ತಡೆಗಟ್ಟಬಹುದಾದ ಸಾವುಗಳು

Source: sonews | By Staff Correspondent | Published on 14th July 2019, 8:06 PM | National News | Special Report | Don't Miss |

ಮೆದುಳು ಜ್ವರವನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳಲ್ಲಿ ತುರ್ತು ವೈದ್ಯಕೀಯ ಸೇವೆ ಒದಗಿಸುವ ಸಂವೇದನೆಗಳು ಬರಬೇಕಿದೆ.

ಬದುಕಿನಲ್ಲಿ ತಾವು ಹೆತ್ತ ಶಿಶುಗಳು ತಮ್ಮ ಕಣ್ಣೆದುರಲ್ಲೇ ಜೀವ ಬಿಡುವುದಕ್ಕಿಂತ ದೊಡ್ಡ ದುರಂತವಿಲ್ಲವೆಂದು ಹೇಳಲಾಗುತ್ತದೆ. ಏಕೆಂದರೆ ನಂತರ ಪೋಷಕರ ಬದುಕು ಏನು ಮಾಡಿದರೂ ಮೊದಲಿನಂತಾಗುವುದಿಲ್ಲ. ಹಾಗಿದ್ದಲ್ಲಿ ಕಳೆದ ತಿಂಗಳು ಬಿಹಾರದ ಮುಝಫರ್ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು (ಸರ್ಕಾರಿ ಅಂಕಿಅಂಶದ ಪ್ರಕಾರ) ಇದೇ ಸಾಲಿಗೆ ಸೇರಬೇಕಲ್ಲವೇ? ಒಂದು ವರದಿಯ ಪ್ರಕಾರ ೧೯೯೫ ರಿಂದಲೂ ಜಿಲ್ಲೆಯು ಮೆದುಳು ಜ್ವರದ ಬಾಧೆಗೆ ಸಿಲುಕಿದ್ದು ೨೦೧೦-೧೪ರ ನಡುವೆ ೧೦೦೦ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಇದರ ಪರಿವಿದ್ದ ಯಾವುದೇ ದೇಶವು ಸಾಂಕ್ರಾಮಿಕವನ್ನು ತೊಡೆದು ಹಾಕಲು ಆಥವಾ ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೂಡಲೇ ಸಮರೋಪಾದಿಯಲ್ಲಿ ಕಾರ್ಯಾಚರಣೆಗಿಳಿಯಬೇಕಿತ್ತು. ಆದರ ಬದಲಿಗೆ ವರ್ಷಾನುವರ್ಷ ಸಾರ್ವಜನಿಕರು ಮತ್ತು ಮಾಧ್ಯಮಗಳು ಇದೇ ಕಥೆ ಮರುಕಳಿಸುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಬತ್ತಿಹೋದ ಕಂಗಳಿಂದ ಹೆತ್ತ ಮಕ್ಕಳ ನಿರ್ಜೀವ ದೇಹಗಳನ್ನು ಎದೆಗವಚಿಕೊಂಡಿರುತ್ತಿದ್ದ ತಂದೆ ತಾಯಿಗಳ ಚಿತ್ರಗಳು ನೋಡುಗರನ್ನು ಹೃದಯವನ್ನು ಮರಗಟ್ಟಿಸುವಂತಿರುತ್ತಿತ್ತು. ಮತ್ತೊಂದು ಕಡೆ ಇನ್ನಿತರ ವರದಿಗಳು ಸಾಂಕ್ರಾಮಿಕದ ಕಾರಣಗಳ ಬಗ್ಗೆ ಊಹಾಪೋಹದ ವರದಿಗಳನ್ನು ಪ್ರಕಟಿಸುತ್ತಿವೆ. ಆಡಳಿತರೂಢ ಸರ್ಕಾರ ಮತ್ತು ಆಳುವ ವರ್ಗಗಳು ದುರಂತಕ್ಕೆ ಒದಗಿಸುತ್ತಿರುವ ವಿವರಣೆಗಳು ಮತ್ತು ಹೇಳಿಕೆಗಳು ದುರಂತವನ್ನು ನಿರ್ಮೂಲನೆ ಮಾಡಲು ನಿರಂತರವಾಗಿ ಹೋರಾಡುವ ಯಾವ ಬಗೆಯ ವ್ಯೂಹಾತ್ಮಕ ಸಿದ್ಧತೆಯನ್ನು ವ್ಯಕ್ತಪಡಿಸುತ್ತಿಲ್ಲ. ಬಾರಿಯೂ ಹಾಗೆಯೇ ಆಗಿದೆ.

ಎಲ್ಲಕ್ಕಿಂತ ಸಂಕಟದ ಸಂಗತಿಯೆಂದರೆ ಪ್ರದೇಶಕ್ಕೆ ಭೇಟಿ ನೀಡಿರುವ ವೈದ್ಯರುಗಳು ಮತ್ತು ವೈದ್ಯಕೀಯ ಸಂಶೋಧಕರು  ಸಾವುಗಳನ್ನು ತಡೆಗಟ್ಟುವುದು ಅಂಥಾ ಕಷ್ಟಕರ ಸಂಗತಿಯಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಮಕ್ಕಳು ಲಿಚಿ ಹಣ್ಣನ್ನು ತಿಂದಿದ್ದರಿಂದ ಮೆದುಳು ಜ್ವರವು ಬಂದಿತೆಂದು ಹೇಳಲಾಗುತ್ತಿದೆ. ಆದರೆ ವಾಸ್ತವವೇನೆಂದರೆ ಲಿಚಿ ಸೇವನೆಯಿಂದ ಸೋಂಕಿಗೆ ತುತ್ತಾಗಿದ್ದು ವೇಳೆಗಾಗಲೇ ಅಪೌಷ್ಟಿಕತೆಯಿಂದ ನರಳುತ್ತಿದ್ದ ಮಕ್ಕಳು ಮಾತ್ರ. ಅಪೌಷ್ಟಿಕತೆಗೆ ತುತ್ತಾಗದ ಮಕ್ಕಳು ಲಿಚಿ ಹಣ್ಣನ್ನು ತಿಂಗ್ದ ನಂತರ  ಖಾಯಿಲೆಗೆ ತುತ್ತಾದ ವೈದ್ಯಕೀಯ ಉದಾಹರಣೆಗಳಿಲ್ಲ. ಅಷು ಮಾತ್ರವಲ್ಲದೆ, ಸೋಂಕಿನ ಸೂಚನೆ ಕಂಡುಬಂದ ಮೊದಲ ನಾಲ್ಕು ಗಂಟೆಗಳಲ್ಲಿ ಗ್ಲುಕೋಸನ್ನು ನೀಡುವುದು ಜೀವ ಉಳಿಸುವುದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆಂಬುದು ತಿಳಿದುಬಂದಿದೆ. ಆದರೆ ಮಕ್ಕಳ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ವಿಷಯದಲ್ಲಾಗಲೀ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ಲುಕೋಸ್ ಮತ್ತು ತರಬೇತಿ ಹೊಂದಿದ ವೈದ್ಯರ ನೇಮಕಾತಿಯ ವಿಷಯzಲ್ಲಾಗಲೀ ಸರ್ಕಾರಗಳು ಯಾವುದೇ ತುರ್ತು ಗಮನವನ್ನು ನೀಡುತ್ತಿಲ್ಲ. ಜಿಲ್ಲೆಯ ಶ್ರೀ ಕೃಷ್ಣ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ  ವೈರಾಲಜಿ ಪ್ರಯೋಗಾಲಯವಾಗಲಿ ಅಥವಾ ಶಿಶು ಆರೋಗ್ಯ ವಿಭಾಗದಲ್ಲಿ ಅಗತ್ಯವಿರುವಷ್ಟು ಒಳರೋಗಿ ಸೌಲಭ್ಯವಾಗಲೀ ಇಲ್ಲವೆಂಬುದೇ ಪರಿಸ್ಥಿತಿ ಎಷ್ಟು ದಾರುಣವಾಗಿದೆಯೆಂಬುದನ್ನು ತೋರಿಸುತ್ತದೆ. ಜಿಲ್ಲಾಸ್ಪತ್ರೆಯ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಸ್ಥಿತಿ ಏನಾಗಿರಬಹುದೆಂಬುದು  ಯಾರ ಊಹೆಗೂ ನಿಲುಕುವ  ವಿಷಯವೇ.

ಇದೇ ರೀತಿ ೨೦೧೭ರಲ್ಲಿ ಉತ್ತರಪ್ರದೇಶದ ಗೋರಖ್ಪುರ್ ಜಿಲ್ಲೆಯಲ್ಲಿ  ೭೦ ಶಿಶುಗಳು ಪ್ರಾಣ ಬಿಟ್ಟವು. ಬಗೆಯ ದುರಂತಗಳಲ್ಲಿ ಹಲವಾರು ಸಾಮ್ಯಗಳಿವೆ. ಉತ್ತರ ಪ್ರದೇಶದ ಪ್ರಕರಣಗಳಲ್ಲಿ  ಮಕ್ಕಳ ಸಾವಿಗೆ ಸೋಂಕು ಕಾರಣವೆಂದು ಸರ್ಕಾರವು ಹೇಳಿದರೂ ಆಮ್ಲಜನಕ ಸಿಲಿಂಡರುಗಳ ಕೊರತೆಯಿಂದಾಗಿ ಉಸಿರುಸಿಕ್ಕಿಕೊಂಡು ಸಾವಿಗೀಡಾದರೆಂಬುದು ನಂತರ ಬಯಲಾಯಿತು. ಸಿಲಿಂಡರು ಸರಬರಾಜುದಾರನಿಗೆ ಆಸ್ಪತ್ರೆಯು ಹಣ ಪಾವತಿ ಮಾಡದಿದ್ದರಿಂದಲೇ ಸಿಲಿಂಡರುಗಳ ಕೊರತೆಯುಂಟಾಗಿತ್ತು. ಪ್ರಾಸಂಗಿಕವಾಗಿ ಹೇಳುವುದಾದರೆ ಉತ್ತರ ಪ್ರದೇಶದ ರಾಜ್ಯದಲ್ಲೇ ಮುದುಳು ಜ್ವರದ ಸೋಂಕು ಅತಿ ಹೆಚ್ಚಿನ ಮಟ್ಟದಲ್ಲಿ ವರದಿಯಾಗಿರುವುದು ಗೋರಖ್ಪುರ ಜಿಲ್ಲೆಯಲ್ಲಿ.

ಆಸ್ಪತ್ರೆಗೆ ಸೇರಿಸಿದ ನಂತರವೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಾಯುವುದಕ್ಕೆ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡಬಹುದು: ಮಕ್ಕಳ ಪೌಷ್ಟಿಕತೆಯ ಮಟ್ಟ, ಅವರ ಕುಟುಂಬಗಳ ಬಡತನ ಮತ್ತು ಆಸ್ಪತ್ರೆಯಲ್ಲಿ ಹೀನಾಯವಾಗಿರುವ ಸೌಕರ್ಯಗಳ ಕೊರತೆ. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವಷ್ಟು ಜೀವ ರಕ್ಷಕ ಔಷಧಿಗಳನ್ನೂ, ವೈದ್ಯಕೀಯ ಯಂತ್ರೋಪಕರಣಗಳಾನ್ನೂ, ವೈದ್ಯರನ್ನು ಮತ್ತು ನರ್ಸುಗಳನ್ನು ಒದಗಿಸಬೇಕೆಂದು ಆರೋಗ್ಯ ಕಾರ್ಯಕರ್ತರು ಗಟ್ಟಿಯಾಗಿ ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ವೈದ್ಯಕೀಯ ಸಿಬ್ಬಂದಿಗಳು ಕನಿಷ್ಟ ಘನತೆಯಿಂದ ಬದುಕಬಹುದಾದ ಜೀವನಮಟ್ಟವನ್ನು ಖಾತರಿ ಪಡಿಸುವುದನ್ನೂ ಒಳಗೊಂಡಂತೆ ಕೆಲವು ಪೂರಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಮಾತ್ರ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರಲು ಸಾಧ್ಯ. ಇದಕ್ಕಾಗಿ ಸಂಬಂಧಪಟ್ಟ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕಾಲಾನುಕ್ರಮದಲ್ಲಿ ಸಂಪನ್ಮೂಲಗಳ ಕೊರತೆಯಿಂದಾಗಿ ಸಾರ್ವಜನಿಕ ಆರೋಗ್ಯ ಸೇವೆಯು ಸೊರಗುತ್ತಾ- ಸಾಯುತ್ತಿದೆಯೆಂದೂಖಾಸಗಿ ಆರೋಗ್ಯ ಸೇವೆ ಮಾತ್ರ ದಷ್ಟಪುಷ್ಟಗೊಳ್ಳುತ್ತಿದೆಯೆಂದೂ ನಿರಂತರವಾಗಿ ಎಚ್ಚರಿಸುತ್ತಲೇ ಬರಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಕುಟುಂಬಗಳ ಬಗ್ಗೆ ಮುತುವರ್ಜಿವಹಿಸಬೇಕಾದ  ವಿಶೇಷ ಮತ್ತು ನಿರ್ದಿಷ್ಟ ಕಾರ್ಯತಂತ್ರಗಳು ಬೇಕಾಗುತ್ತವೆ. ಬಿಹಾರ ಸರ್ಕಾರವಂತೂ ಮುಜಫ್ಫರ್ಪುರ್ ಜಿಲ್ಲೆಯಲ್ಲಿ ಎತ್ತರ ಮತ್ತು ತೂಕದ ಬಳವಣಿಗೆಗಳು ಕುಂಠಿತಗೊಂಡಿರುವ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ತುರ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಂತ್ರಿಗಳು ಮುಝಫ್ಫರ್ಪುರ್ ಆಸ್ಪತ್ರೆಗೆ ಬಂದಾಗ ರೋಗಿಗಳ ಕುಟುಂಬದವರು ಅವರ ಮೇಲೆ ಆಕ್ರೋಶಗೊಂಡು ವಾಪಸ್ ಹೋಗಲು ಆಗ್ರಹಿಸಿದರೆಂದು ವರದಿಯಾಗಿದೆ. ಶಿಶು ವಿಭಾಗದ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿ ವೈರಾಲಜಿ ಪ್ರಯೋಗಾಲಯವನ್ನು ಒದಗಿಸಲಾಗುವುದೆಂದು ಸರ್ಕಾರವು ಕುಟುಂಬಗಳಿಗೆ ಭರವಸೆ ನೀಡಿದೆ. ಆದರೆ ಅಸಲೀ ಪ್ರಶ್ನೆಯೇನೆಂದರೆ ಇಷ್ಟು ವರ್ಷಗಳ ಕಾಲ ಕ್ರಮಗಳನ್ನೇಕೆ ತೆಗೆದುಕೊಳ್ಳಲಿಲ್ಲ ಎನ್ನುವುದು. ಆಡಳಿತದ ನಿರ್ಲಕ್ಷ್ಯದ ಬಗ್ಗೆ ಸಂತ್ರಸ್ತ ಕುಟುಂಬಗಳ ಆಕ್ರೋಶವು ಕೇವಲ ಮುಝಫ್ಫರ್ಪುರ್ ಗೆ ಮಾತ್ರವಾಗಲೀ ಅಥವಾ ಅದೊಂದು ಸಂದರ್ಭಕ್ಕೆ ಮಾತ್ರವಾಗಲೀ ಸೀಮಿತವಾಗಿಲ್ಲ.

ಬಡವರು ಆರೋಗ್ಯ ಸೇವೆಗಳ ವಿಷಯದಲ್ಲಿ ಮಾತ್ರ ತೀವ್ರವಾಗಿ ಆಕ್ರೋಶಗೊಳ್ಳುತ್ತಾರೆ ಎಂಬುದು ಸ್ಪಷ್ಟ. ಕೆಲವೊಮ್ಮೆ ಆಕ್ರೋಶವು ವೈದ್ಯರುಗಳ ವಿರುದ್ಧವೂ ಸ್ಪೋಟಗೊಳ್ಳುತ್ತದೆ. ಏಕೆಂದರೆ ವೈದ್ಯರೂ ಸಹ ಅನ್ಯಾಯದ ವ್ಯವಸ್ಥೆಯ ಭಾಗವೆಂದು ಅವರು ಭಾವಿಸಿಕೊಂಡಿರುತ್ತಾರೆ. ಸಾರ್ವಜನಿಕ ಕ್ಷೇತ್ರವು ಅದರಲ್ಲೂ ಅದರ ಪ್ರಮುಖ ಭಾಗವಾದ ಮಾಧ್ಯಮವು ಬಡಕುಟುಂಬಗಳು ಆಗಾಗ ವೈದ್ಯರ ಮೇಲೆ ಮಾಡುವ ಹಲ್ಲೆಗಳನ್ನು ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡುವ ರಾಜಕಾರಣಿಗಳ ವಿರುದ್ಧ ತೋರುವ ಆಕ್ರೋಶಗಳನ್ನು ಮಾತ್ರ ವರದಿ ಮಾಡದೆ ಅವರಲ್ಲಿರುವ ಅನ್ಯಾಯಕ್ಕೊಳಗಾದ ಭಾವನೆಯ ಬಗ್ಗೆಯೂ ವರದಿ ಮಾಡಬೇಕು. ತಡೆಗಟ್ಟಬಹುದಾದ ಒಂದು ಮಗುವಿನ ಸಾವು ಕೂಡಾ ನಮ್ಮಲ್ಲಿ ನಾಚಿಕೆ ಹುಟ್ಟಿಸಬೇಕು ಮತ್ತು ಕ್ರಿಯೆಗಿಳಿಸಬೇಕು

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ನಿರಾಶಾವಾದಿ ರಾಜಕಾರಣದ ಹುಟ್ಟು

ಸ್ಪಷ್ಟ ಜನಾದೇಶವಿಲ್ಲದಂತ ಅನಿಶ್ಚಿತ ರಾಜಕೀಯ ಸಂದರ್ಭಗಳು ಸಂಸ್ಥೆಗಳ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ರಾಜಕೀಯ ಜೀವನದಲ್ಲಿ ಇಂಥಾ ...

ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?

ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ...

ನಿರಾಶಾವಾದಿ ರಾಜಕಾರಣದ ಹುಟ್ಟು

ಸ್ಪಷ್ಟ ಜನಾದೇಶವಿಲ್ಲದಂತ ಅನಿಶ್ಚಿತ ರಾಜಕೀಯ ಸಂದರ್ಭಗಳು ಸಂಸ್ಥೆಗಳ, ರಾಜಕೀಯ ಪಕ್ಷಗಳ ಮತ್ತು ಅದರ ನಾಯಕರ ರಾಜಕೀಯ ಜೀವನದಲ್ಲಿ ಇಂಥಾ ...

ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?

ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ...

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ನದಿಗೆ ಕೊಳಚೆ ನೀರು ಸೇರ್ಪಡೆ: ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿಯಿಂದ ಪಂಚಾಯತಗೆ ಮನವಿ ಸಲ್ಲಿಕೆ’

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್