ಮೋದಿ-ಅದಾನಿ ಸಂಬಂಧ ಬಹಿರಂಗವಾಗಲಿ: ಲೋಕಸಭೆ ಯಲ್ಲಿ ರಾಹುಲ್ ಗಾಂಧಿ

Source: Vb | By I.G. Bhatkali | Published on 8th February 2023, 8:51 AM | National News |

ಹೊಸದಿಲ್ಲಿ: ಅದಾನಿ ಸಮೂಹ ಶೇರು ವಂಚನೆ ನಡೆಸಿರುವ ಕುರಿತ ಅಮೆರಿಕದ ಹಿಂಡನ್‌ಬರ್ಗ್ ವರದಿಯನ್ನು ಮುಂದಿಟ್ಟು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಮಂಗಳವಾರ ಲೋಕಸಭೆಯಲ್ಲಿ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಬಿಜೆಪಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.

2014ರಲ್ಲಿ ಅಸ್ತಿತ್ವಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಅದಾನಿ ಸಮೂಹಕ್ಕೆ ಅನುಕೂಲಕರವಾಗಿ ವರ್ತಿಸುತ್ತಿದೆ. 2014ರಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಅವರ ಸ್ಥಾನ 609 ಆಗಿತ್ತು. ಈಗ ಕೇವಲ ಮ್ಯಾಜಿಕ್‌ನಿಂದ ಅವರು ಎರಡನೇ ಸ್ಥಾನದವರೆಗೂ ತಲುಪಿದ್ದರು ಎಂದು ಅವರು ಹೇಳಿದರು.

ವಿಮಾನ ನಿಲ್ದಾಣಗಳನ್ನು ಸ್ವಾಧೀನಪಡಿಸಿ ಕೊಳ್ಳಲು ಅದಾನಿಗೆ ನೆರವು ನೀಡಲು ಮೋದಿ ಸರಕಾರ ನಿಯಮಗಳನ್ನೇ ಬದಲಾಯಿಸಿತು ಎಂದು ಅವರು ಆರೋಪಿಸಿದರು. “ವಿಮಾನ ನಿಲ್ದಾಣಗಳ ಬಗ್ಗೆ ಅನುಭವ ಇರುವ ಕಂಪೆನಿ/ ವ್ಯಕ್ತಿಗಳಿಗೆ ಮಾತ್ರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಹೊಣೆಗಾರಿಕೆ ನೀಡಬೇಕು ಎಂಬ ನಿಯಮವಿದೆ. ಆದರೆ, ಸರಕಾರ ಅದಾನಿ ಸಮೂಹಕ್ಕಾಗಿ ನಿಯಮವನ್ನು ಬದಲಾಯಿಸಿತು ಹಾಗೂ 6 ವಿಮಾನ ನಿಲ್ದಾಣಗಳನ್ನು ಅವರಿಗೆ ಹಸ್ತಾಂತರಿಸಿತು' ಎಂದು ರಾಹುಲ್ ಗಾಂಧಿ ಆರೋಪಿಸಿದರು.

ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ಜೊತೆಯಾಗಿ ಪ್ರಯಾಣಿಸುತ್ತಿರುವ ಭಾವಚಿತ್ರವನ್ನು ಸದನದಲ್ಲಿ ಪ್ರದರ್ಶಿಸಿದ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಹಾಗೂ ಅದಾನಿ ಜೊತೆಯಾಗಿ ಎಷ್ಟು ಬಾರಿ ಪ್ರಯಾಣಿಸಿದ್ದಾರೆ ಎಂದು ತಿಳಿಯ ಬಯಸುವುದಾಗಿ ಹೇಳಿದರು.

ತಾನು ಭಾರತ್ ಜೋಡೊ ಯಾತ್ರೆ ನಡೆಸುತ್ತಿದ್ದ ಸಂದರ್ಭ, ಅದಾನಿ ಅವರ ಆಸ್ತಿ ಮೌಲ್ಯ 2014ರಲ್ಲಿ 8 ಶತಕೋಟಿ ಡಾಲರ್ ಇದ್ದುದು 2022ರಲ್ಲಿ 140 ಶತಕೋಟಿ ಹೇಗೆ ತಲುಪಿತು ಎಂದು ಯುವಜನರು ತನ್ನನ್ನು ಪ್ರಶ್ನಿಸಿದ್ದರು. ಈ ರೀತಿ ಉನ್ನತ ಮಟ್ಟಕ್ಕೆ ಏರಲು ಅದಾನಿ ಅವರ ಹಿಂದಿರುವ ಯಶಸ್ವಿ ಸೂತ್ರ ಯಾವುದು ಎಂದು ತಿಳಿಯಲು ಯುವಜನರು ಬಯಸಿದ್ದಾರೆ ಎಂದರು.

“ದೇಶಾದ್ಯಂತ ಕೇವಲ ಅದಾನಿ, ಅದಾನಿ, ಅದಾನಿ... ತಮಿಳುನಾಡು, ಕೇರಳದಿಂದ ಹಿಮಾಚಲಪ್ರದೇಶದವರೆಗೆ ಎಲ್ಲೆಲ್ಲಿಯೂ ನಾವು ಅದಾನಿ ಎಂಬ ಒಂದೇ ಹೆಸರು ಕೇಳುತ್ತಿದ್ದೇವೆ.

ಅದಾನಿ ಅವರು ಯಾವುದೇ ಉದ್ಯಮಕ್ಕೆ ಪ್ರವೇಶಿಸಿದರೂ ವಿಫಲರಾಗದೇ ಇರುವುದರ ಬಗ್ಗೆ ಜನರು ಆಗಾಗ ನನ್ನನ್ನು ಪ್ರಶ್ನಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ನಡುವಿನ ಸಂಬಂಧದ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಕ್ಕೆ ತೆರಳಿದ ಮರು ದಿನ ಎಸ್‌ಬಿಐ ಅದಾನಿಗೆ 1 ದಶಲಕ್ಷ ಡಾಲರ್ ಸಾಲ ನೀಡಿದೆ. ಆನಂತರ ಪ್ರಧಾನಿ ಅವರು ಬಾಂಗ್ಲಾದೇಶಕ್ಕೆ ಪ್ರವಾಸ ಮಾಡಿದರು. ಬಾಂಗ್ಲಾದೇಶದ ವಿದ್ಯುಚ್ಛಕ್ತಿ ಅಭಿವೃದ್ಧಿ ಮಂಡಳಿ ಅದಾನಿ ಅವರೊಂದಿಗೆ 25 ವರ್ಷಗಳ ಗುತ್ತಿಗೆಗೆ ಸಹಿ ಹಾಕಿತು ಎಂದು ರಾಹುಲ್‌ ಗಾಂಧಿ ಹೇಳಿದರು.

ಅಗ್ನಿವೀರ್‌ ಪರಿಕಲ್ಪನೆ ಆರೆಸ್ಸೆಸ್‌ ನಿಂದ ಬಂದಿದೆ ಹಾಗೂ ಅದನ್ನು ಸೇನೆಯ ಮೇಲೆ ಹೇರಿದಂತೆ ಕಾಣುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಗ್ನಿವೀರ್ ಯೋಜನೆ ಸೇನೆಯಿಂದ ಹುಟ್ಟಿಕೊಂಡಿಲ್ಲ. ಅದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಅವರು ಸೇನೆಯ ಮೇಲೆ ಹೇರಿದ್ದಾರೆ ಎಂದು ನಿವೃತ್ತ ಸೈನಿಕರು ಹೇಳಿದ್ದಾರೆ. ಅಗ್ನಿವೀರ್ ಯೋಜನೆ ರಾಷ್ಟ್ರಪತಿ ಭಾಷಣದಲ್ಲಿ ಒಮ್ಮೆ ಮಾತ್ರ ಪ್ರಸ್ತಾವವಾಗಿದ್ದು ಹೇಗೆ? ನಿರುದ್ಯೋಗ ಹಾಗೂ ಹಣದುಬ್ಬರ ಮುಂತಾದ ಪದಗಳು ಅಲ್ಲಿ ಯಾಕೆ ಪ್ರಸ್ತಾವವಾಗಿಲ್ಲ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

Read These Next

ರಾಹುಲ್ ಅನರ್ಹತೆ ವಿರುದ್ಧ ಕಾಂಗ್ರೆಸ್ ಸಂಕಲ್ಪ ಸತ್ಯಾಗ್ರಹ; ದೇಶಾದ್ಯಂತ ಕೈ ಕಾರ್ಯಕರ್ತರಿಂದ ಧರಣಿ, ಪ್ರತಿಭಟನಾ ರೆಲಿ

ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ಪ್ರತಿಭಟಿಸಿ ಭಾರತ ದಾದ್ಯಂತ ...

ರಾಹುಲ್ ಗಾಂಧಿಗೆ 2 ವರ್ಷ ಜೈಲು; 'ಮೋದಿ' ಉಪನಾಮಕ್ಕೆ ಅವಮಾನ ಪ್ರಕರಣ; ಮೇಲ್ಮನವಿ ಸಲ್ಲಿಸಲು 30 ದಿನಗಳ ಜಾಮೀನು

ಮೋದಿ ಉಪನಾಮವನ್ನು ಅವಮಾನಿಸಲಾಗಿದೆ ಎಂಬುದಾಗಿ ಆರೋಪಿಸುವ 2019ರ ಮಾನನಷ್ಟ ಪ್ರಕರಣದಲ್ಲಿ ಗುರುವಾರ ಗುಜರಾತ್‌ನ ಸೂರತ್ ನಲ್ಲಿರುವ ...