾಯ ಮಾಡುತ್ತದೆ. ಅಂಬೇಡ್ಕರ್ ಅವರ ಪ್ರಜಾತಾಂತ್ರಿಕ ರಾಷ್ಟ್ರವಾದದ ಪರಿಕಲ್ಪನೆ ಅನನ್ಯವಾಗಿದೆ. ಏಕೆಂದರೆ ಅದು ಎಲ್ಲಾ ಮನುಷ್ಯರನ್ನೂ ಸಮಾನವಾಗಿ ಗೌರವಿಸಬೇಕೆಂಬ ಮೌಲ್ಯಗಳನ್ನು ಅಡಕಮಾಡಿಕೊಳ್ಳುವ ಮೂಲಕ ಮಾತ್ರ ರಾಷ್ಟ್ರವಾದದ ಅರ್ಥ ಪರಿಪೂರ್ಣಗೊಳಿಸುತ್ತದೆ. ಹೀಗಾಗಿ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಸರ್ವ ಮಾನ್ಯವಾದ ರಾಷ್ಟ್ರವಾದದ ಪರಿಕಲ್ಪನೆಯೊಂದಿಗೆಯೇ ಶಾಂತಿ ಮತ್ತು ಪ್ರಜಾತಾಂತ್ರಿಕ ಮೌಲ್ಯವಾದ ಸ್ವಾತಂತ್ರ್ಯವೆಂಬ ಪರಿಕಲ್ಪನೆಯ  ವಿಶ್ವಾತ್ಮಕ ಸಾರವನ್ನು ಪಡೆದುಕೊಳ್ಳುವಂತೆ ಮಾಡುತ್ತದೆ. ಈ ಇಬ್ಬರೂ ಚಿಂತಕರೂ ವಿಶ್ವಾತ್ಮಕ ಸತ್ಯಗಳ ಪ್ರತಿರೂಪಗಳೇ ಆಗಿರುವುದರಿಂದ ಈ ಇಬ್ಬರನ್ನೂ ವಿಶ್ವಾತ್ಮಕಗೊಳಿಸಬಹುದೆಂದೂ ಸಹ ವಾದಿಸಬಹುದು. ಪ್ರತಿಭಟನಾಕಾರರು ಈ ಇಬ್ಬರಿಗೆ ತೋರಿಸುವ ಬದ್ಧತೆಗಳು ಕೇವಲ ಮಾತಿನವರಸೆಗೆ ಸೀಮಿತವಾಗದೆ ನಿಶ್ಚಿತ ಬದ್ಧತೆಯನ್ನು ವ್ಯಕ್ತಪಡಿಸುತ್ತಿವೆ. ಗಾಂಧಿ ಮತ್ತು ಅಂಬೇಡ್ಕರರೊಂದಿಗೆ  ಪ್ರತಿಭಟನಾಕಾರರ ಸಾಂಗತ್ಯ ನಿರಂತರವಾಗುತ್ತಿದೆ. ಸಾಂವಿಧಾನಾತ್ಮಕ ಪ್ರಜಾತಂತ್ರದಂತಹ ವಿಶ್ವಾತ್ಮಕ ತಾತ್ವಿಕತೆಯಲ್ಲಿ ಲಿಂಗ ಮತ್ತು ಜಾತಿ ತಾರತಮ್ಯಗಳಂತಹ ನಿರ್ದಿಷ್ಟ ವಿಷಯಗಳನ್ನು ಬೆರೆಸುವಂತಹ ನೈತಿಕ ಸ್ಥೈರ್ಯವನ್ನು ಪ್ರತಿಭಟನಾಕಾರರು ತೋರುವ ಮೂಲಕ ಗಾಂಧಿ ಮತ್ತು ಅಂಬೇಡ್ಕರ್‌ರನ್ನು ಬೆಸೆಯುತ್ತಿದ್ದಾರೆ. ವಾಸ್ತವವಾಗಿ ಈ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವವರು ಈ ಪ್ರತಿಭಟನೆಗಳ ಮುಂಚೂಣಿಯಲ್ಲಿರು ಮಹಿಳೆಯರೇ ಆಗಿದ್ದಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಜಾತಿ ಮತ್ತು ಲಿಂಗಾಧಾರಿತ ದೌರ್ಜನ್ಯಗಳ ಕಾರಣದಿಂದ ಮೇಲೇಳುವ ವಾಸ್ತವಿಕ ಸತ್ಯಗಳನ್ನು ವಿಶ್ವಾತ್ಮಕ ಸತ್ಯಗಳಡಿ ಅಡಕಗೊಳಿಸುವುದು ಒಂದು ರಾಜಕೀಯ ಕ್ರಿಯೆಯೇ ಆಗಿದೆ. ಏಕೆಂದರೆ ಆ ಮೂಲಕ ಅದು ಪಾಕ್ಷಿಕ ವಾಸ್ತವಿಕ ಸತ್ಯಗಳು ವಿಶಾಲವಾದ ಅಣಿನೆರೆಕೆಯ ಅವಕಾಶಗಳನ್ನು ಆವರಿಸಿಕೊಳ್ಳದಂತೆ ಮಾಡುತ್ತದೆ. ಈ ಪ್ರತಿಭಟನೆಗಳು ಸಾಂವಿಧಾನಾತ್ಮಕ ಪ್ರಜಾತಂತ್ರ ಮತ್ತು ಸಾಂವಿಧಾನಾತ್ಮಕ ನೈತಿಕತೆಯನ್ನು ಜೊತೆಗೂಡಿ ಅರಸಲು ಪ್ರತಿಭಟನಾಕಾರರಿಗೆ ಒಂದು ಅವಕಾಶವನ್ನು ಒದಗಿಸಿಕೊಟ್ಟಿದೆ. ಗಾಂಧಿ ಮತ್ತು ಅಂಬೇಡ್ಕರ್ ಅವರು ಒದಗಿಸುವ ನೈತಿಕ ಸಾಧನಗಳ ಮೂಲಕ ವಿಶ್ವಾತ್ಮಕ ಸತ್ಯಗಳನ್ನು ಅರಸಲು ಈ ಪ್ರತಿಭಟನೆಗಳು ಒಂದು ಅವಕಾಶವನ್ನು ಒದಗಿಸಿಕೊಟ್ಟಿದೆ. ಸತ್ಯದ ಒಡೆತನದ ಪ್ರತಿಪಾದನೆಗಿಂತ ವಿಶ್ವಾತ್ಮಕ ಸತ್ಯವನ್ನು ಅರಸುವ ನೈತಿಕ ಅಗತ್ಯಗಳಿಂದಲೇ ಈ ಪ್ರತಿಭಟನೆಗಳು ಪ್ರೇರಣೆಯನ್ನು ಪಡೆದುಕೊಂಡಿವೆ. ಸತ್ಯದ ಒಡೆತನವನ್ನು ಪ್ರತಿಪಾದಿಸುವುದೆಂದರೆ ಜಾತಿ ಮತ್ತು ಲಿಂಗ ದೌರ್ಜನ್ಯಗಳ ಪಾಕ್ಷಿಕ ವಾಸ್ತವಿಕ ಸತ್ಯಗಳನ್ನು ಪೌರತ್ವದಂತಹ ಸಾರ್ವತ್ರಿಕ ಪ್ರಶ್ನೆಗಿಂತ ಪ್ರಧಾನವಾಗಿಸುವುದಾಗಿದೆ. ಪ್ರಜಾತಂತ್ರದಂತ ಸಾರ್ವತ್ರಿಕ ಪ್ರಶ್ನೆಯ ಎದಿರು ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಬದಿಗಿರಿಸುವಂತೆ ಮಾಡುವಂತೆ ಸಾಮಾಜಿಕ ಗುಂಪುಗಳನ್ನು ಪ್ರೇರೇಪಿಸುವಷ್ಟು ಮಟ್ಟಿಗೆ ಸತ್ಯಗಳು ವಿಶ್ವಾತ್ಮಕವಾಗಿರುತ್ತದೆ. ಯಾವುದೇ ನಿರ್ದಿಷ್ಟ ಮುಖಗವುಸುಗಳನ್ನು ಹಾಕಿಕೊಳ್ಳದೆ ಈ ವಿಶ್ವಾತ್ಮಕ ಸತ್ಯಗಳನ್ನು ಸಾಮೂಹಿಕವಾಗಿ ಅರಸಬಹುದಾಗಿದೆ. ಸತ್ಯಕ್ಕೆ ಆತ್ಮದ ಬಲವಿರುವುದರಿಂದ ಯಾವುದೇ ಕಪಟ ಮುಸುಕುಗಳ ಅಗತ್ಯ ಬೀಳುವುದಿಲ್ಲ.

ಆದರೆ ಸುಳ್ಳಿಗೆ ಅವಿತುಕೊಳ್ಳಲು ಮುಖವಾಡದ ಅಗತ್ಯವಿರುತ್ತದೆ. ಆತ್ಮಬಲದ ಆಕರವಾಗಿರುವ ಸಾರ್ವತ್ರಿಕ ಸತ್ಯವು ಗಾಂಧಿ ಮತ್ತು ಅಂಬೇಡ್ಕರ್‌ಗಳನ್ನು ಮಾರ್ಗದರ್ಶಿ ಸಂಕೇತಗಳನ್ನಾಗಿಸಿಕೊಂಡ ಪ್ರತಿಭಟನೆಗಳಲ್ಲಿ ರಾಜಕೀಯ ಸತ್ವವನ್ನು ಪಡೆದುಕೊಳ್ಳುತ್ತದೆ. ಈ ಬಗೆಯಲ್ಲಿ ವಿಶ್ವಾತ್ಮಕ ಸತ್ಯದ ಬದ್ಧತೆಗಳು ಸಹಜವಾಗಿಯೇ ಅದರ ವಿರೋಧಿಗಳಲ್ಲಿ ರಾಷ್ಟ್ರವಾದ ಮತ್ತು ಸ್ವಾತಂತ್ರ್ಯಗಳ ಬಗ್ಗೆ ಸಾಮಾನ್ಯ ಜನರಲ್ಲಿ ಸಂಕುಚಿತವಾದ ಪರಿಕಲ್ಪನೆಯನ್ನು ಬಿತ್ತುವಂತೆ ಮಾಡುತ್ತದೆ. ಅಂತಹ ವಿರೋಧಿಗಳೇ ಯಾವುದೇ ಬಗೆಯ ಪ್ರತಿರೋಧವನ್ನು ದೇಶದ್ರೋಹವೆಂದು ಬಣ್ಣಿಸುತ್ತಿದ್ದಾರೆ. ಇದು ಪರಿಣಾಮದಲ್ಲಿ ಪ್ರಜಾತಂತ್ರವನ್ನು ರಾಷ್ಟ್ರವಾದಕ್ಕೆ ಎದುರಾಗಿ ನಿಲ್ಲಿಸುತ್ತದೆ. ಗಾಂಧಿ ಮತ್ತು ಅಂಬೇಡ್ಕರ್‌ರವರ ದೃಷ್ಟೀಕೋನದಲ್ಲಿ ನೋಡುವುದಾದರೆ ರಾಷ್ಟ್ರವಾದಕ್ಕೆ ಸಮಾಜವಾದಿ ರಾಷ್ಟ್ರವಾದ, ಬಹುಜನ ರಾಷ್ಟ್ರವಾದ ಅಥವಾ ಪ್ರಜಾತಾಂತ್ರಿಕ  ರಾಷ್ಟ್ರವಾದದಂತಹ ಹಲವು ಅರ್ಥಗಳು ಪ್ರಾಪ್ತವಾಗುತ್ತವೆ. ಅದೇ ರೀತಿ ಅದರ ವಿರೋಧಿಗಳು ಪೌರತ್ವದ ಸಾಂವಿಧಾನಿಕ ಹಕ್ಕು ಕೇವಲ ಒಂದು ಧರ್ಮದವರಿಗೆ ಮಾತ್ಯ್ರ ಸೀಮಿತವಾಗಬೇಕೆಂದು ವಾದಿಸುತ್ತಾರೆ. ಇದು ಸಂವಿಧಾನದಲ್ಲಿ ಪೌರತ್ವಕ್ಕೆ ನೀಡಲಾಗಿರುವ ವಿಶ್ವಾತ್ಮಕ ತಳಹದಿಯನ್ನು ನಿರಾಕರಿಸುತ್ತದೆ. ಸಾರ್ವಜನಿಕ ವಲಯದಲಿ ಸುಳ್ಳು ಸುದ್ದಿಯನ್ನು ಹುಟ್ಟುಹಾಕಿ ತುಕ್ಡೆ-ತುಕ್ಡೆ ಎಂಬಂಥ ಆಧಾರವಿಲ್ಲದ ಘೋಷಣೆಗಳನ್ನು ಬಿತ್ತುತ್ತಿರುವವರು  ಕೆಲವು ಜನರಲ್ಲಿ ರಾಷ್ಟ್ರವಾದದ ಬಗ್ಗೆ ಸಂಕುಚಿತ ಪರಿಕಲ್ಪನೆಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಪ್ರಯತ್ನಗಳು ಸಂವಿಧಾನದ ಮೂಲಭೂತ ತಾತ್ವಿಕ ಅಡಿಪಾಯವಾದ ಪ್ರಜಾತಾಂತ್ರಿಕ ಪೌರತ್ವ ಮತ್ತು ರಾಷ್ಟ್ರವಾದಗಳಂತಹ ವಿಶ್ವಾತ್ಮಕ ಸತ್ಯಗಳನ್ನು ಗೊಂದಲಗೊಳಿಸುತ್ತವೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಪತಂಜಲಿಯಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ; ಕಾನೂನು ಕ್ರಮ ಎದುರಿಸಲು ಸಿದ್ದರಾಗಿ ಪತಂಜಲಿಗೆ ಸುಪ್ರೀಂ ಕೋರ್ಟ್ ಚಾಟಿ

ವೈಜ್ಞಾನಿಕ ತಳಹದಿಯ ಔಷಧಿಗಳನ್ನು ಟೀಕಿಸುವ ಹಾಗೂ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...