ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

Source: S O News Service | By V. D. Bhatkal | Published on 17th September 2019, 1:45 PM | Coastal News | Special Report |

ಭಟ್ಕಳ: ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ಮಾತನಾಡಲಾರಂಭಿಸಿದ್ದಾರೆ. ಇದು ಜಿಲ್ಲೆಯ ಆರ್ಥಿಕ ವ್ಯವಹಾರದಲ್ಲಿ ದೊಡ್ಡ ಪಾಲನ್ನು ಹೊಂದಿದ್ದ ಭಟ್ಕಳದ ಮಟ್ಟಿಗೆ ಸರಿ ಹೊಂದಿರುವುದು ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಲಾರಂಭಿಸಿದೆ.

ಭಟ್ಕಳ ಸರಿಸುಮಾರು 10 ಸಾವಿರದಷ್ಟು ಜನರು ಉದ್ಯೋಗದ ನಿಮಿತ್ತ ಪರ ದೇಶಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಅರಬ್ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಂಡಿರುವ ಕಾರಣಕ್ಕೋ ಏನೂ ಭಟ್ಕಳ ಎಂದಾಕ್ಷಣ ದುಬೈನ ದುಡ್ಡು ಎನ್ನುತ್ತಿದ್ದವರ ಸಂಖ್ಯೆ ಕಡಿಮೆ ಇರಲಿಲ್ಲ. ಕಾರವಾರ ಅಂಕೋಲಾಗಳಲ್ಲಿ ಅದಿರು ವ್ಯವಹಾರ ಆಗಸವನ್ನು ತಲುಪಿ, ಮನೆ ಮಂದಿಯೆಲ್ಲ ಕೋಟಿಯ ಮಾತನಾಡುತ್ತಿದ್ದ ಕಾಲದಲ್ಲಿ, ಹಾಗೆಯೇ ಅಡಿಕೆಗೆ ದರ ಬಂದು ಶಿರಸಿ ಸುತ್ತಮುತ್ತಲಿನ ಜನರೂ ಕೋಟಿಯ ಸುತ್ತ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೂ ಭಟ್ಕಳದ ಖದರು ಕಡಿಮೆಯಾಗಿರಲಿಲ್ಲ. ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಚಿನ್ನದ ವ್ಯಾಪಾರ, ವಹಿವಾಟು 1993 ಕೋಮುಗಲಭೆಯ ನಂತರದ ದಿನಗಳಲ್ಲಿ ಇಳಿಮುಖವಾದ ನಂತರ ಈ ಭಾಗದಲ್ಲಿ ಮೆಲ್ಲನೆ ಚಿಗಿತುಕೊಂಡಿದ್ದು ರಿಯಲ್ ಎಸ್ಟೇಟ್ ದಂಧೆ. ಭಟ್ಕಳದಂತಹ ಪುಟ್ಟ ಊರಿನಲ್ಲಿ ನಿತ್ಯವೂ 10-12 ಕ್ರಯ ವ್ಯವಹಾರ ಇಟ್ಟುಕೊಂಡು ಜನರು ಭೂನೋಂದಣಿ ಕಚೇರಿಗೆ ಎಡತಾಕುತ್ತಿದ್ದರು.

ಭಟ್ಕಳ ಪಟ್ಟಣ ಪ್ರದೇಶದಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಭೂಮಿಯ ಬೆಲೆ ಗಗನಕ್ಕೆ ಏರಿತು. ಇದಕ್ಕೆ ಹೊಂದಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಕೈ ಬೆರಳೆಣಿಕೆಯಲ್ಲಿದ್ದ ಭೂ ವ್ಯವಹಾರಸ್ಥರ, ದಲ್ಲಾಳಿಗಳ ಸಂಖ್ಯೆ 100 ದಾಟಿತು. ಕೆಲಸವಿಲ್ಲದೇ ತಿರುಗಾಡಿಕೊಂಡಿದ್ದ ಹುಡುಗರೆಲ್ಲ ಪಹಣಿ ಪತ್ರಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಲಾರಂಭಿಸಿದರು. ನಡೆದು ಪೇಟೆಗೆ ಬರುತ್ತಿದ್ದವರು ಚಲಿಸುತಿದ್ದ ಕಾರಿನಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ತೆರೆಯ ಹಿಂದೆ ಗುಂಟೆಗೆ 40-50 ಲಕ್ಷ ರುಪಾಯಿಯವರೆಗೆ ವ್ಯವಹಾರ ಕುದುರಲು ಆರಂಭವಾಗಿತ್ತು. ಅತ್ತ ಭಟ್ಕಳದ ಪುರವರ್ಗ, ಇತ್ತ ವೆಂಕಟಾಪುರದ ಈಚೆ ಇರುವ ಭೂಮಿ ಮಾತ್ರ ವಾಸಕ್ಕೆ ಯೋಗ್ಯ ಎಂದುಕೊಂಡಿರುವ ಇಲ್ಲಿನ ಪಟ್ಟಣ ಪ್ರದೇಶದ ಬಹುಸಂಖ್ಯಾತರಿಗೆ ಭೂಮಿಯ ಈ ದರ ಗಾಬರಿಯಾಗುವಂತದ್ದಾಗಿರಲಿಲ್ಲ.

ಇಲ್ಲಿನ ಭೂಮಿಯ ದರ ಇನ್ನೇನು ದುಪ್ಪಟ್ಟಾಗಲಿದೆ ಎಂದುಕೊಳ್ಳುವಷ್ಟರಲ್ಲಿ ಕೇಂದ್ರ ಸರಕಾರ ನೋಟ್ ಬ್ಯಾನ್ ಘೋಷಣೆ ಮಾಡಿ ಬಿಟ್ಟಿತು. ಅಂದು ಮಕಾಡೆ ಮಲಗಿದ ಭಟ್ಕಳದ ರಿಯಲ್ ಎಸ್ಟೇಟ್ ದಂಧೆ ಈಗಲೂ ಮೇಲೇಳಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಕ್ರಯ ವ್ಯವಹಾರ ದಿನವೊಂದಕ್ಕೆ ಸರಾಸರಿ 2-4ಕ್ಕೆ ಬಂದು ಮುಟ್ಟಿದೆ. ಸಾಲದೆಂಬಂತೆ ಇದೇನೂ ಹೊಸ ಕ್ರಯವಲ್ಲ, ಈಗ ನಡೆಯುತ್ತಿರುವ ಭೂ ವ್ಯವಹಾರವೂ ಈ ಹಿಂದೆ ನಡೆದು ಈಗ ನೋಂದಣಿಯ ಮೂಲಕ ಅಂತಿಮ ಹಂತಕ್ಕೆ ತಲುಪಿದೆ ಎನ್ನುವವರಿದ್ದಾರೆ. ಒಟ್ಟಾರೆಯಾಗಿ ಒದಗಿ ಬಂದಿರುವ ಸಂಕಷ್ಟ ನಿವಾರಣೆಗೆ ಜಾಗ ಮಾರೋಣ ಎಂದರೆ ದೊಡ್ಡ ದರಕ್ಕೆ ಖರೀದಿ ಮಾಡುವವರ ಸಂಖ್ಯೆ ಕ್ಷೀಣಿಸುತ್ತ ಸಾಗಿದೆ. ದುಡಿದಿರುವುದನ್ನೆಲ್ಲ ಒಟ್ಟುಗೂಡಿಸಿಕೊಂಡು ಖರೀದಿಸೋಣ ಎಂದರೆ ಕೈಯಲ್ಲಿ ಕಾಸಿಲ್ಲದಂತಾಗಿದೆ.

ಕನಸು ನುಂಗಿತೇ ಇ-ಸ್ವತ್ತು?:
 ಒಂದು ಕಡೆ ರಿಯಲ್ ಎಸ್ಟೇಟ್ ವ್ಯವಹಾರ ನೆಲಕಚ್ಚಿದ್ದರೆ, ಜಿಲ್ಲೆಯ ಉಳಿದ ತಾಲೂಕುಗಳಂತೆ ಇ-ಸ್ವತ್ತು ಸಹ ಇಲ್ಲಿನ ಜನರ ತಲೆ ನೋವಿಗೆ ಕಾರಣವಾಗಿದೆ. ಬೇರೆಡೆ ಭೂಮಿ ಖರೀದಿ ಸಾಧ್ಯವಾಗದೇ, ಸ್ವಂತ ಕೃಷಿ ಭೂಮಿಯನ್ನು ವಿಭಾಗಿಸಿ ಮನೆ ಕಟ್ಟುತ್ತ ಬಂದವರು ಮತ್ತೆ ಆ ಕೆಲಸಕ್ಕೆ ಕೈ ಹಾಕುವಂತಿಲ್ಲ. ನಿಯಮದ ಪ್ರಕಾರ ಮನೆ ಕಟ್ಟಲು ಪರವಾನಿಗೆಯೂ ಇಲ್ಲ, ಕಟ್ಟಿದರೆ ಸಾಲ ಸೌಲಭ್ಯವೂ ಇಲ್ಲ. ಅಲ್ಲದೇ ಕೃಷಿ ಭೂಮಿಯನ್ನು ಕೃಷಿಯೇತರ ಮಾಡಿಕೊಳ್ಳುವುದು ಅಷ್ಟು ಸುಲಭವೂ ಅಲ್ಲ. ಖರೀದಿಯೇ ಇರಲಿ, ಕೃಷಿಯೇ ಆಗಿರಲಿ, ಸಿಕ್ಕ ಜಾಗದಲ್ಲಿ ಮನೆ ಕಟ್ಟಿಕೊಂಡರಾಯಿತು ಎಂದುಕೊಂಡವರ ಕನಸುಗಳನ್ನು ವರ್ತಮಾನದ ಬೆಳವಣಿಗೆ ಅಕ್ಷರಶಃ ನುಂಗಿ ಹಾಕಿದೆ. 

Read These Next

ಉಪವಿಭಾಗಾಧಿಕಾರಿ ಕಚೇರಿ ಎದುರು ನಾರಾಯಣಗುರುನಗರದ ನಿವಾಸಿಗಳ ಪ್ರತಿಭಟನೆ ಕಂದಾಯ ಇಲಾಖೆ ಆದೇಶ ಹಿಂಪಡೆಯಲು ಒತ್ತಾಯ

ತಾಲೂಕಿನ ನಾರಾಯಣಗುರುನಗರದ ಸರ್ವೆ ನಂಬರ್ 53ರ ನಿವೇಶನಗಳು ಡಿಫಾರೆಸ್ಟ್ ಆಗಿಲ್ಲ ಎಂಬ ನೆಪವೊಡ್ಡಿ, ಯಾವುದೇ ವ್ಯವಹಾರ ನಡೆಸದಂತೆ ...

ಎನ್.ಆರ್.ಸಿ ಎನ್.ಪಿ.ಆರ್ ಹಾಗೂ ಸಿಎಎ ವಿರುದ್ಧ ದೇಶದ ಶೇ50ಕ್ಕೂ ಹೆಚ್ಚು ಜನ ಬೀದಿಗಿಳಿದಿದ್ದಾರೆ-ಪ್ರತಿಭಾ ಉಭಾಲೆ

ಭಟ್ಕಳ: ಪ್ರಸ್ತಾವಿತ ಎನ್.ಆರ್.ಸಿ, ಎನ್.ಪಿ.ಆರ್ ಹಾಗೂ ಸಿಎಎ ಎಂಬ ಕರಾಳ ಕಾನೂನಿನ ವಿರುದ್ಧ ದೇಶದ ಶೇ.50%ಕ್ಕೂ ಹೆಚ್ಚು ಜನರು ಬೀದಿಗೆ ಬಂದು ...

ಪ್ರಮಾಣಬದ್ಧ ಸಾಂವಿಧಾನಿಕತೆ

ಭಾರತದ ಸಂವಿಧಾನವೆಂಬುದು ಒಂದು ಪ್ರಮುಖವಾದ ನಿಯಮ-ನಿಯಂತ್ರಣಗಳ ದಾಖಲೆಯೆಂಬುದು ತೀರಾ ಇತ್ತೀಚಿನವರೆಗೂ ಒಂದು ಸಾಮಾನ್ಯ ಜ್ನಾನವೇ ...