ಗಣರಾಜ್ಯೋತ್ಸವದಲ್ಲಿ 'ಅಂಬೇಡ್ಕರ್' ತೆರವು; ರಾಜ್ಯಾದ್ಯಂತ ವ್ಯಾಪಕ ಆಕ್ರೋಶ; ನ್ಯಾಯಾಧೀಶರ ವಿರುದ್ಧ ದೇಶದ್ರೋಹ ಪ್ರಕರಣ' ದಾಖಲಿಸಲು ಒತ್ತಾಯ

Source: VB | By I.G. Bhatkali | Published on 29th January 2022, 9:38 AM | State News |

ರಾಯಚೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಪಮಾನ ಮಾಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಅಲ್ಲದೆ, ಅವರನು ಕೂಡಲೇ ನ್ಯಾಯಾಧೀಶ ಹುದ್ದೆಯಿಂದ ಅಮಾನತುಗೊಳಿಸಬೇಕು ಆಗ್ರಹಿಸಿ ವಿವಿಧ ಸಂಘಟನೆಗಳು ರಾಯಚೂರು ನಗರದಲ್ಲಿ ಭಾರೀ ಪ್ರತಿಭಟನ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ಇಡೀ ರಾಜ್ಯದ ವಿವಿಧೆಡೆಗಳಲ್ಲಿ ಜನರು ನ್ಯಾಯಾಧೀಶರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಹಲವೆಡೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ನ್ಯಾಯಾಧೀಶರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿವೆ.

ಗುರುವಾರ ರಾಯಚೂರು ನಗರದಲ್ಲಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬಸವೇಶ್ವರ ವೃತ್ತ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಜೊತೆಗೆ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು, ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಸಂಚಾರ ಬಂದ್: ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಸಂಜೆಯ ವರೆಗೆ ಕೆಎಸ್ಸಾರ್ಟಿಸಿ ಬಸ್‌ಗಳು, ಆಟೋರಿಕ್ಷಾ ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಬಹುತೇಕ  ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಸಿಂಧನೂರು, ದೇವದುರ್ಗ, ಮಾನ್ವಿ, ಲಿಂಗಸುಗೂರು, ಮಸ್ಕಿ, ಸಿರವಾರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿಯೂ ಪ್ರತಿಭಟನೆ ವ್ಯಕ್ತವಾಗಿದ್ದು, ಮಲ್ಲಿಕಾರ್ಜುನ ಗೌಡರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಲಾಗಿದೆ.

ದೂರು ಸಲ್ಲಿಕೆ
ರಾಯಚೂರಿನ ಜಿಲ್ಲಾ ಸತ್ರ  ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಅಂಬೇಡ್ಕರ್‌ಗೆ ಅಗೌರವ ತೋರಿ ರುವ ಆರೋಪ ಸಂಬಂಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬೆಂಗಳೂರಿನ ಕಬ್ಬನ್‌ಪಾರ್ಕ್‌ ಪೊಲೀಸ್ ಠಾಣೆಗೆ ಭೀಮ್ ಆರ್ಮಿ ಸಂಘಟನೆ ನೇತೃತ್ವದಲ್ಲಿ ಪ್ರಗತಿಪರರು ದೂರು ಸಲ್ಲಿಕೆ ಮಾಡಿದರು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ತೆಗೆದು ಧ್ವಜಾರೋಹಣ ನೆರವೇರಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಅಂಬೇಡ್ಕರ್ ಭಾವಚಿತ್ರ ಇಡಲು ಆದೇಶ ಇಲ್ಲವೆಂದು ಹೇಳುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ದಸರಾ ಹಬ್ಬದಲ್ಲಿ ಕೋರ್ಟ್ ಆವರಣದಲ್ಲಿ ತಳಿರು-ತೋರಣ ಕಟ್ಟಿ ಕುಂಬಳಕಾಯಿ ಒಡೆ ಯಲು ಯಾವ ಆದೇಶವಿತ್ತು' ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ನನ್ನ ವಿರುದ್ಧ ಅಪಪ್ರಚಾರ; ನ್ಯಾಯಾಧೀಶರ ಸ್ಪಷ್ಟನೆ:
ಗಣರಾಜ್ಯೋತ್ಸ ವದಲ್ಲಿ ನಾನು ಅಂಬೇಡ್ಕರ್ ಫೋಟೊ ತೆರವು ಮಾಡಲು ಸೂಚನೆ ನೀಡಿಲ್ಲ. ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಫೋಟೊ ಇಟ್ಟಿರುವುದು ಮತ್ತು ಎತ್ತಿಕೊಂಡು ಹೋಗಿರುವುದು ನನ್ನ ಅರಿವಿಗೆ ಬಂದಿಲ್ಲ. ನನ್ನ ವಿರುದ್ಧದ ಆರೋಪ ಸುಳ್ಳು ಎಂದು ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ನಾನು ಅಂಬೇಡ್ಕರ್ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ಅಂಬೇಡ್ಕರ್‌ ಫೋಟೊ ಇಡುವುದಕ್ಕೆ ಹೈಕೋರ್ಟ್‌ನ ಅನುಮತಿ ಬೇಕು ಎಂದು ಹೇಳಿರುವುದು ಹೌದು. ಆದರೆ ಅಂಬೇಡ್ಕರ್‌ ಫೋಟೊ ಇದ್ದರೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಲ್ಲ. ಇದು ನನ್ನ ವಿರುದ್ಧ ಮಾಡಿರುವ ಅಪಪ್ರಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸರಕಾರಿ ಆದೇಶವಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, 'ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಅನ್ವಯ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಹಾಗೂ ದೇಶದ ಕೇಂದ್ರ, ರಾಜ್ಯ ಸರಕಾರಗಳು ಆಡಳಿತ ನಡೆಸುತ್ತಿವೆ. ರಾಜ್ಯ ಸರಕಾರ ಹೊರಡಿಸಿದ ಆದೇಶದಲ್ಲಿ ಗಣರಾಜ್ಯೋತ್ಸವ ದಿನದಂದು ಸರಕಾರಿ ಸ್ವಾಮ್ಯಕ್ಕೆ ಸೇರಿದ ಶಾಲಾ, ಕಾಲೇಜು ಸೇರಿದಂತೆ ಸರಕಾರದಿಂದ ನಡೆಯುವ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಸಂವಿಧಾನ ಪಿತಾಮಹ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯವಾಗಿ ಇಡುವಂತೆ ಸೂಚಿಸಲಾಗಿದೆ.

ಆದರೆ, ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ, ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿಟ್ಟರೆ ನಾನು ಧ್ವಜಾರೋಹಣ ಮಾಡುವುದಿಲ್ಲವೆಂದು ಅಂಬೇಡ್ಕರ್‌ಗೆ ಅಪಮಾನಿಸಿದ್ದಾರೆ. ಇವರ ವಿರುದ್ಧ ಕೂಡಲೇ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ, ನ್ಯಾಯಾಧೀಶ ಹುದ್ದೆಯಿಂದ ಅಮಾನತು ಮಾಡಬೇಕು. ಇಂತಹ ಮನಸ್ಥಿತಿಯ ವ್ಯಕ್ತಿಗಳಿಗೆ ರಾಜ್ಯದಲ್ಲಿ ಜಾಗವಿಲ್ಲ. ಹೀಗಾಗಿ ಅವರನ್ನು ಗಡಿಪಾರು ಮಾಡಬೇಕು ಎಂಬ ಆಗ್ರಹವೂ ಕೇಳಿ ಬಂತು. ಪ್ರತಿಭಟನೆಯಲ್ಲಿ ಮುಖಂಡರಾದ ಆರ್.ಮಾನಸಯ್ಯ, ಎಂ.ವಿರೂಪಾಕ್ಷಿ, ಅಂಬಣ್ಣ ಅರೋಲಿ, ಆದೆಪ್ಪ ಛಲವಾದಿ, ಎಂ. ಈರಣ್ಣ, ನರಸಪ್ಪ, ವಿಶ್ವನಾಥ ಪಟ್ಟಿ, ಶಶಿಕಲಾ ಭೀಮರಾಯ, ಮಾರಪ್ಪ, ರಾಘವೇಂದ್ರ ಬೋರೆಡ್ಡಿ, ಹೇಮರಾಜ ಅಸ್ಕಿಹಾಳ, ರಾಜೇಶ್ ಕರಾಟೆ, ವೈನರಸಪ್ಪ, ಅನಿಲ್‌ಕುಮಾರ್‌, ಜನಾರ್ದನ ಹಳ್ಳಿಬೆಂಚಿ, ನಿರ್ಮಲಾ ಬೆಣ್ಣೆ ಪ್ರತಿಭಾ ರೆಡ್ಡಿ, ರೂಪಾ, ಝಾಕ್ ಉಸ್ತಾದ್ ಸೇರಿದಂತೆಹಲವು ಸಂಘಟನೆಗಳ ಪದಾಧಿಕಾರಿಗಳು, ವಕೀಲರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪೂರ್ವಗ್ರಹ ಪೀಡಿತ ನ್ಯಾಯಾಧೀಶರು: ಡಾ.ಎಚ್.ಸಿ.ಮಹದೇವಪ್ಪ: 
ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದು ಹಾಕಿದರೆ ಮಾತ್ರವೇ ಧ್ವಜಾರೋಹಣ ಮಾಡುವುದಾಗಿ ಬಾಬಾ ಸಾಹೇಬರ ವಿರಚಿತ ಕಾನೂನುಗಳನ್ನು ಕಾಪಾಡಲು ನೇಮಕವಾಗಿರುವ ನ್ಯಾಯಾಧೀಶರೇ ರಾಯಚೂರಿನಲ್ಲಿ ಹೇಳುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.

ಇದು ಊಳಿಗಮಾನ್ಯ (ಪ್ಯೂಡಲ್) ಹಾಗೂ ಕೋಮುವಾದಿ ಮನಸ್ಥಿತಿಯು ಈ ದೇಶದಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಜೀವಂತ ಉದಾಹರಣೆ ಆಗಿದೆ. ಇಂತಹ ಪೂರ್ವಗ್ರಹ ಪೀಡಿತ ನ್ಯಾಯಾಧೀಶರು ಇನ್ನೆಂತಹ ತೀರ್ಪು ನೀಡಬಲ್ಲರು? ಎಂದು ನೆನೆಸಿಕೊಂಡರೆ ಆತಂಕವಾಗುತ್ತದೆ.

ನ್ಯಾಯಾಂಗ ಎಂಬುದು ಜನಸಾಮಾನ್ಯರ ನಂಬಿಕೆಯ ಗೂಡು, ಅಂತಹ ನಂಬಿಕೆಯು ಕಳೆದು ಹೋಗುವುದಕ್ಕೆ ಅವಕಾಶ ನೀಡಬಾರದು. ಕೂಡಲೇ ಹೈಕೋರ್ಟ್ ಇಂತಹ ಬೇಜವಾಬ್ದಾರಿ ನ್ಯಾಯಾಧೀಶರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸುತ್ತೇನೆ.
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ

ವಜಾಗೊಳಿಸಬೇಕು:
ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ನ್ಯಾಯಾಧೀಶರನ್ನು ಕೂಡಲೇ ನ್ಯಾಯಾಂಗ ಇಲಾಖೆಯಿಂದ ವಜಾಗೊಳಿಸಬೇಕು. ಸಾಂವಿಧಾನಿಕ ಹುದ್ದೆಯಲ್ಲಿದ್ದು, ದೇಶಕ್ಕೆ ಸಂವಿಧಾನ ಕೊಟ್ಟಂತಹ ಅಂಬೇಡ್ಕರ್‌ ಫೋಟೊ ಇಟ್ಟರೆ ಧ್ವಜಾರೋಹಣ ಮಾಡುವುದಿಲ್ಲ ಎನ್ನುವ ಅವರ ಹೇಳಿಕೆ ನೋವುಂಟು ಮಾಡಿದೆ. ಇಂತಹ ಮನಸ್ಥಿತಿಯಲ್ಲಿರುವವರು ನ್ಯಾಯ ಒದಗಿಸುವ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ, ಮುಖ್ಯ ನ್ಯಾಯಮೂರ್ತಿಗಳು ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಈ ಕುರಿತು ಸರಕಾರ ಮತ್ತು ಸಂಬಂಧಿಸಿದ ಸಚಿವರಿಗೆ ಪತ್ರ ಬರೆಯುತ್ತೇನೆ. ಕೆ.ಶಿವನಗೌಡ ನಾಯಕ, ಶಾಸಕ ದೇವದುರ್ಗ

ಸಿಎಂ ವಿರುದ್ಧವೇ ದೂರು
ಗಣರಾಜ್ಯೋತ್ಸವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಡಬೇಕೆಂದು ಸರಕಾರ ಸುತ್ತೋಲೆ ಹೊರಡಿಸಿದ್ದರೂ ನ್ಯಾಯಾಲಯಗಳಲ್ಲಿ ಈ ಆದೇಶ ಜಾರಿಯಾಗಿಲ್ಲ ಏಕೆ ಎಂಬ ಬಗ್ಗೆ ತನಿಖೆ ನಡೆಸಬೇಕು. ಅಂಬೇಡ್ಕರ್‌ಗೆ ಅವಮಾನ ಮಾಡುವ ದುರುದ್ದೇಶದಿಂದಲೇ ನ್ಯಾಯಾಂಗ ಇಲಾಖೆ ಸುತ್ತೋಲೆ ಜಾರಿ ಮಾಡಿಲ್ಲ ಎಂದು ನಾವು ಸಿಎಂ ವಿರುದ್ಧವೇ ದೂರು ದಾಖಲು ಮಾಡಬೇಕಾಗುತ್ತದೆ. ಹಿಂದಿನ ವರ್ಷವೇ ಈ ಸಂಬಂಧ ರಾಯಚೂರಿನಲ್ಲಿ ಕೋರ್ಟ್‌ನಲ್ಲೇ ನಾವು ನ್ಯಾಯವಾದಿಗಳೆಲ್ಲರೂ ಪ್ರಶ್ನಿಸಿದ್ದೇವೆ. ಹೀಗಾಗಿ ಕೂಡಲೇ ನ್ಯಾಯಾಂಗ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡಬೇಕೆಂದು ಆದೇಶ ಹೊರಡಿಸಬೇಕು.
ಎಸ್.ಮಾರಪ್ಪ, ಹಿರಿಯ ವಕೀಲರು ರಾಯಚೂರು

ಇಟ್ಟ ಮೇಲೆ ತೆಗೆಯಬಾರದಿತ್ತು:
ಫೋಟೊ ಇಟ್ಟಮೇಲೆ ತೆಗೆಯಬಾರದಿತ್ತು. ಫೋಟೊ ಇಟ್ಟಿಲ್ಲ ಅಂದಿದ್ರೆ ಅದು ಬೇರೆ ವಿಚಾರ. ಪ್ರಪಂಚದಲ್ಲಿಯೇ ಪ್ರಖ್ಯಾತಿ ಹೊಂದಿರುವ ವ್ಯಕ್ತಿ ಅಂಬೇಡ್ಕರ್. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಅಂಬೇಡ್ಕರ್‌ ಅವರ ಭಾವಚಿತ್ರಗಳನ್ನು ಇಡಲಾಗುತ್ತಿದೆ. ಸರಕಾರವೇ ಮುಂದೆ ನಿಂತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂತಹ ಕಾಲಘಟ್ಟದಲ್ಲಿ ಇದಾಗಿದ್ದು ಸರಿಯಲ್ಲ.

ವಿ.ಗೋಪಾಲಗೌಡ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ತಪ್ಪು ಮಾತ್ರವಲ್ಲ,ಅಜ್ಞಾನ: 
ರಾಯಚೂರು ಜಿಲ್ಲಾ ನ್ಯಾಯಾಧೀಶರ ನಿಲುವು ಸೂಕ್ತವಲ್ಲ. ಇದು ತಪ್ಪು ಮಾತ್ರವಲ್ಲದೆ, ಅಜ್ಞಾನವೂ ಆಗಿದೆ. ಇಂತಹ ಘಟನೆ ಮತ್ತೆ ನಡೆಯಬಾರದು. ಅಲ್ಲದೆ, ನ್ಯಾಯಾಲಯಗಳಲ್ಲಿ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಇಡಬೇಕು ಎನ್ನುವ ಆದೇಶ ಇದೆ. ಹಾಗಾಗಿ, ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಇಡಲಾಗಿದೆ. ಆದರೆ, ಕರ್ನಾಟಕ ಸರಕಾರ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಇಡಬೇಕೆಂದು ಆದೇಶಿಸಿದೆ. ಹೀಗಿರುವಾಗ, ಅಲ್ಲಿನ ನ್ಯಾಯಾಧೀಶರು ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ವೇಳೆ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ್ದರೆ ಅಪರಾಧ ಆಗುತ್ತಿತ್ತೇ? ಇಂತಹ ಘಟನೆಗಳನ್ನು ನಾನು  ಖಂಡಿಸುತ್ತೇನೆ.
ಎಚ್.ಎನ್.ನಾಗಮೋಹನ್ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ 

ಇದು ಮನುವಾದ, ಜಾತಿವಾದ
ಸಂವಿಧಾನ  ಶಿಲ್ಪಿಯೇ ಡಾ.ಬಿ.ಆರ್.ಅಂಬೇಡ್ಕರ್. ಜ.26 ಸಹ ಸಂವಿಧಾನದ ದಿನವಾಗಿದೆ. ಹೀಗಿರುವಾಗ, ಅಂಬೇಡ್ಕರ್‌ ಅವರ ಭಾವಚಿತ್ರವನ್ನೇ ಇಡಬಾರದು ಎನ್ನುವುದು ಮನುವಾದ, ಜಾತಿವಾದ, ಕೋಮುವಾದ ಆಗಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ಅಲ್ಲದೆ, ಕರ್ನಾಟಕ ಹೈಕೋರ್ಟ್ ಈ ಕೂಡಲೇ ಹೊಸ ಸುತ್ತೋಲೆ ಹೊರಡಿಸಿ, ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸುವ ಕೆಲಸ ಮಾಡಬೇಕು.
ಎಸ್.ಬಾಲನ್, ಹಿರಿಯ ವಕೀಲ

ಆದೇಶ ಇರಲಿ, ಇಲ್ಲದಿರಲಿ ಫೋಟೊ ಇಡಬೇಕು:
2020ರಲ್ಲಿಯೇ ರಾಜ್ಯ ಸರಕಾರ, ಗಣರಾಜ್ಯೋತ್ಸವದಂತಹ 2ರಕಾರಿ ಕಾರ್ಯಕ್ರಮಗಳಲ್ಲಿ ಡಾ.ಅಂಬೇಡ್ಕರ್‌ ಫೋಟೊ ಇಡಬೇಕೆಂದು ಆದೇಶ ಹೊರಡಿಸಿದೆ. ನ್ಯಾಯಾಂಗವೂ ಕೂಡ ಸರಕಾರದ ಅಧೀನಕ್ಕೆ ಬರುವುದರಿಂದ ಸರಕಾರಿ ಅಧಿಸೂಚನೆ ಅನ್ವಯ ಆಗುತ್ತದೆ. ಆದೇಶ ಇರಲಿ, ಇಲ್ಲದಿರಲಿ ಅಂಬೇಡ್ಕರ್ ಪೋಟೊ ಇಡಬೇಕಾದ್ದು ನೈತಿಕ ಪ್ರಶ್ನೆ, ಗಾಂಧಿ ಫೋಟೊ ಹೇಗೆ ಅಭ್ಯಾಸ ಆಗಿದೆಯೋ ಹಾಗೆಯೇ ಅಂಬೇಡ್ಕರ್ ಫೋಟೊ ಇಡುವುದು ಕೂಡ ಅಭ್ಯಾಸವಾಗಬೇಕು.
I ಡಾ.ಸಿ.ಎಸ್. ದ್ವಾರಕಾನಾಥ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...