ಭಟ್ಕಳ ಲಾಕ್‍ಡೌನ್ ಸಡಿಲಿಕೆಗಾಗಿ ತಾಲೂಕಾಡಳಿತದಿಂದ ಜನಾಭಿಪ್ರಾಯ ಸಂಗ್ರಹ

Source: sonews | By Staff Correspondent | Published on 25th May 2020, 10:34 PM | Coastal News | Don't Miss |

•    ಪ್ರತಿ ದಿನ 5ಗಂಟೆ ಸಡಿಲಿಕೆ ನೀಡುವಂತೆ ಸಾರ್ವಜನಿಕರ ಆಗ್ರಹ

ಭಟ್ಕಳ: ಭಟ್ಕಳದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ವೃದ್ಧರು ಚಿಕ್ಕ ಮಕ್ಕಳು ಸೇರಿದಂತೆ ಇಲ್ಲಿಯವರೆಗೆ 32ಜನರು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು ಇನ್ನುಳಿದ 10ಜನರು ಆರೋಗ್ಯವಂತರಾಗಿದ್ದಾರೆ ಎಂದು ಅದಕ್ಕಾಗಿ ತಾಲೂಕಾಡಳಿತ ಭಟ್ಕಳದಲ್ಲಿ ಲಾಕ್‍ಡೌನ್ ಸಡಿಲಿಕೆ ಕುರಿತಂತೆ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್. ಹೇಳಿದರು. 

ಅವರು ಸೋಮವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ  ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
 
ತಾಲೂಕಿನಲ್ಲಿಯ ಕೆಲವು ಭಾಗಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿದಂತೆ ಭಟ್ಕಳ ನಗರದಲ್ಲಿಯೂ ಕೂಡಾ ಸಡಿಲಿಕೆ ಮಾಡುವಲ್ಲಿ ಅಧಿಕಾರಿಗಳು, ಜಿಲ್ಲಾಡಳಿತ ಮುಂದಾಗಿದ್ದು ಜನರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದು ಸಭೆಯಲ್ಲಿ ನಾಗರೀಕರು, ಪತ್ರಕರ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. 

ಸಭೆಯಲ್ಲಿ ಮಾತನಾಡಿದ ನಾಗರೀಕರು ಕಳೆದ ಎರಡು ತಿಂಗಳಿನಿಂದ ನಾವು ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಹಾಕಿಕೊಂಡು ಸಂಪೂರ್ಣ ಸಹಕಾರ ನೀಡಿದ್ದೆವು. ಮೊದಲು ಭಟ್ಕಳದಲ್ಲಿ ಮಾತ್ರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಇಡೀ ನಗರವನ್ನೇ ಸೀಲ್ ಡೌನ್ ಮಾಡಲಾಯಿತು. ಆದರೆ ಈಗ ಜಿಲ್ಲೆಯ ಎಲ್ಲಾ ಕಡೆಗಳಲ್ಲಿಯೂ ಕೂಡಾ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅಲ್ಲಲ್ಲಿ ಮಾತ್ರ ಸೀಲ್‍ಡೌನ್ ಮಾಡಿ ಉಳಿದ ಭಾಗದಲ್ಲಿ ಮಾಮೂಲಿನಂತೆ ಜನ ಜೀವನ ನಡೆಯುತ್ತಿದ್ದು ಅದರಂತೆಯೇ ಭಟ್ಕಳದಲ್ಲಿಯೂ ಕೂಡಾ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ತೆಗೆಯಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತ ಭರತ್ ಎಸ್. ಭಟ್ಕಳದಲ್ಲಿ ಪ್ರಥಮವಾಗಿ ಕೊರೊನಾ ಸೋಂಕು ತಗುಲಿದಾಗಿನಿಂದ ಜನರ ಸಹಕಾರ ಉತ್ತಮವಾಗಿತ್ತು. ಆಗ ಭಟ್ಕಳವನ್ನು ಪತ್ರ್ಯೇಕಿಸುವುದಕ್ಕೆ ಕಾರಣ ಸೋಂಕು ಸಮುದಾಯಕ್ಕೆ ಹರಡಬಾರದು ಎಂದಾಗಿತ್ತು. ಅದಕ್ಕಾಗಿಯೇ ಸ್ವಲ್ಪ ವಿಸ್ತಾರವಾಗಿ ಕಂಟೈನ್‍ಮೆಂಟ್ ಝೋನ್ ಎಂದು ನಿಷೇಧಿಸಲಾಯಿತು.  ಆದರೆ ಇಂದು ಅಂತಹ ಕ್ಷೇತ್ರವನ್ನು ಕಡಿಮೆಗೊಳಿಸುವುದು ಅನಿವಾರ್ಯವಾಗಿದ್ದು ಜನತೆಗೆ ದಿನ ನಿತ್ಯದ ವ್ಯವಹಾರಕ್ಕೆ, ಮಳೆಗಾಲದ ತಯಾರಿಗೆ ಅನುವು ಮಾಡಿಕೊಡಬೇಕಾಗಿದೆ ಎಂದರು. ಅಲ್ಲದೇ ಔಷಧಿ ಅಂಗಡಿ, ಕಿರಾಣಿ, ದಿನಸಿ, ಹಣ್ಣು, ತರಕಾರಿ ಅಂಗಡಿಗಳು ಈ ಹಿಂದಿನಂತೆಯೇ ತೆರೆದಿರಲಿವೆ ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಎ.ಎಸ್.ಪಿ. ನಿಖಿಲ್ ಬಿ., ಭಟ್ಕಳದ ಜನತೆಯ ಸಹಕಾರ ಉತ್ತಮವಾಗಿತ್ತು. ಇಲಾಖೆಯೊಂದಿಗೆ ಇಲ್ಲಿಯ ತನಕ ಸಹಕಾರ ಕೊಟ್ಟಿದ್ದೀರಿ, ಇನ್ನು ಮುಂದೆಯೂ ಸಹಕಾರ ಅಗತ್ಯವಾಗಿದೆ. ಜಿಲ್ಲಾಡಳಿತ ಹಾಗೂ ಸರಕಾರ ಕಾಲ ಕಾಲಕ್ಕೆ ಯಾವ ರೀತಿಯ ಸೂಚನೆ ನೀಡುತ್ತದೆ ಅದನ್ನು ನಾವು ಪಾಲಿಸಬೇಕಾಗಿದೆ. ಭಟ್ಕಳದಲ್ಲಿ ಇನ್ನೆರಡು ದಿನಗಳಲ್ಲಿ ಮುಂದಿನ ಮಾರ್ಗಸೂಚಿ ಬರಲಿದ್ದು ಜನತೆಗೆ ಅನುಕೂಲ ಮಾಡಿಕೊಡಲಿದ್ದೇವೆ. ಆದರೆ ಮಾಲ್, ಥಿಯೇಟರ್, ಮಲ್ಟಿ ಸ್ಟೋರಿ ಕಾಂಪ್ಲೆಕ್ಸ್‍ಗಳಿಗೆ ಅವಕಾಶವಿಲ್ಲ ಎಂದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ತಂಜೀಂ ಅಧ್ಯಕ್ಷ ಎಸ್.ಎಂ. ಪರ್ವೇಜ್ ನಾಗರೀಕರಿಗೆ ಅನುಕೂಲವಾಗುವಂತೆ ಲಾಕ್‍ಡೌನ್ ಸಡಿಲಿಕೆ ನಿಯಮ ರೂಪಿಸುವಂತೆ ಹಾಗೂ ಎಲ್ಲ ಅಂಗಡಿಗಳನ್ನು ತೆರೆಯುವಂತೆ ಕೋರಿದರು. 

ಸಾಲಗದ್ದೆ ಸ್ಪೋಟ್ಸ್ ಕ್ಲಬ್‍ನ ಶಾಂತಾರಾಮ ಭಟ್ಕಳ ಮಾತನಾಡಿ ಹೋಮ್ ಕ್ವಾರಂಟೈನ್‍ನಲ್ಲಿದ್ದವರ ಮೇಲೆ ನಿಗಾ ಇಡಲು ಆಯಾಯ ಬೀಟ್ ಪೊಲೀಸರೊಂದಿಗೆ ಎರಡು ಸಭ್ಯ ನಾಗರೀಕರಿಗೆ ಜವಬ್ದಾರಿ ಕೊಡಿ. ಪೊಲೀಸರು ಮತ್ತು ಕರ್ತವ್ಯ ನಿರತರರು ಸೋಂಕಿಗೊಳಗಾದಂತೆ ಜಾಗೃತೆ ವಹಿಸಿ ಎಂದು ಹೇಳಿದರು. 

ಪುರಸಭಾ ಮಾಜಿ ಅಧ್ಯಕ್ಷ ಪರ್ವೆಜ್ ಕಾಶಿಮಜಿ ಮಾತನಾಡಿ ಜನತೆಗೆ ಯಾವ ರೀತಿಯಾಗಿ ಲಾಕ್‍ಡೌನ್ ಸಡಿಲಿಕೆ ಇರುತ್ತದೆ ಎನ್ನುವುದನ್ನು ತಿಳಿಸಬೇಕು. ಅಲ್ಲದೇ ಯಾವಾಗಿನಿಂದ ಎಷ್ಟು ಸಮಯದ ಮಿತಿ ಹೇರಲಾಗುತ್ತದೆ ಎನ್ನುವುದನ್ನು ಸಹ ತಿಳಿಸಿ ಎಂದರು. 

ಭಟ್ಕಳ ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ ಆಸರಕೇರಿ ಮಾತನಾಡಿ ನಗರದಲ್ಲಿ ಎಲ್ಲ ಅಂಗಡಿಗಳನ್ನೂ ತೆರೆಯಲು ಅವಕಾಶ ಮಾಡಿಕೊಡಬೇಕು. ಒಂದು ಬಗೆಯ ಅಂಗಡಿಗಳನ್ನು ಮಾತ್ರ ಮುಚ್ಚಿಟ್ಟರೆ ಸರಿಯಲ್ಲ ಎಂದರು. 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಕೊರೊನಾ ಸೋಂಕಿತರೆಲ್ಲರೂ ಕೂಡಾ ಗುಣಮುಖರಾಗಿ ವಾಪಾಸಾಗುತ್ತಿರುವುದಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ ಕೊಡಿಸಿದ ಉತ್ತಮ ಚಿಕಿತ್ಸೆಯೇ ಕಾರಣ ಅದಕ್ಕಾಗಿ ಎಲ್ಲರೂ ಅಭಿನಂದಿಸೋಣ ಎಂದರು.  ಚಪ್ಪಾಳೆ ತಟ್ಟಿ ಎಲ್ಲರೂ ಅಭಿನಂದನೆ ಸಲ್ಲಿಸಿದರು. ಹಾಗೂ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಿ ಎಂದು ಸೂಚಿಸಿದರು. 

ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಆದಂ ಪಣಂಬೂರು, ರಿಕ್ಷಾ ಯೂನಿಯನ್ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ, ಪತ್ರಕರ್ತ ಎಂ.ಆರ್. ಮಾನ್ವಿ, ಸತೀಶಕುಮಾರ್, ತಂಜೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಜಾ.ಪ.ಪಂ. ಸದಸ್ಯ ಇಮ್ರಾನ್ ಲಂಕಾ, ಮುನೀರ್ ಅಹಮ್ಮದ್, ಸುರೇಂದ್ರ ಭಟ್ಕಳ ಮುಂತಾದವರು ಮಾತನಾಡಿದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...