ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ಆಗ್ರಹ | ವೀಕೆಂಡ್ ಕರ್ಪೂ ನಡುವೆ ಹರಿದು ಬಂದ ಜನಸಾಗರ; ಐತಿಹಾಸಿಕ ಪಾದಯಾತ್ರೆಗೆ ಚಾಲನೆ

Source: Vb | By I.G. Bhatkali | Published on 10th January 2022, 8:16 AM | State News |

ಬೆಂಗಳೂರು: 'ನಮ್ಮ ನೀರು ನಮ್ಮ ಹಕ್ಕು ಘೋಷಣೆಯೊಂದಿಗೆ ಮೇಕೆದಾಟು ಅಣೆಕಟ್ಟು ಯೋಜನೆಯ ತ್ವರಿತ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ ಐತಿಹಾಸಿಕ ಪಾದಯಾತ್ರೆ ರವಿವಾರ ಕನಕಪುರ ತಾಲೂಕಿನ ಸಾತನೂರು ಸಮೀಪದ ಸಂಗಮದಲ್ಲಿ ವಿದ್ಯುಕ್ತವಾಗಿ ಆರಂಭವಾಗಿದೆ.

ಕೋವಿಡ್ ನಿರ್ಬಂಧ, ವಾರಾಂತ್ಯದ ಕರ್ಪೂ ಕಾರ್ಮೋಡದ ನಡುವೆ ನೀರಿಗಾಗಿ ನಡಿಗೆಗೆ ಪೊಲೀಸರು ಅವಕಾಶ ನೀಡುವುದಿಲ್ಲ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಾಗಿ ನಗಾರಿ ಬಾರಿಸುವ ಮೂಲಕ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದರು.

ಮೇಕೆದಾಟು ಅಣೆಕಟ್ಟು ಒಂದು ಜನಪರ ಯೋಜನೆ. ಇದು ನಮ್ಮ ಸರಕಾರದ ಕೂಸು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಜನೆ ಜಾರಿಗೆ ಶ್ರಮಿಸಿದೆ. ಕಾಂಗ್ರೆಸ್ ರಾಜ್ಯದ ನೀರಿಗಾಗಿ ತನ್ನ ಬದ್ಧತೆ ಪ್ರದರ್ಶಿಸಿದೆ. ಆದರೆ, ಇದೀಗ 25 ಸಂಸದರನ್ನು  ಹೊಂದಿದ್ದರೂ ಪ್ರಧಾನಿ ಮೋದಿ ಬಳಿ ಮಾತನಾಡಿ, ಪರಿಸರ ಇಲಾಖೆಯ ಅನುಮತಿ ಪಡೆಯಲು ಸಾಧ್ಯವಾಗದೇ ಯೋಜನೆ ಜಾರಿಗೆ ವಿಳಂಬ ಮಾಡುತ್ತಿದ್ದು, ಸುಳ್ಳು ಆರೋಪ ಮಾಡುವ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ.

ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ /

ರವಿವಾರ ಕನಕಪುರ ತಾಲೂಕಿನ ಸಾತನೂರು ಸಮೀಪದ ಕಾವೇರಿ ಮತ್ತು ಅರ್ಕಾವತಿ ಸೇರುವ 'ಸಂಗಮ' ಸ್ಥಳದಲ್ಲಿನ ನದಿ ದಂಡೆಯ ಮೇಲೆ ಹಾಕಿದ್ದ ಬೃಹತ್ ವೇದಿಕೆ ಮೇಲೆ ತೆಂಗು, ಹಲಸು ಮತ್ತು ಮಾವಿನ ಗಿಡಕ್ಕೆ ನೀರು ಎರೆಯುವ ಮೂಲಕ ವಿವಿಧ ಧಾರ್ಮಿಕ ಮುಖಂಡರು ಜನಾಂದೋಲನಕ್ಕೆ ಚಾಲನೆ ನೀಡಿದರು. 'ರಾಜ್ಯ ಸರಕಾರ ಏನೇ ನಿರ್ಬಂಧ ಹೇರಿದರೂ ಮೇಕೆದಾಟು ಯೋಜನೆ ಜಾರಿಗಾಗಿ ಹಮ್ಮಿಕೊಂಡಿರುವ ನಮ್ಮ ಹೋರಾಟ ನಿಲ್ಲದು ಎಂದು ಮುಖಂಡರು ಎಚ್ಚರಿಕೆ ಸಂದೇಶ ನೀಡಿದರು.

ಹೆಜ್ಜೆ ಹಾಕುತ್ತೇವೆ ನಾವು..: ಜಾನಪದ ತಂಡಗಳಾದ ವೀರಗಾಸೆ, ನಂದಿಕೋಲು, ಪಟದ ಕುಣಿತ, ಯಕ್ಷಗಾನ, ಡೊಳ್ಳು, ತಮಟೆ ವಾದ್ಯಗಳು ಪಾದಯಾತ್ರೆ ವಿಶೇಷ ಮೆರುಗು ನೀಡಿದ್ದವು. ಇದೇ ವೇಳೆ ಸಂಗೀತ ನಿರ್ದೇಶಕ ಸಾಧು ಕೋಕಿಲ ತಂಡದಿಂದ ಹಾಡಿದ 'ಹೆಜ್ಜೆ ಹಾಕುತ್ತೇವೆ ನಾವು.. ಹೆಜ್ಜೆ ಹಾಕುತ್ತೇವೆ ಹೆಜ್ಜೆ.. ನಮ್ಮೂರ ನೀರಿಗಾಗಿ ಹೆಜ್ಜೆ ಹೆಜ್ಜೆ... ಕಾವೇರಿ ತಾಯಿಗಾಗಿ ಹೆಜ್ಜೆ.. ನಮ್ಮ ನೀರಿಗಾಗಿ ಹೆಜ್ಜೆ.. ಹಾಡಿಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಚಪ್ಪಾಳೆ ತಟ್ಟಿ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.

ಹರಿದು ಬಂದ ಜನಸಾಗರ: ಕೋವಿಡ್

ರಾಜಧಾನಿ ಬೆಂಗಳೂರು ಹಾಗೂ ಕಾವೇರಿ ಪಾತ್ರದ ಜನರಿಗಾಗಿ,
ನೀವು ಬೇರೆಯವರಿಗೆ ಕರೆ ಮಾಡಿ ಈ ಹೋರಾಟದಲ್ಲಿ ಭಾಗವಹಿಸಬೇಡಿ ಎಂದು ಹೇಳಬಹುದು. ಆದರೆ ಬೀಸೋ ಗಾಳಿ, ಹರಿಯೋ ನೀರು, ಉದಯಿಸುವ ಸೂರ್ಯನನ್ನು ನಿಲ್ಲಿಸಲು ಸಾಧ್ಯವೇ? ಆ ಸೂರ್ಯನ ಮಕ್ಕಳು ಈ ವೇದಿಕೆ ಮೇಲೆ ಕೂತಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಂತೆ, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಇಂದು ಹೋರಾಟ ಮಾಡುತ್ತಿದ್ದೇವೆ.

ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ನಿರ್ಬಂಧ, ವಾರಾಂತ್ಯದ ಕರ್ಥ್ಯ, ಪೊಲೀಸ್ ಮತ್ತು ರಾಜ್ಯ ಸರಕಾರದ ನಡುವೆಯೂ ನೀರಿಗಾಗಿ ನಡಿಗೆ ಪಾದಯಾತ್ರೆಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಹರಿದು ಬಂದಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರು ಮತ್ತು ಬಸ್ಸುಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಕನಕಪುರ, ಸಾತನೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.

ಉದ್ಘಾಟನೆ ಕಾರ್ಯಕ್ರಮದ ಬಳಿಕ ಮೊದಲ ದಿನದ ಪಾದಯಾತ್ರೆ ಸಾತನೂರಿನ ಕಾವೇರಿ, ಅರ್ಕಾವತಿ ನದಿ ಸೇರುವ ಸಂಗಮದಿಂದ ಆರಂಭವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹುಟ್ಟೂರು ದೊಡ್ಡಾಲಹಳ್ಳಿವರೆಗೂ ನಡೆಯಿತು. ಮಾರ್ಗಮಧ್ಯದಲ್ಲಿ ಎಗ್ಗನೂರಿನಲ್ಲಿ ಭೋಜನ ವಿರಾಮಕ್ಕೆ ಬಿಡುವು ನೀಡಲಾಗಿತ್ತು. ಬೆಳಗ್ಗೆ 6, ಮಧ್ಯಾಹ್ನದಿಂದ ಸಂಜೆ ವರೆಗೂ 8 ಕಿಮೀ ಸೇರಿದಂತೆ ಮೊದಲ ದಿನ ಒಟ್ಟು 14 ಕಿ.ಮೀ ಪಾದಯಾತ್ರೆ ನಡೆಸಲಾಯಿತು.

ಹೂಮಳೆ: ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರಿಗೆ ಅಲ್ಲಲ್ಲಿ ಆರತಿ ಬೆಳಗಿ, ಹೂಮಳೆಗರೆದು ಸ್ವಾಗತ ಕೋರಲಾಯಿತು. ಇದೇ ವೇಳೆ ಪಾದಯಾತ್ರೆಯುದ್ದಕ್ಕೂ ಬೆಲ್ಲದ ಪಾನಕ, ಮಜ್ಜಿಗೆ, ಎಳನೀರು, ಕಬ್ಬಿನ ಹಾಲು, ಐಸ್‌ಕ್ರೀಮ್, ಜ್ಯೂಸ್ ಸೇರಿದಂತೆ ಕುಡಿಯುವ ನೀರನ್ನು ವಿತರಣೆ ಮಾಡಲಾಯಿತು. ಪಾದಯಾತ್ರೆಯುದ್ದಕ್ಕೂ ಅತ್ಯಂತ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿತ್ತು.

ಪಾದಯಾತ್ರೆ ಮಾರ್ಗದಲ್ಲಿ ಮಹಿಳೆಯರು ಮತ್ತು ಹಿರಿಯ ಮುಖಂಡರಿಗಾಗಿ ಸಂಚಾರಿ ಶೌಚಾಲಯಗಳನ್ನು ಸ್ಥಾಪಿಸಲಾಗಿತ್ತು. ಪಾದಯಾತ್ರೆ ಹಾದಿಯಲ್ಲಿ ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ಘೋಷಣೆ ಜಾರಿ ಆಗಲೇಬೇಕು ಎಂಬ ಘೋಷಣೆಗಳನ್ನು ಬರೆಸಲಾಗಿತ್ತು. ಇಡೀ ಮಾರ್ಗದಲ್ಲಿ ಕಾಂಗ್ರೆಸ್ ಬಾವುಟದ ಬದಲಿಗೆ ರಾಷ್ಟ್ರಧ್ವಜ, ಕನ್ನಡ ಧ್ವಜ, ಜೆಡಿಎಸ್ ಧ್ವಜವನ್ನೇ ಹೋಲುವ ಹಸಿರು ಧ್ವಜ, ನೀಲಿ ಧ್ವಜಗಳನ್ನು ಸ್ವಾಗತಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ವೈದ್ಯರು, ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ವಾಕಿಟಾಕಿ ಜತೆ ಪಾದಯಾತ್ರಿಗಳಿಗೆ ಬೇಕಾದ ಅಗತ್ಯ ವ್ಯವಸ್ಥೆ ಕಲ್ಪಿಸಲು ಸಜ್ಜಾಗಿ ದ್ದರು. ಹಿರಿಯ ನಾಯಕರಿಗಾಗಿ 10ಕ್ಕೂ ಹೆಚ್ಚು ಹವಾನಿಯಂತ್ರಿತ ಕ್ಯಾರವಾನ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಸಾತನೂರಿನ ಸಂಗಮದಿಂದ ಆರಂಭಗೊಂಡಿರುವ ಈ ಪಾದಯಾತ್ರೆ ಒಟ್ಟು 10 ದಿನಗಳ ಕಾಲ(ಜ.19) ನಡೆಯಲಿದ್ದು, ಕನಕಪುರ, ರಾಮನಗರ, ಬಿಡದಿ, ಕೆಂಗೇರಿ ಮಾರ್ಗವಾಗಿ ಬೆಂಗಳೂರನ್ನು ತಲುಪಲಿದೆ. ಬೆಂಗಳೂರು ನಗರದ ಹಲವು ಕಡೆ ಈ ಪಾದಯಾತ್ರೆ ಸಾಗಲಿದ್ದು, ಜ.19ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.

ಅಚ್ಚುಕಟ್ಟಾಗಿ ವ್ಯವಸ್ಥೆ: ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಕನಕಪುರದ ಸಾತನೂರಿನ ಸಮೀಪದ ಅರಣ್ಯ ಪ್ರದೇಶದಲ್ಲಿನ ಸಂಗಮದ ಕಾವೇರಿ ನದಿ ತಟದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿತ್ತು. ವಾರಾಂತ್ಯ ಕರ್ಪೂ ಲೆಕ್ಕಿಸದೆ ನೂರಾರು ಕಾರ್ಯಕರ್ತರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಉಪಾಹಾರ, ಊಟ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಮಹಿಳೆಯರ ದಂಡು: ನೀರಿಗಾಗಿ ನಡಿಗೆಗೆ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಪೂರ್ವಕುಂಭ ಸ್ವಾಗತಕ್ಕೆ ನೂರಾರು ಹೆಣ್ಣು ಮಕ್ಕಳು ಭಾಗವಹಿಸಿದ್ದರು. ಮಹಿಳಾ ಶಾಸಕರಾದ ಸೌಮ್ಯಾ ರೆಡ್ಡಿ, ಲಕ್ಷ್ಮಿ ಹೆಬ್ಬಾಳ್ವರ್, ವಿನಿಷಾ ನಿರೋ, ಅಂಜಲಿ ನಿಂಬಾಳರ್, ಮಾಜಿ ಸಚಿವೆ ಮೋಟಮ್ಮ, ಉಮಾಶ್ರೀ, ಮಾಜಿ ಶಾಸಕಿ ಮುಲ್ಲಾಜಮ್ಮ ಸೇರಿದಂತೆ ಹಲವು ಮುಖಂಡರು ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಮಾರ್ಗಸೂಚಿ ಉಲ್ಲಂಘನೆ: ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕು ತಡೆಗಟ್ಟಲು ರಾಜ್ಯ ಸರಕಾರ ನಿರ್ಬಂಧ ಹೇರಿದ್ದು, ವಾರಾಂತ್ಯದ ಕರ್ಥ್ಯವನ್ನೂ ಹಾಕಿತ್ತು. ಈ ಮಧ್ಯೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಮೂಲಕ ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರು ಮಾಸ್ ಧರಿಸಿ, ಅಂತರ ಕಾಯ್ದುಕೊಂಡು ಮಾರ್ಗಸೂಚಿ ಪಾಲಿಸಿ ನಡಿಗೆ ಮಾಡುತ್ತೇವೆಂದು ಹೇಳುತ್ತಿದ್ದರೂ ಇಡೀ ಪಾದಯಾತ್ರೆಯಲ್ಲಿ ಕೆಲವರು ಮಾಸ್ಕ್ ಧರಿಸಿದ್ದರೂ ಸುರಕ್ಷಿತ ಅಂತರ ಮಾತ್ರ ಕಣ್ಮರೆಯಾಗಿತ್ತು.

ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಆರ್.ಧ್ರುವನಾರಾಯಣ್, ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ನಟ ದುನಿಯಾ ವಿಜಯ್, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು, ಪದಾಧಿಕಾರಿಗಳು ನೂರಾರು ಮಂದಿ ಪಾದಯಾತ್ರೆಗೆ ಸಾಕ್ಷಿಯಾದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...