ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ಖಾಸಗಿ ಸಾರಿಗೆ ಉದ್ಯಮ ಸಂಕಷ್ಟದಲ್ಲಿ

Source: SO News | By Laxmi Tanaya | Published on 28th September 2020, 3:27 PM | Coastal News | Don't Miss |

ಮಂಗಳೂರು :  ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನನಾಡಿಯಾಗಿದ್ದ ಖಾಸಗಿ ಸಾರಿಗೆ ಉದ್ಯಮ ಕೊರೊನಾ ಲಾಕ್‌ಡೌನ್ ಬಳಿಕ ಚೇತರಿಸಿಕೊಂಡಿಲ್ಲ. ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಖಾಸಗಿ ಬಸ್ ಮಾಲೀಕರು ನಷ್ಟದ ಹೊಡೆತದಿಂದ ಹೊರಬಂದಿಲ್ಲ.‌ ಸರ್ಕಾರ ಯಾವುದೇ ತೆರಿಗೆ ವಿನಾಯಿತಿ ನೀಡದಿರುವುದು ಒಂದೆಡೆಯಾದರೆ ಕರೊನಾ ಪೂರ್ವದಲ್ಲಿದ್ದ ಡೀಸೆಲ್ ಬೆಲೆ ಈಗ ಐದು ತಿಂಗಳಲ್ಲಿ ಪ್ರತಿ ಲೀಟರ್‌ಗೆ 12 ರೂ.ನಷ್ಟು ಏರಿರುವುದು ಬಸ್ ಮಾಲೀಕರಿಗೆ ದೊಡ್ಡ ಶಾಕ್ ಕೊಟ್ಟಿದೆ.

ಲಾಕ್‌ಡೌನ್ ಕಾರಣದಿಂದಾಗಿ ಉಭಯ ಜಿಲ್ಲೆಗಳಲ್ಲಿ ಮಾರ್ಚ್ ಕೊನೆಯ ವಾರದಿಂದ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ಸಡಿಲಗೊಂಡ ಬಳಿಕ ಜೂನ್ 1ರಿಂದ ಹಂತ ಹಂತವಾಗಿ ಬಸ್ ಕಾರ್ಯಾಚರಣೆ ಮಾಡಲು ಮಾಲೀಕರು ತೀರ್ಮಾನಿಸಿದ್ದರು. ಪ್ರಸ್ತುತ ಹಿಂದಿಗಿಂತ ಸ್ಥಿತಿ ತುಸು ಉತ್ತಮವಿದ್ದರೂ ಅದೆಲ್ಲವೂ ಡೀಸೆಲ್ ದರ ಏರಿಕೆಯಿಂದಾಗಿ ಗಣನೆಗೇ ಬರುತ್ತಿಲ್ಲ ಎನ್ನುವುದು ಮಾಲೀಕರ ಅಳಲು.

ಮಂಗಳೂರು- ಉಡುಪಿ -ಕುಂದಾಪುರ ರೂಟ್‌ನಲ್ಲೀಗ 70 ಎಕ್ಸ್‌ಪ್ರೆಸ್‌ಗಳಷ್ಟೇ ಓಡಾಡುತ್ತಿವೆ. ಹೆಚ್ಚಿನ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಪ್ರಯಾಣಿಕರು ತುಂಬಿರುತ್ತಾರೆ. ಉಳಿದ ಸಮಯದಲ್ಲಿ ಬಸ್‌ಗಳಲ್ಲಿ ಅಷ್ಟೇನೂ ಜನರಿಲ್ಲ. ಇದು ಟ್ರಿಪ್ ನಿರ್ವಹಣೆಗೆ ಸಾಲುತ್ತಿಲ್ಲ. ಒಟ್ಟಾರೆ ಇಡೀ ದಿನದ ಸಂಪಾದನೆಯಲ್ಲಿ ದಿನದ ಖರ್ಚು ಹೊಂದಿಸುವುದು ಕಷ್ಟ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರು.

ಲಾಕ್‌ಡೌನ್ ಬಳಿಕ ಬಸ್ ಮಾಲೀಕರು ಪರ್ಮಿಟ್ ಸರೆಂಡರ್ ಮಾಡಿದ್ದು, ರಸ್ತೆಗಿಳಿಸಲು ಸಾಧ್ಯವಾಗದವರು ಇನ್ನೂ ಪಡೆದುಕೊಂಡಿಲ್ಲ. ಈ ಪರಿಸ್ಥಿತಿಯಲ್ಲಿ ಪಡೆದುಕೊಂಡಾದರೂ ಏನು ಮಾಡುವುದು ಎನ್ನುವುದು ಮಾಲೀಕರ ಪ್ರಶ್ನೆ.

ನಗರ ಸೇವೆಯೇ ವಾಸಿ: ಎಕ್ಸ್‌ಪ್ರೆಸ್/ಸರ್ವೀಸ್ ಬಸ್‌ಗಳ ಪೈಕಿ ಶೇ.30 ಮಾತ್ರ ರಸ್ತೆಗಳಿದಿದ್ದು, ಶೇ.70ರಷ್ಟು ಬಸ್‌ಗಳು ನಿಂತಲ್ಲೇ ಇವೆ. ಇವುಗಳಿಗೆ ಹೋಲಿಸಿದರೆ ಸಿಟಿ ಬಸ್‌ಗಳೇ ರಸ್ತೆಗಿಳಿದಿರುವುದು ಹೆಚ್ಚು. ಮಂಗಳೂರಿನ ಒಟ್ಟು 325 ಸಿಟಿ ಬಸ್‌ಗಳಲ್ಲಿ 275ರಷ್ಟು ರಸ್ತೆಗೆ ಇಳಿದಿದ್ದು, ಇನ್ನು 50ರಷ್ಟು ಮಾತ್ರವೇ ಬಾಕಿ ಇದೆ. ಉಡುಪಿಯ 85 ಸಿಟಿ ಬಸ್‌ಗಳ ಪೈಕಿ 35 ಬಸ್‌ಗಳು ರಸ್ತೆಗಿಳಿದಿಲ್ಲ.

ಮಂಗಳೂರು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಪ್ರಕಾರ, ಅಕ್ಟೋಬರ್ ಮೊದಲ ವಾರದಲ್ಲಿ ಇನ್ನೊಂದಷ್ಟು ಬಸ್ ಸೇವೆ ಆರಂಭಿಸಬಹುದು. ಕೆಲವೊಂದು ರೂಟ್‌ಗಳಲ್ಲಿ ಬಸ್ ಕಡಿಮೆ ಇರುವ ಕಾರಣಕ್ಕೆ ಜನ ಬಸ್‌ಗೆ ಬರುತ್ತಿರಲಿಲ್ಲ. ಆದರೆ ಈಗ ಟ್ರಿಪ್ ಸಂಖ್ಯೆ ಹೆಚ್ಚಿಸಿದ್ದರಿಂದ ಜನರೂ ಆಟೋ, ದ್ವಿಚಕ್ರ ವಾಹನದಲ್ಲಿ ಹೋಗುವ ಬದಲು ಬಸ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಬಸ್‌ಗಳನ್ನು ರಸ್ತೆಗಿಳಿಸುವುದು ಆರ್ಥಿಕ ದೃಷ್ಟಿಯಿಂದ ಕಷ್ಟ. ಆದರೆ ನಿಂತಲ್ಲೇ ನಿಲ್ಲಿಸಿದರೂ ತುಕ್ಕು ಹಿಡಿದು ಹಾಳಾಗುತ್ತವೆ. ನಿರ್ವಾಹವಿಲ್ಲದೆ ಮಾಲೀಕರು ಮುಂದಿನ ದಿನಗಳ ಮೇಲೆ ಭರವಸೆ ಇಟ್ಟು ಬಸ್‌ಗಳ ಓಡಾಟ ಆರಂಭಿಸಿದ್ದಾರೆ.

ರಾಜ್ಯ ಸಾರಿಗೆ ಸಚಿವರನ್ನು ಬಸ್ ಮಾಲೀಕರ ಸಂಘದವರು ಭೇಟಿಯಾಗಿ ತೆರಿಗೆ ವಿನಾಯಿತಿ ನೀಡುವಂತೆ ಕೋರಿದ್ದಾರೆ. ಆಟೋ ಚಾಲಕರಿಗೆ ನೀಡಿರುವಂತೆ ಖಾಸಗಿ ಬಸ್ ಸಿಬ್ಬಂದಿಗೂ ನೆರವಾಗಲು ಮನವಿ ಮಾಡಿದ್ದಾರೆ. ಆದರೆ ಸರ್ಕಾರವೇ ಸಂಕಷ್ಟದಲ್ಲಿದೆ; ಕೆಎಸ್ಸಾರ್ಟಿಸಿಯನ್ನೇ ಲೀಸ್‌ಗೆ ಒಪ್ಪಿಸುವ ಬಗ್ಗೆ ಯೋಜನೆ ಇರುವುದಾಗಿ ಸಚಿವರು ಹೇಳಿಕೊಂಡಿದ್ದಾರೆ. ಸರ್ಕಾರಕ್ಕೆ ನಮ್ಮ ಸಮಸ್ಯೆ ಗೊತ್ತಿದೆ. ಆದರೆ ಅವರು ಅಸಹಾಯಕರಾಗಿದ್ದಾರೆ ಎನ್ನುತ್ತಾರೆ ಬಸ್ ಮಾಲೀಕರು. ಅನೇಕ ಬಸ್ ಮಾಲೀಕರು ಸಾಲ ಮಾಡಿ ಬಸ್ ಖರೀದಿಸಿದವರಿದ್ದಾರೆ, ಅವರಿಗೆ ಇಎಂಐ ವಿನಾಯಿತಿ ಡಿಸೆಂಬರ್‌ವರೆಗೂ ವಿಸ್ತರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಂಸದ ನಳಿನ್‌ಕುಮಾರ್ ಕಟೀಲ್ ಕೂಡ ಈ ಕುರಿತು ವಿನಂತಿಸಿದ್ದಾರೆ.

ಸಾಲ ಪಾವತಿ ಸಂಕಷ್ಟ: ಕರಾವಳಿಯಲ್ಲಿ 1,800ಕ್ಕೂ ಮಿಕ್ಕಿ ಖಾಸಗಿ ಮತ್ತು ಸಿಟಿ ಬಸ್‌ಗಳಿವೆ. ಸಾಮಾನ್ಯವಾಗಿ ಒಂದು ಬಸ್ ಖರೀದಿಗೆ ಸುಮಾರು 30 ಲಕ್ಷ ರೂ. ಬಂಡವಾಳ ಬೇಕು. ಬಹುತೇಕ ಮಾಲೀಕರು ಬ್ಯಾಂಕ್ ಸಾಲದ ಮುಖೇನವೇ ಖರೀದಿಸಿರುತ್ತಾರೆ. ತಿಂಗಳಿಗೆ ಸುಮಾರು 50 ಸಾವಿರ ರೂ. ಇಎಂಐ ಪಾವತಿಗೆ ಬರುತ್ತದೆ. ಕೋವಿಡ್‌ಗೆ ಮೊದಲು ಪ್ರತಿದಿನ ಸರಾಸರಿ 10ರಿಂದ 11 ಸಾವಿರ ರೂ. ಟಿಕೆಟ್ ಕಲೆಕ್ಷನ್ ಆಗುತ್ತಿತ್ತು, ಈಗ ಅದು ಅರ್ಧಕ್ಕರ್ಧ ಇಳಿದಿದೆ. ಇದರಿಂದ ಸಾಲದ ಕಂತು ಪಾವತಿಸುವುದೂ ಕಷ್ಟವಾಗಿದೆ.


ಪಶ್ಚಿಮ ಬಂಗಾಳ ರಾಜ್ಯದಲ್ಲಿ ಖಾಸಗಿ ರಸ್ತೆ ತೆರಿಗೆ ಮನ್ನಾ ಮಾಡುವಂತೆ ಖಾಸಗಿ ಬಸ್ ಮಾಲೀಕರು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದರು. ಅದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಒಂದು ವರ್ಷದವರೆಗೆ ರಸ್ತೆ ತೆರಿಗೆ ಮನ್ನಾ ಮಾಡುವ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿತ್ತು. ಇದನ್ನೇ ನಮ್ಮಲ್ಲೂ ಅನುಷ್ಠಾನ ಮಾಡಬೇಕು ಎಂದು ಬಸ್ ಮಾಲೀಕರು ಒತ್ತಾಯಿಸುತ್ತಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...