ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘ ಆಯ್ಕೆ

ಹೊಸದಿಲ್ಲಿ: ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘ (73) ಅವರು ಬುಧವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 134 ಮತಗಳನ್ನು ಪಡೆಯುವ ಮೂಲಕ ದ್ವೀಪರಾಷ್ಟ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಎದುರಾಳಿಗಳಾಗಿದ್ದ ದುಲ್ಲಾಸ್ ಅಲ್ಲಹಪೆರುಮಾ 82 ಮತ್ತು ಅನುರಾ ಕೆ.ದಿಸನಾಯಕ ಅವರು ಮೂರು ಮತಗಳನ್ನು ಪಡೆದಿದ್ದಾರೆ.
ಬೆಳಗ್ಗೆ ನಡೆದ ಚುನಾವಣೆಯಲ್ಲಿ ಶ್ರೀಲಂಕಾ ಸಂಸತ್ತಿನ 225 ಸಂಸದರ ಪೈಕಿ 223 ಸಂಸದರು ಮತದಾನ ಮಾಡಿದ್ದು, ಇಬ್ಬರು ಸದಸ್ಯರು ಮತದಾನದಿಂದ ದೂರವಿದ್ದರು. ನಾಲ್ಕು ಮತಗಳು ಅಸಿಂಧುವಾಗಿದ್ದವು.
ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಸಮನಪ್ರಿಯ ಹೇರತ್ ಮತ್ತು ಡಿ.ವೀರಸಿಂಘ ಅವರು ಅಲ್ಲಿಂದಲೇ ನೇರವಾಗಿ ಸಂಸತ್ತಿಗೆ ಬಂದು ಮತಗಳನ್ನು ಚಲಾಯಿಸಿದರು. ಮಾಜಿ ಪ್ರಧಾನಿ ಮತ್ತು ಅಧ್ಯಕ್ಷ ಮಹಿಂದ ರಾಜಪಕ್ಷ ಸೇರಿದಂತೆ ಗೊತಬಯ ರಾಜಪಕ ಅವರ ಇಬ್ಬರು ಸೋದರರು ಮತ್ತು ಸೋದರಳಿಯ ಮತದಾನದಲ್ಲಿ ಪಾಲ್ಗೊಂಡಿದ್ದರು.
ವಿಕ್ರಮ ಸಿಂಘಯವರನ್ನು ಗೊತಬಯ ಕುಟುಂಬದ ಆಪ್ತರೆಂದು ಹೆಚ್ಚಿನ ಪ್ರತಿಭಟನಾಕಾರರು ಪರಿಗಣಿಸಿದ್ದಾರೆ. ಅವರ ಪದಚ್ಯುತಿಗೆ ಆಗ್ರಹಿಸಿ ಜನರು ಅವರ ಖಾಸಗಿ ನಿವಾಸ ಮತ್ತು ಕಚೇರಿಗೂ ನುಗ್ಗಿದ್ದರು. ಆರು ಬಾರಿಯ ಪ್ರಧಾನಿ ವಿಕ್ರಮಸಿಂಘ ಕಳೆದ ವಾರ ಅಧ್ಯಕ್ಷ ಗೊತಬಯ ರಾಜಪಕ್ಷ ಅವರು ಮಿಲಿಟರಿ ವಿಮಾನದಲ್ಲಿ ಮಾಲ್ಲೀವ್ ಗೆ ಪರಾರಿಯಾದ ಬಳಿಕ ತಾತ್ಕಾಲಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡಿದ್ದರು. ಈಗ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ಪ್ರತಿಭಟನೆಗಳು ಮತ್ತೆ ಕಾವು ಪಡೆದುಕೊಳ್ಳುವ ಸಾಧ್ಯತೆಯಿದೆ. ಗೊತಬಯ ಸದ್ಯ ಸಿಂಗಾಪುರದಲ್ಲಿ ವಾಸವಾಗಿದ್ದಾರೆ.
ಬುಧವಾರ ಬೆಳಗ್ಗೆ ತಮಿಳು ನ್ಯಾಷನಲ್ ಅಲೈನ್ಸ್ (ಟಿಎನ್‌ಎ) ನಾಯಕ ಎಂ.ಎ.ಸುಮನಿಧರನ್ ಅವರು, ವಿಕ್ರಮಸಿಂಘಯವರ ಪ್ರತಿಸ್ಪರ್ಧಿಗೆ ಮತ ನೀಡುವಂತೆ ಭಾರತೀಯ ರಾಯಭಾರಿ ಕಚೇರಿಯು ತನ್ನ ಪಕ್ಷಕ್ಕೆ ಸೂಚಿಸಿತ್ತು ಎಂಬ ಮಾಧ್ಯಮ ವರದಿಗಳನ್ನು ಬಲವಾಗಿ ಅಲ್ಲಗಳೆದರು. ಭಾರತೀಯ ರಾಯಭಾರಿ ಕಚೇರಿಯೂ ಈ ವರದಿಗಳನ್ನು ನಿರಾಕರಿಸಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಸಂಸತ್ ಕಟ್ಟಡದ ಸುತ್ತ ಭದ್ರತೆಗಾಗಿ ನೂರಾರು ಪೊಲೀಸರು, ಅರೆಮಿಲಿಟರಿ ಮತ್ತು ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.