ಬೇಂಗ್ರೆ ಬೈಲೂರು ಬಸ್ತಿಮಕ್ಕಿಯ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

Source: so news | By MV Bhatkal | Published on 13th June 2021, 7:17 PM | Coastal News | Don't Miss |


ಭಟ್ಕಳ: ಕಾಂಗ್ರೆಸ್ ಪಕ್ಷದ ಕರೆಯ ಮೇರೆಗೆ ಭಟ್ಕಳ ತಾಲೂಕಿನಲ್ಲಿ ಇಂದು ಹೋಬಳಿ ಮಟ್ಟದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರುದ್ದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು. 
ಮಾವಳ್ಳಿ ಹೋಬಳಿಯ ಬೇಂಗ್ರೆ ಮತ್ತು ಬೈಲೂರು ಬಸ್ತಿಮಕ್ಕಿಯ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. 
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ರಾಮಾ ಮೊಗೇರ ಕಾಂಗ್ರೆಸ್ ಸರಕಾರ ಮಾಡಿದ್ದನ್ನು ಬಿಜೆಪಿ ಸರಕಾರ ಮಾರುತ್ತಿದೆ. ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಬೆಲೆ ಏರಿಕೆ ವಿರುದ್ದ ಪದೇಪದೇ ಪ್ರತಿಭಟನೆ ನಡೆಸುತ್ತಿದ್ದವರೇ ಇಂದು ಮೌನವಾಗಿದ್ದಾರೆ.  ನರೇಂದ್ರ ಮೋದಿಯವರ ಅಚ್ಛೇ ದಿನ ಅಂದ್ರೆ ಇದೇನಾ? ಎಂದು ಪ್ರಶ್ನಿಸಿದರು. ತೈಲ, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದರು. ಕೇಂದ್ರ, ರಾಜ್ಯ ಸರಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಆದಷ್ಟು ಶೀಘ್ರ ಬೆಲೆ ಏರಿಕೆಯನ್ನು ತಡೆಯಬೇಕು ಎಂದೂ ಆಗ್ರಹಿಸಿದರು. 
ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದಲೂ ಬರೀ ಸುಳ್ಳೇ ಹೇಳುತ್ತಿದೆ. ಬಿ.ಜೆ.ಪಿ. ಪಕ್ಷ ಚುನಾವಣೆ ಪೂರ್ವದಲ್ಲಿ ಒಂದು ರೀತಿ, ಚುನಾವಣೆ ಮುಗಿದ ಮೇಲೆ ಇನ್ನೊಂದು ರೀತಿ ನಡವಳಿಕೆಯಾಗಿದೆ. ದೇಶದಲ್ಲಿ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ 100 ರೂಪಾಯಿಗೆ ಏರಿದೆ. ವಿದ್ಯುತ್ ಬಿಲ್ ಸಹ ಏರಿಕೆಯಾಗಿದ್ದು, ಜನರ ಮೇಲೆ ಒಂದರ ಮೇಲೆ ಒಂದು ಹೊಡೆತ ಬೀಳುತ್ತಿದೆ. ಸರಕಾರ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರ ಕಣ್ಣಿದ್ದೂ ಕುರುಡಾಗಿದೆ ಎಂದರು. 
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ ವಿದ್ಯುತ್ ದರ, ಅಗತ್ಯವಸ್ತುಗಳು, ಅಡುಗೆ ಅನಿಲ ಬೆಲೆ ಏರಿರುವುದು. ಡಿಸೇಲ್, ಪೆಟ್ರೋಲ್ ಬೆಲೆ 100 ರೂ ಆಗಿದ್ದರೂ ಕೇಂದ್ರ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದರು. ಕಾಂಗ್ರೆಸ್ ಪಕ್ಷದ ವತಿಯಿಂದ ಬೆಲೆ ಏರಿಕೆ ವಿರುದ್ದ ತಾಲೂಕು, ಕೇಂದ್ರ, ಹೋಬಳಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲಾಗುವುದು ಎಂದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್, ತಾ.ಪಂ. ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಹೊನ್ನಾವರ ಎಪಿಎಂಸಿ ಅಧ್ಯಕ್ಷ ಗೋಪಾಲ ನಾಯ್ಕ, ತಾ.ಪಂ. ಮಾಜಿ ಸದಸ್ಯ ವಿಷ್ಣು ದೇವಡಿಗ, ಬೇಂಗ್ರೆ ಗ್ರಾ.ಪಂ. ಅಧ್ಯಕ್ಷೆ ಬೇಬಿ ನಾಯ್ಕ, ಭಾಸ್ಕರ ನಾಯ್ಕ ಮುಂತಾದವರಿದ್ದರು.

 

 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...