ಭಟ್ಕಳದಲ್ಲಿ ಭತ್ತದ ಕೊಯ್ಲಿಗೆ ಮಳೆಯ ಕಾಟ; ನೀರಿನಲ್ಲಿ ತೇಲಿದ ತೆನೆ; ಬಿಸಿಲಿಗಾಗಿ ರೈತನ ಮೊರೆ

Source: S.O. News Service | By V. D. Bhatkal | Published on 2nd November 2020, 4:12 PM | Coastal News | Special Report |

ಭಟ್ಕಳ: ನವೆಂಬರ್ ತಿಂಗಳು ಕಾಲಿಟ್ಟರೂ ಮಳೆಯ ಕೀಟಲೆ ಕಡಿಮೆಯಾಗಿಲ್ಲ. ದೀಪಾವಳಿ ಬರುವುದರ ಒಳಗಾಗಿ ಕೊಯ್ಲು ಕಾರ್ಯವನ್ನು ಮುಗಿಸಲು ಗದ್ದೆಗೆ ಇಳಿದಿರುವ ರೈತನಿಗೆ ಮತ್ತದೇ ಮಳೆಯ ಚಿಂತೆ ಕಾಡಲಾರಂಭಿಸಿದೆ. 

ಕಳೆದ 2 ದಿನಗಳಿಂದ ತಾಲೂಕಿನಲ್ಲಿ ಮಳೆ ಸುರಿಯಲಾರಂಭಿಸಿದ್ದು, ಕೊಯ್ದಿಟ್ಟ ಭತ್ತದ ತೆನೆಗಳು ಮಳೆ ನೀರಿನಲ್ಲಿ ತೇಲಲಾರಂಭಿಸಿವೆ. ಗದ್ದೆಯಲ್ಲಿ ತುಂಬಿಕೊಂಡ ನೀರನ್ನು ಹೊರಗೆ ಹರಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ರವಿವಾರ ರೈತರು ಭತ್ತದ ತೆನೆಗಳನ್ನು ಮನೆಯ ಅಂಗಳಕ್ಕೆ ಸ್ಥಳಾಂತರಿಸಿ ಒಣಗಿಸುವ ಕೆಲಸಕ್ಕೆ ಮುಂದಾದರು. ಆದರೆ ಮೋಡ ಮುಸುಕಿದ ವಾತಾವರಣದಿಂದಾಗಿ ಸೂರ್ಯ ಕಿರಣಗಳು ಸರಿಯಾಗಿ ನೆಲವನ್ನು ಕಾಣದೇ ರೈತರು ನಿರಾಸೆ ಅನುಭವಿಸ ಬೇಕಾಯಿತು. ಇನ್ನೂ ಒಂದೆರಡು ದಿನಗಳ ಕಾಲ ಮತ್ತೆ ಮಳೆ ಬೀಳುವ ಸಾಧ್ಯತೆ ಇರುವುದರಿಂದ ರೈತರು ಕೊಯ್ಲು ಕಾರ್ಯವನ್ನು ಮುಂದುವರೆಸಲು ಆಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಗದ್ದೆಯಲ್ಲಿಯೇ ಒಣಗಿದ ಪೈರನ್ನು ಬಿಡುವ ಹಾಗೆಯೂ ಇಲ್ಲ!

 ಮೊದಲೇ ಅತಿವೃಷ್ಟಿಯಿಂದಾಗಿ ಭತ್ತದ ಪೈರುಗಳು ಕೊಳೆತು ಹೋಗಿವೆ. ಉಳಿದ ಭತ್ತವನ್ನು ಮನೆಗೆ ಒಯ್ಯುವ ಹೊತ್ತಿನಲ್ಲಿಯೇ ಮಳೆ ಸುರಿದರೆ ನಾವು ಏನು ಮಾಡಬೇಕು?
                                      - ಮಂಜಯ್ಯ, ರೈತರು ಭಟ್ಕಳ

ಬಿಸಿಲಿಗಾಗಿ ರೈತನ ಮೊರೆ:
ಭಟ್ಕಳ ತಾಲೂಕಿನಲ್ಲಿ 2500 ಹೆಕ್ಟರ್ ಭೂಮಿಯಲ್ಲಿ ಭತ್ತ ಬೆಳೆಯಲಾಗಿದ್ದು, ಕೊಯ್ಲಿಗೆ ಜನರನ್ನು ಹುಡುಕಿಕೊಳ್ಳುವುದೇ ರೈತರಿಗೆ ವರ್ಷದಿಂದ ವರ್ಷಕ್ಕೆ ಕಷ್ಟವಾಗುತ್ತಿರುವುದು ಕಂಡು ಬಂದಿದೆ. ಹೊಂಡದ ಗದ್ದೆಗಳನ್ನು ಹೊರತುಪಡಿಸಿ, ಉಳಿದಂತೆ 75%ಕ್ಕೂ ಅಧಿಕ ರೈತರು ಕೊಯ್ಲು ಯಂತ್ರವನ್ನು ತರಿಸಿಕೊಳ್ಳುತ್ತಿದ್ದಾರೆ. ಕೊಯ್ದಿಟ್ಟ ಪೈರುಗಳನ್ನು ಗದ್ದೆಯಲ್ಲಿಯೇ ಒಣಗಲು ಬಿಟ್ಟ ರೈತರಿಗೆ, ಇದೀಗ ಮಳೆಯಿಂದ ತಪ್ಪಿಸಿಕೊಳ್ಳಲು ಏಕಾಏಕಿಯಾಗಿ ಎಲ್ಲ ಭತ್ತವನ್ನೂ ಮನೆಗೆ ತೆಗೆದುಕೊಂಡು ಹೋಗಿ ರಾಶಿ ಹಾಕಲು ಸಾಧ್ಯವಿಲ್ಲದಾಗಿದೆ. ಆದ್ದರಿಂದ ಮಳೆ ಹೋಗಿ ಬಿಸಿಲು ಬರಲಿ ಎಂದೇ ಇಲ್ಲಿನ ರೈತರು ಒಮ್ಮೆ ಆಗಸ, ಇನ್ನೊಮ್ಮೆ ಗದ್ದೆಯನ್ನು ನೋಡುತ್ತ ಕಾಲ ಕಳೆಯುತ್ತಿದ್ದಾರೆ. ಕನಿಷ್ಠ 4-5 ದಿನ ಕಳೆದರೂ ಸರಿಯೇ, ಅಲ್ಲಿಯವರೆಗೆ ಬಿಸಿಲು ಬಿದ್ದರೂ ಸಾಕು, ಏನಾದರೂ ಮಾಡಿಕೊಂಡರಾಯಿತು ಎಂದು ರೈತರು ಬಡಬಡಿಸುತ್ತಿದ್ದಾರೆ. 

ಶೇಂಗಾ ಬೆಳೆಯುವುದು ಹೇಗೆ?:
ತಾಲೂಕಿನಲ್ಲಿ ಹೊಳೆ ದಡದ ಕೃಷಿ ಭೂಮಿಯನ್ನು ಹೊರತುಪಡಿಸಿದರೆ ಉಳಿದ ಕಡೆ ರೈತರು ಶೇಂಗಾ ಬೆಳೆಯುತ್ತ ಬಂದಿದ್ದಾರೆ. ಗದ್ದೆಯಲ್ಲಿನ ನೀರು ಇಂಗಿದ ನಂತರ ನೆಲವನ್ನು ಹದ ಮಾಡಿಕೊಂಡು, ನಂತರ ಗದ್ದೆ, ಹಿತ್ತಲಿನ ಬಾವಿ, ಕೆರೆಯ ನೀರನ್ನು ಬಳಸಿಕೊಂಡು ವರ್ಷದ 2ನೇ ಬೆಳೆ ತೆಗೆಯುವ ರೈತನಿಗೆ ಇತ್ತೀಚಿನ ವರ್ಷಗಳಲ್ಲಿ ಮಳೆ ಕಾಟವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಡಿಸೆಂಬರ್ ಅಂತ್ಯದವರೆಗೂ ಮಳೆ ಸುರಿಯುತ್ತ ಹೋದರೆ ಶೇಂಗಾ ಬೆಳೆಗೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ರೈತನನ್ನು ಕಾಡುತ್ತಲೇ ಇದೆ. 

ಕುಂದುತ್ತಿರುವ ಕೃಷಿ ಆಸಕ್ತಿ:
ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ದೀರ್ಘವಾಗುತ್ತಿರುವುದ ರಿಂದ ಇಲ್ಲಿನ ರೈತನಿಗೆ ಹೊಂದಿಕೊಳ್ಳಲು ಇನ್ನೂ ಆಗಿಲ್ಲ. ಗದ್ದೆಯನ್ನು ಹಾಳು ಬಿಟ್ಟರೆ ಮನೆಯೇ ಹಾಳಾಗುತ್ತದೆ ಎಂದು ನಂಬಿರುವ ಇಲ್ಲಿನ ರೈತರು ಆರ್ಥಿಕ ಲಾಭ, ನಷ್ಟವನ್ನು ಬದಿಗೊತ್ತಿ ಕೃಷಿ ಕಾಯಕದಲ್ಲಿ ತೊಡಗಿ ಕೊಂಡಿರುವರಾದರೂ ಹವಾಮಾನ ವೈಫರೀತ್ಯಗಳು ರೈತನ ಆಸಕ್ತಿಯನ್ನು ಕುಂದಿಸುತ್ತಿವೆ. ಇತ್ತ ಸರಕಾರವೂ ನಿರೀಕ್ಷಿತ ಪ್ರಮಾಣದಲ್ಲಿ ರೈತನ ನೆರವಿಗೆ ಬರುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ಹಸಿರು ಹೆಚ್ಚಿಸುವ ಸರಕಾರದ ಮಾತುಗಳು ಬಾಯಿಯಲ್ಲಿ ಕರಗಿ ಹೋದರೆ ಆಶ್ಚರ್ಯ ಪಡುವ ಹಾಗಿಲ್ಲ!

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...